ಪ್ರತಿದಿನ ಬೆಲ್ಲ ತಿನ್ನುವುದರಿಂದ ಏನಾಗುತ್ತದೆ......?

Update: 2017-12-15 09:10 GMT

ಪ್ರತಿದಿನ ಬೆಲ್ಲ ತಿನ್ನುವುದರಿಂದ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಂತಿಲ್ಲ. ಹಾಗೆಂದು ಸಿಕ್ಕಾಪಟ್ಟೆ ಬೆಲ್ಲ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯೂ ಇದೆ. ಬೆಲ್ಲದ ಸಣ್ಣ ತುಂಡನ್ನು ಪ್ರತಿದಿನ ತಿನ್ನುವುದು ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಪಟ್ಟಾಗಿ ಊಟ ಮಾಡಿದ ನಂತರ ಸಣ್ಣ ತುಂಡು ಬೆಲ್ಲವನ್ನು ತಿನ್ನುವುದು ಜೀರ್ಣ ಪ್ರಕ್ರಿಯೆಯ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ. ಬೆಲ್ಲವು ಜೀರ್ಣಕ್ಕೆ ಸಹಕಾರಿಯಾದ ಕಿಣ್ವಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸುವಂತೆ ಮಾಡುತ್ತದೆ, ಜೊತೆಗೆ ಎಸಿಟಿಕ್ ಆಮ್ಲದ ಪಾತ್ರವನ್ನು ನಿರ್ವಹಿಸಿ ಜೀರ್ಣ ಕ್ರಿಯೆಯು ತ್ವರಿತವಾಗಿ ನಡೆಯುವಲ್ಲಿ ನೆರವಾಗುತ್ತದೆ. ಹಿಂದೆ ನಮ್ಮ ಹೆಚ್ಚಿನ ಹಿರಿಯರು ಊಟದ ನಂತರ ಬೆಲ್ಲದ ತುಂಡನ್ನು ತಿನ್ನುತ್ತಿದ್ದರು. ಅದಕ್ಕೆ ಕಾರಣ ನಿಮಗೀಗ ಗೊತ್ತಾಗಿರಬೇಕು.

 ಬೆಲ್ಲವು ಶುದ್ಧಿಕಾರಕವಾಗಿಯೂ ಕೆಲಸ ಮಾಡುತ್ತದೆ. ಅದು ಶ್ವಾಸನಾಳ, ಶ್ವಾಸಕೋಶ ಗಳು, ಹೊಟ್ಟೆ ಮತ್ತು ಕರುಳುಗಳನ್ನು ಶುದ್ಧಗೊಳಿಸುತ್ತದೆ. ಇದೇ ಕಾರಣದಿಂದ ಅದು ವಿಶೇಷವಾಗಿ ಅಸ್ತಮಾ ರೋಗಿಗಳಲ್ಲಿ ಉಸಿರಾಟದ ತೊಂದರೆಗಳನ್ನು ಶಮನಗೊಳಿಸುವಲ್ಲಿ ನೆರವಾಗುತ್ತದೆ.

ಬೆಲ್ಲವು ಖನಿಜಗಳನ್ನು, ನಿರ್ದಿಷ್ಟವಾಗಿ ಕಬ್ಬಿಣವನ್ನು ಹೇರಳವಾಗಿ ಒಳಗೊಂಡಿದೆ. ಹೆಚ್ಚಿನ ಕಬ್ಬಿಣಾಂಶವು ಬೆಲ್ಲದ ಸಂಸ್ಕರಣೆ ಸಂದರ್ಭದಲ್ಲಿ ರೂಪುಗೊಂಡರೆ ಇತರ ಖನಿಜಾಂಶಗಳು ನೇರವಾಗಿ ಕಬ್ಬಿನಿಂದಲೇ ಅದರಲ್ಲಿ ಸೇರಿಕೊಂಡಿರುತ್ತವೆ. ಬೆಲ್ಲವನ್ನು ತಿನ್ನುವುದರಿಂದ ಅಂಗಾಂಗಗಳನ್ನು ಪೋಷಿಸಿ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯ ಖನಿಜಗಳು ಶರೀರಕ್ಕೆ ದೊರೆಯುತ್ತವೆ.

