ನಿರ್ಣಯ ಮಂಡನೆ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪರಿಶೀಲನೆ

Update: 2017-12-17 17:22 GMT

ವಿಶ್ವಸಂಸ್ಥೆ,ಡಿ.17: ಜೆರುಸಲೇಂನ ಸ್ಥಾನಮಾನದಲ್ಲಿ ಮಾಡಲಾಗುವ ಯಾವುದೇ ಬದಲಾವಣೆಯು ಕಾನೂನಿನ ಸಿಂಧುತ್ವವನ್ನು ಹೊಂದಿರುವುದಿಲ್ಲ ಹಾಗೂ ಒಂದು ವೇಳೆ ಅಂತಹ ಯಾವುದೇ ಬದಲಾವಣೆ ಮಾಡಿದಲ್ಲಿ ಅದನ್ನು ಹಿಂಪಡೆಯಬೇಕು ಎಂಬುದನ್ನು ಆಗ್ರಹಿಸುವ ಕರಡು ನಿರ್ಣಯವನ್ನು ಮಂಡಿಸುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪರಿಶೀಲಿಸುತ್ತಿದೆ. ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯೆಂದು ಮಾನ್ಯತೆ ನೀಡುವ ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅದು ಈ ಕ್ರಮಕ್ಕೆ ಮುಂದಾಗಿದೆ.

ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯಾಗಿ ತಾನು ಪರಿಗಣಿಸುವುದಾಗಿ ಹಾಗೂ ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್‌ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಘೋಷಿಸಿದ್ದರು. ಅವರ ಈ ಹೇಳಿಕೆಗೆ ವಿಶ್ವದಾದ್ಯಂತ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು.

ಭದ್ರತಾ ಮಂಡಳಿ ಸಿದ್ಧಪಡಿಸಿರುವ ಕರಡು ನಿರ್ಣಯದ ಪ್ರತಿಯೊಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗೆ ಲಭಿಸಿದ್ದು, ಅದರಲ್ಲಿ ಜೆರುಸಲೇಂ ವಿವಾದವನ್ನು ಮಾತುಕತೆಗಳ ಮೂಲಕ ಬಗೆಹರಿಸಬೇಕೆಂದು ಪ್ರತಿಪಾದಿಸಲಾಗಿದೆ ಹಾಗೂ ಜೆರುಸಲೇಂನ ಸ್ಥಾನಮಾನಕ್ಕೆ ಸಂಬಂಧಿಸಿ, ಇತ್ತೀಚೆಗೆ ಕೈಗೊಳ್ಳಲಾಗಿರುವ ನಿರ್ಧಾರಗಳ ಬಗ್ಗೆ ತೀವ್ರವಾದ ವಿಷಾದವನ್ನು ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ.

  ಪವಿತ್ರ ಜೆರುಸಲೇಂ ನಗರದ ಸ್ವರೂಪ, ಸ್ಥಾನಮಾನ ಹಾಗೂ ಜನಸಂಖ್ಯಾ ಸಂರಚನೆಯನ್ನು ಬದಲಾಯಿಸುವ ಉದ್ದೇಶವಿರುವ ಯಾವುದೇ ನಿರ್ಧಾರ ಹಾಗೂ ಕ್ರಮಗಳು ಅಸಿಂಧು ಹಾಗೂ ಕಾನೂನುಬಾಹಿರವಾಗಿವೆ ಹಾಗೂ ಆ ನಿರ್ಧಾರವನ್ನು ರದ್ದುಪಡಿಸಬೇಕಾಗಿದೆ ಎಂದು ಕರಡು ನಿರ್ಣಯ ಹೇಳಿದೆ.

ಆದಾಗ್ಯೂ, ಈ ನಿರ್ಣಯದ ವಿರುದ್ಧ ಅಮೆರಿಕವು ಭದ್ರತಾ ಮಂಡಳಿಯು ವಿಟೋ ಪ್ರಯೋಗಿಸುವ ನಿರೀಕ್ಷೆಯಿದೆ. ಭದ್ರತಾ ಮಂಡಳಿಯ 14 ಮಂದಿ ಸದಸ್ಯ ರಾಷ್ಟ್ರಗಳ ಪೈಕಿ ಹೆಚ್ಚಿನವು ನಿರ್ಣಯವನ್ನು ಬೆಂಬಲಿಸುವ ನಿರೀಕ್ಷೆಯಿದೆ.

 ಈ ಮಧ್ಯೆ ಅಮೆರಿಕ ಅಧ್ಯಕ್ಷ ಮೈಕ್ ಪೆನ್ ಬುಧವಾರ ಜೆರುಸಲೇಂಗೆ ಭೇಟಿ ನೀಡಲಿದ್ದು, ಪ್ರಸಕ್ತ ಫೆಲೆಸ್ತೀನ್- ಇಸ್ರೇಲ್ ಬಿಕ್ಕಟ್ಟಿನ ಉಲ್ಬಣಕ್ಕೆ ಕಾರಣವಾಗುವ ಸಾಧ್ಯತೆಯಿದೆಯೆಂದು ಅಂತಾರಾಷ್ಟ್ರೀಯ ವೀಕ್ಷಕರು ಅಭಿಪ್ರಾಯಿಸಿದ್ದಾರೆ.

  ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿನ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನೊನ್ ಬಲವಾಗಿ ಖಂಡಿಸಿದ್ದಾರೆ. ಇತಿಹಾಸವನ್ನು ಮರುಶೋಧಿಸುವ ಇಸ್ರೇಲ್‌ನ ಪ್ರಯತ್ನ ಇದಾಗಿದೆಯೆಂದು ಅವರು ಹೇಳಿದ್ದಾರೆ.

ಕರಡು ನಿರ್ಣಯದ ಮುಖ್ಯಾಂಶಗಳು

►ಪವಿತ್ರ ಜೆರುಸಲೇಂ ನಗರದ ಸ್ವರೂಪ, ಸ್ಥಾನಮಾನ ಹಾಗೂ ಜನಸಂಖ್ಯಾ ಸಂರಚನೆಯನ್ನು ಬದಲಾಯಿಸುವ ಉದ್ದೇಶವಿರುವ ಯಾವುದೇ ನಿರ್ಧಾರ ಹಾಗೂ ಕ್ರಮಗಳು ಅಸಿಂಧುವ ಹಾಗೂ ಕಾನೂನುಬಾಹಿರವಾಗಿವೆ ಹಾಗೂ ಆ ನಿರ್ಧಾರವನ್ನು ರದ್ದುಪಡಿಸಬೇಕಾಗಿದೆ *ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಜೆರುಸಲೇಂನಲ್ಲಿ ರಾಯಭಾರಿ ಕಚೇರಿಗಳನ್ನು ತೆರೆಯಬಾರದು.

►ಜೆರುಸಲೇಂನ ಸ್ಥಾನಮಾನದ ಕುರಿತಂತೆ ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಕೈಗೊಳ್ಳಲಾಗುವ ಯಾವುದೇ ಕ್ರಮಗಳಿಗೆ ಸದಸ್ಯ ರಾಷ್ಟ್ರಗಳು ಮಾನ್ಯತೆ ನೀಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News