ಗುಜರಾತ್‌ನ 20,000 ಕೋಟಿ ರೂ. ಅನಿಲ ಹಗರಣ ಹಾಗೂ ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ಲೋಪದೋಷಕ್ಕೂ ನಂಟಿದೆಯೇ?

Update: 2017-12-13 18:46 GMT


jantakareporter.comನಿಂದ ವಿಶೇಷ ತನಿಖಾ ವರದಿ ಇವುಗಳಿಗೆ ಸಂಬಂಧಿಸಿದ ಕಂಪೆನಿಗಳ ಮಾಲಕತ್ವ ಜಾಲಾಡಿದಾಗ ಹೊರಬಿದ್ದಿವೆ ಕುತೂಹಲಕಾರಿ ಮಾಹಿತಿಗಳು

ಎರಡೂ ಸಂಸ್ಥೆಗಳ ಮುಖ್ಯಸ್ಥರು ಭಾರತೀಯ ಅನಿವಾಸಿ ಉದ್ಯಮಿಗಳು. ಆದ್ದರಿಂದ ಜಿಎಸ್‌ಪಿಸಿ ಹಗರಣದ ಫಲಾನುಭವಿಗಳು ಇವಿಎಂ ಚಿಪ್ ಉತ್ಪಾದನಾ ಕಂಪೆನಿಯ ಮಾಲಕರೂ ಆಗಿರುವ ಸಂದೇಹವನ್ನು ಸಹಜವಾಗಿಯೇ ಇದು ಹುಟ್ಟುಹಾಕಿದೆ. 2014ರ ಚುನಾವಣೆಯಿಂದೀಚೆಗೆ ಇವಿಎಂಗಳು ಫಲಿತಾಂಶವನ್ನು ಬಿಜೆಪಿಗೆ ಲಾಭವಾಗುವ ರೀತಿಯಲ್ಲಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಸಂದೇಹಕ್ಕೆ ಇದು ಕಾರಣವಾಗಿದೆ.

ಇತ್ತೀಚೆಗೆ ದೇಶದ ಕೆಲ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಇವಿಎಂ ದೋಷವು ಬಿಜೆಪಿಗೆ ಲಾಭದಾಯಕವಾಗಿ ಪರಿಣಮಿಸಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇವಿಎಂಗಳು ನಂಬಲರ್ಹವಲ್ಲ, ಅವುಗಳನ್ನು ತಿರುಚಬಹುದು ಎನ್ನುವ ಆರೋಪಗಳಿದ್ದು, ಬ್ಯಾಲೆಟ್ ಪೇಪರ್ ಮೂಲಕ ಮಾತ್ರವೇ ಪಾರದರ್ಶಕ ಮತದಾನ ಸಾಧ್ಯ ಎನ್ನುವ ಅಭಿಪ್ರಾಯಗಳಿವೆ. ಈ ನಡುವೆ jantakareporter.com  ಇವಿಎಂ ಮೈಕ್ರೊಚಿಪ್ ಉತ್ಪಾದನಾ ಕಂಪೆನಿ ಹಾಗೂ ಗುಜರಾತ್ ಅನಿಲ ಹಗರಣದ ಫಲಾನುಭವಿ ಕಂಪೆನಿಯ ಮಾಲಕತ್ವದ ಸ್ವರೂಪ ಹಾಗೂ ಹಗರಣಕ್ಕೂ, ಇವಿಎಂ ದೋಷಕ್ಕೂ ಇರುವ ಸಂಬಂಧವೇನು ಎನ್ನುವ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯ ಯಥಾಪ್ರತಿ ಈ ಕೆಳಗಿದೆ.

ಈ ವರ್ಷದ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣಾ ಫಲಿತಾಂಶದ ಬಳಿಕ ಇದೀಗ ಪ್ರಚಾರ ನಡೆಯುತ್ತಿರುವ ಗುಜರಾತ್ ವಿಧಾನಸಭಾ ಚುನಾವಣೆ, ದೇಶದ ಪ್ರತೀ ನಾಗರಿಕರ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ರಾಷ್ಟ್ರೀಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

1 ಜಿಎಸ್‌ಪಿಸಿ ಹಗರಣ:

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮ ನಿಯಮಿತ (ಜಿಎಸ್‌ಪಿಸಿ)ಕ್ಕೆ 20 ಸಾವಿರ ಕೋಟಿ ರೂಪಾಯಿ ನಷ್ಟವಾದ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ಉಲ್ಲೇಖವಿದೆ.ಕಾಂಗ್ರೆಸ್ ಪಕ್ಷ ಈ ಹಗರಣದಲ್ಲಿ ಮೋದಿಯವರನ್ನು ಗುರಿ ಮಾಡಿದ್ದು, ಕಂಪೆನಿಗಳನ್ನು ಬೇಕಾಬಿಟ್ಟಿಯಾಗಿ ಆಯ್ಕೆ ಮಾಡಿದ್ದೇ ಇದಕ್ಕೆ ಕಾರಣ ಎನ್ನುವುದು ಕಾಂಗ್ರೆಸ್ ಆರೋಪ. ಗುಜರಾತ್ ಅನಿಲ ಹಗರಣ ಎನ್ನಲಾದ ಈ ಬೃಹತ್ ಹಗರಣದ ಅತಿದೊಡ್ಡ ಫಲಾನುಭವಿ ದೇಶ ಎಂದರೆ ಬಾರ್ಬೊಡೋಸ್/ಮರೀಷಿಯಸ್ ಮೂಲದ ‘ಜಿಯೋ ಗ್ಲೋಬಲ್ ರಿಸೋರ್ಸಸ್’

2 ಇಲೆಕ್ಟ್ರಾನಿಕ್ ಮತಯಂತ್ರ ವಿರೂಪ ಆರೋಪ:

ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳೂ ಇಲೆಕ್ಟ್ರಾನಿಕ್ ಮತಯಂತ್ರಗಳ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ಆರೋಪಗಳನ್ನು ಮಾಡುತ್ತಲೇ ಬಂದಿವೆ. ಚುನಾವಣಾ ಆಯೋಗಕ್ಕಿಂತ ಹೆಚ್ಚಾಗಿ, ಬಿಜೆಪಿ ಇಂಥ ಇವಿಎಂಗಳಲ್ಲಿ ತಪ್ಪಿಗೆ ಅವಕಾಶವೇ ಇಲ್ಲ ಎಂದು ಪ್ರತಿಪಾದಿಸುತ್ತಾ ಬಂದಿದೆ.

ಜನತಾ ಕಿ ರಿಪೋರ್ಟರ್, ಜಿಯೋ ಗ್ಲೋಬಲ್ ರಿಸೋರ್ಸಸ್ ಹಾಗೂ ಇವಿಎಂ ಮೈಕ್ರೊಚಿಪ್ ಉತ್ಪಾದನಾ ಕಂಪೆನಿಗಳ ಮಾಲಕತ್ವ ಸ್ವರೂಪದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದಾಗ ಇವೆರಡೂ ಅಮೆರಿಕ ಮೂಲದ ಕಂಪೆನಿಗಳು ಎನ್ನುವುದು ತಿಳಿದುಬಂದಿದೆ. ಜಿಎಸ್‌ಪಿಸಿ ಹಗರಣದ ಫಲಾನುಭವಿಗಳು ಹಾಗೂ ಭಾರತದ ಇವಿಎಂಗಳ ಮೈಕ್ರೊಚಿಪ್ ಉತ್ಪಾದಿಸುವ ಸಂಸ್ಥೆಗಳ ನಡುವೆ ಸಂಬಂಧ ಇವೆಯೇ ಎನ್ನುವ ಸಂದೇಹವನ್ನು ಅದರ ಅಧ್ಯಯನ ಹುಟ್ಟುಹಾಕಿದೆ.

ಜಿಯೋಗ್ಲೋಬಲ್ ರಿಸೋರ್ಸಸ್ ಮೂಲಕ ನಡೆದ ಜಿಎಸ್‌ಪಿಸಿ ಹಗರಣ ಅಮೆರಿಕದ ಮೈಕ್ರೊಚಿಪ್ ಇನ್ಕಾರ್ಪೊರೇಷನ್ನತ್ತ ನಿರ್ದೇಶಿಸಿದೆ. ಸಿಎಜಿ ವರದಿ ಅನ್ವಯ, ಕೆ.ಜಿ.ಬೇಸಿನ್ ಪ್ರದೇಶದಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್ ಕೈಗೊಂಡಿರುವ ತೈಲ ನಿಕ್ಷೇಪ ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಸರಕಾರಕ್ಕೆ 20 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಹಾಗೂ ತೈಲ ಉತ್ಪಾದನಾ ಪ್ರಯತ್ನಗಳು ಫಲಪ್ರದವಾಗಿಲ್ಲ. ಜಿಯೋ ಗ್ಲೋಬಲ್ ರಿಸೋರ್ಸಸ್ (ಹಿಂದೆ ಸೂಟ್101ಕಾಮ್ ಹೆಸರಿನ ಸಮಾಜ ಮಾಧ್ಯಮ ಹಾಗೂ ಪ್ರಕಾಶನ ಸಂಸ್ಥೆಯಾಗಿತ್ತು) ಒಂದು ಅಹ್ಮದಾಬಾದ್ ಮೂಲದ ಖಾಸಗಿ ಕಂಪೆನಿಯಾಗಿದ್ದು, ಬಾರ್ಬಡೋಸ್‌ನಲ್ಲಿ ಲಿಸ್ಟೆಡ್ ಕಂಪೆನಿ. ಈ ಕಂಪೆನಿಯನ್ನು ಪಾರದರ್ಶಕ ಬಿಡ್ಡಿಂಗ್ ನಡೆಸದೇ ತೈಲ ನಿಕ್ಷೇಪ ಹೊರತೆಗೆಯುವಿಕೆ ಕಂಪೆನಿಯಾಗಿ ಆಯ್ಕೆ ಮಾಡಲಾಗಿದೆ. ಇದರ ಸೇವೆಗೆ ಪ್ರತಿಫಲವಾಗಿ, ಜಿಎಸ್‌ಪಿಸಿಯಲ್ಲಿ ಶೇಕಡ 10ರ ಷೇರನ್ನು ಆ ಕಂಪೆನಿಗೆ ನೀಡಲಾಗಿದೆ.

