ಕ್ಷಯರೋಗ ಕುರಿತ ಸಾಮಾನ್ಯ ಮಿಥ್ಯೆಗಳು

Update: 2017-12-18 10:42 GMT

ವಿಶ್ವಾದ್ಯಂತ ಕ್ಷಯರೋಗಿಗಳ ಪೈಕಿ ಶೇ.25ರಷ್ಟು ಜನರು ಭಾರತದಲ್ಲಿದ್ದಾರೆ. ಮೈಕ್ರೋಬ್ಯಾಕ್ಟೀರಿಯಂ ಟ್ಯುಬರಕ್ಯುಲೊಸಿಸ್‌ನಿಂದ ಉಂಟಾಗುವ ಕ್ಷಯ ಸೂಕ್ತ ಚಿಕಿತ್ಸೆ ಯಿಂದ ಗುಣಪಡಿಸಬಹುದಾದ ಮತ್ತು ತಡೆಯಬಹುದಾದ ರೋಗವಾಗಿದೆ. ಕ್ಷಯರೋಗದ ಸುತ್ತ ಹಲವಾರು ಮಿಥ್ಯೆಗಳು ಹುಟ್ಟಿಕೊಂಡಿವೆ. ಆದರೆ ಸತ್ಯವನ್ನು ತಿಳಿದುಕೊಳ್ಳುವ ಮೂಲಕ ಈ ರೋಗದ ಕುರಿತ ಭೀತಿಯನ್ನು ನಿವಾರಿಸಿಕೊಳ್ಳ ಬಹುದಾಗಿದೆ.

ಮಿಥ್ಯೆ 1: ಕ್ಷಯವು ವಂಶವಾಹಿ ರೋಗವಾಗಿದೆ

ಸುಳ್ಳು, ಕ್ಷಯರೋಗದ ಯಾವುದೇ ನಿರ್ದಿಷ್ಟ ವಂಶವಾಹಿ ಇಲ್ಲ ಮತ್ತು ಅದು ವಂಶವಾಹಿಯ ಮೂಲಕ ಹರಡುವುದೂ ಇಲ್ಲ. ಅದು ಗಾಳಿಯ ಮೂಲಕ ಹಬ್ಬುವ ರೋಗವಾಗಿದೆ. ಕ್ಷಯರೋಗಿಯು ಕೆಮ್ಮಿದಾಗ, ನಕ್ಕಾಗ, ಸೀನಿದಾಗ ಮತ್ತು ಉಸಿರು ಹೊರಗೆ ಹಾಕಿದಾಗ ಸೋಂಕಿನ ಸೂಕ್ಷ್ಮ ಕಣಗಳು ವಾಯುವಿನಲ್ಲಿ ಸೇರಿಕೊಳ್ಳುತ್ತವೆ ಮತ್ತು ಈ ವಾಯುವನ್ನು ಬೇರೆಯವರು ಉಸಿರಾಡಿದರೆ ರೋಗದ ಸೋಂಕು ಅವರಿಗೂ ಹಬ್ಬಬಹುದು.

ಮಿಥ್ಯೆ 2: ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಮಾತ್ರ ಕ್ಷಯರೋಗ ಬಾಧಿಸುತ್ತದೆ

ಟಿಬಿ ಬ್ಯಾಕ್ಟೀರಿಯಂ ಸೋಂಕನ್ನುಂಟು ಮಾಡಲು ಜಾತಿಗಳು, ಸಂಸ್ಕೃತಿ ಅಥವಾ ಆರ್ಥಿಕ ಸ್ಥಾನಮಾನಗಳ ನಡುವೆ ಯಾವುದೇ ಭೇದವನ್ನೆಣಿಸುವುದಿಲ್ಲ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾವುದೇ ವ್ಯಕ್ತಿಗೆ ಈ ರೋಗವು ಹರಡಬಹುದು.

