ಭಾರತದಲ್ಲಿ ಕಾರಿನ ಹಿಂಬದಿ ಆಸನಗಳ ಪ್ರಯಾಣಿಕರು ಸೀಟ್‌ಬೆಲ್ಟ್‌ಗಳನ್ನೇಕೆ ಕಟ್ಟಿಕೊಳ್ಳುವುದಿಲ್ಲ...?

Update: 2017-12-21 10:58 GMT

ಭಾರತೀಯರು ಕಾರುಗಳಲ್ಲಿ ಪ್ರಯಾಣಿಸುವಾಗ ತಮ್ಮ ಸುರಕ್ಷತೆಗಾಗಿಯೇ ಇರುವ ಸೀಟ್‌ಬೆಲ್ಟ್‌ಗಳನ್ನು ಕಟ್ಟಿಕೊಳ್ಳಲು ಅದೇಕೋ ಇಷ್ಟಪಡುವುದಿಲ್ಲ. ಕಾರಿನ ಚಾಲಕ ಮತ್ತು ಮುಂಬದಿಯ ಪ್ರಯಾಣಿಕರಿಗಿಂತ ಹಿಂದಿನ ಆಸನಗಳಲ್ಲಿ ಕುಳಿತಿರುವವರಂತೂ ಸೀಟ್‌ಬೆಲ್ಟ್‌ಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುತ್ತಾರೆ. ವಾಷಿಂಗ್ಟನ್‌ನ ಸೆಂಟರ್ ಫಾರ್ ಆಟೋ ಸೇಫ್ಟಿಯ ವಿಶ್ಲೇಷಣೆಯಂತೆ ಅಮೆರಿಕವೊಂದರಲ್ಲೇ ಪ್ರತಿ ವರ್ಷ 1,000ಕ್ಕೂ ಅಧಿಕ ಸಂಖ್ಯೆಯ ಹಿಂಬದಿ ಪ್ರಯಾಣಿಕರು ಸೀಟ್‌ಬೆಲ್ಟ್ ಕಟ್ಟಿಕೊಳ್ಳದ ಕಾರಣದಿಂದಲೇ ಅಪಘಾತಗಳಲ್ಲಿ ಸಾವನ್ನಪ್ಪುತ್ತಾರೆ. ಕಾರುಗಳ ಹಿಂಬದಿಯ ಆಸನಗಳ ಪ್ರಯಾಣಿಕರು ಸೀಟ್‌ಬೆಲ್ಟ್‌ನ್ನು ಸರಿಯಾಗಿ ಕಟ್ಟಿಕೊಂಡರೆ ಅಪಘಾತಗಳಲ್ಲಿ ಸಾವುಗಳ ಸಂಖ್ಯೆಯನ್ನು ಶೇ.44ರಷ್ಟು ತಗ್ಗಿಸಬಹುದು ಎಂದು ಅಧ್ಯಯನವು ಹೇಳಿದೆ.

ಭಾರತದಲ್ಲಿ ಹಿಂಬದಿ ಆಸನಗಳ ಪ್ರಯಾಣಿಕರು ಸೀಟ್‌ಬೆಲ್ಟ್ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ ಪ್ರದರ್ಶಿಸುತ್ತಾರೆ. ಈ ಪ್ರವೃತ್ತಿಗೆ ಕಾರಣವೇನು? ಮುಂಬದಿಯ ಆಸನಗಳಲ್ಲಿ ಕುಳಿತವರಿಗೆ ಹೋಲಿಸಿದರೆ ಹಿಂದಿನ ಆಸನಗಳಲ್ಲಿ ಕುಳಿತವರ ಜೀವಗಳು ಮುಖ್ಯವಲ್ಲವೇ?

ಕಾಂಟಾರ್ ಗ್ರುಪ್‌ನ ಸಹಯೋಗದೊಂದಿಗೆ ಮಾರುತಿ ಸುಝುಕಿ ನಡೆಸಿದ್ದ ಸಮೀಕ್ಷೆಯೊಂದು ಕೆಲವು ವಿಲಕ್ಷಣ ಫಲಿತಾಂಶಗಳನ್ನು ತೋರಿಸಿದೆ. ದೇಶದ 17 ನಗರಗಳಲ್ಲಿ ನಡೆಸಲಾದ ಈ ಸಮೀಕ್ಷೆಯು ಕಾನೂನು ಜಾರಿಯಲ್ಲಿನ ದೌರ್ಬಲ್ಯದಿಂದಾಗಿ ಶೇ.45ರಷ್ಟು ಭಾರತೀಯರು ಹಿಂಬದಿಯ ಆಸನಗಳಲ್ಲಿ ಪ್ರಯಾಣಿಸುವಾಗ ಸೀಟ್‌ಬೆಲ್ಟ್ ಗಳನ್ನು ಧರಿಸುವುದಿಲ್ಲ. ಹಿಂಬದಿಯ ಪ್ರಯಾಣಿಕರು ಸೀಟ್‌ಬೆಲ್ಟ್‌ಗಳನ್ನು ಧರಿಸಿರದಿದ್ದರೆ ಯಾವುದೇ ಕಾನೂನು ಕ್ರಮಕ್ಕೆ ಗುರಿಯಾಗುವುದಿಲ್ಲ ಎಂಬ ಅಂಶವು ಸ್ಥಿತಿಯು ಇನ್ನಷ್ಟು ಹದಗೆಡಲು ಕಾರಣವಾಗಿದೆ. ಸೀಟ್‌ಬೆಲ್ಟ್ ತಮ್ಮ ವ್ಯಕ್ತಿತ್ವವನ್ನು ಕೆಡಿಸುತ್ತದೆ ಎಂಬ ಭಾವನೆಯೂ ಹಿಂಬದಿ ಪ್ರಯಾಣಿಕರು ಅದನ್ನು ಕಡೆಗಣಿಸಲು ಒಂದು ಕಾರಣವಾಗಿದೆ. ವಿವಾಹಿತರಿಗಿಂತ ಅವಿವಾಹಿತರು ಸೀಟ್‌ಬೆಲ್ಟ್ ಕಟ್ಟಿಕೊಳ್ಳುವುದು ಕಡಿಮೆ ಎನ್ನುವುದನ್ನೂ ಸಮೀಕ್ಷೆಯು ಬೆಟ್ಟುಮಾಡಿದೆ.

