ಜನ ಬೆಂಬಲವಿಲ್ಲದ ಬಿಜೆಪಿ ಯಾತ್ರೆ

Update: 2017-12-14 04:38 GMT

ಕರ್ನಾಟಕ ವಿಧಾನಸಭೆಗೆ ಇನ್ನು ಐದು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿಂದೆ ಈ ರಾಜ್ಯದಲ್ಲಿ ಅಧಿಕಾರದ ಸುಖವನ್ನು ಅನುಭವಿಸಿದ ಬಿಜೆಪಿ ತಾನೇ ಮಾಡಿಕೊಂಡ ತಪ್ಪಿನಿಂದ ಜನರಿಂದ ತಿರಸ್ಕೃತವಾಯಿತು. ಈ ಬಾರಿ ಹೇಗಾದರೂ ಮಾಡಿ ಮತ್ತೆ ಅಧಿಕಾರ ಸ್ವಾಧೀನ ಪಡಿಸಿಕೊಳ್ಳಲು ಅದು ಹರಸಾಹಸಪಡುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಗಿಂತ ಪಕ್ಷದ ರಾಷ್ಟ್ರೀಯ ನಾಯಕರಿಗೆ ದಕ್ಷಿಣಭಾರತದಲ್ಲಿ ಕಾಲೂರಲು ಅವಕಾಶವಿರುವ ಏಕೈಕ ರಾಜ್ಯವಾದ ಕರ್ನಾಟಕವನ್ನು ಗೆಲ್ಲಲೇಬೇಕೆಂಬ ಛಲ ಮೂಡಿದೆ. ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ಪ್ರತಿಪಕ್ಷ ಮುಕ್ತ ಭಾರತವನ್ನು ನಿರ್ಮಾಣ ಮಾಡಿ ಈ ದೇಶದ ಸಂವಿಧಾನವನ್ನೇ ಬುಡಮೇಲು ಮಾಡುವ ಗುರಿ ಹೊಂದಿರುವ ಸಂಘ ಪರಿವಾರ ನಿಯಂತ್ರಿತ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕರ್ನಾಟಕವನ್ನು ಗೆಲ್ಲಲು ಎಂತಹ ಬೆಲೆಯನ್ನು ತೆರಲು ಕೂಡಾ ಸಿದ್ಧವಾಗಿದೆ. ಆದರೆ, ಕರ್ನಾಟಕ ಅವರು ತಿಳಿದುಕೊಂಡಷ್ಟು ಸುಲಭದ ತುತ್ತಲ್ಲ. ಬಿಜೆಪಿ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿರುವ ಹಗರಣಗಳ ನೆನಪನ್ನು ಜನ ಇನ್ನೂ ಮರೆತಿಲ್ಲ. ಅಲ್ಲದೇ, ಈ ಹಿಂದೆ ಅಧಿಕಾರದಲ್ಲಿದ್ದಾಗ ಹಲವಾರು ಭ್ರಷ್ಟಾಚಾರಗಳ ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದವರೇ ಮತ್ತೆ ಚುನಾವಣಾ ಪ್ರಚಾರದ ಸಾರಥ್ಯ ವಹಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲದೇ, ರಾಜ್ಯದ ಬಿಜೆಪಿ ಈಗ ಒಡೆದ ಮನೆಯಾಗಿದೆ. ಈ ಪಕ್ಷದಲ್ಲಿ ಒಂದೆರಡಲ್ಲ ಐದಾರು ಗುಂಪುಗಳಿವೆ. ಈ ಗುಂಪುಗಳಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಅಂತಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಹೊರಟ ಪರಿವರ್ತನಾ ರ್ಯಾಲಿಯಲ್ಲಿ ಪಕ್ಷದ ಉಳಿದ ನಾಯಕರಾದ ಅನಂತಕುಮಾರ್, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಈಶ್ವರಪ್ಪ ಮುಂತಾದವರು ಕಾಣಿಸಿಕೊಳ್ಳುತ್ತಿಲ್ಲ. ಒಡೆದು ಹೋಗಿರುವ ಈ ಗುಂಪುಗಳಿಗೆ ತೇಪೆ ಹಚ್ಚಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಡಿದ ಪ್ರಯತ್ನವೂ ಯಶಸ್ವಿಯಾಗಿಲ್ಲ. ಪರಿವರ್ತನಾ ಯಾತ್ರೆ ಬೆಂಗಳೂರಿನಲ್ಲಿ ಆರಂಭವಾದಾಗ ರಾಜ್ಯದ ಎಲ್ಲ ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಸಭೆಗೆ ನಿರೀಕ್ಷಿಸಿದಷ್ಟು ಜನ ಬರಲಿಲ್ಲ. ಎದುರಿಗಿದ್ದ ಖಾಲಿ ಕುರ್ಚಿಗಳೇ ಅಮಿತ್ ಶಾ ಅವರನ್ನು ಸ್ವಾಗತಿಸಿದವು. ಪಕ್ಷದಲ್ಲಿನ ಗುಂಪುಗಾರಿಕೆ ಬಟಾಬಯಲಾಯಿತು. ಆನಂತರವಾದರೂ ಇದು ಸರಿಹೋಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಯಾತ್ರೆ ಸಂಚರಿಸಿದ ಕಡೆಯಲ್ಲೆಲ್ಲ ಒಡಕಿನ ಧ್ವನಿಗಳೇ ಕೇಳಿಬರುತ್ತಿವೆ. ಯಾತ್ರೆಯ ನೇತೃತ್ವ ವಹಿಸಿದ ಯಡಿಯೂರಪ್ಪನವರಿಗೆ ಎಲ್ಲ ಕಡೆ ಅಮಂಗಳಕರ ದೃಶ್ಯಗಳೇ ಕಾಣಿಸುತ್ತಿವೆ.

ಯಾತ್ರೆ ಆರಂಭವಾದ ಎರಡನೇ ದಿನ ತುಮಕೂರಿನಲ್ಲಿ ಪಕ್ಷದ ಒಂದು ಸಭೆಯಲ್ಲಿ ಅವರು ಪಾಲ್ಗೊಳ್ಳಲೇ ಇಲ್ಲ. ಈ ಯಾತ್ರೆ ಬಿಜಾಪುರ ಜಿಲ್ಲೆಗೆ ಬಂದಾಗ ಅಲ್ಲಿ ಕೆಲವು ಕಡೆ ನಡೆದ ಸಭೆಗಳಲ್ಲಿ ಜನರೇ ಇರಲಿಲ್ಲ. ಹಿಂಡಿಯಲ್ಲಿ ಯಡಿಯೂರಪ್ಪನವರು ಆಗಮಿಸಿ ವೇದಿಕೆಯನ್ನು ಏರಿದಾಗ ಪಕ್ಷದ ಎರಡು ಗುಂಪುಗಳ ನಡುವೆ ಹೊಡೆದಾಟ ಆರಂಭವಾಗಿ ಒಂದು ಗುಂಪು ಯಡಿಯೂರಪ್ಪನವರ ಕೈಯಿಂದ ಧ್ವನಿವರ್ಧಕವನ್ನೇ ಕಿತ್ತುಕೊಂಡಿತು. ಹಿಂಡಿಯ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಹೆಸರನ್ನು ಯಡಿಯೂರಪ್ಪನವರು ಹೇಳುತ್ತಿದ್ದಂತೆ ಅವರ ವಿರೋಧಿ ಗುಂಪು ಗಲಾಟೆ ಆರಂಭಿಸಿತು. ಇದರ ಪರಿಣಾಮವಾಗಿ ಅಲ್ಲಿ ಸಭೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಬಿಜೆಪಿ ಯಾತ್ರೆ ವಿಫಲವಾಗಲು ಇನ್ನೊಂದು ಕಾರಣವೆಂದರೆ ಯಡಿಯೂರಪ್ಪನವರು ಈ ಹಿಂದೆ ಬಿಜೆಪಿ ಬಿಟ್ಟು ಹೋದಾಗ ಕಟ್ಟಿದ ಕೆಜೆಪಿ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಇದ್ದಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಚುನಾವಣಾ ಟಿಕೆಟ್ ತಮಗೆ ಸಿಗಬೇಕೆಂದು ಈ ಕೆಜೆಪಿ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಮೂಲ ಕಾರ್ಯಕರ್ತರು ಯಡಿಯೂರಪ್ಪನವರು ತಾವು ಹೇಳಿದಂತೆ ಕೇಳಬೇಕೆಂದು ಒತ್ತಡ ಹೇರುತ್ತಿದ್ದಾರೆ. ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪನವರು ಕೆಜೆಪಿಯವರಿಗೆ ಹೆಚ್ಚು ಅವಕಾಶ ನೀಡಿದ್ದಾರೆಂದು ಸಂಘಪರಿವಾರ ಮೂಲದ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಲ್ಲಿ ಅಸಮಾಧಾನವಿದೆ. ಈ ಅಸಮಾಧಾನ ಬಹಿರಂಗವಾಗಿ ಸ್ಫೋಟವಾಗುತ್ತಲೇ ಇದೆ.

