ಮಧುಮೇಹದ ಕಡೆಗಣಿಸಲಾಗದ ಕೆಲವು ಲಕ್ಷಣಗಳು

Update: 2017-12-12 18:50 GMT

ಮಧುಮೇಹ ಪೀಡಿತ ವ್ಯಕ್ತಿಗಳಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವು ಅಧಿಕವಾಗಿರುತ್ತದೆ ಮತ್ತು ಇಂದು ವಿಶ್ವಾದ್ಯಂತ ಕೋಟ್ಯಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯಾವಾಗ ವ್ಯಕ್ತಿಯ ಶರೀರದಲ್ಲಿ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲವೋ ಅಂತಹ ಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ.

ವಿಜ್ಞಾನಿಗಳ ತಂಡವೊಂದು ನಡೆಸಿರುವ ನೂತನ ಅಧ್ಯಯನವೊಂದು ನೀವು ಕಡೆಗಣಿಸಲೇಬಾರದ ಏಳು ಲಕ್ಷಣಗಳನ್ನು ಪಟ್ಟಿ ಮಾಡಿದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ಟೈಪ್ 2 ಮಧುಮೇಹವೇನಾದರೂ ದಾಳಿಯಿಟ್ಟಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾದಷ್ಟು ಶೀಘ್ರ ವೈದ್ಯರನ್ನು ಕಾಣುವುದು ಮುಖ್ಯವಾಗುತ್ತದೆ.
ಅತ್ಯಂತ ಹೆಚ್ಚಿನ ಬಾಯಾರಿಕೆ, ಸಾಮಾನ್ಯಕ್ಕಿಂತ ಹೆಚ್ಚು ಬಾರಿ....ನಿರ್ದಿಷ್ಟವಾಗಿ ರಾತ್ರಿ ವೇಳೆ ಆಗಾಗ್ಗೆ ಮೂತ್ರವಿಸರ್ಜನೆ, ತುಂಬ ಆಯಾಸವಾದಂತೆ ಅನಿಸುವುದು, ದೇಹತೂಕದಲ್ಲಿ ಇಳಿಕೆ, ಗುಪ್ತಾಂಗದ ಸುತ್ತ ತುರಿಕೆ, ಗಾಯಗಳು ತುಂಬ ನಿಧಾನವಾಗಿ ಮಾಯುವುದು ಮತ್ತು ದೃಷ್ಟಿ ಮಸುಕಾಗುವುದು ಇವು ಈ ಏಳು ಮಧುಮೇಹದ ಲಕ್ಷಣಗಳಾಗಿವೆ. ಈ ಲಕ್ಷಣಗಳು ಊಟದ ಬಳಿಕ ಹೆಚ್ಚು ಸ್ಪಷ್ಟವಾಗಿರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಲಕ್ಷಣಗಳು ತುಂಬ ಗಂಭೀರವೆಂಬಂತೆ ಕಂಡು ಬರದಿರಬಹುದು ಮತ್ತು ಬೇರೆ ಕಾರಣಗಳಿಂದಲೂ ಇವು ಕಾಣಿಸಿಕೊಂಡಿರಬಹುದು. ಆದರೂ ಇವುಗಳನ್ನು ಕಡೆಗಣಿಸದೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಬುದ್ಧಿವಂತಿಕೆಯ ಕೆಲಸವಾಗುತ್ತದೆ.
ಟೈಪ್ 2 ಮಧುಮೇಹಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಅದು ಹೃದಯ, ರಕ್ತನಾಳಗಳು, ನರಗಳು, ಕಣ್ಣುಗಳು ಮತ್ತು ಮೂತ್ರಪಿಂಡಗಳ ಗಂಭೀರ ಸಮಸ್ಯೆಗಳನ್ನುಂಟು ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