ಆತಂಕದಲ್ಲಿ ಭಾರತೀಯ ಮುಸ್ಲಿಮರು

Update: 2017-12-17 18:32 GMT

 ಅಂತಾರಾಷ್ಟ್ರೀಯ ಮಾನಹಕ್ಕು ಸಂಸ್ಥೆ ವರದಿ ಕಳವಳ

ಭಾರತೀಯ ಮುಸ್ಲಿಮರ ದುಸ್ಥಿತಿಯ ಬಗ್ಗೆ ಲಂಡನ್ ಮೂಲದ ಅಂತಾರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ಗುಂಪು (ಎಂಆರ್‌ಜಿ) ಹಾಗೂ ಸಮಾಜ ಅಧ್ಯಯನ ಹಾಗೂ ಜಾತ್ಯತೀತತೆ (ಸಿಎಸ್‌ಎಸ್‌ಎಸ್)ಗಾಗಿನ ಕೇಂದ್ರ ಸಂಸ್ಥೆಗಳು ತಯಾರಿಸಿರುವ ನೂತನ ವರದಿ, ನಿಜಕ್ಕೂ ಅತ್ಯಂತ ಕಠಿಣ ಪರಿಸ್ಥಿತಿ ಉದ್ಭವವಾಗಿರುವ ಸಮಯದಲ್ಲೇ ಪ್ರಕಟಗೊಂಡಿರುವುದು ಅತ್ಯಂತ ಸಕಾಲಿಕವಾಗಿದೆ.

ದನದ ಮಾಂಸವನ್ನು ಸಂಗ್ರಹಿಸಿಟ್ಟಿದ್ದಕ್ಕಾಗಿ ಅಥವಾ ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರೆಂಬ ನೆಪದಲ್ಲಿ ಮುಸ್ಲಿಮರನ್ನು ಹತ್ಯೆಗೈಯುವ ಘಟನೆಗಳು ಇಂದು ಭಾರತದಲ್ಲಿ ಸಾಂಕ್ರಾಮಿಕವಾಗಿ ಬಿಟ್ಟಿದೆ.ಇಂತಹ ಘಟನೆಗಳ ಬಗ್ಗೆ ಚಿಂತನಾಶೀಲ ಭಾರತೀಯರಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದರೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತದ ಬಗ್ಗೆ ನಕಾರಾತ್ಮಕವಾದ ಅಭಿಪ್ರಾಯಗಳು ಮೂಡಲು ಕಾರಣವಾಗಿದೆ.
ಕಳೆದ ವಾರ ಎಂಆರ್‌ಜಿ-ಸಿಎಸ್‌ಎಸ್‌ಎಸ್ ಬಿಡುಗಡೆಗೊಳಿಸಿದ, ‘‘ಕಿರಿದಾಗುತ್ತಿರುವ ಅವಕಾಶ-ಭಾರತದ ಧಾರ್ಮಿಕ ಅಲ್ಪಸಂಖ್ಯಾತರು’’ ಎಂಬ ಹೆಸರಿನ ವರದಿಯಲ್ಲಿ, 2016ನೇ ಇಸವಿಯೊಂದರಲ್ಲೇ 700ಕ್ಕೂ ಅಧಿಕ ಕೋಮು ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದು, 86 ಜನ ಹತ್ಯೆಯಾಗಿದ್ದಾರೆ ಹಾಗೂ 2,321 ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಗಳಲ್ಲಿ ಬಲಿಪಶುಗಳಾಗಿರುವವರಲ್ಲಿ ಬಹುತೇಕ ಮಂದಿ ಮುಸ್ಲಿಮರಾಗಿದ್ದಾರೆ. 2011 ಹಾಗೂ 2016ರ ನಡುವೆ, ಕೋಮು ಹಿಂಸಾ ಚಾರದ ಘಟನೆಗಳು ನಿರಂತರ ಏರಿಕೆಯನ್ನು ಕಂಡಿವೆೆ. ಈ ಅವಧಿಯಲ್ಲಿ ವರದಿಯಾದ ಕೋಮು ಹಿಂಸಾಚಾರದ ಘಟನೆಗಳ ಸಂಖ್ಯೆ ಹೀಗಿವೆ. 580(2011); 640(2012); 823(2013), 644 (2014),751(2015) ಹಾಗೂ 703(2016).
ಈ ಅವಧಿಯಲ್ಲಿ 2013ರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕೋಮುಗಲಭೆಯ ಘಟನೆಗಳು ನಡೆದಿದ್ದು, ಈ ಪೈಕಿ ಉತ್ತರಪ್ರದೇಶದಲ್ಲಿ ಗರಿಷ್ಠ ಪ್ರಕರಣ ಗಳು ವರದಿಯಾಗಿವೆ. ಆ ವರ್ಷದ ಉತ್ತರಾರ್ಧದಲ್ಲಿ, 2014ರ ಲೋಕ ಸಭಾ ಚುನಾವಣೆಗೆ ಪೂರ್ವಸಿದ್ಧತೆಯಾಗಿ ತೀವ್ರವಾದ ರಾಜಕೀಯ ಪ್ರಚಾರ ನಡೆಯುತ್ತಿರುವಾಗಲೇ ಕೋಮುಗಲಭೆಗಳು ಸ್ಫೋಟಿಸಿದ್ದವು.
ಉತ್ತರದಲ್ಲಿ ಉತ್ತರಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ; ಪಶ್ಚಿಮದಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್; ದಕ್ಷಿಣದಲ್ಲಿ ಕರ್ನಾಟಕ ಹಾಗೂ ಕೇರಳ ಕೋಮು ಉದ್ವಿಗ್ನತೆಯ ತಾಣಗಳಾಗಿವೆ. ಈ ರಾಜ್ಯಗಳಲ್ಲಿ ಒಟ್ಟಾರೆಯಾಗಿ 2,512 ಕೋಮು ಘಟನೆಗಳು ಸಂಭವಿ ಸಿದ್ದರೆ, 2013 ಹಾಗೂ 2016ರ ನಡುವೆ ಶೇ. 85ರಷ್ಟು ಕೋಮು ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ.