ಜಿಯೋ ಗ್ಲೋಬಲ್ ರಿಸೋರ್ಸಸ್‌ಗೆ ಈ ಹಿಂದಿನ ಯಾವುದೇ ಅರ್ಹತೆಗಳು ಇಲ್ಲದಿದ್ದರೂ, ಕಂಪೆನಿಯ ಸಾಧನೆ ಹಿನ್ನೆಲೆ ಶೂನ್ಯವಾಗಿದ್ದರೂ,ಇದನ್ನು ಪಾಲುದಾರ ಕಂಪೆನಿಯಾಗಿ ಆಯ್ಕೆ ಮಾಡಲಾಗಿದೆ.ಈ ಉದ್ದೇಶಕ್ಕೆ ಹೆಚ್ಚು ಅರ್ಹತೆ ಪಡೆದಿದ್ದ ಓಎನ್ಜಿಸಿಯನ್ನು ನಿರ್ಲಕ್ಷಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಜಿಯೋ ಗ್ಲೋಬಲ್ ರಿಸೋರ್ಸಸ್ ಒಂದು ವಂಚಕ ಕಂಪೆನಿಯಾಗಿದ್ದು, ಕೋಟ್ಯಂತರ ಡಾಲರ್ ಸಾರ್ವಜನಿಕ ಹಣವನ್ನು ತೈಲ ಹೊರತೆಗೆಯುವ ಚಟುವಟಿಕೆಯ ನೆಪದಲ್ಲಿ ಮತ್ತು ಸಲಹಾ ಸೇವೆ ಪಡೆಯುವ ನೆಪದಲ್ಲಿ ದುರ್ಬಳಕೆ ಮಾಡಲಾಗಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ.

ಈ ಹಗರಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್‌ಅವರು, ‘‘ಜಿಯೊ ಗ್ಲೋಬಲ್ ಕಂಪೆನಿಯನ್ನು ರಹಸ್ಯವಾಗಿ ಆಯ್ಕೆ ಮಾಡಿದ್ದು, ಯಾವುದೇ ಪಾರದರ್ಶಕ ವಿಧಿವಿಧಾನಗಳನ್ನು ಅನುಸರಿಸದೇ ಮತ್ತು ಹಾಲಿ ಜಾರಿಯಲ್ಲಿರುವ ತತ್ವಗಳಿಗೆ ವಿರುದ್ಧವಾಗಿ ಇದನ್ನು ಆಯ್ಕೆ ಮಾಡಲಾಗಿದೆ’’ ಎಂದು ಆಪಾದಿಸಿದ್ದಾರೆ.

ಸಿಎಜಿ ವರದಿಯನ್ನು ಉಲ್ಲೇಖಿಸಿರುವ ಜೈರಾಂ ರಮೇಶ್ ಅವರು, ‘‘ಈ ಆಪ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಸಾರ್ವಜನಿಕ ಹಣ ದುರ್ಬಳಕೆಯ ಇನ್ನೊಂದು ಉತ್ತುಂಗಕ್ಕೆ ಗುಜರಾತ್ ಸರಕಾರ ಒಯ್ದಿದೆ. ಜಿಎಸ್‌ಪಿಸಿ 1734.60 ಕೋಟಿ ರೂಪಾಯಿಗಳನ್ನು ಜಿಯೋ ಗ್ಲೋಬಲ್ ರಿಸೋರ್ಸಸ್ ಪರವಾಗಿ ಸಾರ್ವಜನಿಕ ಬೊಕ್ಕಸದಿಂದ ಹೂಡಿಕೆ ಮಾಡುತ್ತಿದ್ದು, ಒಂದು ಪೈಸೆಯನ್ನೂ ಹಿಂಪಡೆಯುವುದು ಸಾಧ್ಯವಾಗಿಲ್ಲ’’ ಎಂದಿದ್ದಾರೆ.

