ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಂಪುಟ ಅಸ್ತು

Update: 2017-12-15 11:23 GMT

ಹೊಸದಿಲ್ಲಿ,ಡಿ.15: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸಂಪುಟವು ತ್ರಿವಳಿ ತಲಾಖ್ ಮಸೂದೆಗೆ ಶುಕ್ರವಾರ ಒಪ್ಪಿಗೆಯನ್ನು ನೀಡಿದೆ.ಇದರೊಂದಿಗೆ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಳ್ಳಲು ಮಾರ್ಗವು ಸುಗಮಗೊಂಡಿದೆ. 

ತ್ರಿವಳಿ ತಲಾಖ್ ಪದ್ಧತಿಯ ಮೂಲಕ ತನ್ನ ಪತ್ನಿಗೆ ವಿಚ್ಛೇದನ ನೀಡಲು ಪ್ರಯತ್ನಿಸುವ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶಿಷ್ಟಾಚಾರದಂತೆ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಅಂಗೀಕಾರ ಪಡೆಯಲು ಅದನ್ನೀಗ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ತ್ರಿವಳಿ ತಲಾಖ್ ಪದ್ಧತಿಯು ಅಸಾಂವಿಧಾನಿಕ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಗೃಹಸಚಿವ ರಾಜನಾಥ ಸಿಂಗ್ ನೇತೃತ್ವದ ಐವರು ಹಿರಿಯ ಸಚಿವರ ಸಮಿತಿಯು ಈ ಮಸೂದೆಯನ್ನು ಸಿದ್ಧಗೊಳಿಸಿತ್ತು.

ಮಸೂದೆಯನ್ನು ಅಂಗೀಕರಿಸಲು ರಾಜ್ಯಗಳ ಒಪ್ಪಿಗೆ ಕೇಂದ್ರಕ್ಕೆ ಅಗತ್ಯವಿಲ್ಲವಾದರೂ ಇಂತಹ ವಿಚ್ಛೇದನ ಪ್ರಕರಣಗಳಲ್ಲಿ ಲಿಂಗ ತಾರತಮ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ರಾಜ್ಯಗಳು ಕೇಂದ್ರದ್ದೇ ಧೋರಣೆಯನ್ನು ಹೊಂದಿವೆ.

ಸಂಪುಟವು ಮಸೂದೆಗೆ ಒಪ್ಪಿಗೆ ನೀಡಿರುವುದು ಹರ್ಷದ ವಿಷಯವಾಗಿದೆ. ತ್ರಿವಳಿ ತಲಾಖ್‌ನಿಂದ ನರಳಿದ್ದ ಹಲವು ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ದೊರೆಯಲಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಕರಡು ಮಸೂದೆಯಡಿ ಮಾತುಗಳಲ್ಲಿ, ಬರಹದಲ್ಲಿ ಹಾಗೂ ಇ-ಮೇಲ್, ಎಸ್‌ಎಂಎಸ್ ಮತ್ತು ವಾಟ್ಸಾಪ್‌ನಂತಹ ವಿದ್ಯುನ್ಮಾನ ರೂಪಗಳಲ್ಲಿ ತ್ರಿವಳಿ ತಲಾಖ್ ನಿಷೇಧಕ್ಕೊಳಗಾಗಲಿದೆ.

ಮಸೂದೆಯಡಿ ತ್ರಿವಳಿ ತಲಾಖ್ ಅಥವಾ ತಲಾಖೆ ಬಿದ್‌ಅತ್ ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧವಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಪರಾಧಿಯ ಪತ್ನಿ ಜೀವನಾಂಶವನ್ನು ಕೋರಲು ಮತ್ತು ಮಕ್ಕಳು ಅಪ್ರಾಪ್ತ ವಯಸ್ಕರಾಗಿದ್ದರೆ ಅವರನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಅರ್ಹಳಾಗಿರುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News