ಯಡಿಯೂರಪ್ಪನವರ ಪರಿವರ್ತನಾ ಯಾತ್ರೆ ಬೀದರ್ ಜಿಲ್ಲೆಯ ಬಾಲ್ಕಿಗೆ ಬಂದಾಗ ಅಲ್ಲಿ ಕೆಜೆಪಿ ಮೂಲದಿಂದ ಬಂದ ಗುಂಪು ಪ್ರತ್ಯೇಕ ಬಹಿರಂಗ ಸಭೆಯನ್ನು ಏರ್ಪಡಿಸಿತ್ತು. ಬಿಜೆಪಿಯ ಅಧಿಕೃತ ಗುಂಪು ಇನ್ನೊಂದು ಕಡೆ ವೇದಿಕೆಯನ್ನು ನಿರ್ಮಿಸಿತ್ತು. ಹೀಗಾಗಿ ಯಾವ ಕಡೆ ಹೋಗಬೇಕೆಂಬ ಗೊಂದಲದಿಂದ ಯಡಿಯೂರಪ್ಪನವರಿಗೆ ದಿಕ್ಕು ತಪ್ಪಿದಂತಾಯಿತು. ಕೊನೆಗೆ ಎರಡೂ ವೇದಿಕೆಗಳಿಗೆ ಹೋಗಿ ಎರಡೂ ಗುಂಪುಗಳಿಗೆ ಸಮಾಧಾನ ಮಾಡಿ ಮುಂದಿನ ಊರಿಗೆ ಹೋದರು. ಇದು ಬಿಜೆಪಿಯ ಪರಿವರ್ತನಾ ಯಾತ್ರೆಯ ನೈಜ ಸ್ಥಿತಿ. ಉತ್ತರಕರ್ನಾಟಕ ಭಾಗದಲ್ಲಿ ಈ ಬಾರಿ ಬಿಜೆಪಿಗೆ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಪರಿವರ್ತನಾ ಯಾತ್ರೆಯ ಸಭೆಗಳಿಗೆ ಜನರು ಸೇರುತ್ತಿಲ್ಲ. ಅನೇಕ ಕಡೆ ಜನರಿಗೆ ದುಡ್ಡು ಕೊಟ್ಟು ಲಾರಿಗಳಲ್ಲಿ ಕರೆದುಕೊಂಡು ಬಂದು ಸಭೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಉತ್ತರಕರ್ನಾಟಕ ಭಾಗದ ಸಮಸ್ಯೆಗಳಾದ ಮಹಾದಾಯಿ ಯೋಜನೆ ಹಾಗೂ ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬಿಜೆಪಿ ನಾಯಕರು ಸ್ಪಂದಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿ ವ್ಯಾಪಕವಾಗಿದೆ. ಇದರೊಂದಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿ ತೀವ್ರಗೊಂಡಿರುವುದರಿಂದ ಬಿಜೆಪಿ ಬೆಂಬಲದ ಕೋಟೆ ಕುಸಿದು ಬಿದ್ದಿದೆ. ಈ ವರೆಗೆ ಬಿಜೆಪಿ ವೋಟ್ ಬ್ಯಾಂಕ್ ಆಗಿದ್ದ ಲಿಂಗಾಯತರು, ಈಗ ಯಡಿಯೂರಪ್ಪನವರ ನಾಯಕತ್ವವನ್ನು ತಿರಸ್ಕರಿಸಿದ್ದಾರೆ.