ಸ್ಟಾರ್ಟ್‌ಅಪ್ ಕಂಪೆನಿಯಾದ ಜಿಯೋ ಗ್ಲೋಬಲ್ ರಿಸೋರ್ಸಸ್ ಕಂಪೆನಿಯನ್ನು ಆಯ್ಕೆ ಮಾಡುವ ಸಲುವಾಗಿ ಒಎನ್ಜಿಸಿಯನ್ನು ಕಡೆಗಣಿಸಲಾಗಿದ್ದು, ಜಿಎಸ್‌ಪಿಸಿಗೆ ಆಗಿರುವ ಸಂಪೂರ್ಣ ನಷ್ಟದ ಹೊರೆಯನ್ನು ಹೊರುವಂತೆ ಇದೀಗ ಒಎನ್ ಜಿಸಿಗೆ ಮನವಿ ಮಾಡಲಾಗಿದೆ. ಕಾಕತಾಳೀಯ ಎಂಬಂತೆ ಕೇಂದ್ರದ ಬಿಜೆಪಿ ಸರಕಾರವು ಇತ್ತೀಚೆಗೆ ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರನ್ನು ಒಎನ್ಜಿಸಿ ನಿರ್ದೇಶಕರಾಗಿ ನೇಮಕ ಮಾಡಿದೆ.

ಜಿಯೋ ಗ್ಲೋಬಲ್ ರಿಸೋರ್ಸಸ್ ಕಂಪೆನಿಯ ವಿವರಗಳನ್ನು ಜನತಾ ಕಿ ರಿಪೋರ್ಟರ್ ಪತ್ತೆ ಮಾಡಿದೆ. ಜಿಯೊ ಗ್ಲೋಬಲ್ ರಿಸೋರ್ಸಸ್ (ಇಂಡಿಯಾ) ಕಂಪೆನಿಯು ಬಾರ್ಬಡೋಸ್‌ನಲ್ಲಿ ಲಿಸ್ಟೆಡ್ ಕಂಪೆನಿಯಾಗಿದ್ದು, ಇದರ ಮಾತೃಸಂಸ್ಥೆ ಜಿಯೊ ಗ್ಲೋಬಲ್ ರಿಸೋರ್ಸಸ್ ಇನ್ಕಾರ್ಪೊರೇಷನ್ ಕೇಂದ್ರ ಕಚೇರಿ ಕೆನಡಾದ ಕಲ್ಗರಿಯಲ್ಲಿದೆ. ಕುತೂಹಲದ ವಿಚಾರವೆಂದರೆ ಜಿಯೊ ಗ್ಲೋಬಲ್ ಸರ್ವಿಸಸ್ ಇನ್ಕಾರ್ಪೊರೇಷನ್, ಕೀ ಕ್ಯಾಪಿಟಲ್ ಕಾರ್ಪೊರೇಷನ್ ಎಂಬ ಅಮೆರಿಕ ಮೂಲದ ಕಂಪೆನಿಯ ಸಹಸಂಸ್ಥೆಯಾಗಿದೆ. ಕೀ ಕಾರ್ಪ್ ಮತ್ತು ಭಾರತದಲ್ಲಿ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರಗಳ ಚಿಪ್ ಉತ್ಪಾದಿಸುವ ಮೈಕ್ರೊಚಿಪ್ ಇನ್ಕಾರ್ಪೊರೇಷನ್ನ ಮಾಲಕತ್ವ ಸ್ವರೂಪ ಅನುರೂಪವಾಗಿದೆ.

ಲಭ್ಯವಾಗಿರುವ ವಿವರಗಳ ಅನ್ವಯ, ಇವಿಎಂ ಮೈಕ್ರೊ ಕಂಟ್ರೋಲರ್ ಉತ್ಪಾದಿಸುವ ಕಂಪೆನಿಗಳಲ್ಲಿ ಅಮೆರಿಕ ಮೂಲದ ಮೈಕ್ರೊಚಿಪ್ ಇನ್ಕಾರ್ಪೊರೇಷನ್ ಕೂಡಾ ಸೇರಿದೆ. ಕೋಟ್ಯಧೀಶ ಅನಿವಾಸಿ ಭಾರತೀಯ ಉದ್ಯಮಿ ಸ್ಟೀವ್‌ಸಾಂಘ್ವಿ ಇದರ ಮುಖ್ಯಸ್ಥರು. ಹರ್ಯಾಣ ಮೂಲದ ಇವರು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಜ್ಞಾನದಲ್ಲಿ ಪದವಿ ಪಡೆದವರು. ಈ ಕಂಪೆನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಮತ್ತೊಬ್ಬ ಅನಿವಾಸಿ ಭಾರತೀಯ ಉದ್ಯಮಿ ಗಣೇಶ್ ಮೂರ್ತಿ. ಇವರು ಕೂಡಾ ಮುಂಬೈ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ಪದವಿ ಪಡೆದವರು.

