ಕಂದಕದ ಆಚೆ: ಮುಂಬೈ ದೊಂಬಿಗಳ ಮಕ್ಕಳ ಸಾಮರಸ್ಯ ಮತ್ತು ಆತಂಕದ ಕಥೆಗಳು

Update: 2017-12-12 18:51 GMT

ಭಾಗ-1

ಆಗ ಇನ್ನೂ ಬಾಂಬೆ ಎಂದೇ ಕರೆಯಲ್ಪಡುತ್ತಿದ್ದ ನಗರವನ್ನು ಬಾಬರಿ ಮಸೀದಿಯ ಧ್ವಂಸಗೊಳಿಸುವಿಕೆಯು 2 ತಿಂಗಳುಗಳ ದೊಂಬಿಗೆ ಗುರಿಯಾಗಿಸಿತು. ದೊಂಬಿಗಳು ಕಂದಕಗಳನ್ನು ಇನ್ನಷ್ಟು ತೀವ್ರವಾಗಿಸಿದವು. ಆದರೆ, ಆ ದೊಂಬಿಗಳ ಹಿಂಸೆಯನ್ನು ಅನುಭವಿಸಿದ ಹಲವಾರು ಮಕ್ಕಳು ಇನ್ನೊಂದು ಸಮುದಾಯದ ಕುರಿತ ತಮ್ಮ ಕಹಿಯನ್ನು, ಕೆಟ್ಟ ಅನುಭವಗಳನ್ನು ಮರೆತು, ಸಾಮರಸ್ಯದ ಬಾಳ್ವೆಗೆ ಮರಳಿದಂತೆ ಕಾಣಿಸುತ್ತದೆ.

1992ರ ವರೆಗೆ ಭಾರತದ ವಾಣಿಜ್ಯ ರಾಜಧಾನಿಯಲ್ಲಿ ವಾಸಿಸುವ ಹಲವರು ತಾವು ಒಂದು ಕಾಸ್ಮಾಪಾಲಿಟನ್ ನಗರದಲ್ಲಿ ವಾಸಿಸುತ್ತಿದ್ದೇವೆ; ಹಣ ಸಂಪಾದಿಸುವುದರಲ್ಲೇ ಮುಳುಗಿ ಹೋಗಿರುವ ಈ ನಗರವಾಸಿಗಳಿಗೆ ದೇಶದ ಇತರ ನಗರವಾಸಿಗಳ ಹಾಗೆಯೇ ಧಾರ್ಮಿಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಪುರುಷೊತ್ತಿಲ್ಲ ಎಂದು ತಿಳಿದಿದ್ದರು. ಆದರೆ, 1992 ಡಿ.6ರಂದು ಬಾಬರಿ ಮಸೀದಿಯ ಧ್ವಂಸಗೊಳಿಸುವಿಕೆ, ಮುಂಬೈ ಬಗ್ಗೆ ಜನರಿಗಿದ್ದ ಆ ಮಿತ್ ಅನ್ನು ಚೂರು ಚೂರಾಗಿಸಿತು. ಆಗ ಇನ್ನೂ ಬಾಂಬೆ ಎಂದೇ ಕರೆಯಲ್ಪಡುತ್ತಿದ್ದ ನಗರವನ್ನು ಮಸೀದಿಯ ಧ್ವಂಸಗೊಳಿಸುವಿಕೆಯು 2 ತಿಂಗಳುಗಳ ದೊಂಬಿಗೆ ಗುರಿಯಾಗಿಸಿತು. ದೊಂಬಿಗಳು ಕಂದಕಗಳನ್ನು ಇನ್ನಷ್ಟು ತೀವ್ರವಾಗಿಸಿದವು. ಆದರೆ, ಆ ದೊಂಬಿಗಳ ಹಿಂಸೆಯನ್ನು ಅನುಭವಿಸಿದ ಹಲವಾರು ಮಕ್ಕಳು ಇನ್ನೊಂದು ಸಮುದಾಯದ ಕುರಿತ ತಮ್ಮ ಕಹಿಯನ್ನು, ಕೆಟ್ಟ ಅನುಭವಗಳನ್ನು ಮರೆತು, ಸಾಮರಸ್ಯದ ಬಾಳ್ವೆಗೆ ಮರಳಿದಂತೆ ಕಾಣಿಸುತ್ತದೆ. ದೊಂಬಿಗಳು ಶುರುವಾದಾಗ ಮಕ್ಕಳಾಗಿದ್ದು, ಹಿಂಸೆಯನ್ನು ಕಣ್ಣಾರೆ ಕಂಡು ಅನುಭವಿಸಿದವರಿಗೆ ಧಾರ್ಮಿಕ ಕಂದಕಗಳನ್ನು ಮುಚ್ಚಲು ನೆರವಾದಾಗ ಕೆಲವು ಸಾಂಸ್ಥಿಕ ಅಂಶಗಳನ್ನು ತಿಳಿಯುವ ಉದ್ದೇಶದಿಂದ, ಅಂತಹ ಅಂದಿನ ಮಕ್ಕಳನ್ನು ಇಂದಿನ ಯುವಜನತೆಯನ್ನು ಮಾತನಾಡಿಸಿದಾಗ... 5 ಮಂದಿಯ ಕಥಾನಕಗಳು ಇಲ್ಲಿವೆ.

