ರಣಜಿ ಟ್ರೋಫಿ: ಸೋಲಿನ ಭೀತಿಯಲ್ಲಿ ಕರ್ನಾಟಕ

Update: 2017-12-20 18:14 GMT

ಕೋಲ್ಕತಾ, ಡಿ.20: ರಣಜಿ ಟ್ರೋಫಿ ಎರಡನೇ ಸೆಮಿ ಫೈನಲ್‌ನಲ್ಲಿ ವಿನಯಕುಮಾರ್ ನೇತೃತ್ವದ ಕರ್ನಾಟಕ ತಂಡ ವಿದರ್ಭ ವಿರುದ್ಧ ಸೋಲಿನ ಭೀತಿಯಲ್ಲಿದೆ. ಮತ್ತೊಂದೆಡೆ ವಿದರ್ಭ ತಂಡ ಇದೇ ಮೊದಲ ಬಾರಿ ರಣಜಿ ಟೂರ್ನಿಯಲ್ಲಿ ಫೈನಲ್‌ಗೆ ತಲುಪುವ ಅದಮ್ಯ ವಿಶ್ವಾಸದಲ್ಲಿದೆ.

ನಾಲ್ಕನೇ ದಿನವಾದ ಬುಧವಾರ ಕರ್ನಾಟಕ ತಂಡ ಗೆಲುವಿಗೆ 198 ರನ್ ಗುರಿ ಪಡೆದಿತ್ತು. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 43 ಓವರ್‌ಗಳಲ್ಲಿ 111 ರನ್‌ಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿದೆ.

 ಒಂದು ಹಂತದಲ್ಲಿ 81 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕರ್ನಾಟಕ 104 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿದೆ. ಐದು ವರ್ಷಗಳಲ್ಲಿ ಮೂರನೇ ಬಾರಿ ರಣಜಿ ಫೈನಲ್ ತಲುಪುವ ಕನಸು ಕಾಣುತ್ತಿರುವ ಕರ್ನಾಟಕ ಅಂತಿಮ ದಿನವಾದ ಗುರುವಾರ ಉಳಿದ 3 ವಿಕೆಟ್‌ಗಳ ಸಹಾಯದಿಂದ ಇನ್ನೂ 87 ರನ್ ಗಳಿಸಬೇಕಾದ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ವಿದರ್ಭದ ಬೌಲರ್ ರಜನೀಶ್ ಗುರ್ಬಾನಿ(4-35) ಕರ್ನಾಟಕ ಬ್ಯಾಟ್ಸ್‌ಮನ್‌ಗಳಿಗೆ ಮತ್ತೊಮ್ಮೆ ಸವಾಲಾಗಿ ಪರಿಣಮಿಸಿದರು. ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ಗುರ್ಬಾನಿ ಎರಡನೇ ಇನಿಂಗ್ಸ್‌ನಲ್ಲಿ ರಿವರ್ಸ್‌ಸ್ವಿಂಗ್ ಮೂಲಕ ಕರ್ನಾಟಕ ಮಧ್ಯಮಕ್ರಮಾಂಕವನ್ನು ಭೇದಿಸಿದರು. ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಗೌತಮ್ ಹಾಗೂ ಕೆ. ಗೌತಮ್ ವಿಕೆಟ್ ಉಡಾಯಿಸಿ ವಿದರ್ಭವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.

ನಾಯಕ ವಿನಯ್‌ಕುಮಾರ್(ಔಟಾಗದೆ 19,29 ಎಸೆತ, 2 ಬೌಂಡರಿ,1 ಸಿಕ್ಸರ್) ಹಾಗೂ ಆಲ್‌ರೌಂಡರ್ ಶ್ರೇಯಸ್ ಗೋಪಾಲ್(ಅಜೇಯ 1) ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ತಂಡಕ್ಕೆ ಬೆನ್ನೆಲುಬಾಗಿದ್ದ ವಿನಯ್-ಶ್ರೇಯಸ್ ನಿರ್ಣಾಯಕ ಹಂತದಲ್ಲಿ ತಂಡದ ಬೆನ್ನಿಗೆ ನಿಂತು ಗೆಲುವಿನ ದಡ ಸೇರಿಸುತ್ತಾರೋ ಎಂಬ ಕುತೂಹಲ ಎಲ್ಲರಲ್ಲಿದೆ.