2016ರಲ್ಲಿ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಕೋಮು ಹಿಂಸಾಚಾರದ 62 ಘಟನೆಗಳು ವರದಿಯಾಗಿದ್ದು, ಸಂತ್ರಸ್ತರಲ್ಲಿ ಹೆಚ್ಚಿನ ವರು ಮುಸ್ಲಿಮರು. ಈ ಪೈಕಿ ನಾಲ್ಕು ಘಟನೆಗಳಲ್ಲಿ ಸಾವು ಸಂಭವಿಸಿದೆ. ಈ ಘಟನೆಗಳಲ್ಲಿ ಹತ್ಯೆಯಾದ 9 ಮಂದಿಯಲ್ಲಿ 7 ಮಂದಿ ಮುಸ್ಲಿಮರು. ಅದೇ ರೀತಿ ಗಾಯಗೊಂಡವರಲ್ಲಿ 11 ಮಂದಿ ಹಿಂದೂಗಳಾಗಿದ್ದರೆ, ಮುಸ್ಲಿಮರು 46 ಮಂದಿ. ಮೂರು ಘಟನೆಗಳಲ್ಲಿ ಮನೆಗಳ ಮೇಲೆ ದಾಳಿ ನಡೆದಿರುವ ದತ್ತಾಂಶಗಳು ಲಭ್ಯವಾಗಿವೆ. ದಾಳಿಗೊಳಗಾದ ಮನೆಗಳಲ್ಲಿ 67 ಮುಸ್ಲಿಮರದ್ದಾಗಿದ್ದರೆ, ಒಂದು ಮನೆ ಹಿಂದೂವಿನದ್ದಾಗಿದೆ.