ಮೈಕ್ರೊಚಿಪ್ ಇನ್ಕಾರ್ಪೊರೇಷನ್ ಕೇವಲ ಭಾರತೀಯ ಇವಿಎಂಗಳಿಗೆ ಮೈಕ್ರೊಚಿಪ್ಗಳನ್ನು ಪೂರೈಸುವುದು ಮಾತ್ರವಲ್ಲದೆ, ಮೈಕ್ರೋಚಿಪ್ ಸೀಲ್ ಮಾಡುವ ಮುನ್ನ ಮೈಕ್ರೊಚಿಪ್ನಲ್ಲಿ ಸಾಫ್ಟ್‌ವೇರ್ ಪ್ರೋಗ್ರಾಂ ಬರೆಯುವ ಕಾರ್ಯವನ್ನೂ ಇದೇ ಮಾಡುತ್ತದೆ. ಈ ಮೂಲಕ ಭಾರತದ ಚುನಾವಣಾ ಆಯೋಗ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಥವಾ ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಯಾರು ಕೂಡಾ ಈ ಪ್ರೋಗ್ರಾಂ ಓದಲು ಸಾಧ್ಯವಿಲ್ಲ.

ಕೀ ಕಾರ್ಪ್ ಮತ್ತು ಮೈಕ್ರೊಚಿಪ್ ಇಂಕ್ ಮಾಲಕತ್ವ ಸ್ವರೂಪದ ಸಮಾನ ಅಂಶಗಳು

ಎನ್ಎಎಸ್‌ಡಿಎಕ್ಯೂ ವೆಬ್ಸೈಟ್ ಮೂಲಕ ಪರಿಶೀಲಿಸಿದಾಗ, ಎರಡೂ ಕಂಪೆನಿಗಳ ಮಾಲಕತ್ವ ಸ್ವರೂಪದಲ್ಲಿ ಏಕರೂಪತೆ ಮೇಲ್ನೋಟಕ್ಕೇ ಕಂಡುಬರುತ್ತದೆ. ಇದು ತೀರಾ ಅಪಾಯಕಾರಿ ನಿರ್ಣಯಕ್ಕೆ ಬರಲು ಕಾರಣವಾಗಿದ್ದು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳು ಭಾರತದ ಪ್ರಜಾಪ್ರಭುತ್ವವನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ಗಳ ಮೂಲಕ ನಿಯಂತ್ರಿಸುವ ಪ್ರಬಲ ಸಾಧ್ಯತೆಯ ಸಂದೇಹವನ್ನು ಹುಟ್ಟುಹಾಕಿದೆ.

ಎನ್ಎಎಸ್‌ಡಿಎಕ್ಯೂ ವೆಬ್ಸೈಟ್ ಮೂಲಕ ಕೀ ಕ್ಯಾಪಿಟಲ್ ಕಾರ್ಪ್ ಮಾಲಕತ್ವ ಸ್ವರೂಪವನ್ನು ಪರಿಶೀಲಿಸಿದಾಗ, ಈ ಜಾಗತಿಕ ಹಣಕಾಸು ದೈತ್ಯ ಕಂಪೆನಿಯು ಮೈಕ್ರೊಚಿಪ್ ಇಂಕ್ ಕಂಪೆನಿಯ ಮಾಲಕತ್ವವನ್ನೂ ಹೊಂದಿದೆ ಎನ್ನುವುದು ಬೆಳಕಿಗೆ ಬಂದಿದೆ. ಎರಡೂ ಸಂಸ್ಥೆಗಳ ಮುಖ್ಯಸ್ಥರು ಭಾರತೀಯ ಅನಿವಾಸಿ ಉದ್ಯಮಿಗಳು. ಆದ್ದರಿಂದ ಜಿಎಸ್‌ಪಿಸಿ ಹಗರಣದ ಫಲಾನುಭವಿಗಳು ಇವಿಎಂ ಚಿಪ್ ಉತ್ಪಾದನಾ ಕಂಪೆನಿಯ ಮಾಲಕರೂ ಆಗಿರುವ ಸಂದೇಹವನ್ನು ಸಹಜವಾಗಿಯೇ ಇದು ಹುಟ್ಟುಹಾಕಿದೆ. 2014ರ ಚುನಾವಣೆಯಿಂದೀಚೆಗೆ ಇವಿಎಂಗಳು ಫಲಿತಾಂಶವನ್ನು ಬಿಜೆಪಿಗೆ ಲಾಭವಾಗುವ ರೀತಿಯಲ್ಲಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಸಂದೇಹಕ್ಕೆ ಇದು ಕಾರಣವಾಗಿದೆ.