ಇಂದು ಹಲವಾರು ಕೃತಕ ಸಿಹಿಕಾರಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಪೈಕಿ ಸಕ್ಕರೆ ಮುಂಚೂಣಿಯಲ್ಲಿದೆ. ಆದರೆ ಈ ಸಿಹಿಕಾರಕಗಳು ದೀರ್ಘಾವಧಿಯಲ್ಲಿ ಉಂಟು ಮಾಡುವ ಅನಾರೋಗ್ಯಕರ ಪರಿಣಾಮಗಳಿಂದ ದೂರವಾಗಿರಲು ಹೆಚ್ಚಿನ ಜನರು ಬಯಸುತ್ತಾರೆ. ಇನ್ನೊಂದೆಡೆ ಬೆಲ್ಲವು ಸಕ್ಕರೆಯ ಅತ್ಯಂತ ನೈಸರ್ಗಿಕ ರೂಪವಾಗಿರುವುದರಿಂದ ಅದು ಈ ಕೃತಕ ಸಿಹಿಕಾರಕಗಳಿಗೆ ಪರಿಪೂರ್ಣ ಮತ್ತು ಆರೋಗ್ಯಕರ ಪರ್ಯಾಯವಾಗಿದೆ. ಅಲ್ಲದೆ ಬಳಕೆದಾರರು ಆಯ್ಕೆ ಮಾಡಿಕೊಳ್ಳಲು ಬೆಲ್ಲದಲ್ಲಿ ಹಲವಾರು ವಿಧಗಳೂ ಇವೆ. ದೀರ್ಘಾವಧಿಯಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಗುರಿ ಹೊಂದಿದವರಿಗೆ ಬೆಲ್ಲ ಅತ್ಯಂತ ಸೂಕ್ತವಾಗಿದೆ.

 ಬೆಲ್ಲ ಶುದ್ಧಿಕಾರಕವಾಗಿರುವುದರಿಂದ ಶರೀರದಲ್ಲಿಯ ಕಲ್ಮಶಗಳು ಮತ್ತು ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಅದರಲ್ಲಿ ನಾರಿನಂಶ ಇರುವುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ದೊಡ್ಡಕರುಳಿನ ಚಲನವಲನಗಳನ್ನೂ ಅದು ಪ್ರಚೋದಿಸುತ್ತದೆ.

 ನಿಯಮಿತವಾಗಿ ಬೆಲ್ಲವನ್ನು ಸೇವಿಸುವುದರಿಂದ ರಕ್ತವು ಶುದ್ಧಗೊಳ್ಳುತ್ತದೆ. ರಕ್ತಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ತಡೆಗಟ್ಟುತ್ತದೆ ಹಾಗು ಹಿಮೊಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ನಮ್ಮ ಶರೀರದ ರೋಗ ಪ್ರತಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಪ್ರತಿ ನಿತ್ಯ ಕೇವಲ ಒಂದು ಚಮಚ ಬೆಲ್ಲ ಸೇವಿಸುವುದು ಮಹಿಳೆಯರಿಗೆ ಹೆಚ್ಚಿನ ಆರೋಗ್ಯ ಲಾಭಗಳನ್ನು ನೀಡುತ್ತದೆ. ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿರುವ ಅದು ರಕ್ತಹೀನತೆಯನ್ನು ತಡೆಗಟ್ಟುತ್ತದೆ.

ನೆನಪಿಡಿ, ಈ ಎಲ್ಲ ಆರೋಗ್ಯ ಲಾಭಗಳನ್ನು ಪಡೆಯಲು ಬೆಲ್ಲವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗಿದೆ. ನಿತ್ಯ ಸಣ್ಣತುಂಡು ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News