ಅಪಘಾತಗಳು ಸಂಭವಿಸಿದಾಗ ಕಾರಿನ ಹಿಂಬದಿಯಲ್ಲಿನ ಪ್ರಯಾಣಿಕರು ಮುಂದಿನ ಆಸನದತ್ತ ಎಸೆಯಲ್ಪಡಬಹುದು ಮತ್ತು ಮುಂಬದಿಯ ಗಾಜು ಅಥವಾ ಪಕ್ಕದ ಕಿಟಕಿಗಳಿಂದ ಹೊರಕ್ಕೆ ಚಿಮ್ಮಬಹುದು ಮತ್ತು ಸಾವನ್ನೂ ಅಪ್ಪಬಹುದು ಎನ್ನುವ ಕಹಿಸತ್ಯ ಹೆಚ್ಚಿನ ಜನರಿಗೆ ತಿಳಿದಿಲ್ಲ. ಸೀಟ್‌ಬೆಲ್ಟ್‌ನ್ನು ಧರಿಸದಿರುವವರಲ್ಲಿ ಶೇ.34ರಷ್ಟು ಜನರು ಅದರಿಂದೇನೂ ಉಪಯೋಗವಿಲ್ಲ ಎಂಬ ತಪ್ಪುಗ್ರಹಿಕೆಯಲ್ಲಿರುತ್ತಾರೆ ಮತ್ತು ಇಂದಿಗೂ ಅದು ಸೀಟ್‌ಬೆಲ್ಟ್ ಧರಿಸದಿರುವುದಕ್ಕೆ ಅತ್ಯಂತ ಮೂರ್ಖ ನೆಪವಾಗಿದೆ.

ಸೀಟ್‌ಬೆಲ್ಟ್‌ಗಳನ್ನು ಧರಿಸುವುದರಿಂದ ತಮ್ಮ ಬಟ್ಟೆಗಳು ಹಾಳಾಗುತ್ತವೆ ಎನ್ನುವವರೂ ಇದ್ದಾರೆ. ಸೀಟ್‌ಬೆಲ್ಟ್‌ನ್ನು ಧರಿಸದಿರುವವರಲ್ಲಿ ಶೇ.32ರಷ್ಟು ಜನರು ತಮ್ಮ ಪ್ರಾಣಕ್ಕಿಂತ ತಮ್ಮ ಶರ್ಟ್‌ನ ಇಸ್ತ್ರಿ ಹಾಳಾಗದಿರಲು ಹೆಚ್ಚಿನ ಆದ್ಯತೆ ನೀಡುತ್ತಾರೆ!

ಜನರ ಪ್ರಾಣಗಳನ್ನು ಉಳಿಸುವಲ್ಲಿ ನೆರವಾಗುವ ಸೀಟ್‌ಬೆಲ್ಟ್‌ಗಳನ್ನು ಧರಿಸುವಂತೆ ಮಾಡಲು ಕಾನೂನೇ ಬೇಕು ಎನ್ನುವುದು ನಿಜಕ್ಕೂ ವಿಷಾದಕರವಾಗಿದೆ. ಹಿಂಬದಿಯ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸದಿದ್ದರೆ ಅವರನ್ನೂ ದಂಡಿಸುವ ಕಾನೂನು ಬರಬೇಕಿದೆ. ನೀವು ಮುಂದಿನ ಆಸನದಲ್ಲಿ ಅಥವಾ ಹಿಂದಿನ ಆಸನದಲ್ಲಿ ಕುಳಿತಿರಲಿ, ಪ್ರಯಾಣ ಆರಂಭಿಸುವ ಮುನ್ನ ಸೀಟ್‌ಬೆಲ್ಟ್‌ನ್ನು ಸರಿಯಾಗಿ ಕಟ್ಟಿಕೊಳ್ಳುವುದು ನಿಮಗೇ ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News