ಶಿವಾಜಿ ಖೈರ್‌ನಾರ್ (37)

ಆಟೊ ಶೋರೂಂ ನೌಕರ ಮತ್ತು ಸಾಮಾಜಿಕ ಕಾರ್ಯಕರ್ತ, ಜೋಗೇಶ್ವರಿ

ಟಿಯರ್ ಗ್ಯಾಸ್ ಮತ್ತು ಮೊಲೊಟೋವ್ ಕಾಕ್‌ಟೈಲ್‌ಗಳ ವಿನಾಶಕಾರಿ ಶಕ್ತಿಯ ಅನುಭವವಾದಾಗ ಶಿವಾಜಿ ಖೈರ್‌ನಾರ್ ಕೇವಲ 11ರ ಹರೆಯದ ಹುಡುಗ. ಪಶ್ಚಿಮ ಮುಂಬೈಯ ಜೋಗೇಶ್ವರಿಯ ತನ್ನ ನೆರೆಕರೆಯಲ್ಲಿ ಕೋಮು ದೊಂಬಿಗಳ ರುದ್ರ ತಾಂಡವ ನಡೆದಾಗ ‘ಶತ್ರುಗಳು’ ಎಂದು ಯಾರನ್ನು ಕರೆಯಲಾಗುತ್ತಿತ್ತೋ ಅಂಥವರನ್ನು ರಕ್ಷಿಸಲು ಆತ ತನ್ನ ಪ್ರದೇಶದಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ನೆರವು ನೀಡಿದ. ಪೊಲೀಸರು ಗುಂಡಿಕ್ಕಿದಾಗ ಕೊಲ್ಲಲ್ಪಟ್ಟ ಇಬ್ಬರು ಹಿಂದೂಗಳನ್ನು ಹುತಾತ್ಮರೆಂದು ಹೊಗಳುವುದನ್ನು ಆತ ಕೇಳಿಸಿಕೊಂಡ. 1993 ಜನವರಿ 8ರ ತಡರಾತ್ರಿ ಅವನ ಮನೆಯಿಂದ ಅನತಿ ದೂರದಲ್ಲಿ ವಾಸಿಸುತ್ತಿದ್ದ 6 ಹಿಂದೂಗಳನ್ನು ಜೀವಂತ ಸುಟ್ಟ ರಾಧಾಬಾ ಚೌಲ್ ಘಟನೆಯ ಬಳಿಕ ರಾಜಕಾರಣಿಗಳು ಮಾಡಿದ ಬೆಂಕಿ ಉಗುಳುವ ಭಾಷಣಗಳನ್ನು ಆತ ಕೇಳಿಸಿಕೊಂಡ. ಮುಸ್ಲಿಂ ಮಕ್ಕಳ ಜೊತೆ ಆಟವಾಡುವ ಅವನ ದೈನಂದಿನ ಪರಿಪಾಠ ರಾತ್ರಿ ಬೆಳಗಾಗುವುದರೊಳಗೆ ನಿಂತು ಹೋಯಿತು. ಆದರೆ, ಖೈರ್‌ನಾರ್ ಜ್ಞಾಪಿಸಿಕೊಳ್ಳುವಂತೆ, ಅವನು ಮತ್ತು