ಸ್ವಯಂಘೋಷಿತ ಗೋರಕ್ಷಕರ ದಾದಾಗಿರಿ

2010 ಹಾಗೂ 2017ರ ನಡುವೆ ಗೋರಕ್ಷಣೆಯನ್ನು ಕೇಂದ್ರೀಕರಿಸಿ ನಡೆದ ಶೇ.51ರಷ್ಟು ಹಿಂಸಾಚಾರಗಳಲ್ಲಿ ಮುಸ್ಲಿಮರು ಮುಖ್ಯ ಗುರಿಯಾ ಗಿದ್ದರೆಂದು ವೆಬ್‌ಸೈಟ್ ಇಂಡಿಯಾ ಸಂಸ್ಥೆಯ ವರದಿ ತಿಳಿಸಿದೆ. ಇಂತಹ 63 ಘಟನೆಗಳಲ್ಲಿ 28 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಶೇಕಡ 86 ಮಂದಿ ಮುಸ್ಲಿಮರಾಗಿದ್ದರು.


2014ರ ಮೇನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಮುಸ್ಲಿಮರ ಮೇಲೆ ನಡೆದ ಶೇ.97ರಷ್ಟು ಪ್ರಕರಣಗಳನ್ನು ಪೊಲೀಸರುದಾಖಲಿಸಿಕೊಂಡಿದ್ದಾರೆ. ಗೋವಿಗೆ ಸಂಬಂಧಿಸಿದ ಹಿಂಸಾತ್ಮಕ ಘಟನೆ ಗಳಲ್ಲಿ ಅರ್ಧಾಂಶದಷ್ಟು ಘಟನೆಗಳು ( 63 ಪ್ರಕರಣಗಳ ಪೈಕಿ 32) ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವರದಿಯಾಗಿದ್ದವು.

2017ರ ಮೊದಲ ಆರು ತಿಂಗಳುಗಳಲ್ಲಿ, ಸುಮಾರು 20 ‘ಗೋ ಭಯೋತ್ಪಾದನೆ’ಯ ಘಟನೆಗಳು ವರದಿಯಾಗಿದ್ದು, ಇದು 2016ರಲ್ಲಿ ವರದಿಯಾದ ಪ್ರಕರಣಗಳಿಗಿಂತ ಶೇ. 75ರಷ್ಟು ಅಧಿಕವಾಗಿದೆ. ಇವುಗಳಲ್ಲಿ ಶೇ.52ರಷ್ಟು ದಾಳಿಗಳು ವದಂತಿಗಳನ್ನು ಆಧರಿಸಿ ನಡೆದಿರುವು ದಾಗಿ ‘ಇಂಡಿಯಾ ಸ್ಪೆಂಡ್’ ಸಂಸ್ಥೆಯ ವಿಶ್ಲೇಷಣಾ ವರದಿ ತಿಳಿಸಿದೆ.ಈ ವರ್ಷದ ಎಪ್ರಿಲ್‌ನಿಂದೀಚೆಗೆ 10 ಮಂದಿ ಮುಸ್ಲಿಮರು ಹತ್ಯೆ ಯಾಗಿದ್ದಾರೆಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ವರದಿ ತಿಳಿಸಿದೆ.

ರಾಜಕೀಯ ವಾತಾವರಣ

ಅಲ್ಪಸಂಖ್ಯಾತರನ್ನು ಗುರಿಯಿರಿಸಿ ನಡೆಸಲಾದ ದಾಳಿ ಘಟನೆಗಳನ್ನು ಖಂಡಿಸಲು ಮೋದಿ ಒಲ್ಲದ ಮನಸ್ಸನ್ನು ಹೊಂದಿದ್ದಾರೆಂದು ಎಂಆರ್‌ಜಿ- ಸಿಎಸ್‌ಎಸ್‌ಎಸ್ ವರದಿ ಗಮನಸೆಳೆದಿದೆ. ಅವರ ಸಂಪುಟದ ಸಚಿವರ ಲ್ಲೊಬ್ಬರಾದ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಗೋಮಾಂಸವನ್ನು ಸೇವಿಸಲು ಬಯಸುವವರು ಪಾಕಿಸ್ತಾನಕ್ಕೆ ವಲಸೆ ಹೋಗಬಹುದೆಂದು ಹೇಳಿದ್ದರು. ಗೋಮಾಂಸವನ್ನು ಸೇವಿಸುವವರನ್ನು ಗಲ್ಲಿಗೇರಿಸಬೇಕೆಂದು ಸಾಧ್ವಿ ಸರಸ್ವತಿ ಘೋಷಿಸಿದ್ದಾರೆ.