ಇವಿಎಂ ಮೈಕ್ರೊಚಿಪ್ ಮಹತ್ವ

ಇವಿಎಂ ಯಂತ್ರದಲ್ಲಿ ಎರಡು ಘಟಕಗಳಿವೆ. ಒಂದು ನಿಯಂತ್ರಣ ಘಟಕ ಹಾಗೂ ಇನ್ನೊಂದು ಮತದಾನ ಘಟಕ. ನಿಯಂತ್ರಣ ಘಟಕವು ಕಂಪ್ಯೂಟರ್ ಆಗಿದ್ದು, ಇದರಲ್ಲಿ ಸಿಪಿಯುನಲ್ಲಿ ಅಂತರ್ಗತವಾದ ಮೈಕ್ರೊಚಿಪ್ ನಿಯಂತ್ರಣ ವ್ಯವಸ್ಥೆ (ಎಂಸಿಯು)ಇರುತ್ತದೆ. ಮತದಾನ ಘಟಕವು ಕೀಬೋರ್ಡ್ ಆಗಿರುತ್ತದೆ. ಸರಳವಾಗಿ ಹೇಳಬೇಕೆಂದರೆ, ಎಂಸಿಯು ಎಲೆಕ್ಟ್ರಾನಿಕ್ ಮತಯಂತ್ರದ ಮೆದುಳು ಎನಿಸಿಕೊಳ್ಳುತ್ತದೆ.ಮಿಷನ್ ಕೋಡ್ ಎಂಬ ಸಾಫ್ಟ್‌ವೇರ್ ಅನ್ನು ಎಂಸಿಯು ಮೇಲೆ ಬರೆಯಲಾಗಿದ್ದು, ಇದು ಎಲ್ಲ ಕಾರ್ಯಚಟುವಟಿಕೆಗಳನ್ನು ನಿರ್ಧರಿಸುತ್ತದೆ. ಇವಿಎಂಗಳ ಭದ್ರತಾ ಕ್ರಮವಾಗಿ ಮೂಲ ಎಂಸಿಯುನ ಸಂಕೇತವನ್ನು ದಹಿಸಲಾಗುತ್ತದೆ ಹಾಗೂ ಮೆಷಿನ್ ಕೋಡ್ ಅನ್ನು ಮತ್ತೆ ಓದಲು ಅಥವಾ ನಕಲು ಮಾಡಲು ಇಲ್ಲವೇ ಪರಿಷ್ಕರಿಸಲು ಸಾಧ್ಯವಿಲ್ಲ.

ಚುನಾವಣಾ ಆಯೋಗವು ಬಿಇಎಲ್ ಮತ್ತು ಇಸಿಐಎನ್ ವಿಜ್ಞಾನಿಗಳ ನೆರವಿನಿಂದ ಹೆಚ್ಚು ಪ್ರಾಮಾಣಿಕವಾಗಿ ತನ್ನ ಸಾಫ್ಟ್ ವೇರ್ ಅಭಿವೃದ್ಧಿಪಡಿಸುತ್ತದೆ. ಇಲೆಕ್ಟ್ರಾನಿಕ್ ಮತಯಂತ್ರಗಳ ಮೂಲ ಸಂಕೇತವು ತೀರಾ ರಹಸ್ಯ ಎಂದು ಚುನಾವಣಾ ಆಯೋಗ ಪದೇ ಪದೇ ಹೇಳುತ್ತಲೇ ಬಂದಿದೆ. ಇದು ಎಷ್ಟು ರಹಸ್ಯವಾಗಿದೆ ಎಂದರೆ ಚುನಾವಣಾ ಆಯೋಗವೂ ಇದನ್ನು ನಕಲು ಮಾಡಲು ಸಾಧ್ಯವಿಲ್ಲ. ಈ ಮೂಲ ಸಂಕೇತದ ಮಹತ್ವವು ಸ್ವಯಂ ವಿವರಣಾತ್ಮಕ. ಆದರೆ ಒಂದು ವೇಳೆ ವಿಜ್ಞಾನಿಗಳು ಹಾಗೂ ಬಿಇಎಲ್ ಮತ್ತು ಇಸಿಐಎಲ್ ಸಿಬ್ಬಂದಿ ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿದರೆ, ಇವಿಎಂ ವ್ಯವಸ್ಥೆಯ ಜತೆಗೆ ರಾಜಿ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ನೂರು ಕೋಟಿ ಡಾಲರ್ ಲಂಚ ನೀಡಿದರೂ ಈ ವಿಜ್ಞಾನಿಗಳನ್ನು ಖರೀದಿಸಲಾಗದು ಹಾಗೂ ಇವಿಎಂ ಮೂಲಕ ಸಂಕೇತದ ವಿಚಾರದಲ್ಲಿ ಈ ಹಂತದಲ್ಲಿ ರಾಜಿ ಮಾಡಿಕೊಳ್ಳಲಾಗದು ಎಂದೇ ಅಂದುಕೊಳ್ಳೋಣ.

