ಒಂದೊಮ್ಮೆ ಮತಾಂತರವಾದರೆ...

Update: 2017-12-20 18:31 GMT

ಮಾಯಾವತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಲ್ಲಿ ಅವರಿಗೆ ಅದರಿಂದ ನೆರವಿಗಿಂತ ಮಿಗಿಲಾಗಿ ಹಾನಿಯೇ ಆಗಬಹುದು. ಯಾಕೆಂದರೆ, ಯುಪಿಯಲ್ಲಿ ಅಧಿಕಾರಕ್ಕೆ ಬರಬೇಕಾದರೆ ಅವರು ನಿರ್ಮಿಸಬೇಕಾದ ಹಿಂದೂ ಬಹುಜಾತಿ ಮೈತ್ರಿಕೂಟದ ರಚನೆಗೆ ಅವರ ಮತಾಂತರ ಹಾನಿಯುಂಟು ಮಾಡಬಹುದು.

ರಾಜಕಾರಣ ಎನ್ನುವುದು ಸಂಭಾವ್ಯತೆಯ ಒಂದು ಕಲೆ. ಆದರೂ ಭಾರತದ ರಾಜಕಾರಣ ವಿಶಿಷ್ಟ. ರಾಜಕೀಯ ಲಾಭಕ್ಕಾಗಿ ಪ್ರಮುಖ ರಾಜಕೀಯ ಪಕ್ಷವೊಂದರ ಮುಖ್ಯಸ್ಥರೊಬ್ಬರು ತಾನು ಮತಾಂತರಗೊಳ್ಳುವುದಾಗಿ ಬೆದರಿಕೆ ಹಾಕುತ್ತ ಬಂದಿದ್ದಾರೆ. ಇತ್ತೀಚೆಗೆ, ಬಹುಜನ ಸಮಾಜ ಪಕ್ಷದ ಪರಮೋಚ್ಚ ನಾಯಕಿ ಮಾಯಾದೇವಿ ತಾನು ಹಿಂದೂ ಧರ್ಮದಿಂದ ಹೊರ ನಡೆದು ಬೌದ್ಧಧರ್ಮವನ್ನು ಆಲಿಂಗಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದಾರೆ: ‘‘ಬಿಜೆಪಿ ಮತ್ತು ಆರೆಸ್ಸೆಸ್‌ನವರು ದಲಿತರ ಮತ್ತು ಹಿಂದುಳಿದ ಜಾತಿಗಳ ಜನರ ಕುರಿತಾದ ತಮ್ಮ ಅವಮಾನಕಾರಿ, ಅವಹೇಳನಕಾರಿ ಮತ್ತು ಕೋಮುವಾದಿ ವರ್ತನೆಯನ್ನು ಬದಲಾಯಿಸಿಕೊಳ್ಳದೇ ಇದ್ದಲ್ಲಿ, ನಾನು ಕೂಡ ನನ್ನ ಕೋಟಿಗಟ್ಟಲೆ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎಂದು ಅವರಿಗೆ ಎಚ್ಚರಿಕೆ ನೀಡಬಯಸುತ್ತೇನೆ.’’ ಮಹತ್ವದ ಸಂಗತಿ ಎಂದರೆ ಅವರು ಈ ಎಚ್ಚರಿಕೆಯ ಘೋಷಣೆ ಮಾಡಿದ್ದು ನಾಗ್‌ಪುರದಲ್ಲಿ ಆರೆಸ್ಸೆಸ್‌ನ ಮುಖ್ಯ ಕಚೇರಿ ಇರುವಲ್ಲಿಂದ ಕೇವಲ ಒಂದು ಕಿಲೋಮೀಟರ್ ದೂರದ ಸ್ಥಳದಲ್ಲಿ.