2017ರ ಮೇ ಅಂತ್ಯದಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಜಾನು ವಾರು ಮಾರುಕಟ್ಟೆಗಳ ನಿಯಂತ್ರಣ ಕುರಿತಂತೆ ವಿವಾದಾತ್ಮಕ ಕಾನೂನುಗಳನ್ನು ಪರಿಸರ ಸಚಿವಾಲಯವು ಜಾರಿಗೊಳಿಸಿತ್ತು. ಕಾನೂನಿನ ಪ್ರಕಾರ, ಮಾರಾಟ ಮಾಡಲಾಗುವ ಗೋವುಗಳನ್ನು ಕೇವಲ ಕೃಷಿ ಉದ್ದೇಶಗಳಿಗೆ ಮಾತ್ರವೇ ಬಳಸಲಾಗುವುದೆಂಬುದನ್ನು ದೃಢಪಡಿಸುವ ಮುಚ್ಚಳಿಕೆಯೊಂದನ್ನು ದೇಶಾದ್ಯಂತದ ಜಾನುವಾರು ಮಾರುಕಟ್ಟೆಗಳ ಎಲ್ಲಾ ಖರೀದಿದಾರರು ಹಾಗೂ ಮಧ್ಯವರ್ತಿಗಳು ನೀಡಬೇಕಾಗುತ್ತದೆ. ಗೋವನ್ನು ಹತ್ಯೆಗಾಗಿ ಮಾರಾಟ ಮಾಡುವುದನ್ನು ಅಕ್ರಮವೆಂದು ಪರಿ ಗಣಿಸಿ ಕಾನೂನು ಮಾಡುವ ಮೂಲಕ, ಸರಕಾರವು ಹಿಂಬಾಗಿಲಿನಿಂದ ಗೋಮಾಂಸ ಸೇವನೆಯನ್ನು ರಾಷ್ಟ್ರಾದ್ಯಂತ ನಿಷೇಧಿಸುವ ಕಾನೂನನ್ನು ಜಾರಿಗೆ ತಂದಿದೆಯೆಂಬ ಟೀಕೆಗೊಳಗಾಗಿದೆ. ಈ ಕಾನೂ ನಿಂದಾಗಿ ಗೋ ಮಾಂಸ ಸೇವಿಸುವ, ಜೀವನೋಪಾಯಕ್ಕಾಗಿ ಕಸಾಯಿಖಾನೆಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಹಾಗೂ ಗೋಮಾಂಸ ಮಾರಾಟ ಮಾಡುವ ವೃತ್ತಿಯಲ್ಲಿರುವ ಮುಸ್ಲಿಮರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಈಶಾನ್ಯ ಭಾರತ,ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯಗಳನ್ನು ಹೊರತುಪಡಿಸಿ, ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸ ಲಾಗಿದೆ. ಆದರೆ ಗೋಹತ್ಯೆಗಾಗಿ ವಿಧಿಸಲಾಗುವ ಶಿಕ್ಷೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆೆ. ಪ್ರಧಾನಿ ಮೋದಿಯ ತವರು ರಾಜ್ಯವಾದ ಗುಜರಾತ್‌ನಲ್ಲಿ ಗೋಹತ್ಯೆಗೆ ಜೀವಾವಧಿ ಶಿಕ್ಷೆಯಿದೆ.
ಮತಾಂತರ ವಿರೋಧಿ ಕಾನೂನು ಎಂದೇ ಪರಿಚಿತವಾಗಿರುವ, ಭಾರತದ ಧಾರ್ಮಿಕ ಸ್ವಾತಂತ್ರ ಕಾಯ್ದೆ ಕೂಡಾ ಧಾರ್ಮಿಕ ಅಲ್ಪ ಸಂಖ್ಯಾತರ ಅದರಲ್ಲೂ ವಿಶೇಷವಾಗಿ ಕ್ರೈಸ್ತರ ವಿರುದ್ಧ ಹೇರಲಾಗುತ್ತಿದೆ.

ದೇಶಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಕೇಂದ್ರದ ಆಡಳಿತಾರೂಢ ಬಿಜೆಪಿಯು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದೆಯಾದರೂ, ಕೇವಲ ಏಳು ಭಾರತೀಯ ರಾಜ್ಯಗಳಲ್ಲಿ ಅದು ಜಾರಿ ಯಲ್ಲಿದೆ. ಗುಜರಾತ್, ಅರುಣಾಚಲಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ,ಹಿಮಾಚಲಪ್ರದೇಶ, ಒಡಿಶಾ ಹಾಗೂ ಛತ್ತೀಸ್‌ಗಡ ಆ ಏಳು ರಾಜ್ಯಗಳಾಗಿವೆ. ಈ ಕಾನೂನುಗಳು ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯಲ್ಲಿ ತೊಡಗಲು ಹಿಂದೂ ರಾಷ್ಟ್ರವಾದಿಗಳಿಗೆ ಕೆಟ್ಟಧೈರ್ಯವನ್ನು ನೀಡಿದೆ ಹಾಗೂ ಈ ಕಾನೂನಿನಲ್ಲಿರುವ ಅಂಶಗಳು ಹಾಗೂ ಅದರ ಜಾರಿಯು ಓರ್ವ ವ್ಯಕ್ತಿಯ ಮತಾಂತರದ ಹಕ್ಕನ್ನು ಮೊಟಕುಗೊಳಿಸುತ್ತದೆ ಹಾಗೂ ಭಾರತದ ಜಾತ್ಯತೀತತೆಗೆ ದೊಡ್ಡ ಮಟ್ಟದ ಸವಾಲನ್ನು ಒಡ್ಡಿದೆ’’ ಎಂದು ಎಂಆರ್‌ಜಿ-ಸಿಎಸ್‌ಎಸ್‌ಎಸ್ ವರದಿ ತಿಳಿಸಿದೆ.

ಕೋಮು ಹಿಂಸಾಚಾರದ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖ ಲಿಸುವ ಹಂತದಿಂದ ಹಿಡಿದು, ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವ ಹಾಗೂ ರಕ್ಷಣೆ ಪಡೆಯುವ ತನಕ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಅಗಾಧವಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆಂದು ವರದಿಯು ಬೆಟ್ಟು ಮಾಡಿ ತೋರಿಸಿದೆ.
ಕೇಂದ್ರದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರಕಾರವು ಕೋಮುಗಲಭೆ ಹಾಗೂ ಯೋಜಿತ ಹಿಂಸಾಚಾರ (ನ್ಯಾಯದಾನ ಹಾಗೂ ಪರಿಹಾರಗಳ ಲಭ್ಯತೆ) ವಿಧೇಯಕವನ್ನು ಬದಲಾಯಿಸಲು ಪ್ರಯತ್ನಿಸಿತ್ತು. ಆದರೆ ಅದಕ್ಕೆ ಬಿಜೆಪಿ 2014ರಲ್ಲಿ ತಡೆಯೊಡ್ಡಿತ್ತು.
‘‘ಒಂದು ವೇಳೆ ಈ ವಿಧೇಯಕವು ಕಾನೂನಾಗಿ ಜಾರಿಗೆ ಬಂದಲ್ಲಿ, ಕೋಮು ಹಿಂಸಾಚಾರ ಉಲ್ಬಣಿಸುವುದನ್ನು ಹಾಗೂ ತಪ್ಪಿತಸ್ಥರು, ಅದರಲ್ಲೂ ವಿಶೇಷವಾಗಿ ಕರ್ತವ್ಯ ಲೋಪವೆಸಗಿದ ಸಾರ್ವಜನಿಕ ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲಿದೆ. ಅಷ್ಟೇ ಅಲ್ಲದೆ ಸಂತ್ರಸ್ತರಿಗೆ ಪರಿಹಾರ,ಪುನರ್ವಸತಿಯ ಆವಶ್ಯಕ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಪೀಡಿತರ ಹಕ್ಕುಗಳನ್ನು ಅದು ಸುಧಾರಿಸಲಿದೆ. ಆದರೆ ಈ ನಿಟ್ಟಿನಲ್ಲಿ ಆದ ಪ್ರಗತಿಯು 2014ರ ಆರಂಭದಲ್ಲೇ ಬಿಜೆಪಿಯ ವಿರೋಧದಿಂದಾಗಿ ತಟಸ್ಥಗೊಂಡಿತ್ತು.

