ಮನಮೋಹನ್ ಸಿಂಗ್ ವಿರುದ್ಧ ಆರೋಪ ಮಾಡಲು ಮೋದಿಗೆ ನಾಚಿಕೆಯಾಗಬೇಕು: ಪವಾರ್

Update: 2017-12-13 03:49 GMT

ನಾಗ್ಪುರ, ಡಿ.13: "ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜತೆಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪ ಮಾಡಲು ನಿಮಗೆ ನಾಚಿಕೆಯಾಗಬೇಕು" ಎಂದು ಎನ್‌ಸಿಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ವಿಶ್ವದಲ್ಲಿ ಯಾರು ಕೂಡಾ ಮನಮೋಹನ್ ಸಿಂಗ್ ಅವರನ್ನು ಬೊಟ್ಟು ಮಾಡಲಾಗದು" ಎಂದು ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮದೇ ದೇಶದ ಜನರ ವಿರುದ್ಧ ಕೀಳುಮಟ್ಟದ ಆರೋಪ ಮಾಡುವುದು ನಾಚಿಕೆಗೇಡು ಎಂದು ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಆಝಾದ್ ಕೂಡಾ ಕೆಂಡ ಕಾರಿದ್ದಾರೆ.

77ನೇ ಹುಟ್ಟುಹಬ್ಬದ ಸಂದರ್ಭದಲ್ಲಿ "ಜನ ಆಕ್ರೋಶ ಹಲ್ಲಾ ಬೋಲ್" ಸಾರ್ವಜನಿಕ ರ್ಯಾಲಿಯಲ್ಲಿ ಅವರಿಬ್ಬರು ಮಾತನಾಡಿದರು. ಕೃಷಿ ಸಂಕಷ್ಟಗಳ ಬಗ್ಗೆ ಗಮನ ಸೆಳೆಯುವ ಸಲುವಾಗಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜಂಟಿಯಾಗಿ ಈ ರ್ಯಾಲಿ ಆಯೋಜಿಸಿದ್ದವು.

 "ಮಹಾರಾಷ್ಟ್ರದ ರೈತರು ಯಾವುದೇ ಸಾಲು ಮರುಪಾವತಿಸಬೇಡಿ ಅಥವಾ ವಿದ್ಯುತ್ ಬಿಲ್ ಬಾಕಿಯನ್ನೂ ಸರ್ಕಾರಕ್ಕೆ ಪಾವತಿಸಬೇಡಿ. ಸರ್ಕಾರ ಸಾಲ ಮನ್ನಾ ಮೊತ್ತವನ್ನು ರೈತರ ಖಾತೆಗೆ ಪಾವತಿಸುವವರೆಗೂ ಸರ್ಕಾರಕ್ಕೆ ಪಾವತಿಸಬೇಕಿರುವ ಮೊತ್ತವನ್ನು ಪಾವತಿಸಬೇಡಿ" ಎಂದು ರೈತರಿಗೆ ಉಭಯ ಮುಖಂಡರು ಮನವಿ ಮಾಡಿದರು.

ಅಮಾನತುಗೊಂಡ ಕಾಂಗ್ರೆಸ್ ಮುಖಂಡ ಮಣಿಶಂಕರ ಅಯ್ಯರ್ ಅವರ ನಿವಾಸದಲ್ಲಿ ಡಿಸೆಂಬರ್ 6ರಂದು ನಡೆದ ಸಭೆಯನ್ನು, ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಾಕಿಸ್ತಾನದ ಜತೆ ನಡೆಸಿರುವ ಪಿತೂರಿ ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಿರುವ ಮೋದಿ ಕ್ರಮ ಖಂಡನೀಯ ಎಂದು ಪವಾರ್ ಹೇಳಿದರು.

"ಪ್ರಧಾನಿಗಳೇ ಇಂಥ ಆರೋಪ ಮಾಡಲು ನಿಮಗೆ ನಾಚಿಕೆಯಾಗಬೇಕು. ದೇಶದ ಮಾಜಿ ಪ್ರಧಾನಿ ಬಗ್ಗೆ ಮತ್ತು ಮಾಜಿ ರಕ್ಷಣಾ ಅಧಿಕಾರಿಗಳ ಮೇಲೆ ನೀವು ಆರೋಪ ಮಾಡಿದ್ದೀರಿ" ಎಂದು ಮಾಜಿ ರಕ್ಷಣಾ ಸಚಿವರೂ ಆದ ಪವಾರ್ ಟೀಕಿಸಿದ್ದಾರೆ.

ಗುಜರಾತ್‌ನಲ್ಲಿ ರವಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಪಾಕಿಸ್ತಾನಿ ನಿಯೋಗಕ್ಕೆ ಮಣಿಶಂಕರ ಅಯ್ಯರ್ ಆಯೋಜಿಸಿದ್ದ ಔತಣಕೂಟದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ಭಾ ಗವಹಿಸಿದ್ದನ್ನು ಬಿಜೆಪಿ ವಿರುದ್ಧದ ಪಿತೂರಿ ಸಭೆ ಎಂದು ಬಣ್ಣಿಸಿದ್ದರು. ಮೋದಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಈ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪವಾರ್ ಟೀಕಾಪ್ರಹಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News