ಬಲೂಚಿಸ್ತಾನ: ಚರ್ಚ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ; ಕನಿಷ್ಠ 8 ಮಂದಿ ಮೃತ್ಯು

Update: 2017-12-17 16:51 GMT

ಕರಾಚಿ, ಡಿ.17: ಶಸ್ತ್ರಸಜ್ಜಿತ ಭಯೋತ್ಪಾದಕರು ಚರ್ಚ್ ಮೇಲೆ ದಾಳಿ ನಡೆಸಿ ಕನಿಷ್ಟ ಎಂಟು ಜನರನ್ನು ಹತ್ಯೆಗೈದು ಮಕ್ಕಳು ಮತ್ತು ಮಹಿಳೆಯರು ಸೇರಿ 44 ಜನರನ್ನು ಗಾಯಗೊಳಿಸಿದ ಘಟನೆ ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ರವಿವಾರ ಸಂಭವಿಸಿದೆ.

ಬಲೂಚಿಸ್ಥಾನದ ರಾಜಧಾನಿಯ ಝರ್ಗೂನ್ ರಸ್ತೆಯಲ್ಲಿರುವ ಬೆಥೆಲ್ ಸ್ಮಾರಕ ಚರ್ಚ್‌ನಲ್ಲಿ ಜನರು ಮಧ್ಯಾಹ್ನದ ಪೂಜೆಗೆ ನೆರೆದಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕ್ರಿಸ್ಮಸ್‌ಗೆ ಇನ್ನೇನು ಒಂದು ವಾರವಿರುವಾಗ ಸಂಭವಿಸಿರುವ ಈ ದಾಳಿಯಲ್ಲಿ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಭಾಗಿಯಾಗಿದ್ದರು ಎಂದು ಬಲೂಚಿಸ್ಥಾನದ ಗೃಹಸಚಿವರಾದ ಮಿರ್ ಸರ್ಫರಾಝ್ ಬುಗ್ತಿ ತಿಳಿಸಿದ್ದಾರೆ.

ಒಬ್ಬ ದಾಳಿಕೋರನನ್ನು ಪೊಲೀಸರು ಗುಂಡಿನ ದಾಳಿ ನಡೆಸಿ ಚರ್ಚ್‌ನ ದ್ವಾರದ ಬಳಿಯೇ ಹತ್ಯೆ ಮಾಡಿದ್ದರೆ ಸೊಂಟಕ್ಕೆ ಬಾಂಬ್ ಸುತ್ತಿಕೊಂಡಿದ್ದ ಇನ್ನೊರ್ವ ಉಗ್ರ ಚರ್ಚ್‌ನ ಒಳಗೆ ಪ್ರವೇಶಿಸಿ ಸ್ಫೋಟಕವನ್ನು ಸ್ಫೋಟಿಸಿರುವುದಾಗಿ ಅವರು ತಿಳಿಸಿದ್ದಾರೆ.

ಉಗ್ರರ ಬಳಿ ಆಯುಧಗಳಿದ್ದು ಅವರು ಚರ್ಚ್‌ನ ಒಳಗೆ ಜನರನ್ನು ಒತ್ತೆಯಾಳುಗಳನ್ನಾಗಿರಿಸಲು ಬಯಸಿರಬಹುದು. ಆದರೆ ಪೊಲೀಸರು ಅವರ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ಬುಗ್ತಿ ತಿಳಿಸಿದ್ದಾರೆ.

ಘಟನೆಯ ವೇಳೆ ಚರ್ಚ್‌ನ ಒಳಗೆ 400 ಜನರು ಪ್ರಾರ್ಥನೆಯಲ್ಲಿ ನಿರತರಾಗಿದ್ದರು ಎಂದು ತಿಳಿಸಿರುವ ಬಲೂಚಿಸ್ಥಾನದ ಪ್ರಧಾನ ಪೊಲೀಸ್ ನಿರೀಕ್ಷಕರಾದ ಮೋಝಮ್ ಅನ್ಸಾರಿ ಚರ್ಚ್‌ನ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರು ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸಿದ್ದು ಹೆಚ್ಚಿನ ಸಾವು-ನೋವುಗಳು ಸಂಭವಿಸದಂತೆ ತಡೆದರು ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 44 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಒಂಬತ್ತು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಿವಿಲ್ ಆಸ್ಪತ್ರೆಯ ವೈದ್ಯರಾದ ಡಾ. ವಸೀಮ್ ಬೇಗ್ ತಿಳಿಸಿದ್ದಾರೆ.