ಹಿಂದೂ ಗೆಳೆಯರು ತಮ್ಮ ನೆರೆಕರೆಯವರ ಮಧ್ಯೆ ತಾವು ಕಂಡಿದ್ದ ಹಿಂಸೆ ತಪ್ಪು ಎಂದು ಅವರಿಗೆ ಮನವರಿಕೆಯಾಯಿತು. ಅಲ್ಲದೆ, ಅವನ ಪೋಷಕರು ಕೋಮು ದ್ವೇಷಕ್ಕೆ ಮನೆಯ ವಾತಾವರಣವನ್ನು ಹಾಳುಗೆಡವಲು ಬಿಡಲಿಲ್ಲ. ಅವನ ತಾಯಿ, ಆಕೆ ಕೆಲಸಮಾಡುತ್ತಿದ್ದ ಕಾರ್ಖಾನೆಯಲ್ಲಿ ಆಕೆಯ ಮುಸ್ಲಿಂ ಸಹೋದ್ಯೋಗಿಗಳ ಜೊತೆ ಗೆಳತಿಯಾಗಿಯೇ ಉಳಿದಳು. ಈಗ ಖೈರ್‌ನಾರ್ ಜೋಗೇಶ್ವರಿಯಲ್ಲಿ ಬೀದಿ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುವ ‘ಜನತಾ ಜಾಗೃತಿ ಮಂಚ್’ ಎಂಬ ಒಂದು ಸಮಾಜಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. 2015ರಲ್ಲಿ ಈ ಸಂಸ್ಥೆ ತನ್ನ ಜೀವಮಾನವನ್ನು ಬೀದಿನಾಯಿಗಳ ಆರೈಕೆಗಾಗಿ ಮುಡಿಪಾಗಿಟ್ಟ ಮುನಿರಾ ಶೇಖ್‌ಗೆ ತನ್ನ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಶಸ್ತಿಯನ್ನು ನೀಡಿತು.

5 ವರ್ಷಗಳ ಹಿಂದೆ ಖೈರ್‌ನಾರ್ ಅವರ ತಂದೆ ಗಂಭೀರವಾಗಿ ಅಸ್ವಸ್ಥರಾದಾಗ ಖೈರ್‌ನಾರ್ ತನ್ನ ಮುಸ್ಲಿಂ ಗೆಳೆಯನೊಬ್ಬನ ಸಲಹೆಯಂತೆ ರಮಝಾನ್‌ನ 27ನೇ ದಿನ ಉಪವಾಸ ಮಾಡಿದರು. ಅವರ ತಂದೆ ಗುಣಮುಖರಾದರು. ಇಂದಿಗೂ ಅವರು ಪ್ರತೀ ವರ್ಷ ರಮಝಾನ್ ಉಪವಾಸ ಮಾಡುತ್ತಾರೆ.

