ಗುಜರಾತ್ ಮಾದರಿ ಅಭಿವೃದ್ಧಿ ಕಂಪಿಸಿದೆ: ಶಿವಸೇನೆ

Update: 2017-12-19 14:18 GMT

ಮುಂಬೈ, ಡಿ. 19: ಗುಜರಾತ್ ಚುನಾವಣೆಯಲ್ಲಿ ಉದ್ದೇಶಿತ ಗುರಿ 150ಕ್ಕೆ ಬದಲಾಗಿ 99 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡ ಬಳಿಕ ‘ಗುಜರಾತ್ ಮಾದರಿಯ ಅಭಿವೃದ್ಧಿ ಕಂಪಿಸಿದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ.

  ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಅತ್ಯಧಿಕ ಸ್ಥಾನ ಗಳಿಸಿರುವುದಕ್ಕೆ ಬಿಜೆಪಿಯನ್ನು ಪ್ರಶಂಸಿಸಿರುವ ಶಿವಸೇನೆಯ ಮುಖವಾಣಿ ಸಾಮ್ನಾ, ಈ ಫಲಿತಾಂಶವನ್ನು 2019ರ ಲೋಕಸಭಾ ಚುನಾವಣೆಯ ಎಚ್ಚರಿಕೆಯ ಸಂಕೇತವಾಗಿ ಪರಿಗಣಿಸಬೇಕು ಎಂದಿದೆ.

ಇತರ ರಾಜ್ಯಗಳಿಗೆ ಅಭಿವೃದ್ಧಿ ಮಾದರಿ ಎಂದು ಉಲ್ಲೇಖಿಸಲಾಗುತ್ತಿರುವ ಗುಜರಾತ್‌ನಲ್ಲೇ ಬಿಜೆಪಿಗೆ 100 ಸ್ಥಾನಗಳನ್ನು ದಾಟಲು ಸಾಧ್ಯವಾಗಿಲ್ಲ ಎಂದು ಶಿವಸೇನೆ ಹೇಳಿದೆ.

ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಅವರು ಗುಜರಾತಿ ಅನನ್ಯತೆ, ಪಾಕಿಸ್ತಾನ, ಹಿಂದೂ-ಮುಸ್ಲಿಂ ಬಗ್ಗೆ ಮಾತನಾಡಿದರು. ಆದರೆ, ಕಳೆದ 22 ವರ್ಷಗಳ ಅಭಿವೃದ್ಧಿ ಬಗ್ಗೆ ಮಾತನಾಡಲೇ ಇಲ್ಲ ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

ನಗರ ಕೇಂದ್ರಗಳಲ್ಲಿ ನಗದು ನಿಷೇಧ ಹಾಗೂ ಜಿಎಸ್‌ಟಿ ಬಿಜೆಪಿ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡಿಲ್ಲ ಎಂದು ಹೇಳಿರುವ ಸೇನೆ, ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಸಾವಿರಾರು ಜನರನ್ನು ತನ್ನ ರ್ಯಾಲಿಗೆ ಸೆಳೆಯಲು ಸಫಲರಾಗಿರುವುದು ಹಾಗೂ ಕಾಂಗ್ರೆಸ್ ಯುವ ನಾಯಕರನ್ನು ಹೊಂದಿರುವುದು ಬಿಜೆಪಿ 99 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಮಾಡುವಲ್ಲಿ ಸಫಲವಾಗಲು ಕಾರಣವಾಯಿತು ಎಂದಿದೆ. ಗುಜರಾತ್ ಮಾದರಿ ಕಂಪಿಸುತ್ತಿದೆ ಹಾಗೂ 2019ರ ಹೊತ್ತಿಗೆ ಈ ಮಾದರಿ ಪೂರ್ಣವಾಗಿ ನಾಶವಾಗಲಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News