ಅಕ್ರಮ ಸೆರೆವಾಸದಲ್ಲಿದ್ದವರಿಗೆ ಪರಿಹಾರ: ಕಾನೂನು ಆಯೋಗದ ಸಲಹೆ ಕೇಳಿದ ಹೈಕೋರ್ಟ್

Update: 2017-12-17 17:30 GMT

ಹೊಸದಿಲ್ಲಿ, ಡಿ.17: ಅಕ್ರಮವಾಗಿ ಸೆರೆವಾಸ ಅನುಭವಿಸಿದ ವ್ಯಕ್ತಿಗಳಿಗೆ ಪರಿಹಾರ ನೀಡುವ ಅಗತ್ಯವಿದೆಯೇ ಮತ್ತು ದೇಶಕ್ಕೆ ಇಂತಹ ಕಾನೂನಿನ ಅಗತ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟ್ ಕಾನೂನು ಆಯೋಗಕ್ಕೆ ತಿಳಿಸಿದೆ.

  ಅಕ್ರಮವಾಗಿ ಸೆರೆವಾಸ ಅನುಭವಿಸಿದ ವ್ಯಕ್ತಿಗಳಿಗೆ ಹಾಗೂ ದುರುದ್ದೇಶದಿಂದ ಜರಗಿಸಲಾದ ಕಾನೂನು ಕ್ರಮದಿಂದ ತೊಂದರೆಗೊಳಗಾಗುವ ವ್ಯಕ್ತಿಗಳಿಗೆ ಪರಿಹಾರ ಒದಗಿಸುವ ಬಗ್ಗೆ ಯಾವುದೇ ಕಾನೂನುಬದ್ಧ ಪರಿಹಾರ ನೀಡುವ ವ್ಯವಸ್ಥೆ ಅಲಭ್ಯವಾಗಿರುವ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತು.

  ಅಕ್ರಮವಾಗಿ ಬಂಧನಲ್ಲಿದ್ದವರಿಗೆ ಆರ್ಥಿಕ ಪರಿಹಾರ ನೀಡುವ ವ್ಯವಸ್ಥೆ ಅಮೆರಿಕದ 32 ಗಣರಾಜ್ಯಗಳಲ್ಲಿದೆ . ಅಲ್ಲದೆ ಇಂಗ್ಲೆಂಡ್, ನ್ಯೂಝಿಲ್ಯಾಂಡ್‌ಗಳಲ್ಲೂ ನಿರ್ಧಿಷ್ಟ ಯೋಜನೆಗಳಿವೆ ಎಂದು ರಾಷ್ಟ್ರೀಯ ಕಾನೂನು ವಿವಿಯಲ್ಲಿ ಪ್ರೊಫೆಸರ್ ಆಗಿರುವ ಜಿ.ಎಸ್.ಬಾಜ್‌ಪಾಯ್ ಅವರ ವರದಿಯನ್ನು ಉಲ್ಲೇಖಿಸಿ ನ್ಯಾಯಾಲಯ ತಿಳಿಸಿತು.

ಇಂತಹ ಕಾನೂನುಬದ್ಧ ಪರಿಹಾರ ಒದಗಿಸುವ ಸಮರ್ಥ, ಪರಿಣಾಮಕಾರಿ ಮತ್ತು ಸಕಾಲಿಕ ವ್ಯವಸ್ಥೆಯೊಂದನ್ನು ರೂಪಿಸುವಂತೆ ಹೈಕೋರ್ಟ್ ಕಾನೂನು ಆಯೋಗಕ್ಕೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News