‘ಐಚ್ಛಿಕ ಆಧಾರ್’ ಎಂಬ ಭಾರತ ಸರಕಾರದ ಹೇಳಿಕೆ ಸುಳ್ಳೆಂದು ಘೋಷಿಸಲು ನ್ಯಾಯಾಂಗಕ್ಕೆ ಇದು ಸಕಾಲ

Update: 2017-12-15 18:46 GMT

ಸಾರ್ವಜನಿಕವಾಗಿ, ಸರಕಾರವು ಜನರ ಬಳಿ ಆಧಾರ್ ಕಾರ್ಡ್ ಇಲ್ಲವಾದಲ್ಲಿ ಅಥವಾ ಅದನ್ನು ಜೋಡಣೆ ಮಾಡಿಸದಿದ್ದಲ್ಲಿ ಅಥವಾ ಅವರ ಬಯೋಮೆಟ್ರಿಕ್ ದೃಢೀಕರಣ ವಿಫಲವಾದಲ್ಲಿ ಅವರು ಇತರ ಮಾರ್ಗಗಳ ಮೂಲಕ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಬಹುದೆಂದು ಹೇಳುತ್ತದೆ. ಆದರೆ ನೆಲದ ವಾಸ್ತವ ಬೇರೆಯೇ ಇದೆ. ದುಃಖದ ಸಂಗತಿಯೆಂದರೆ, ನ್ಯಾಯಮೂರ್ತಿಗಳಿಗೆ ಈ ಗೋಳುಗಳ ನಿಜವಾದ ಅನುಭವ ಇಲ್ಲವಾದ್ದರಿಂದ, ಅವರಿಗೆ ಸರಕಾರದ ಸುಳ್ಳನ್ನು ಹಿಡಿಯಲು ಇಷ್ಟರವರೆಗೆ ಸಾಧ್ಯವಾಗಿಲ್ಲ.

ಗ್ರಾಹಕರು ತಮ್ಮ ಫೋನ್ ನಂಬರ್‌ಗಳನ್ನು ಮತ್ತು ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಜೋಡಿಸಬೇಕೆಂದು ಟೆಲಿಕಾಂ ಕಂಪೆನಿಗಳು ಮತ್ತು ಬ್ಯಾಂಕ್‌ಗಳು ಕಳುಹಿಸಿದ್ದ ಸಂದೇಶಗಳ ಸರಮಾಲೆಗಳಿಂದಾಗಿ ಸೃಷ್ಟಿಯಾದ ದಿಗಿಲಿನ ಬಗ್ಗೆ ಹಿರಿಯ ನ್ಯಾಯವಾದಿ ಕೆ.ಕೆ ವಿಶ್ವನಾಥನ್ ನವೆಂಬರ್ ತಿಂಗಳ ಆದಿಯಲ್ಲಿ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಅರ್ಜಿದಾರರ ಹೇಳಿಕೆಗಳೆಲ್ಲ ಕೇವಲ ‘‘ವೌಖಿಕ ವಾದಗಳು’’ ಎಂದು ಹೇಳಿ, ಜನತೆಗೆ ಆಧಾರ್ ಹೆಸರಿನಲ್ಲಿ ಯಾವುದೇ ಕಿರುಕುಳ ನೀಡಲಾಗುತ್ತಿಲ್ಲ ಎಂದು ಸೂಚ್ಯವಾಗಿ ಪ್ರತಿಕ್ರಿಯಿಸಿದರು.

ಅಟಾರ್ನಿ ಜನರಲ್‌ರ ದುರದೃಷ್ಟ; ಈ ಸಂದೇಶಗಳು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಿಗೂ ಹೋಗುತ್ತಿದ್ದವು: ನ್ಯಾಯಮೂರ್ತಿ ಎ.ಕೆ. ಸಿಕ್ರಿಯವರು ಸರಕಾರದ ಸುಳ್ಳನ್ನು ತಕ್ಷಣ ಹಿಡಿಯಲು ಸಮರ್ಥರಾದರು.