ಪ್ರತಿದಿನದ ರಾಜಕಾರಣದಲ್ಲಿ ಮತಾಂತರಗೊಳ್ಳುವುದಾಗಿ ಬೆದರಿಕೆ ಅತಿರೇಕ ಅನ್ನಿಸಬಹುದು. ಆದರೆ ಮಾಯಾವತಿಯವರಿಗೆ ಇದೇನೂ ಹೊಸತಲ್ಲ. ಅವರು ಈ ಹಿಂದೆ ಕೂಡ ಈ ಬೆದರಿಕೆ ಹಾಕಿದ್ದಾರೆ. ನಿಜ ಹೇಳಬೇಕೆಂದರೆ, ರಾಜಕೀಯ ಲಾಭಕ್ಕಾಗಿ ಮತಾಂತರವನ್ನು ಬಳಸಿಕೊಳ್ಳುವ ಒಂದು ಕ್ರಮ ಈ ದೇಶದ ಅಂಬೇಡ್ಕರ್‌ವಾದಿ ರಾಜಕಾರಣದಲ್ಲಿ ಸುಮಾರು ಒಂದು ಶತಮಾನದಿಂದ ನಡೆದು ಬಂದಿದೆ. ಆದರೆ, ಈ ತಂತ್ರದ ಕಾಲ ಮುಗಿಯುತ್ತ ಬಂದಿದೆಯೇ?

‘‘ಹಿಂದುವಾಗಿ ನಾನು ಸಾಯಲಾರೆ’’

ಮತಾಂತರವನ್ನು ಒಂದು ರಾಜಕೀಯ ಚೌಕಾಸಿಯ ತಂತ್ರವಾಗಿ ಬಳಸುವ ಕ್ರಮ ಬಿ.ಆರ್. ಅಂಬೇಡ್ಕರ್‌ರವರಿಂದಲೇ ಆರಂಭವಾಗುತ್ತದೆ. 1935ರಲ್ಲಿ, ತಾನು ಹಿಂದುವಾಗಿ ಸಾಯುವುದಿಲ್ಲವೆಂದು ಅಂಬೇಡ್ಕರ್ ಘೋಷಿಸಿದರು. 1936ರಲ್ಲಿ ಬಾಂಬೆ ಪ್ರೆಸಿಡೆನ್ಸಿ ಮಹಾರ್ ಅಧಿವೇಶನದಲ್ಲಿ ಮಾತನಾಡುತ್ತ, ದಲಿತರಿಗೆ ಬಿಡುಗಡೆ ಪಡೆಯಲು ಮತಾಂತರ ಒಂದು ಹಾದಿ ಎಂಬ ಬಗ್ಗೆ ಅವರು ಸ್ಪಷ್ಟವಾಗಿ ಹೇಳಿದರು. ‘‘ಹಿಂದೂಗಳಲ್ಲಿ ಜಾತಿಪದ್ಧತಿಗೆ ಧರ್ಮದ ಅಡಿಪಾಯವಿದೆ’’ ಮತ್ತು ‘‘ಎಲ್ಲಿಯ ವರೆಗೆ ದಲಿತರು ಹಿಂದುಗಳಾಗಿ ಉಳಿಯುತ್ತಾರೋ, ಅಲ್ಲಿಯವರೆಗೆ ನೀವು ಸಾಮಾಜಿಕ ಕೂಡುವಿಕೆ, ಆಹಾರ ಮತ್ತು ನೀರಿಗಾಗಿ ಹೋರಾಟ ನಡೆಸಬೇಕಾಗುತ್ತದೆ’’ ಎಂದು ಅವರು ವಾದಿಸಿದ್ದರು.

