ಸಾರ್ವಜನಿಕ ವೇದಿಕೆಯಲ್ಲಿ ವಿಚಾರಣೆ ನಡೆಸಿ 10 ಮಂದಿಗೆ ಮರಣ ದಂಡನೆ ವಿಧಿಸಿದ ನ್ಯಾಯಾಲಯ

Update: 2017-12-18 17:28 GMT

ಲುಫೆಂಗ್ (ಚೀನಾ), ಡಿ.18: ಚೀನಾದ ಲುಫೆಂಗ್ ನಗರದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಸಾವಿರಾರು ಜನರ ಎದುರಲ್ಲೇ ವಿಚಾರಣೆ ನಡೆಸಿದ ನ್ಯಾಯಾಲಯ ಮಾದಕ ದ್ರವ್ಯ ಸಂಬಂಧಿತ ಅಪರಾಧಗಳು, ಹತ್ಯೆ ಮತ್ತು ಕಳ್ಳತನದ ಆರೋಪ ಎದುರಿಸುತ್ತಿದ್ದ ಹತ್ತು ಮಂದಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಈ ಪೈಕಿ ಏಳು ಮಂದಿಗೆ ಮಾದಕದ್ರವ್ಯ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗಿದ್ದರೆ ಉಳಿದ ಮೂವರಿಗೆ ಹತ್ಯೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆ ಘೋಷಿಸಲಾಗಿದೆ.

ಸಾರ್ವಜನಿಕರು ನ್ಯಾಯಾಲಯ ತೀರ್ಪು ನೀಡುವ ವೇಳೆ ಹಾಜರಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ನೀಡಲಾಗಿತ್ತು. ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಸಾರ್ವಜನಿಕ ವೇದಿಕೆಗೆ ಕರೆತರಲಾಯಿತು. ಅವರನ್ನು ವೇದಿಕೆಯ ಮೇಲೆ ನಿಲ್ಲಿಸಿ ಪ್ರತಿಯೊಬ್ಬರ ಹಿಂದೆ ತಲಾ ನಾಲ್ಕು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಈ ವೇದಿಕೆಯ ಸುತ್ತಲೂ ಮಾದಕದ್ರವ್ಯದ ವಿರುದ್ಧ ದೇಶವು ನಡೆಸುತ್ತಿರುವ ಅಭಿಯಾನದ ಭಿತ್ತಿಚಿತ್ರಗಳನ್ನು ಮತ್ತು ಘೋಷಣೆಗಳನ್ನು ಅಂಟಿಸಲಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

ಚೀನಾದಲ್ಲಿ ಬಹಳಷ್ಟು ಆಪರಾಧಿಗಳಿಗೆ ಮರಣ ದಂಡನೆ ವಿಧಿಸಲಾದರೂ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವುದು ಬಹಳ ಕಡಿಮೆ. ಇದೇ ನಗರದಲ್ಲಿ ಐದು ತಿಂಗಳ ಹಿಂದೆ ಇದೇ ಮಾದರಿಯ ಸಾರ್ವಜನಿಕ ವಿಚಾರಣೆ ನಡೆಸಿ ಮಾದಕದ್ರವ್ಯ ಸಂಬಂಧಿ ಅಪರಾಧಕ್ಕಾಗಿ ಎಂಟು ಮಂದಿಗೆ ಮರಣ ದಂಡನೆ ಘೋಷಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News