ಯಡಿಯೂರಪ್ಪನವರ ಯಾತ್ರೆ ಉತ್ತರಕರ್ನಾಟಕದಲ್ಲಿ ನಡೆಯುತ್ತಿದ್ದಾಗ ಬಿಜಾಪುರ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದ ರ್ಯಾಲಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಈ ಸಭೆಗಳಲ್ಲಿ ಮಾತನಾಡಿದ ಭಾಷಣಕಾರರು, ‘‘ನಾವು ಹಿಂದೂಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಬೇಕು’’ ಎಂದು ಒತ್ತಾಯಿಸಿದ್ದರು. ಈ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಶ್ನೆಯ ಗ್ಗೆ ಬಿಜೆಪಿ ಇನ್ನೂ ಸ್ಪಷ್ಟವಾದ ನಿಲುವನ್ನು ತಳೆದಿಲ್ಲ. ಆದರೆ, ಆರೆಸ್ಸೆಸ್ ಇದನ್ನು ವಿರೋಧಿಸಿದೆ. ಆರೆಸ್ಸೆಸ್ ಹಾಕಿದ ಲಕ್ಷ್ಮಣ ರೇಖೆಯನ್ನು ದಾಟುವ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇಲ್ಲ. ಆದ್ದರಿಂದಲೇ ಯಡಿಯೂರಪ್ಪನವರು ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಶ್ನೆ ಬಂದಾಗ ವೌನ ತಾಳುತ್ತಾರೆ. ಇನ್ನೊಂದೆಡೆ ಕಳೆದ ನಾಲ್ಕೂವರೆ ವರ್ಷಗಳಿಂದ ಈ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಅವರ ಸಂಪುಟದ ಸಚಿವರಾಗಲಿ ಯಾವುದೇ ಹಗರಣದಲ್ಲಿ ಸಿಲುಕಿಲ್ಲ. ಈ ಸರಕಾರದ ಕ್ಲೀನ್ ಇಮೇಜ್ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಅನ್ನಭಾಗ್ಯದಂತಹ ಯೋಜನೆಗಳು ಜನಸಾಮಾನ್ಯರ ಮೆಚ್ಚುಗೆ ಗಳಿಸಿದೆ.

ಈ ಯೋಜನೆಯನ್ನು ವಿರೋಧಿಸುವ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡ ಯಡಿಯೂರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕ ವಚನದಿಂದ ವೈಯಕ್ತಿಕವಾಗಿ ನಿಂದಿಸುತ್ತಾ ಜನಸಾಮಾನ್ಯರ ನಡುವೆ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಉತ್ತರಕರ್ನಾಟಕದ ಜನ ಈ ಬಾರಿ ಬಿಜೆಪಿಗೆ ಕೈಕೊಡುತ್ತಾರೆ. ಆದ್ದರಿಂದ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಲು ಬಿಜೆಪಿ ಮಸಲತ್ತು ನಡೆಸಿದೆ. ಈ ಮಸಲತ್ತಿನ ಭಾಗವಾಗಿಯೇ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇತ್ತೀಚೆಗೆ ಹನುಮ ಜಯಂತಿಯ ಹೆಸರಿನಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಲಾಯಿತು. ಬಾಬಾ ಬುಡಾನ್‌ಗಿರಿಯಲ್ಲಿ ದತ್ತಮಾಲೆ ಹಾಕಿದ ಬಿಜೆಪಿ ಕಾರ್ಯಕರ್ತರು ಹಿಂಸಾತ್ಮಕವಾಗಿ ವರ್ತಿಸಿದರು. ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಅಮಾಯಕ ಯುವಕನೊಬ್ಬನ ಸಾವನ್ನು ನೆಪವಾಗಿಟ್ಟುಕೊಂಡು ಕೋಲಾಹಲ ಉಂಟು ಮಾಡಿದರು. ಉತ್ತರಕರ್ನಾಟಕದಲ್ಲಿ ಕಳೆದುಕೊಳ್ಳಲಿರುವ ಸ್ಥಾನಗಳನ್ನು ಹಳೇ ಮೈಸೂರು ಮತ್ತು ಕರಾವಳಿ ಭಾಗಗಳಲ್ಲಿ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಹಳೇ ಮೈಸೂರು ಭಾಗದಲ್ಲಿರುವ ದೇವೇಗೌಡರ ಜಾತ್ಯತೀತ ಜನತಾದಳದ ಪ್ರಭಾವೀ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣುಹಾಕಿದೆ. ಅಂತಲೇ ಆ ಭಾಗದಲ್ಲಿ ಕೋಮುಉನ್ಮಾದದ ವಾತಾವರಣವನ್ನು ಅದು ಕೆರಳಿಸುತ್ತಿದೆ. ಬರಲಿರುವ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಲು ಕೋಮುವಾದಿ ಶಕ್ತಿಗಳು ಸಂಚು ನಡೆಸಿವೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯಸರಕಾರ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಕೋಮುವಾದವನ್ನು ವಿರೋಧಿಸುವ ಶಾಂತಿಪ್ರಿಯ ಶಕ್ತಿಗಳು ಒಂದೆಡೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News