ಆಹಾರ ಬೆಲೆ ಗಗನಮುಖಿ: ಗರಿಷ್ಠಮಟ್ಟಕ್ಕೆ ಹಣದುಬ್ಬರ

Update: 2017-12-13 04:10 GMT

ಹೊಸದಿಲ್ಲಿ, ಡಿ.13: ಗ್ರಾಹಕ ಬೆಲೆ ಹಣದುಬ್ಬರ (ಸಿಪಿಐ) ಅಥವಾ ಚಿಲ್ಲರೆ ಹಣದುಬ್ಬರ ನವೆಂಬರ್‌ನಲ್ಲಿ ಶೇಕಡ 4.88ಕ್ಕೆ ಹೆಚ್ಚಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಈ ಪ್ರಮಾಣ ಶೇಕಡ 3.63ರಷ್ಟಿತ್ತು.

ಮಂಗಳವಾರ ಹಣದುಬ್ಬರ ಕುರಿತ ಸರ್ಕಾರಿ ಅಂಕಿಅಂಶಗಳು ಬಹಿರಂಗವಾಗಿದ್ದು, 15 ತಿಂಗಳಲ್ಲೇ ಗರಿಷ್ಠ ಪ್ರಮಾಣದ ಹಣದುಬ್ಬರ ದಾಖಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಗರಿಷ್ಠ ಎಂದರೆ ಶೇಕಡ 5.05ರ ಹಣದುಬ್ಬರ ದಾಖಲಾಗಿತ್ತು. ನವೆಂಬರ್ ತಿಂಗಳ ಹಣದುಬ್ಬರ, ಭಾರತೀಯ ರಿಸರ್ವ್ ಬ್ಯಾಂಕಿನ ಮಧ್ಯಮಾವಧಿ ಗುರಿಯಾದ ಶೇಕಡ 4ಕ್ಕಿಂತ ಅಧಿಕವಾಗಿದೆ.

ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವೆಂದರೆ, ಆಹಾರ ವಸ್ತುಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು. ಆಹಾರ ಹಣದುಬ್ಬರ ಶೇಕಡ 4.42 ಆಗಿದೆ. ಈ ಪ್ರಮಾಣ ಅಕ್ಟೋಬರ್‌ನಲ್ಲಿ ಶೇಕಡ 1.9 ಆಗಿತ್ತು. ಅಂಕಿಅಂಶಗಳನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಿದಾಗ, ಮೊಟ್ಟೆಯ ಹಣದುಬ್ಬರ ಶೇಕಡ 7.95 ತಲುಪಿದ್ದು, ಹಿಂದಿನ ತಿಂಗಳು ಇದು 0.69 ಶೇಕಡ ಇತ್ತು. ತರಕಾರಿಗಳ ಹಣದುಬ್ಬರ ನವೆಂಬರ್‌ನಲ್ಲಿ ಶೇಕಡ 22.48 ಆಗಿದ್ದು, ಅಕ್ಟೋಬರ್‌ನಲ್ಲಿ ಈ ವಲಯದ ಹಣದುಬ್ಬರ ಶೇಕಡ 7.47 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News