ಮಿಥ್ಯೆ 3: ಕ್ಷಯದ ಸೋಂಕು ಇದ್ದರೆ ಮಾತ್ರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

ವ್ಯಕ್ತಿಯೋರ್ವ ವರ್ಷಗಳಿಂದಲೂ ಕ್ಷಯದ ಸೋಂಕಿಗೆ ಒಳಗಾಗಿರಬಹುದು ಮತ್ತು ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು. ಆದರೆ ಒಳಗೇ ಸುಪ್ತವಾಗಿರುವ ಕ್ಷಯದ ಸೋಂಕು ಯಾವಾಗ ಬೇಕಾದರೂ ಕ್ರಿಯಾಶೀಲಗೊಳ್ಳಬಹುದು, ಹೀಗಾಗಿ ಅದು ರೋಗಿಗೆ ಮತ್ತು ಆತನ ಸುತ್ತಲಿರುವ ಜನರಿಗೂ ಅಷ್ಟೇ ಅಪಾಯಕಾರಿ ಯಾಗಿರುತ್ತದೆ.

ಮಿಥ್ಯೆ 4: ಅತಿಯಾದ ಧೂಮ್ರಪಾನದಿಂದಾಗಿ ಮಾತ್ರ ಕ್ಷಯರೋಗವು ಅಂಟಿಕೊ ಳ್ಳುತ್ತದೆ

ಧೂಮ್ರಪಾನವು ಕ್ಷಯರೋಗವು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಮೈಕ್ರೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೊಸಿಸ್‌ನ ಸೋಂಕು ಮಾತ್ರ ಕ್ಷಯರೋಗ ವನ್ನುಂಟು ಮಾಡುತ್ತದೆ.

ಮಿಥ್ಯೆ 5: ಶ್ವಾಸಕೋಶಗಳಲ್ಲಿ ಮಾತ್ರ ಕ್ಷಯರೋಗವು ಕಾಣಿಸಿಕೊಳ್ಳುತ್ತದೆ

ಸತ್ಯ: ಶ್ವಾಸಕೋಶಗಳ ಕ್ಷಯವು ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಷಯರೋಗ ವಾಗಿದೆಯಾದರೂ, ಅದು ಮೂತ್ರಪಿಂಡಗಳು, ದುಗ್ಧರಸ ಗ್ರಂಥಿಗಳು, ಮಿದುಳು, ಮಿದುಳು ಬಳ್ಳಿ, ಕರುಳು ಅಥವಾ ಹೃದಯದ ಹೊದಿಕೆಗೂ ಹರಡಬಲ್ಲುದು.

ಮಿಥ್ಯೆ 6: ಬಿಸಿಜಿ ಚುಚ್ಚುಮದ್ದು ಜೀವಮಾನ ಪರ್ಯಂತ ಕ್ಷಯರೋಗದ ವಿರುದ್ಧ ರಕ್ಷಣೆ ನೀಡುತ್ತದೆ

ಸತ್ಯ: ಬಿಸಿಜಿಯು ರೋಗದ ವಿರುದ್ಧ ಅಲ್ಪಕಾಲಿಕ ರಕ್ಷಣೆಯನ್ನು ಮಾತ್ರ ಒದಗಿಸುತ್ತದೆ

ಮಿಥ್ಯೆ 7: ಕ್ಷಯರೋಗವು ಗುಣವಾಗುವುದೇ ಇಲ್ಲ

ಸತ್ಯ: ವೈದ್ಯರು ಸೂಚಿಸುವ ಔಷಧಿಗಳ ಕೋರ್ಸ್‌ನ್ನು ಪೂರ್ಣಗೊಳಿಸಿದರೆ ಕ್ಷಯರೋಗವು ಸಂಪೂರ್ಣವಾಗಿ ಗುಣವಾಗುತ್ತದೆ ಮತ್ತು ಜೀವಮಾನ ಪರ್ಯಂತ ರೋಗದ ವಿರುದ್ಧ ರಕ್ಷಣೆ ದೊರೆಯುತ್ತದೆ.

ಮಿಥ್ಯೆ 8: ಕ್ಷಯರೋಗಕ್ಕೆ ಒಮ್ಮೆ ಚಿಕಿತ್ಸೆ ಪಡೆದುಕೊಂಡರೆ ಅದು ಮರುಕಳಿಸುವುದಿಲ್ಲ

ಸತ್ಯ: ರೋಗಿಯು ಹಿಂದಿನ ಚಿಕಿತ್ಸೆಯ ಕೋರ್ಸ್‌ನ್ನು ಪೂರ್ಣಗೊಳಿಸಿರದಿದ್ದರೆ ಕ್ಷಯರೋಗವು ಮರುಕಳಿಸುವ ಸಾಧ್ಯತೆಯಿರುತ್ತದೆ.