ಚರ್ಚ್‌ನ ಫೇಸ್‌ಬುಕ್ ಪೇಜ್ ಪ್ರಕಾರ ಕ್ರಿಸ್ಮಸ್ ಹಬ್ಬದ ಅಂಗವಾಗಿ ಚರ್ಚ್‌ನಲ್ಲಿ ಡಿಸೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ರವಿವಾರವೂ ದಾಳಿಯ ವೇಳೆ ಸಂಡೆ ಸ್ಕೂಲ್ ಕ್ರಿಸ್ಮಸ್ ಕಾರ್ಯಕ್ರಮ ನಡೆಯುತ್ತಿತ್ತು.

ಸದ್ಯ ಯಾವುದೇ ಉಗ್ರ ಸಂಘಟನೆ ದಾಳಿಯ ಜವಾಬ್ದಾರಿಯನ್ನು ಹೊರದಿದ್ದರೂ ತಾಲಿಬಾನ್ ಉಗ್ರರು ಈ ಹಿಂದೆಯೂ ಅಲ್ಪಸಂಖ್ಯಾತ ಕ್ರೈಸ್ತರ ಮೇಲೆ ದಾಳಿ ನಡೆಸಿದ ಉದಾಹರಣೆಗಳಿವೆ. ಅದರಲ್ಲೂ ಬೆಥೆಲ್ ಚರ್ಚ್ ಈ ಹಿಂದೆಯೂ ಉಗ್ರರ ದಾಳಿಗೆ ಒಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಚ್ ದಾಳಿಯಲ್ಲಿ ಮೂರು ಉಗ್ರರು ಭಾಗಿಯಾಗಿದ್ದರು ಎಂದು ಕೆಲವು ವರದಿಗಳು ತಿಳಿಸುತ್ತಿದ್ದು ಒಬ್ಬನನ್ನು ಪೊಲೀಸರು ಹತ್ಯೆಗೈದಿದ್ದಾರೆ, ಇನ್ನೋರ್ವ ಚರ್ಚ್ ಒಳಗೆ ಬಾಂಬ್ ಸ್ಫೋಟಿಸಿ ಸಾವನ್ನಪ್ಪಿದ್ದಾನೆ ಮತ್ತು ಮೂರನೇ ಉಗ್ರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅನ್ಸಾರಿ ತಿಳಿಸಿದ್ದಾರೆ. ಇದಕ್ಕೂ ಮೊದಲು, ಸಹಾಯಕ ಪೊಲೀಸ್ ಪ್ರಧಾನ ನಿರೀಕ್ಷಕರಾದ ಅಬ್ದುಲ್ ರಝಾಕ್, ಘಟನೆಯಲ್ಲಿ ಇನ್ನೂ ಇಬ್ಬರು ಉಗ್ರರು ಭಾಗಿಯಾಗಿದ್ದು ಪೊಲೀಸರು ದ್ವಾರದಲ್ಲೇ ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದರು. ಒಟ್ಟಾರೆಯಾಗಿ ಎಷ್ಟು ಮಂದಿ ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದರು ಎಂಬುದರ ಬಗ್ಗೆಯೇ ಅಧಿಕಾರಿಗಳಲ್ಲಿ ಗೊಂದಲವಿದೆ. ಘಟನೆಯ ಹಿನ್ನೆಲೆಯಲ್ಲಿ ಕ್ವೆಟ್ಟಾದ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತುಸ್ಥಿತಿ ಘೋಷಿಸಲಾಗಿದೆ.

ಪಾಕಿಸ್ತಾನ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಈ ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ವಿದೇಶ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್, ಉಗ್ರರ ಇಂತಹ ಹೇಡಿ ಕೃತ್ಯಗಳಿಂದ ಭಯೋತ್ಪದಾನೆ ವಿರುದ್ಧದ ಪಾಕಿಸ್ತಾನದ ನಿಲುವನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಮುಖ್ಯಸ್ಥ ಇಮ್ರಾನ್ ಖಾನ್ ಕೂಡಾ ಚರ್ಚ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

ಕ್ರಿಸ್ಮಸ್ ಸಮೀಪಿಸುತ್ತಿರುವ ಕಾರಣ ಸರಕಾರ ಚರ್ಚ್‌ಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಬೇಕು. ಸಂತ್ರಸ್ತರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಖಾನ್ ಟ್ವೀಟ್ ಮಾಡಿದ್ದಾರೆ. 2015ರ ಮಾರ್ಚ್ 15ರಂದು ತಾಲಿಬಾನ್ ಆತ್ಮಾಹುತಿ ದಾಳಿಕೋರರು ಲಾಹೋರ್‌ನ ಯೊಹನಾಬಾದ್ ಮತ್ತು ಸಮೀಪದ ಎರಡು ಚರ್ಚ್ ಮೇಲೆ ದಾಳಿ ನಡೆಸಿ 15 ಜನರನ್ನು ಹತ್ಯೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News