ಕರ್ನಾಟಕದ ಪರ ಕರುಣ್ ನಾಯರ್(30), ಆರ್. ಸಮರ್ಥ್(24) ಹಾಗೂ ಸಿಎಂ ಗೌತಮ್(24) ಎರಡಂಕೆಯ ಸ್ಕೋರ್ ದಾಖಲಿಸಿದರು. ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿರುವ ಮಾಯಾಂಕ್ ಅಗರವಾಲ್(3) ಸೆಮಿಫೈನಲ್‌ನಲ್ಲಿ ನೀರಸ ಪ್ರದರ್ಶನ ನೀಡಿರುವುದು ಕರ್ನಾಟಕದ ಬ್ಯಾಟಿಂಗ್ ವೈಫಲ್ಯಕ್ಕೆ ಪ್ರಮುಖ ಕಾರಣ.

ಗುರ್ಬಾನಿಗೆ ಸಿದ್ದೇಶ್ ನೆರಲ್(2-37) ಹಾಗೂ ಉಮೇಶ್ ಯಾದವ್(1-32)ಉತ್ತಮ ಸಾಥ್ ನೀಡುತ್ತಿದ್ದಾರೆ.

ವಿದರ್ಭ 313: ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 195 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ವಿದರ್ಭ ಆದಿತ್ಯ ಸಾರ್ವಟೆ(55,92 ಎಸೆತ, 5 ಬೌಂಡರಿ, 1 ಸಿಕ್ಸರ್) ಸಾಹಸದ ನೆರವಿನಿಂದ 313 ರನ್ ಗಳಿಸಿತು. ಕರ್ನಾಟಕದ ಗೆಲುವಿಗೆ 198 ರನ್ ನಿಗದಿಪಡಿಸಿತು.

ಅಜೇಯ 71 ರನ್ ಗಳಿಸಿದ ದಾವಣಗೆರೆ ದಾಂಡಿಗ ಗಣೇಶ್ ಸತೀಶ್ ನಿನ್ನೆಯ ಮೊತ್ತಕ್ಕೆ 10 ರನ್ ಸೇರಿಸಿ ಔಟಾದರು. ತನ್ನ ರಾಜ್ಯದ ವಿರುದ್ಧ ದಿಟ್ಟ ಹೋರಾಟ ನೀಡಿದ ಸತೀಶ್ 168 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 81 ರನ್ ಗಳಿಸಿ ಮಿಥುನ್‌ಗೆ ವಿಕೆಟ್ ಒಪ್ಪಿಸಿದರು. 2013-14ರಲ್ಲಿ ರಣಜಿ ಟ್ರೋಫಿ ಜಯಿಸಿದ ಕರ್ನಾಟಕ ತಂಡದಲ್ಲಿದ್ದ ಸತೀಶ್ ಅವರು ಅಪೂರ್ವ್ ಹಾಗೂ ಆದಿತ್ಯ ಅವರೊಂದಿಗೆ ಉತ್ತಮ ಜೊತೆಯಾಟ ನಡೆಸಿ ಕರ್ನಾಟಕ ತಂಡಕ್ಕೆ ಸಿಂಹಸ್ವಪ್ನರಾದರು.

ವಿದರ್ಭ ಪರ ಬಾಲಂಗೋಚಿಗಳಾದ ಸಿದ್ದೇಶ್(12), ಉಮೇಶ್ ಯಾದವ್(13) ಹಾಗೂ ರಜನೀಶ್(ಅಜೇಯ 7) ಕಿರು ಕಾಣಿಕೆ ನೀಡಿದರು. ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ನಾಯಕ ವಿನಯ್‌ಕುಮಾರ್(3-71) ಹಾಗೂ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(3-74)ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಶ್ರೀನಾಥ್ ಅರವಿಂದ್(2-56) ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ವಿದರ್ಭ ಮೊದಲ ಇನಿಂಗ್ಸ್:185/10

►ಕರ್ನಾಟಕ ಪ್ರಥಮ ಇನಿಂಗ್ಸ್: 301/10

►ವಿದರ್ಭ ಎರಡನೇ ಇನಿಂಗ್ಸ್: 313/10

(ಗಣೇಶ್ ಸತೀಶ್ 81, ಆದಿತ್ಯ ಸಾರ್ವಟೆ 55, ಅಪೂರ್ವ್ 49, ಜಾಫರ್ 33,ವಿನಯ್‌ಕುಮಾರ್ 3-71, ಸ್ಟುವರ್ಟ್ ಬಿನ್ನಿ 3-74, ಎಸ್.ಅರವಿಂದ್ 2-56)

►ಕರ್ನಾಟಕ ಎರಡನೇ ಇನಿಂಗ್ಸ್: 111/7

(ಕರುಣ್ ನಾಯರ್ 30,ಆರ್.ಸಮರ್ಥ್ 24, ಗೌತಮ್ 24, ವಿನಯ್‌ಕುಮಾರ್ ಔಟಾಗದೆ 19, ರಜನೀಶ್ 4-35, ಸಿದ್ದೇಶ್ 2-37)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News