ಚುನಾವಣಾ ಆಯೋಗ ಎಂಸಿಯು ಅಥವಾ ಮೈಕ್ರೊಚಿಪ್ ಖರೀದಿಯನ್ನು ವಿದೇಶಿ ಮಾರಾಟಗಾರರಾದ ರೆನೇಸಸ್ ಜಪಾನ್ ಮತ್ತು ಮೈಕ್ರೊಚಿಪ್ ಇನ್ಕಾರ್ಪೊರೇಷನ್, ಅಮೆರಿಕಕ್ಕೆ ಹೊರಗುತ್ತಿಗೆ ನೀಡುತ್ತದೆ. ಏಕೆಂದರೆ ಭಾರತದ ಯಾವುದೇ ಕಂಪೆನಿ ಮೈಕ್ರೊಚಿಪ್ಗಳನ್ನು ಅಥವಾ ಎಂಸಿಯು ಉತ್ಪಾದಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿಲ್ಲ. ಆದಾಗ್ಯೂ ಚುನಾವಣಾ ಆಯೋಗಕ್ಕೇ ತಿಳಿದಿರುವ ಕೆಲ ವಿಚಾರಗಳ ಪ್ರಕಾರ, ಮೈಕ್ರೊಚಿಪ್ನ ಮೇಲೆ ಮೂಲ ಸಂಕೇತದಲ್ಲಿ ಬರೆಯುವ ಕಾರ್ಯವನ್ನೂ ವಿದೇಶಿ ಮಾರಾಟಗಾರರಿಗೆ ಹೊರಗುತ್ತಿಗೆಗೆ ನೀಡಲಾಗುತ್ತದೆ.

ಸರಕಾರದ ಪ್ರಚಾರ ಇಲಾಖೆ ಪಿಐಬಿ ಪ್ರಕಟಿಸುವ ಚುನಾವಣಾ ಆಯೋಗದ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಗಳ ವಿಭಾಗದಲ್ಲಿ, ‘‘ಸಾಫ್ಟ್ವೇರ್ ಪ್ರೋಗ್ರಾಂ ಸಂಕೇತವನ್ನು ಬಿಇಎಲ್ ಹಾಗೂ ಇಸಿಐಎಲ್ ನೆರವಿನೊಂದಿಗೆ ದೇಶೀಯವಾಗಿಯೇ ಬರೆಯಲಾಗುತ್ತದೆ. ಇದನ್ನು ಹೊರಗುತ್ತಿಗೆಗೆ ನೀಡಲಾಗುವುದಿಲ್ಲ. ಇದು ಫ್ಯಾಕ್ಟರಿ ಮಟ್ಟದಲ್ಲಿ ಭದ್ರತಾ ವಿಧಿವಿಧಾನಗಳಿಗೆ ಅನುಗುಣವಾಗಿರುತ್ತದೆ. ಹಾಗೂ ಗರಿಷ್ಠ ಮಟ್ಟದ ಪ್ರಾಮಾಣಿಕತೆಯನ್ನು ನಿರ್ವಹಿಸಲಾಗುತ್ತದೆ. ಈ ಪ್ರೋಗ್ರಾಂ ಅನ್ನು ಮೆಷಿನ್ ಸಂಕೇತವಾಗಿ ಪರಿವರ್ತಿಸಲಾಗುತ್ತದೆ ಹಾಗೂ ಆ ಬಳಿಕವೇ ಹೊರದೇಶಗಳ ಚಿಪ್ ಉತ್ಪಾದಕರಿಗೆ ನೀಡಲಾಗುತ್ತದೆ. ಏಕೆಂದರೆ ನಮ್ಮಲ್ಲಿ ಸೆಮಿಕಂಡಕ್ಟರ್ ಮೈಕ್ರೊಚಿಪ್ಗಳನ್ನು ಉತ್ಪಾದಿಸುವ ವ್ಯವಸ್ಥೆ ಇಲ್ಲ’’ ಎಂದು ಬಿಂಬಿಸಿದೆ.

ಈ ಹಂತದಲ್ಲಿ ಚುನಾವಣಾ ಆಯೋಗವು ತಪ್ಪುದಾರಿಗೆ ಎಳೆಯುವಂಥ ಮತ್ತು ತಪ್ಪುಭರವಸೆಯನ್ನು ನೀಡುತ್ತದೆ.ಏಕೆಂದರೆ, ಚುನಾವಣಾ ಆಯೋಗ ಬಹಿರಂಗಪಡಿಸದೆ ಇರುವ ವಿಚಾರವೆಂದರೆ ಪ್ರೋಗ್ರಾಂ ಸಂಕೇತದ್ದು. ಇದನ್ನು ಬೈನರಿ ಭಾಷೆಯಲ್ಲಿ ಬರೆಯಲಾಗುತ್ತದೆ ಹಾಗೂ ಇದನ್ನು ಓದಲು ಮತ್ತು ಮೈಕ್ರೊಚಿಪ್ ಕಂಪೆನಿಗಳು ರೂಪಾಂತರಿಸಲು ಅವಕಾಶ ಇರುತ್ತದೆ. ವಿದೇಶಗಳ ಉತ್ಪಾದನಾ ಕಂಪೆನಿಗಳು ಇವುಗಳನ್ನು ರೂಪಾಂತರಿಸಿ, ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಅಥವಾ ನಿರ್ದಿಷ್ಟ ರಾಜಕೀಯ ಪಕ್ಷದ ಆಶೋತ್ತರಗಳಿಗೆ ಅನುಗುಣವಾಗಿ ಪರಿವರ್ತಿಸುವ ಸಾಧ್ಯತೆ ಇರುತ್ತದೆ.

