ವಿಮಾನದಲ್ಲಿ ಅತ್ಯಂತ ಸುರಕ್ಷಿತ ಆಸನ ಎಲ್ಲಿರುತ್ತದೆ ಗೊತ್ತೇ...?

Update: 2017-12-15 13:14 GMT

ವಿಮಾನ ಪ್ರಯಾಣವು ಸಾಗಾಣಿಕೆಯ ಅತ್ಯಂತ ಸುರಕ್ಷಿತ ರೂಪವಾಗಿದೆ. 2016ರಲ್ಲಿ ಅಮೆರಿಕದ ಪ್ರಮಾಣೀಕೃತ ವಿಮಾನಯಾನಗಳಲ್ಲಿ ವಿಮಾನ ಪತನಗಳಿಂದಾಗಿ ಯಾರೂ ಸತ್ತಿಲ್ಲ. ಕಳೆದ ಏಳು ವರ್ಷಗಳಿಂದಲೂ ಈ ದಾಖಲೆ ಮುಂದುವರಿದುಕೊಂಡು ಬಂದಿದೆ.

ಆದರೆ ದುರದೃಷ್ಟವಶಾತ್ ಅಪಘಾತ ಸಂಭವಿಸಿದರೆ ಜೀವಸಹಿತ ಪಾರಾಗಲು ವಿಮಾನದ ಯಾವ ಭಾಗದಲ್ಲಿ ಕುಳಿತುಕೊಂಡರೆ ಒಳ್ಳೆಯದು ಎಂಬ ಪ್ರಶ್ನೆ ಪ್ರಯಾಣಿಕ ರನ್ನು ಈಗಲೂ ಕಾಡುತ್ತಿದೆ. ಇದಕ್ಕೆ ಉತ್ತರ ವಿಮಾನ ಯಾವ ರೀತಿಯಲ್ಲಿ ಪತನಗೊಳ್ಳುತ್ತದೆ ಎನ್ನುವುದನ್ನು ಅವಲಂಬಿಸಿದೆ.

ಪ್ರತಿಯೊಂದು ವಿಮಾನ ಅಪಘಾತವೂ ವಿಶಿಷ್ಟವಾಗಿರುತ್ತದೆ ಮತ್ತು ಅವುಗಳನ್ನು ಪರಸ್ಪರ ಹೋಲಿಸುವಂತಿಲ್ಲ. ವಿಮಾನವು ಮುಖ ಮುಂದಾಗಿ ನೆಲಕ್ಕಪ್ಪಳಿಸಬಹುದು, ನೀರಿನಲ್ಲಿ ಪತನಗೊಳ್ಳಬಹುದು ಅಥವಾ ರನ್‌ವೇದಲ್ಲಿ ದುರಂತಕ್ಕೀಡಾಗಬಹುದು. ಹೀಗಾಗಿ ವಿಮಾನದಲ್ಲಿ ಅತ್ಯಂತ ಸುರಕ್ಷಿತ ಆಸನವೆನ್ನುವುದು ಇಲ್ಲ ಎನ್ನುತ್ತಾರೆ ಅಮೆರಿಕದ ವಾಯುಯಾನ ಆಡಳಿತದ ವಕ್ತಾರೆ ಆಲಿಸನ್ ಡಕೆಟ್.

ಅಮೆರಿಕದ ರಾಷ್ಟ್ರೀಯ ಪ್ರಯಾಣ ಸುರಕ್ಷತಾ ಮಂಡಳಿಯು ವಿಮಾನಗಳಲ್ಲಿಯ ಆಸನ ಸಂಬಂಧಿತ ಯಾವುದೇ ಅಂಕಿಅಂಶಗಳನ್ನು ಇಟ್ಟುಕೊಳ್ಳುವುದಿಲ್ಲ ಮತ್ತು ಅತ್ಯಂತ ಸುರಕ್ಷಿತ ಆಸನಗಳ ಕುರಿತು ಅದು ಯಾವುದೇ ಅಧ್ಯಯನಗಳನ್ನು ನಡೆಸಿಲ್ಲ.

ಆದರೆ ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳು ಈ ಕುರಿತು ಅಧ್ಯಯನಗಳನ್ನು ನಡೆಸಿವೆ. 2007ರಲ್ಲಿ ಈ ವಿಷಯವನ್ನು ಕೈಗೆತ್ತಿಕೊಂಡಿದ್ದ ಪಾಪ್ಯುಲರ್ ಮೆಕಾನಿಕ್ಸ್ 1971ರಿಂದ ಅಮೆರಿಕದಲ್ಲಿ ನಡೆದಿದ್ದ ಪ್ರತಿಯೊಂದು ವಾಣಿಜ್ಯಿಕ ವಿಮಾನ ಪತನದ ದತ್ತಾಂಶಗಳನ್ನು ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸಿತ್ತು. ಈ ಅಪಘಾತಗಳಲ್ಲಿ ಪ್ರಯಾಣಿಕರು ಮೃತಪಟ್ಟಿದ್ದರೆ, ಬದುಕುಳಿದ ಪ್ರಯಾಣಿಕರೂ ಇದ್ದರು. ಸಂಸ್ಥೆಯು ತನ್ನ ಅಧ್ಯಯನಕ್ಕಾಗಿ ವಿಮಾನಗಳಲ್ಲಿಯ ಆಸನಗಳ ವಿವರಗಳನ್ನೂ ಪಡೆದುಕೊಂಡಿತ್ತು.