ಖೈರ್‌ನಾರ್ ಹೇಳುತ್ತಾರೆ. ‘‘ವ್ಯಕ್ತಿಗಳು ತಪ್ಪು ಮಾಡಬಹುದು. ಆದರೆ, ಒಂದು ಇಡೀ ಸಮುದಾಯವಲ್ಲ’’. ಆದಿಲ್‌ಖಾನ್(36)

 ಗೋರೆಗಾಂವ್‌ನ ಕಾಲ್ ಸೆಂಟರೊಂದರಲ್ಲಿ ಪ್ರೋಸೆಸ್ ಹೆಡ್

ದೊಂಬಿಗಳು ನಡೆಯುತ್ತಿದ್ದ ಅವಧಿಯಲ್ಲಿ ಪ್ರತಿದಿನ ಸಂಜೆ ಅವರು ಮನೆಯ ದೀಪಗಳನ್ನು ಆರಿಸಿ ಮನೆಯ ಬಾಗಿಲಿಗೆ ಅಡ್ಡವಾಗಿ ಪೀಠೋಪಕರಣಗಳನ್ನು ಇಡುತ್ತಿದ್ದರು. ಆದರೆ, 1993ರ ಜನವರಿಯಲ್ಲಿ ಕಾಂಡಿವಿಲಿಯಲ್ಲಿರುವ ಅವರ ಮನೆಯ ಮೇಲೆ ಕಲ್ಲುಗಳನ್ನೆಸೆದು ದಾಳಿ ನಡೆಸಿದ ಬಳಿಕ ಆದಿಲ್‌ಖಾನ್ ಅವರ ತಂದೆ ಬಾಂಬೆ ಸೆಂಟ್ರಲ್ ಸಮೀಪವಿರುವ ತಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆಯಲು ನಿರ್ಧರಿಸಿದರು. ಆ ಕಾಲನಿಯಲ್ಲಿದ್ದ ಕೇವಲ 2 ಮುಸ್ಲಿಂ ಮನೆಗಳಲ್ಲಿ ಒಂದು ಅದಾಗಿತ್ತು.

‘‘ನನ್ನ ತಂದೆಗೆ ಬ್ಯಾಂಕ್‌ನಲ್ಲಿ ತುಂಬ ಗೌರವವಿತ್ತು. ನಾವು ನಮ್ಮ ಮನೆ ತೊರೆಯಬಾರದೆಂದು ನಮ್ಮ ಹಿಂದೂ ನೆರೆಕರೆಯವರು, ತಂದೆಯವರ ಸಹೋದ್ಯೋಗಿಗಳು ನಮ್ಮನ್ನು ತುಂಬಾ ಒತ್ತಾಯಿಸಿದರು. ಆದರೆ, ತಂದೆಯವರು ತನ್ನ ನಿರ್ಧಾರ ಬದಲಿಸದಿದ್ದಾಗ ಅವರೆಲ್ಲ ನಮ್ಮನ್ನು ಬಾಂಬೆ ಸೆಂಟ್ರಲ್‌ವರೆಗೆ ಬಂದು ಬೀಳ್ಕೊಟ್ಟರು. 2 ವಾರಗಳ ಬಳಿಕ ನಾವು ಮರಳಿ ನಮ್ಮ ಮನೆಗೆ ಬಂದೆವು. ನನ್ನ ತಂದೆ ನಿವೃತ್ತರಾಗುವವರೆಗೆ ನಾವು ಅಲ್ಲೇ ವಾಸಿಸಿದೆವು’’.