ಪ್ರೋಗ್ರಾಂ ಸಂಕೇತಗಳನ್ನು ಹೇಗೆ ರೂಪಾಂತರಿಸಬಹುದು ಎನ್ನುವ ಕೆಲ ಸಾಧ್ಯತೆಗಳನ್ನು ಈ ಕೆಳಗೆ ವಿವರಿಸಲಾಗಿದೆ.

♦ ಮತಯಂತ್ರಗಳ ಸ್ವಿಚ್ ಆಫ್ ಮಾಡಿದ 2 ಗಂಟೆಗಳ ಬಳಿಕ ಕೆಲ ಶೇಕಡಾ ಮತಗಳನ್ನು ಮತ್ತೊಬ್ಬ ಅಭ್ಯರ್ಥಿಯ ಪರವಾಗಿ ಅಥವಾ ಒಂದು ರಾಜಕೀಯ ಪಕ್ಷದ ಪರವಾಗಿ ವರ್ಗಾಯಿಸುವ ಸಾಧ್ಯತೆ ಇರುತ್ತದೆ.

♦ ಮತದಾನಕ್ಕೆ ಯಂತ್ರಗಳನ್ನು ಆನ್ ಮಾಡಿದ ಬಳಿಕ ಮತ್ತೊಬ್ಬ ಅಭ್ಯರ್ಥಿಯ ಒಂದಷ್ಟು ಶೇಕಡಾ ಮತವನ್ನು ಒಂದು ರಾಜಕೀಯ ಪಕ್ಷದ ಪರವಾಗಿ ವರ್ಗಾಯಿಸುವ ಅವಕಾಶವನ್ನು ಹೊಂದಿರುತ್ತದೆ.

ಅಮೆರಿಕ ಮತ್ತು ಜಪಾನ್ನ ಮೈಕ್ರೊಚಿಪ್ ಉತ್ಪಾದನಾ ಕಂಪೆನಿಗಳು ಮೈಕ್ರೊಚಿಪ್ಗಳನ್ನು ಸೀಲ್ ಮಾಡಿ ನೀಡುವುದರಿಂದ ಚುನಾವಣಾ ಆಯೋಗ ಕೂಡಾ ಬಿಇಎಲ್ ಮತ್ತು ಇಸಿಐಎಲ್ ವಿಜ್ಞಾನಿಳು ಸಿದ್ಧಪಡಿಸಿದ ಇದರ ಮೂಲ ಪ್ರೋಗ್ರಾಂ ಸಂಕೇತವನ್ನು ಪರಿಷ್ಕರಿಸಲಾಗಿದೆಯೇ ಎಂದು ದೃಢೀಕರಿಸುವ ಸ್ಥಿತಿಯಲ್ಲಿ ಇರುವುದಿಲ್ಲ.

ಇಂದಿನವರೆಗೆ ಚುನಾವಣಾ ಆಯೋಗ, ಈ ಹಿಂದೆ ಸಾಂಘಿ ಹಾಗೂ ಮೂರ್ತಿಯವರ ಹಿನ್ನೆಲೆಯನ್ನು ಪರಿಶೀಲಿಸಿದೆಯೇ ಎಂಬ ಬಗ್ಗೆ ಕೂಡಾ ವಿವರಗಳನ್ನು ನೀಡಿಲ್ಲ. ಗುಜರಾತ್ ಅನಿಲ ಹಗರಣದ ಫಲಾನುಭವಿ ಕಂಪೆನಿ ಮತ್ತು ಮೈಕ್ರೊಚಿಪ್ ಉತ್ಪಾದನಾ ಕಂಪೆನಿಯ ಮಾಲಕತ್ವದ ಸ್ವರೂಪದ ಏಕಸಾಮ್ಯತೆಯನ್ನು ನೋಡಿದರೆ, ಭಾರತದ ಎಲೆಕ್ಟ್ರಾನಿಕ್ ಮತಯಂತ್ರಗಳ ಅಧಿಕೃತತೆ ಬಗ್ಗೆ ಸಹಜವಾಗಿಯೇ ಸಂಶಯದ ದಟ್ಟ ಕಾರ್ಮೋಡ ಕಾಣಿಸಿಕೊಳ್ಳುತ್ತದೆ.

(ಕೃಪೆ: ಜನತಾ ಕಿ ರಿಪೋರ್ಟರ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