ಮ್ಯಾನ್ಮಾರ್: ಮೊದಲ ತಿಂಗಳಲ್ಲಿ 6,700 ರೊಹಿಂಗ್ಯಾಗಳ ಹತ್ಯೆ

Update: 2017-12-14 17:11 GMT

ಯಾಂಗನ್ (ಮ್ಯಾನ್ಮಾರ್), ಡಿ. 14: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಆಗಸ್ಟ್ ಕೊನೆಯ ವೇಳೆಗೆ ಸೇನೆ ಆರಂಭಿಸಿದ ದಮನ ಕಾರ್ಯಾಚರಣೆಯ ಮೊದಲ ತಿಂಗಳಲ್ಲಿ ಕನಿಷ್ಠ 6,700 ರೊಹಿಂಗ್ಯಾ ಮುಸ್ಲಿಮರು ಹತ್ಯೆಗೀಡಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್ (ಎಂಎಸ್‌ಎಫ್- ಗಡಿರಹಿತ ವೈದ್ಯರು) ಗುರುವಾರ ಹೇಳಿದೆ.

ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸುವುದರೊಂದಿಗೆ ಆರಂಭಗೊಂಡ ಸೇನಾ ದಮನ ಕಾರ್ಯಾಚರಣೆಯ ಸುಮಾರು 3 ತಿಂಗಳ ಅವಧಿಯಲ್ಲಿ 6.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಮ್ಯಾನ್ಮಾರ್ ಗಡಿ ದಾಟಿ ಬಾಂಗ್ಲಾದೇಶಕ್ಕೆ ಬಂದಿದ್ದಾರೆ.

ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಯು ಮುಸ್ಲಿಮ್ ಅಲ್ಪಸಂಖ್ಯಾತರ ಜನಾಂಗೀಯ ನಿರ್ಮೂಲನೆಯಾಗಿದೆ ಎಂಬುದಾಗಿ ವಿಶ್ವಸಂಸ್ಥೆ ಮತ್ತು ಅಮೆರಿಕಗಳು ಬಣ್ಣಿಸಿವೆ. ಆದರೆ, ಈ ಕಾರ್ಯಾಚರಣೆಯಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎಂಬ ಬಗ್ಗೆ ಅಂಕಿಅಂಶಗಳನ್ನು ಅವುಗಳು ಬಿಡುಗಡೆ ಮಾಡಿಲ್ಲ.

‘‘ಕನಿಷ್ಠ 6,700 ರೊಹಿಂಗ್ಯಾ ಮುಸ್ಲಿಮರು ಹತ್ಯೆಗೀಡಾಗಿದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. ಈ ಪೈಕಿ ಕನಿಷ್ಠ 730 ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಾಗಿದ್ದಾರೆ’’ ಎಂದು ಎಂಎಸ್‌ಎಫ್ ತಿಳಿಸಿದೆ.

ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಲ್ಲಿರುವ 2,434ಕ್ಕೂ ಅಧಿಕ ಕುಟುಂಬಗಳ ಬಗ್ಗೆ ನಡೆದ 6 ಸಮೀಕ್ಷೆಗಳನ್ನು ಆಧರಿಸಿ ಈ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News