ತಾವು ಅನುಸರಿಸಬೇಕಾದ ಧರ್ಮ ಭೌದ್ಧ ಧರ್ಮವೆಂದು ಒತ್ತಿ ಹೇಳಿದ ಅಂಬೇಡ್ಕರ್, ಧರ್ಮದ ಬದಲಾಯಿಸುವಿಕೆಗಾಗಿ ಮಾಡಿಸಿದ ವಾದ ಪ್ರಬಲವಾಗಿತ್ತು. ‘‘ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ; ಧರ್ಮ ಇರುವುದು ಮನುಷ್ಯನಿಗಾಗಿ, ಮನುಷ್ಯ ಧರ್ಮಕ್ಕಾಗಿ ಇರುವುದಲ್ಲ. ಮಾನವೀಯವಾಗಿ ನಿಮ್ಮನ್ನು ಮನುಷ್ಯರಂತೆ(ಇತರರು) ನಡೆಸಿಕೊಳ್ಳಬೇಕಾದರೆ ನೀವು ಮತಾಂತರ ಹೊಂದಬೇಕು. ಸಂಘಟಿತರಾಗಲು ಮತಾಂತರಗೊಳ್ಳಿ. ಬಲಿಷ್ಠರಾಗಲು ಮತಾಂತರಗೊಳ್ಳಿ. ಸಮಾನತೆ ಪಡೆಯುವುದಕ್ಕಾಗಿ ಮತಾಂತರಗೊಳ್ಳಿ. ಸ್ವಾತಂತ್ರ ಪಡೆಯುವುದಕ್ಕಾಗಿ ಮತಾಂತರಗೊಳ್ಳಿ ನಿಮ್ಮ ಮನೆಯ ಬದುಕು ಸಂತಸಮಯವಾಗಲಿಕ್ಕಾಗಿ ಮತಾಂತರಗೊಳ್ಳಿ.’’ ಅದೇನಿದ್ದರೂ, ಜಾತಿ ಹಕ್ಕುಗಳಿಗೆ ಸಂಬಂಧಿಸಿ ಮತಾಂತರದ ಪ್ರಶ್ನೆಯನ್ನೆತ್ತಿದವರಲ್ಲಿ ಅಂಬೇಡ್ಕರ್ ಮೊದಲಿಗರಲ್ಲ. ಅವರಿಗಿಂತ ಹಿಂದಿನ ಶತಮಾನದ ಸಮಾಜ ಸುಧಾರಕ ಮತ್ತು ಸಹ ಮರಾಠಿ, ಜ್ಯೋತಿರಾವ್ ಫುಲೆ ಈ ್ರಶ್ನೆಯನ್ನು ಮುಂದುಮಾಡಿದ್ದರು.

ಬೌದ್ಧ ಧರ್ಮಕ್ಕೆ ಮತಾಂತರಗಳು

 ಅಂತಿಮವಾಗಿ ಅಂಬೇಡ್ಕರ್ 1956ರಲ್ಲಿ ನಾಗ್‌ಪುರದಲ್ಲಿ ನಾಲ್ಕು ಮಂದಿ ಇತರ ದಲಿತರೊಂದಿಗೆ ಒಂದು ಬೃಹತ್ ಸಮಾರಂಭದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಇತರ ದಲಿತರು ಇದನ್ನನುಸರಿಸಿದರು. 1981ರಲ್ಲಿ ಜಾತಿ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ತಮಿಳುನಾಡಿನಲ್ಲಿ 1000ಕ್ಕೂ ಹೆಚ್ಚು ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. 2002ರಲ್ಲಿ ಹರ್ಯಾಣದ ಜಜ್ಜರ್‌ನಲ್ಲಿ ಗೋಹತ್ಯೆ ಮಾಡಿದ್ದಾರೆಂಬ ಅನುಮಾನದಲ್ಲಿ ಐವರು ದಲಿತರನ್ನು ಹತ್ಯೆಗೈದ ಪ್ರಕರಣದ ಬಳಿಕ ಆ ಪ್ರದೇಶದಲ್ಲಿ ಸಾಮೂಹಿಕ ಮತಾಂತರಗಳು ನಡೆದವು. 2014ರಲ್ಲಿ ಮಧ್ಯಪ್ರದೇಶದ ಶಿವಪುರಿಯಲ್ಲಿ ಜಾತಿ ತಾರತಮ್ಯದಿಂದ ಕ್ರುದ್ಧರಾದ ನಾಲ್ವರು ದಲಿತರು ಇಸ್ಲಾಂಗೆ ಮತಾಂತರಗೊಂಡರು. ಈ ವರ್ಷದ ಆದಿಯಲ್ಲಿ ದಲಿತ ಹಕ್ಕುಗಳ ಒಂದು ಸಂಘಟನೆಯಾದ ಭೀಮ್ ಆರ್ಮಿಯ ಕಾರ್ಯಕರ್ತರ ಬಂಧನಕ್ಕೆ ಪ್ರತಿಭಟನೆಯಾಗಿ ಉತ್ತರ ಪ್ರದೇಶದಲ್ಲಿ 180 ಮಂದಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಭಾಗಶಃ ಇದಕ್ಕೆ ಪ್ರತಿಕ್ರಿಯೆಯಾಗಿ, ಹಿಂದುತ್ವ ಸಂಘಟನೆಗಳು ಘರ್‌ವಾಪ್ಸಿ (ಮರಳಿ ಮನೆಗೆ) ಕಾರ್ಯಕ್ರಮವನ್ನು ಹಮ್ಮಿಕೊಂಡು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದವು.

