ಕುರ್‌ಆನ್ ನೀಡುವ ಶಾಂತಿಯ ಸಂದೇಶ ಪಾಲಿಸಿ: ಜ| ರಾವತ್

Update: 2017-12-14 17:49 GMT

ಹೊಸದಿಲ್ಲಿ, ಡಿ.14: ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಪವಿತ್ರ ಕುರ್‌ಆನ್ ನಲ್ಲಿ ಸೊಗಸಾಗಿ ಚಿತ್ರಿಸಲಾಗಿದ್ದು ಹೆಚ್ಚಿನ ಸಂದರ್ಭದಲ್ಲಿ ಜನತೆ ಇದರ ಸಾರವನ್ನು ಅರ್ಥೈಸಿಕೊಂಡಿರುವುದಿಲ್ಲ ಎಂದು ಸೇನಾಪಡೆಯ ಮುಖ್ಯಸ್ಥ ಜ|| ಬಿಪಿನ್ ರಾವತ್ ಹೇಳಿದ್ದಾರೆ.

   ದಿಲ್ಲಿಗೆ ಭೇಟಿ ನೀಡಿರುವ ಜಮ್ಮು ಕಾಶ್ಮೀರದ ಮದ್ರಸ ವಿದ್ಯಾರ್ಥಿಗಳ ತಂಡದೊಂದಿಗೆ ತಮ್ಮ ನಿವಾಸದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್, ಕುರ್‌ಆನ್ ಹಿಂಸೆಯನ್ನು ಪ್ರಚಾರ ಮಾಡುವುದಿಲ್ಲ ಎಂದರು. ನಿಮ್ಮಲ್ಲಿ ಎಷ್ಟು ಮಂದಿ ಕುರ್‌ಆನ್ ಓದಿದ್ದೀರಿ ಎಂದು ಪ್ರಶ್ನಿಸಿದ ಅವರು, ಕುರ್‌ಆನ್‌ನಲ್ಲಿ ಜೀವನ ಸಂದೇಶವಿದೆ. ಶಾಂತಿ ಮತ್ತು ಸೌಹಾರ್ದದ ಸಂದೇಶವಿದೆ. ಐಸಿಸ್ ಸಂಘಟನೆಯವರು ಮಾಡುತ್ತಿರುವ ಹಿಂಸಾಚಾರದ ಬಗ್ಗೆ ಅಲ್ಲಿ ಉಲ್ಲೇಖವೇ ಇಲ್ಲ. ಆದ್ದರಿಂದ ಪವಿತ್ರ ಕುರ್‌ಆನ್ ಪ್ರತಿಪಾದಿಸುವ ಸದಾಚಾರವನ್ನು ಅನುಸರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳ ಹಾಗೂ ಜತೆಗೆ ಆಗಮಿಸಿದ ಶಿಕ್ಷಕರ ಹಸ್ತಲಾಘವ ಮಾಡಿದ ಸೇನಾಪಡೆಯ ಮುಖ್ಯಸ್ಥರು, ದಿಲ್ಲಿ ಮತ್ತು ಕಾಶ್ಮೀರದ ನಡುವೆ ಏನು ವ್ಯತ್ಯಾಸ ನಿಮಗೆ ಗೋಚರವಾಗುತ್ತಿದೆ ಎಂದು ಪ್ರಶ್ನಿಸಿದರು. ದಿಲ್ಲಿಯಲ್ಲಿ ನಿಮಗೆ ಎಲ್ಲಿಯೂ ಸೇನಾಪಡೆಯ ಬಂಕರ್‌ಗಳು ಕಾಣಸಿಗುವುದಿಲ್ಲ. ಜನತೆ ರಾತ್ರಿಯೂ ಆರಾಮವಾಗಿ ರಸ್ತೆಯಲ್ಲಿ ತಿರುಗಾಡಬಹುದು. ಇದೇ ಪರಿಸ್ಥಿತಿ ಕಾಶ್ಮೀರದಲ್ಲಿ ನೆಲೆಸಬೇಕು ಎಂಬುದು ನಮ್ಮ ಆಶಯವಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.

ಕ್ರಿಕೆಟ್ ಮತ್ತು ಫುಟ್‌ಬಾಲ್‌ನಂತಹ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಆದರೆ ಕಾಶ್ಮೀರದ ಯುವಜನತೆ ಕೈಯಲ್ಲಿ ಆಯುಧ ಹಿಡಿದು ಕಣ್ಣಾಮುಚ್ಚಾಲೆ ಆಟದಲ್ಲಿ ತೊಡಗಿಕೊಂಡಿರುವ ಬಗ್ಗೆ ನಾನು ಕೇಳಿದ್ದೇನೆ . ಯುವಜನತೆ ತಮ್ಮ ಶಕ್ತಿಯನ್ನು ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News