ಈಗ ಸಾಕಷ್ಟು ಸಮಯದಿಂದ ಸರಕಾರವು ಆಧಾರ್ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಮತ್ತು ಸಾರ್ವಜನಿಕರನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುತ್ತಿದೆ. ಸಾಕಷ್ಟು ಪುರಾವೆಗಳಿದ್ದರೂ ಕೂಡ, ಸರಕಾರವು ಈ ಪುರಾವೆಗಳಿಗೆ ವಿರುದ್ಧವಾಗಿ, ಸಮಾಜ ಕಲ್ಯಾಣ ಸವಲತ್ತುಗಳನ್ನು ಪಡೆಯಲು ಆಧಾರ್ ಕಡ್ಡಾಯವಲ್ಲವೆಂದು ಹೇಳುತ್ತಲೇ ಬಂದಿದೆ, ಹೇಳುತ್ತಲೇ ಇದೆ. ಸಾರ್ವಜನಿಕವಾಗಿ, ಸರಕಾರವು ಜನರ ಬಳಿ ಆಧಾರ್ ಕಾರ್ಡ್ ಇಲ್ಲವಾದಲ್ಲಿ ಅಥವಾ ಅದನ್ನು ಜೋಡಣೆ ಮಾಡಿಸದಿದ್ದಲ್ಲಿ ಅಥವಾ ಅವರ ಬಯೋಮೆಟ್ರಿಕ್ ದೃಢೀಕರಣ ವಿಫಲವಾದಲ್ಲಿ ಅವರು ಇತರ ಮಾರ್ಗಗಳ ಮೂಲಕ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಬಹುದೆಂದು ಹೇಳುತ್ತದೆ. ಆದರೆ ನೆಲದ ವಾಸ್ತವ ಬೇರೆಯೇ ಇದೆ. ದುಃಖದ ಸಂಗತಿಯೆಂದರೆ, ನ್ಯಾಯಮೂರ್ತಿಗಳಿಗೆ ಈ ಗೋಳುಗಳ ನಿಜವಾದ ಅನುಭವ ಇಲ್ಲವಾದ್ದರಿಂದ, ಅವರಿಗೆ ಸರಕಾರದ ಸುಳ್ಳನ್ನು ಹಿಡಿಯಲು ಇಷ್ಟರವರೆಗೆ ಸಾಧ್ಯವಾಗಿಲ್ಲ.

ಸುಪ್ರೀಂ ಕೋರ್ಟ್, ಆಧಾರ್ ಕಾರ್ಡ್ ಇಲ್ಲವೆಂದು ಯಾವುದೇ ಸವಲತ್ತನ್ನು ಯಾರಿಗೂ ಅಲ್ಲಗಳೆಯಬಾರದೆಂದು ಮೊದಲ ಬಾರಿ ಆದೇಶ ಹೊರಡಿಸಿದ್ದು 2013ರಲ್ಲಿ. 2015ರ ಅಕ್ಟೋಬರ್‌ನಲ್ಲಿ ಆರು ಯೋಜನೆಗಳಿಗೆ ಆಧಾರ್ ಬಳಸಲು ಅನುಮತಿ ನೀಡಿತ್ತಾದರೂ, ಅದು ಐಚ್ಛಿಕವಾಗಿರಬೇಕೆಂದು ಸ್ಪಷ್ಟಪಡಿಸಿತು. ಆದರೆ ಸರಕಾರವು ನ್ಯಾಯಾಲಯದ ಆದೇಶಗಳನ್ನು ಕಡೆಗಣಿಸಿ ಹಲವಾರು ಯೋಜನೆಗಳಿಗೆ ಹಾಗೂ ಸೇವೆಗಳಿಗೆ ಆಧಾರ್‌ನ್ನು ಕಡ್ಡಾಯಗೊಳಿಸಿತು. ಪರಿಣಾಮವಾಗಿ, ಭಾರೀ ಸಂಖ್ಯೆಯ ಜನರು ಸಂಕಷ್ಟಕ್ಕೀಡಾದೂ ಪರವಾಗಿಲ್ಲ ಎಂಬಂತೆ ಕಾಣಿಸುತ್ತಿದೆ.