ಬಹುಜನ ಸಮಾಜ ಪಕ್ಷವು ಅಂಬೇಡ್ಕರ್ ವಿಚಾರಧಾರೆಯನ್ನಾಧರಿಸಿ ಸ್ಥಾಪನೆಗೊಂಡ ಪಕ್ಷವಾಗಿರುವುದರಿಂದ ಮತಾಂತರದ ಚಿಂತನೆ ಅದರಲ್ಲಿ ಇದ್ದೇ ಇದೆ. ಉದಾಹರಣೆಗೆ 2006ರಲ್ಲಿ ಪಕ್ಷದ ಸ್ಥಾಪಕ, ಕಾನ್ಶೀರಾಮ್ ನಿಧನ ಹೊಂದಿದಾಗ ಅವರ ಅಂತಿಮ ವಿಧಿಗಳನ್ನು ಬೌದ್ಧಧರ್ಮದ ವಿಧಿವಿಧಾನಗಳಿಗನುಸಾರವಾಗಿ ನೆರವೇರಿಸಲಾಯಿತು.

ಬಹಳ ಫಲ ನೀಡದ ತಂತ್ರ?

 ಆದರೂ ದಲಿತ ರಾಜಕಾರಣದಲ್ಲಿ ಮತಾಂತರವನ್ನು ಬಳಸುವ ಈ ತಂತ್ರವು ಮಿಶ್ರ ಫಲಿತಾಂಶಗಳನ್ನು ನೀಡಿದೆ. ಇದಕ್ಕೊಂದು ಕಾರಣ, ರಾಷ್ಟ್ರಮಟ್ಟದಲ್ಲಿ ದಲಿತ ರಾಜಕಾರಣದ ಮೇಲೆ ಪರಿಣಾಮ ಬೀರಲು ಬೇಕಾದಷ್ಟು ಸಂಖ್ಯೆಯಲ್ಲಿ ಮತಾಂತರಗಳು ನಡೆದಿಲ್ಲ. ನವ-ಬೌದ್ಧರ ಒಟ್ಟು ಸಂಖ್ಯೆಯಲ್ಲಿ ಶೇ. 90ರಷ್ಟು ಮಂದಿ ಮಹಾರಾಷ್ಟ್ರದಲ್ಲೇ ನೆಲೆಸಿದ್ದಾರೆ. ಆದರೂ ಅಲ್ಲಿರುವ ಬೌದ್ಧ ದಲಿತರ ಸಂಖ್ಯೆ ಕೇವಲ 65 ಲಕ್ಷ.

ಇಷ್ಟೇ ಅಲ್ಲದೆ, ಬೌದ್ಧರ ಸಂಖ್ಯೆ ಹಿಂದೆ ಹೆಚ್ಚಳವಾದಷ್ಟು ವೇಗವಾಗಿ ಈಗ ಆಗುತ್ತಿಲ್ಲ. 1991-2011ರ ಅವಧಿಯಲ್ಲಿ ಅವರ ಸಂಖ್ಯೆಯಲ್ಲಿ ಶೇ. 24.5 ಏರಿಕೆಯಾಗಿದ್ದರೆ 2001-2011ರ ಅವಧಿಯಲ್ಲಿ ಇದು ಕೇವಲ ಶೇ. 6.1ರಷ್ಟು ಏರಿತ್ತು. ಕರ್ನಾಟಕದಲ್ಲಂತೂ ಬಹುಜನ ಸಮಾಜ ಪಕ್ಷ ಕಾವು ಕಳೆದುಕೊಂಡಿದ್ದರಿಂದ ಬೌದ್ಧ ಧರ್ಮೀಯರ ಸಂಖ್ಯೆ ಶೇ. 75ರಷ್ಟು ಇಳಿಕೆಯಾಯಿತು. ಬಿಎಸ್ಪಿ ರಾಜಕಾರಣದ ಹೃದಯವಾಗಿರುವ ಉತ್ತರ ಪ್ರದೇಶದಲ್ಲೇ 2001-2011ರ ಮಧ್ಯೆ ಇವರ ಸಂಖ್ಯೆ ಶೇ.29.6ರಷ್ಟು ಇಳಿಯಿತು.