ಹಿಂಸಾಚಾರ ಖಂಡಿಸುವಲ್ಲಿ ನಾಯಕರು ವಿಫಲ

ಗೋರಕ್ಷಣೆಯ ಹೆಸರಿನಲ್ಲಿ, ಕೋಮುದ್ವೇಷದಿಂದ ನಡೆಯುವ ಹತ್ಯೆಗಳು ಈಗ ದೈನಂದಿನ ಪರಿಪಾಠವಾಗಿ ಬಿಟ್ಟಿವೆ. ಕೋಮುವಾದಿ ಗುಂಪುಗಳು ನಡೆಸುವ ಮುಸ್ಲಿಮರ ಹತ್ಯೆಗಳು ಸರಕಾರಿ ಪ್ರಾಯೋಜಿತ ವಾದುದೇ ಹಾಗೂ ನಮ್ಮ ದೇಶವನ್ನು ಫ್ಯಾಶಿಸಂನೆಡೆಗೆ ಕೊಂಡೊ ಯ್ಯಲಾಗುತ್ತಿದೆಯೇ ಎಂಬ ಬಗ್ಗೆ ಭಾರತೀಯ ಸಮಾಜದ ವಿಚಾರವಂತ ವರ್ಗಗಳು ಈಗ ಚಿಂತಿಸತೊಡಗಿವೆ.
ಆದರೆ ಸಾಮಾಜಿಕ ಜಾಲತಾಣಗಳಿಂದ ನಡೆದ ಅಭಿಯಾನದ ಪರಿಣಾಮವಾಗಿ ಪ್ರಜ್ಞಾವಂತ ಭಾರತೀಯರು, ತಮ್ಮ ನಿರ್ಲಿಪ್ತತೆಯ ಚಿಪ್ಪುಗಳಿಂದ ಹೊರಬರುವಂತಾಯಿತು. ‘ನನ್ನ ಹೆಸರಿನಲ್ಲಿ ಅಲ್ಲ’ (‘ನಾಟ್ ಇನ್ ಮೈ ನೇಮ್’) ಎಂಬ ಬ್ಯಾನರ್‌ನ ಅಡಿಯಲ್ಲಿ ನಡೆದ ಅಭಿಯಾನದಲ್ಲಿ ದೇಶದಲ್ಲಿ ತಾಂಡವವಾಡುತ್ತಿರುವ ಕೋಮುಹಿಂಸೆ ಹಾಗೂ ಅಸಹಿಷ್ಣುತೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಈ ಚಳವಳಿಯು ಅಧಿಕಾರದಲ್ಲಿದ್ದವರಿಗೆ ಎಚ್ಚರಿಕೆಯ ಕರೆಗಂಟೆಯನ್ನು ಮೊಳಗಿಸಿತು. ಕಳೆದ ಎರಡು ವರ್ಷಗಳಲ್ಲಿ ಗುಂಪುಗಳಿಂದ ನಡೆದ ಮುಸ್ಲಿಮರ ಹತ್ಯೆ ಘಟನೆಗಳ ಬಗ್ಗೆ ನಿರ್ಲಕ್ಷ ತಾಳಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಹಿಂಸಾಚಾರವನ್ನು ವಿರೋಧಿಸಿ ಹೇಳಿಕೆ ನೀಡಬೇಕಾಯಿತು.
‘ಗೋವಿನ ಭಕ್ತರು’, ಗೋರಕ್ಷಣೆಯ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಸರಿಯಲ್ಲವೆಂದು ಹೇಳಿದ ಅವರು, ಗೋರಕ್ಷಣೆಯನ್ನು ತನ್ನ ಜೀವನದ ಮುಖ್ಯ ಗುರಿಯನ್ನಾಗಿರಿಸಿಕೊಂಡಿದ್ದ ಮಹಾತ್ಮ್ಮಾ ಗಾಂಧೀಜಿ ಕೂಡಾ ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಮೋದಿ ಹೇಳಿದ್ದರು. ಜನತೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದು ಸರಿಯಲ್ಲವೆಂದೂ ಅವರು ತಿಳಿಸಿದ್ದರು.