ವಿಮಾನದ ಬಾಲದ ಸಮೀಪದ ಆಸನಗಳಲ್ಲಿ ಕುಳಿತುಕೊಂಡ ಪ್ರಯಾಣಿಕರು ಮುಂದಿನ ಆಸನಗಳಲ್ಲಿ ಕುಳಿತವರಿಗಿಂತ ಶೇ.40ರಷ್ಟು ಅಧಿಕ ಅವಕಾಶವನ್ನು ಹೊಂದಿರು ತ್ತಾರೆ ಎನ್ನುವದು ಈ ಅಧ್ಯಯನದಿಂದ ತಿಳಿದು ಬಂದಿದೆ.

ವಿಮಾನದ ಹಿಂಭಾಗದಲ್ಲಿಯ, ರೆಕ್ಕೆಯ ಹಿಂದಿನ ಅಂಚಿನಲ್ಲಿಯ ಆಸನಗಳಲ್ಲಿ ಕುಳಿತ ಪ್ರಯಾಣಿಕರು ಬದುಕುಳಿಯುವ ಅವಕಾಶ ಶೇ.69ರಷ್ಟಿದ್ದರೆ, ವಿಮಾನದ ಮುಂಭಾಗದಲ್ಲಿಯ ಆಸನಗಳಲ್ಲಿ ಕುಳಿತಿರುವವರು ಬದುಕುಳಿಯುವ ಸಾಧ್ಯತೆ ಶೇ.49 ರಷ್ಟಿರುತ್ತದೆ. ಇವೆರಡೂ ಭಾಗಗಳ ನಡುವಿನ, ಅಂದರೆ ವಿಮಾನದ ರೆಕ್ಕೆಗಳಿಗೆ ಸಮಾಂತರ ಆಸನಗಳಲ್ಲಿ ಕುಳಿತ ಪ್ರಯಾಣಿಕರು ಬದುಕುಳಿಯುವ ಅವಕಾಶ ಶೇ.56ರಷ್ಟಿರುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ.

2015ರಲ್ಲಿ ಟೈಮ್ ಸಂಶೋಧಕರು ನಡೆಸಿದ ಎರಡನೇ ಅಧ್ಯಯನದಲ್ಲಿ ಫೆಡರೇಷನ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ಎಎ)ನ 35 ವರ್ಷಗಳ ದತ್ತಾಂಶಗಳನ್ನು ವಿಶ್ಲೇಷಣೆ ಗೊಳಪಡಿಸಲಾಗಿತ್ತು ಮತ್ತು ಇದರ ಫಲಿತಾಂಶ ಮೊದಲಿನ ಅಧ್ಯಯನದ ಫಲಿತಾಂಶ ಗಳಿಗಿಂತ ಹೆಚ್ಚು ಭಿನ್ನವಾಗಿಲ್ಲ. ಸಂಶೋಧಕರ ಗುಂಪು 1985ರಿಂದ ಮೊದಲ್ಗೊಂಡು, ಸಾವುಗಳು ಸಂಭವಿಸಿದ್ದ, ಜೊತೆಗೆ ಪ್ರಯಾಣಿಕರು ಬದುಕುಳಿದಿದ್ದ ಮತ್ತು ಆಸನಗಳ ವ್ಯವಸ್ಥೆಯ ವಿವರಗಳು ಲಭ್ಯವಿದ್ದ 17 ಅಪಘಾತಗಳನ್ನು ತನ್ನ ವಿಶ್ಲೇಷಣೆಗೆ ಒಳಪಡಿಸಿತ್ತು. ವಿಮಾನದ ಹಿಂದಿನ ಭಾಗದಲ್ಲಿಯ ಆಸನಗಳ ಪ್ರಯಾಣಿಕರು ಸಾಯುವ ಪ್ರಮಾಣ ಶೆ.32ರಷ್ಟಿದ್ದರೆ, ಈ ಅಪಾಯದ ಸಾಧ್ಯತೆ ಮುಂಭಾಗದ ಆಸನಗಳಲ್ಲಿ ಶೇ.38 ಮತ್ತು ಮಧ್ಯಭಾಗದಲ್ಲಿ ಶೇ.39 ರಷ್ಟಿದೆ ಎಂಬ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದರು. ವಿಶೇಷವಾಗಿ ಹಿಂಭಾಗದಲ್ಲಿಯ ಮಧ್ಯದ ಆಸನಗಳು ಅತ್ಯಂತ ಸುರಕ್ಷಿತ ಎನ್ನುವುದು ಅವರ ಅಭಿಪ್ರಾಯವಾಗಿದೆ. ಅವರು ಹೇಳುವಂತೆ ಈ ಆಸನಗಳಲ್ಲಿಯ ಪ್ರಯಾಣಿಕರು ಸಾಯುವ ಸಾಧ್ಯತೆ ಕೇವಲ ಶೇ.28 ಆಗಿದೆ. ಮಧ್ಯಭಾಗದಲ್ಲಿ ದಾರಿಯ ಪಕ್ಕದಲ್ಲಿನ ಆಸನಗಳು ಅತ್ಯಂತ ಕಡಿಮೆ ಸುರಕ್ಷಿತವಾಗಿದ್ದು, ಶೇ.44ರಷ್ಟು ಸಾವುಗಳು ಇಲ್ಲಿ ಸಂಭವಿಸುತ್ತವೆ.

ವಿಮಾನಗಳು ಪತನಗೊಂಡಾಗಿನ ನಿರ್ದಿಷ್ಟ ಸಂದರ್ಭಗಳಿಂದಾಗಿ ಈ ಅಂಕಿಅಂಶಗಳು ಅಸಂಗತವಾಗಬಹುದು, ಆದರೂ ವಿಮಾನದ ಹಿಂದಿನ ಭಾಗವು ಹೆಚ್ಚು ಸುರಕ್ಷಿತ ಎಂದು ಟೈಮ್ ತಂಡವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News