ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರುವನ್ನು ಹುತಾತ್ಮರೆಂದು ಪರಿಗಣಿಸಬೇಕೆಂಬ ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2017-12-19 13:46 GMT

ಹೊಸದಿಲ್ಲಿ, ಡಿ.19: ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಅವರನ್ನು ಹುತಾತ್ಮರಂದು ಪರಿಗನಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಉಚ್ಛ ನ್ಯಾಯಾಲಯ ಸೋಮವಾರ ತಳ್ಳಿಹಾಕಿದೆ.

ನ್ಯಾಯಾಲಯ ಇಂತಹ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪ್ರಭಾರ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ ಮತ್ತು ನ್ಯಾಯಾಧೀಶ ಸಿ ಹರಿಶಂಕರ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ನ್ಯಾಯಾಲಯವು ಇಂಥ ನಿರ್ದೇಶನವನ್ನು ನೀಡಬಹುದೆಂದು ತಿಳಿಸುವ ಯಾವುದೇ ಕಾನೂನು ಇದೆಯೇ ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ಮನವಿದಾರರು ಉತ್ತರಿಸಲು ವಿಫಲವಾಗಿದ್ದಾರೆ. 1931ರಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರುಗೆ ಹುತಾತ್ಮ ಪದವಿಯನ್ನು ನೀಡಬೇಕೆಂದು ಕೋರಿ ನ್ಯಾಯವಾದಿ ಬಿರೇಂದರ್ ಸಂಗ್ವನ್ ನ್ಯಾಯಾಲಯದಲ್ಲಿ ಮನವಿ ಅರ್ಜಿ ಸಲ್ಲಿಸಿದ್ದರು.

ಹುತಾತ್ಮರಿಗೆ ಹುತಾತ್ಮ ಪದವಿಯನ್ನು ನೀಡುವುದು ಬಹಳ ಮುಖ್ಯ ಮತ್ತು ಅದು ಅವರ ಕಾನೂನಾತ್ಮಕ ಹಕ್ಕು ಕೂಡಾ ಆಗಿದೆ. ಇದು ಅವರಿಗೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ ಎಂದು ಅರ್ಜಿದಾರರು ತಿಳಿಸಿದ್ದರು.

ಕಿರಿಯ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸ್ಯಾಂಡರ್ಸ್‌ನನ್ನು ಬ್ರಿಟಿಷ್ ಪೊಲೀಸ್ ವರಿಷ್ಠಾಧಿಕಾರಿಯೆಂದು ತಪ್ಪಾಗಿ ಭಾವಿಸಿದ ಭಗತ್ ಸಿಂಗ್ ಮತ್ತು ರಾಜ್‌ಗುರು 1928ರಲ್ಲಿ ಇಂದಿನ ಪಾಕಿಸ್ತಾನದಲ್ಲಿರುವ ಲಾಹೋರ್‌ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಪ್ರಕರಣದ ವಿಚಾರಣೆಗೆ ಅಂದಿನ ಭಾರತದ ವೈಸ್‌ರಾಯ್ ಲಾರ್ಡ್ ಇರ್ವಿನ್ ರಚಿಸಿದ ವಿಶೇಷ ಟ್ರಿಬ್ಯುನಲ್ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರುಗೆ ಲಾಹೋರ್ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News