300 ಮಿಲಿಯನ್ ಡಾಲರ್ ಮೌಲ್ಯದ ಜಗತ್ತಿನ ದುಬಾರಿ ಅರಮನೆಯ ಮಾಲಕ ಯಾರು ಗೊತ್ತಾ?

Update: 2017-12-18 16:47 GMT

ಪ್ಯಾರಿಸ್, ಡಿ.18: ಜಗತ್ತಿನ ಅತ್ಯಂತ ದುಬಾರಿ ಮನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಫ್ರೆಂಚ್ ಅರಮನೆಯ ಮಾಲಕ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಎಂದು ಬಹಿರಂಗಪಡಿಸಲಾಗಿದೆ.

ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಅಭಿಯಾನ ನಡೆಸುತ್ತಿರುವ ಪ್ರಭಾವಿ ರಾಜಕುಮಾರ ಇಲ್ಲಿಯವರೆಗೆ ಖರೀದಿಸಿರುವ ವೈಭವೋಪೇತ ವಸ್ತುಗಳ ಸಾಲಿಗೆ 300 ಮಿಲಿಯನ್ ಡಾಲರ್‌ನ ಫ್ರೆಂಚ್‌ನ ಐಷಾರಾಮಿ ಗೃಹ ಸೇರಿದೆ.

2015ರಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಈ ಬಂಗಲೆಯನ್ನು ಅನಾಮಿಕರೊಬ್ಬರು ಖರೀದಿಸಿದ್ದರು. ಇದರ ಮಾಲಕತ್ವವನ್ನು ಶೆಲ್ ಕಂಪೆನಿಗಳ ಮೂಲಕ ರಹಸ್ಯವಾಗಿಡಲಾಗಿತ್ತು. ಆದರೆ ರಾಜಮನೆತನದ ಸಲಹೆಗಾರರು ಈ ಬಂಗಲೆಯ ಮಾಲೀಕರು ರಾಜಕುಮಾರರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.

 ಕಳೆದ ಜುಲೈಯಲ್ಲಿ ಫ್ರೆಂಚ್ ತನಿಖಾ ಜಾಲತಾಣ ಮೀಡಿಯಾಪಾರ್ಟ್ ಈ ಅರಮನೆಯ ಮಾಲಕ ಸೌದಿ ರಾಜಕುಮಾರರಾಗಿದ್ದಾರೆ ಎಂದು ತಿಳಿಸಿತ್ತು. ಇದೀಗ ಸೌದಿಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲು ನಿರಾಕರಿಸಿದ್ದಾರೆ.

ಐಫೋನ್ ಮೂಲಕ ನಿಯಂತ್ರಿಸಬಹುದಾದ ಕಾರಂಜಿಗಳಿರುವ ಚಟೌಸ್ ಲೂಯಿಸ್ 14 ಹೆಸರಿನ ಅರಮನೆ ಜಗತ್ತಿನ ಅತ್ಯಂತ ದುಬಾರಿ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು 2015ರಲ್ಲಿ ಫಾರ್ಚೂನ್ ಪತ್ರಿಕೆ ವರದಿ ಮಾಡಿತ್ತು.

57 ಎಕರೆ ಪ್ರದೇಶದಲ್ಲಿ ಹರಡಿರುವ ಈ ಬಂಗಲೆಯು ವಿಶಾಲವಾದ ತೋಟಗಳು, ಬೃಹತ್ ಕಾರಂಜಿಗಳು ಮತ್ತು ಇತರ ಅತ್ಯಾಧುನಿಕ ಮತ್ತು ಐಷಾರಾಮಿ ಸವಲತ್ತುಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News