ಮಿಥ್ಯೆ 9: ಕ್ಷಯರೋಗದ ಸೋಂಕು ಕ್ರಿಯಾಶೀಲವಾಗಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆಯು ಅಗತ್ಯವಾಗುತ್ತದೆ

ಸತ್ಯ: ಯಾವುದೇ ಬಾಹ್ಯಲಕ್ಷಣಗಳು ಕಾಣಿಸಿಕೊಳ್ಳದೆ ಕ್ಷಯದ ಸೋಂಕು ಹೊಂದಿರುವ ವರಿಗೂ ಅಷ್ಟೇ ಅಪಾಯವಿರುತ್ತದೆ ಮತ್ತು ಅವರೂ ಕ್ಷಯರೋಗದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಮಿಥ್ಯೆ 10: ಕ್ಷಯರೋಗಿಯು ಮಾತ್ರ ಕಾಯಿಲೆಯನ್ನು ಹರಡುತ್ತಾನೆ

ಸತ್ಯ: ವಿವಿಧ ಪ್ರಾಣಿಗಳು,ವಿಶೇಷವಾಗಿ ಜಾನುವಾರು ಮತ್ತು ಬೆಕ್ಕುಗಳು ಕ್ಷಯರೋಗ ಸೋಂಕಿನ ವಾಹಕಗಳಾಗಿವೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.

ಮಿಥ್ಯೆ 11: ಉಗುಳಿದಾಗ ರಕ್ತವು ಕಾಣಿಸಿಕೊಂಡರೆ ಕ್ಷಯರೋಗವಿರುವುದು ಗ್ಯಾರಂಟಿ

ಸತ್ಯ: ಇತರ ಹಲವಾರು ಕಾರಣಣಗಳಿಂದಲೂ ಉಗುಳಿನಲ್ಲಿ ರಕ್ತವು ಕಾಣಿಸಿಕೊಳ್ಳ ಬಹುದು. ಉಗುಳಿನ ಸರಿಯಾದ ಪರೀಕ್ಷೆ ಮತ್ತು ವಿಶ್ಲೇಷಣೆಯಿಂದ ಮಾತ್ರ ವ್ಯಕ್ತಿಯು ಕ್ಷಯದ ಸೋಂಕಿಗೆ ಗುರಿಯಾಗಿದ್ದಾನೆಯೇ ಎನ್ನುವುದನ್ನು ಖಚಿತಪಡಿಸಲು ಸಾಧ್ಯ.

ಮಿಥ್ಯೆ 12: ಕ್ಷಯರೋಗಿಯನ್ನು ಸ್ಪರ್ಶಿಸಬಾರದು

ಸತ್ಯ: ಕ್ಷಯರೋಗಿಯೊಂದಿಗೆ ನಿಕಟ ಮತ್ತು ಸುದೀರ್ಘ ಒಡನಾಟವು ಇತರರ ಶ್ವಾಸನಾಳದಲ್ಲಿಯೂ ಸೋಂಕು ಹರಡಲು ಕಾರಣವಾಗಬಹುದು. ಇಲ್ಲದಿದ್ದರೆ ಕ್ಷಯರೋಗಿಯನ್ನು ಸ್ಪರ್ಶಿಸಿದರೆ, ತಬ್ಬಿಕೊಂಡರೆ ರೋಗ ಹರಡುವುದಿಲ್ಲ.

ಕ್ಷಯರೋಗದ ವಿರುದ್ಧ ಹೋರಾಟ ಕಠಿಣವೇನಲ್ಲ. ಎಚ್ಚರಿಕೆಯಿಂದ ಇದ್ದರೆ ಮತ್ತು ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದರೆ ಹೋರಾಟವನ್ನು ಅರ್ಧ ಗೆದ್ದಂತೆಯೇ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News