ಬಿಜೆಪಿ ಒಳದಾರಿಗಳು

ಇಷ್ಟೇ ಅಲ್ಲದೆ ನವ ಬೌದ್ಧ ಧರ್ಮೀಯರನ್ನು ತನ್ನತ್ತ ಆಕರ್ಷಿಸಿ ಎಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 2001ರಲ್ಲಿ ಓರ್ವ ಪ್ರಮುಖ ದಲಿತ ನಾಯಕ ಉದಿತ್‌ರಾಜ್, ಒಂದು ಬೃಹತ್ ಸಮಾವೇಶದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಮೊದಲು ಅವರದ್ದು ಬಿಜೆಪಿ ವಿರುದ್ಧ ರಾಜಕಾರಣವಾಗಿದ್ದರೆ ಈಗ ಅವರು ಓರ್ವ ಬಿಜೆಪಿ ಸಂಸದನಾಗಿ ಪಕ್ಷದ ಅತ್ಯಂತ ಪ್ರಮುಖ ದಲಿತ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ 2016ರಲ್ಲಿ ಓರ್ವ ಪ್ರಮುಖ ಬೌದ್ಧ ಧರ್ಮೀಯ ಬಿಎಸ್ಪಿ ನಾಯಕ ಸ್ವಾಮಿಪ್ರಸಾದ್ ವೌರ್ಯ ಬಿಜೆಪಿಗೆ ಪಕ್ಷಾಂತರ ಮಾಡಿ, ಈಗ ಉತ್ತರಪ್ರದೇಶ ಸರಕಾರದಲ್ಲಿ ಅವರು ಸಚಿವರಾಗಿದ್ದಾರೆ.

ಹಾಗಾಗಿ, ಮಾಯಾವತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಲ್ಲಿ ಅವರಿಗೆ ಅದರಿಂದ ನೆರವಿಗಿಂತ ಮಿಗಿಲಾಗಿ ಹಾನಿಯೇ ಆಗಬಹುದು. ಯಾಕೆಂದರೆ, ಯುಪಿಯಲ್ಲಿ ಅಧಿಕಾರಕ್ಕೆ ಬರಬೇಕಾದರೆ ಅವರು ನಿರ್ಮಿಸಬೇಕಾದ ಹಿಂದೂ ಬಹುಜಾತಿ ಮೈತ್ರಿಕೂಟದ ರಚನೆಗೆ ಅವರ ಮತಾಂತರ ಹಾನಿಯುಂಟು ಮಾಡಬಹುದು.

ಸಾಮಾಜಿಕ ಬಂಧ ವಿಮೋಚನೆಗಾಗಿ ಮತಾಂತರ ವನ್ನು ಬಳಸುವ ಅಂಬೇಡ್ಕರ್‌ರವರ ಚಿಂತನೆ ಕ್ರಾಂತಿಕಾರಕ ವಾಗಿದ್ದಿರಬಹುದು, ಆದರೆ ಭಾರತದ ರಾಜಕಾರಣದಲ್ಲಿ ಅದರ ಕಾಲ ಮುಗಿದು ಹೋಗಿರಬಹುದು.

ಕೃಪೆ: scroll.in

Writer - ಶುಐಬ್ ದನಿಯಾಲ್

contributor

Editor - ಶುಐಬ್ ದನಿಯಾಲ್

contributor

Similar News

ಜಗದಗಲ
ಜಗ ದಗಲ