ಅನುಮಾನಾಸ್ಪದ ವ್ಯವಸ್ಥೆ

ಉದಾಹರಣೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ. ಇದು ಎರಡು ಹಂತಗಳ ಒಂದು ಪ್ರಕ್ರಿಯೆ. ಮೊದಲನೆಯದಾಗಿ, ಫಲಾನುಭವಿಯ ಆಧಾರ್‌ಕಾರ್ಡನ್ನು ಆತನ ದತ್ತಾಂಶಕ್ಕೆ ಜೋಡಿಸಬೇಕು. ಹೀಗೆ ಜೋಡಿಸದಿದ್ದವರಿಗೆ ಸವಲತ್ತುಗಳು ಸಿಗುವುದು ನಿಂತುಹೋಗುತ್ತದೆ. ಒಮ್ಮೆಮ್ಮೆ, ಸಂತೋಷಿ ಕುಮಾರಿಯ ಪ್ರಕರಣದಲ್ಲಿ ಆದಂತೆ, ಶಾಶ್ವತವಾಗಿ ನಿಂತುಹೋಗುತ್ತದೆ. ಜಾರ್ಖಂಡ್‌ನ ಸಿಂಡೆಗಾ ಜಿಲ್ಲೆಯ 11ರ ಹರೆಯದ ಹುಡುಗಿ, ಸಂತೋಷಿ, ಕಳೆದ ಅಕ್ಟೋಬರ್‌ನಲ್ಲಿ ಉಪವಾಸ ಬಿದ್ದು ಇಹಲೋಕ ತ್ಯಜಿಸಿದಳು. ಆಕೆಯ ಕುಟುಂಬದ ಆಧಾರ್ ಸಂಖ್ಯೆಯನ್ನು ರೇಶನ್ ಕಾರ್ಡ್‌ಗೆ ಲಿಂಕ್ ಮಾಡದ ಕಾರಣಕ್ಕಾಗಿ ಅದನ್ನು ರದ್ದುಪಡಿಸಲಾಗಿತ್ತು. ಇದಾಗಿ ಕೆಲವು ತಿಂಗಳುಗಳ ನಂತರ ರೇಶನ್ ಅಂಗಡಿಯ ಪಡಿತರ ಸಿಗದೆ ಹಸಿವಿನಿಂದ ನರಳಿ ಸಂತೋಷಿ ಸತ್ತಿದ್ದಳು.

  ಎರಡನೆಯದಾಗಿ, ಆಧಾರ್-ಆಧಾರಿತ ಬಯೋಮೆಟ್ರಿಕ್ ದೃಢೀಕರಣ, ಅಂದರೆ ಫಲಾನುಭವಿಗಳ ಬೆರಳಚ್ಚುಗಳು ದತ್ತಾಂಶದಲ್ಲಿ (ಡಾಟಾಬೇಸ್‌ನಲ್ಲಿ) ಸೇವ್ ಆಗಿರಬೇಕು. ಪ್ರತೀ ಬಾರಿ ಅವರು ತಮ್ಮ ಆಹಾರ ಪಡಿತರ ಪಡೆದುಕೊಳ್ಳಲು ಹೋದಾಗಲೂ, ಈ ದತ್ತಾಂಶವನ್ನು ಪರೀಕ್ಷಿಸಿ, ಚೆಕ್‌ಮಾಡಿ ಕೊಡಲಾಗುತ್ತದೆ. ಚೆಕ್‌ಮಾಡುವಾಗ ಬೆರಳಚ್ಚು ಕಾಣಿಸದಿದ್ದರೆ ಅವರಿಗೆ ಪಡಿತರ ಸಿಗುವುದಿಲ್ಲ. ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ರೂಪ್‌ಲಾಲ್ ಮರಾಂಡಿಯಾ ಕುಟುಂಬಕ್ಕೆ ಪಡಿತರ ನೀಡಲು ನಿರಾಕರಿಸಲಾಯಿತು. ಯಾಕೆಂದರೆ ರೇಶನ್ ಅಂಗಡಿಯ ಬಯೋಮೆಟ್ರಿಕ್ ರೀಡರ್ ಮರಾಂಡಿಯ ಮಗಳ ಬೆರಳಚ್ಚುಗಳನ್ನು ಓದಲು ಅಸಮರ್ಥವಾಯಿತು. ಪರಿಣಾಮವಾಗಿ, ಪಡಿತರ ಸಿಗದೆ ಮರಾಂಡಿ ಅಕ್ಟೋಬರ್ ಅಂತ್ಯದಲ್ಲಿ ಉಪವಾಸಬಿದ್ದು, ಹಸಿವಿನಿಂದ ಮೃತಪಟ್ಟರು.