ಆದರೆ ಮೋದಿ, ತನ್ನ ಹೇಳಿಕೆಯಲ್ಲಿ ಇಂತಹ ಹತ್ಯೆಗಳನ್ನು ಖಂಡಿಸಲಿಲ್ಲ, ಆದರೆ ಅವರು ಅದಕ್ಕೆ ಅಸಮ್ಮತಿಯನ್ನಷ್ಟೇ ಸೂಚಿಸಿದ್ದರು ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಿಸಿದ್ದರು. ಅವರು ತನ್ನ ಹೇಳಿಕೆಯಲ್ಲಿ ಹಿಂಸಾಚಾರದ ಸೂತ್ರಧಾರಿಗಳ ವಿರುದ್ಧ ಎಚ್ಚರಿಕೆಯ ನ್ನಾಗಲಿ ಅಥವಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗಾಗಲಿ ಆದೇಶಿಸಿರಲಿಲ್ಲ. ಆದರೆ ಬಹುತೇಕ ಪ್ರಕರಣಗಳಲ್ಲಿ ಹಿಂಸಾಚಾರಕ್ಕೆ ಬಲಿಪಶುಗಳಾದ ಮುಸ್ಲಿಮರ ಬಗ್ಗೆ ಅವರು ಯಾವುದೇ ಅನುಕಂಪವನ್ನು ವ್ಯಕ್ತಪಡಿಸಲಿಲ್ಲ.

ಆಗಿನ ರಾಷ್ಟ್ರಪತಿ, ಮಾಜಿ ಕಾಂಗ್ರೆಸ್ ನಾಯಕರಾದ ಪ್ರಣವ್ ಮುಖರ್ಜಿ ಅಲ್ಲಿಯ ತನಕ ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿರಲಿಲ್ಲ. ಆದರೆ, ಆನಂತರ ಅವರು ನೀಡಿದ ಹೇಳಿಕೆಯಲ್ಲಿ ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ನಮ್ಮ ದೇಶದ ಮೂಲಭೂತ ತತ್ವಗಳನ್ನು ರಕ್ಷಿಸುವಲ್ಲಿ ನಾವು ಸಾಕಷ್ಟು ಜಾಗೃತರಾಗಿದ್ದೇವೆಯೇ ಎಂದು ಮುಖರ್ಜಿ ಅವರು ಹೊಸದಿಲ್ಲಿಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಪ್ರಶ್ನಿಸಿದ್ದರು.

ಆದರೆ ಪ್ರಜೆಗಳನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ರಕ್ಷಿಸಲು ಮೋದಿ ವಿಫಲರಾಗಿದ್ದರೆ, ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿಕೂಡಾ ಪ್ರಧಾನಿಗೆ ‘ಸಲಹೆ ಹಾಗೂ ಎಚ್ಚರಿಕೆ’ ನೀಡುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಲು ಕೆಲವೇ ದಿನಗಳಿರುವಾಗ ಅವರು ಈ ಹೇಳಿಕೆಯನ್ನು ನೀಡಿದ್ದರು.

ಕೃಪೆ: southasianmonitor.com

Writer - ಪಿ.ಕೆ. ಬಾಲಚಂದ್ರನ್

contributor

Editor - ಪಿ.ಕೆ. ಬಾಲಚಂದ್ರನ್

contributor

Similar News

ಜಗದಗಲ
ಜಗ ದಗಲ