ಇವತ್ತು ಖಾನ್ ಹಿಂದೂ ಪ್ರಾಬಲ್ಯವಿರುವ ಗೋರೆಗಾಂವ್‌ನಲ್ಲಿ ವಾಸಿಸುತ್ತಿದ್ದಾರೆ. ‘ಜೈರಾಮ್ ಜೀ ಕಿ’ ಎಂದು ಅವರಿಗೆ ನಮಿಸಿದಾಗ ಅವರು ಕೂಡ ‘ಜೈರಾಮ್ ಜೀ ಕಿ’ ಎಂದೇ ಪ್ರತಿಯಾಗಿ ನಮಸ್ಕರಿಸುತ್ತಾರೆ. ತನ್ನ ಹದಿಹರೆಯದ ಲಾಗಾಯ್ತು ಅವರು ತನ್ನ ಹಿಂದೂ ಗೆಳೆಯರ ಜೊತೆ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ಅವರ ತಾಯಿಯ ಹೆಚ್ಚಿನ ಗೆಳತಿಯರು ಹಿಂದೂಗಳು. ಅವರ ಅತ್ತಿಗೆಯ ಗೆಳತಿಯರು ಕೂಡ ಹಿಂದೂಗಳು.

2014ರ ಲೋಕಸಭಾ ಮತ್ತು ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಎರಡೂ ಚುನಾವಣೆಗಳಲ್ಲಿ ಖಾನ್ ಬಿಜೆಪಿಗೆ ಮತ ನೀಡಿದ್ದರು. ಯಾಕೆಂದರೆ ನರೇಂದ್ರ ಮೋದಿಯವರು ದೇಶಕ್ಕೆ ಒಳ್ಳೆಯದು ಮಾಡುತ್ತಾರೆ ಎಂಬುದು ಅವರ ನಂಬಿಕೆಯಾಗಿತ್ತು. ಆ ಬಳಿಕ ಗೋರಕ್ಷಕರು ನಡೆಸಿದ ಗುಂಪು ಹಲ್ಲೆಗಳನ್ನು ಕಂಡಾಗ ಅವರಿಗೆ, ಅವರು ಮತ್ತು ಅವರ ನಾಲ್ವರು ಗೆಳೆಯರು(ಅವರಲ್ಲೊಬ್ಬ ಹಿಂದೂ) ಉರಾನ್‌ನಲ್ಲಿ ಹಳ್ಳಿಗರು ಮತ್ತು ಪೊಲೀಸರಿಂದ ಥಳಿಸಲ್ಪಟ್ಟ ಘಟನೆ ನೆನಪಾಗುತ್ತದೆ. ಅವರು ಭಯೋತ್ಪಾದಕರೆಂದು ತಿಳಿದು ಅವರನ್ನು ಥಳಿಸಲಾಯಿತು. ಬೈಕ್‌ಗಳಲ್ಲಿ ಕುಳಿತು ಖಾನ್ ಮತ್ತು ಅವರ ಗೆಳೆಯರು ಗೊತ್ತಿಲ್ಲದೆಯೇ ನೌಕಾದಳದ ಆಸ್ತಿಯ ಫೋಟೊ ತೆಗೆಯುತ್ತಿದ್ದರು. ಅಂತಿಮವಾಗಿ ತಡರಾತ್ರಿ ಅವರನ್ನು ಬಿಟ್ಟುಬಿಡಲಾಯಿತು. ಈ ಅನುಭವದ ಹೊರತಾಗಿಯೂ ಭಾರತದಲ್ಲಿ ಖಾನ್‌ಗೆ ಭಯವೇನೂ ಇಲ್ಲ. ‘‘ನಾನೇಕೆ ಭಯಪಡಬೇಕು. ಇದು ನನ್ನ ದೇಶ. ನನ್ನ ರಾಷ್ಟ್ರೀಯತೆ ಇಂಡಿಯನ್. ನನ್ನ ಬಳಿ ಒಂದು ಇಂಡಿಯನ್ ಪಾಸ್‌ಪೋರ್ಟ್ ಇದೆ’’ ಎನ್ನುತ್ತಾರೆ ಖಾನ್.

ಕೃಪೆ: scroll.in

Writer - ಜ್ಯೋತಿ ಪುನ್‌ವಾನಿ

contributor

Editor - ಜ್ಯೋತಿ ಪುನ್‌ವಾನಿ

contributor

Similar News

ಜಗದಗಲ
ಜಗ ದಗಲ