ಇಂತಹ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಾಗ ಆಧಾರ್ ಕಾರ್ಡ್‌ಗಳನ್ನು ನೀಡುವ ಯುಐಎಐಯ ಪ್ರತಿಕ್ರಿಯೆ: ಇವು ‘‘ಅಪರೂಪದ ಘಟನೆಗಳು’’! ಆದರೆ ರಾಜಸ್ಥಾನದ ಸರಕಾರಿ ದತ್ತಾಂಶಗಳ ಪ್ರಕಾರವೇ ಪ್ರತೀ ತಿಂಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪಡಿತರ ಪಡೆಯಲು ಅರ್ಹವಾದ ಒಟ್ಟು ಕುಟುಂಬಗಳಲ್ಲಿ ಸುಮಾರು ಶೇ. 15 ಕುಟುಂಬಗಳು ಈ ಸವಲತ್ತು ಪಡೆದುಕೊಳ್ಳಲು ಅಸಮರ್ಥವಾಗಿವೆೆ. ಆಧಾರ್ ವ್ಯವಸ್ಥೆ ಕಾರ್ಯವೆಸಗುವಾಗಲೂ ಅದು ಹಲವು ಸಂಕಷ್ಟಗಳನ್ನು ತಂದೊಡ್ಡುತ್ತದೆ. ಕಳೆದ ತಿಂಗಳು ಉತ್ತರ ಪ್ರದೇಶದ ಬರೇಲಿಯ 50ರ ಹರೆಯದ ಮಹಿಳೆಯೊಬ್ಬಳ ಕುಟುಂಬ, ಆಕೆಯೇ ರೇಶನ್ ಅಂಗಡಿಗೆ ಬರದ ಹೊರತು ಪಡಿತರ ಕೊಡಲು ಸಾಧ್ಯವಿಲ್ಲ ಎಂದ ಪರಿಣಾಮವಾಗಿ, ಪಡಿತರ ಸಿಗದೆ ಆಕೆ ಹಸಿವಿನಿಂದ ಮೃತಪಟ್ಟರು ಎಂದು ಹೇಳಿದೆ. ಅವರು ಅನಾರೋಗ್ಯದಿಂದಾಗಿ ಅಂಗಡಿಗೆ ಹೋಗಲು ಸಾಧ್ಯವಾಗಿರಲಿಲ್ಲ ಮತ್ತು ಕುಟುಂಬದ ಯಜಮಾನಿ (ಹೆಡ್) ಎಂದು ಆಕೆಯ ಹೆಸರೇ ದತ್ತಾಂಶದಲ್ಲಿ ದಾಖಲಾಗಿತ್ತು. ಇಂತಹದೇ (71ರ ಹರೆಯದ ಮಹಿಳೆಯ) ಪ್ರಕರಣ ಜಾರ್ಖಂಡ್‌ನ ಗರ್ಹ್‌ವಾ ಜಿಲ್ಲೆಯಿಂದ ಇತ್ತೀಚೆಗೆ ವರದಿಯಾಗಿದೆ.

ಸವಲತ್ತಿಗೆ ಸರಿಯಾದ ಸಂಕಟವೇ ಇದು?

ಆಧಾರ್ ಮೂಲಕ ನಕಲು ಅಥವಾ ಖೋಟಾ ಫಲಾನುಭವಿಗಳನ್ನು ಪತ್ತೆಹಚ್ಚಬಹುದೆಂಬುದು ಸರಕಾರದ ವಾದ. ಆದರೆ ‘ಖೋಟಾ ಪಡಿತರಚೀಟಿಗಳು’ ಎಂಬುದಕ್ಕೆ ನೀಡುವ ಪುರಾವೆಗಳು, ಒಂದೋ ಆ ಚೀಟಿಗಳ ಮಾಲಕರು ನಿಗದಿತ ಗಡುವಿನೊಳಗಾಗಿ ಚೀಟಿಗೆ ಆಧಾರ್ ಜೋಡಣೆ ಮಾಡದವರು ಮತ್ತು ಈ ಕಾರಣಕ್ಕಾಗಿ, ಸಂತೋಷಿ ಕುಮಾರಿಯ ಕುಟುಂಬದ ಹಾಗೆ, ಪಡಿತರ ಯಾದಿಯಿಂದ ಹೆಸರನ್ನು ರದ್ದುಗೊಳಿಸಲ್ಪಟ್ಟವರು.

ಒಡಿಶಾದ ಇತ್ತೀಚಿನ ದತ್ತಾಂಶಗಳ ಪ್ರಕಾರ ಆಧಾರ್‌ನಿಂದಾಗಿ ಪತ್ತೆ ಹಚ್ಚಲಾದ ಖೋಟಾ ಅಥವಾ ನಕಲು ಪಡಿತರ ಚೀಟಿಗಳ ಸಂಖ್ಯೆ ಕೇವಲ ಶೇ.0.3 ಮಾತ್ರ. ಅಂದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧದ ನಮ್ಮ ಯುದ್ಧದಲ್ಲಿ ಆಧಾರ್-ಆಧಾರಿತ ಬಯೋಮೆಟ್ರಿಕ್ ದೃಢೀಕರಣ ನಮ್ಮ ನೆವಿಗೆ ಬರುವುದಿಲ್ಲ ಎಂದ ಹಾಗಾಯಿತು.

ಆದ್ದರಿಂದ, ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ‘ಐಚ್ಛಿಕ ಆಧಾರ್’ ಎಂಬ ಸರಕಾರದ ಹೇಳಿಕೆ ಒಂದು ಸುಳ್ಳೆಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಘೋಷಿಸಲು ಇದು ಸಕಾಲ.

ಕೃಪೆ: scroll.in

Writer - ರಿತಿಕಾ ಖೇರಾ

contributor

Editor - ರಿತಿಕಾ ಖೇರಾ

contributor

Similar News

ಜಗದಗಲ
ಜಗ ದಗಲ