×
Ad

ಉ.ಕೊರಿಯಾದ ಮತ್ತೊಬ್ಬ ಸೈನಿಕ ದ.ಕೊರಿಯಾಗೆ ಪಲಾಯನ

Update: 2017-12-21 22:30 IST

ಸಿಯೋಲ್ (ದಕ್ಷಿಣ ಕೊರಿಯ), ಡಿ. 21: ಉತ್ತರ ಕೊರಿಯದ ಇನ್ನೊಬ್ಬ ಸೈನಿಕ ಗುರುವಾರ ದಕ್ಷಿಣ ಕೊರಿಯಕ್ಕೆ ಪಲಾಯನಗೈದಿದ್ದಾನೆ. ಉಭಯ ದೇಶಗಳ ನಡುವಿನ ಗಡಿಯಲ್ಲಿರುವ ಸೇನಾರಹಿತ ವಲಯದಲ್ಲಿ ‘ಕೆಳ ದರ್ಜೆ’ಯ ಸೈನಿಕನು ಪಲಾಯನಗೈದ ಬಳಿಕ ಗಡಿಯ ಎರಡೂ ಬದಿಗಳಲ್ಲಿ ಗುಂಡು ಹಾರಾಟ ನಡೆದಿದೆ.

ಇದು ಎರಡು ತಿಂಗಳಲ್ಲಿ ನಡೆದ ಇಂತಹ ಎರಡನೆ ಘಟನೆಯಾಗಿದೆ.

ಗಡಿಯಲ್ಲಿರುವ ಭಾರೀ ಭದ್ರತೆಯ ಯೋಂಚಿಯನ್ ಸಮೀಪ ದಟ್ಟ ಮಂಜಿನ ಮರೆಯಲ್ಲಿ ಸೈನಿಕನು ಗಡಿ ದಾಟಿ ಬಂದಾಗ ನಿಗಾ ಸಾಧನಗಳ ಮೂಲಕ ಈ ಸ್ಥಳವನ್ನು ಗಮನಿಸುತ್ತಿದ್ದ ದಕ್ಷಿಣ ಕೊರಿಯ ಸೈನಿಕರು ಅಲ್ಲಿಗೆ ಧಾವಿಸಿದರು ಎಂದು ದಕ್ಷಿಣ ಕೊರಿಯ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

ಆದರೆ, ಆಗ ಗುಂಡಿನ ಹಾರಾಟ ನಡೆಯಲಿಲ್ಲ ಎಂದು ಹೇಳಿದ ಅವರು, ತಮ್ಮ ಸೈನಿಕನನ್ನು ಹುಡುಕಿಕೊಂಡು ಗಡಿಯತ್ತ ಬಂದ ಉತ್ತರ ಕೊರಿಯದ ಗಡಿ ಸೈನಿಕರನ್ನು ಎಚ್ಚರಿಸಲು ಕೆ-3 ಮಶಿನ್ ಗನ್‌ನಿಂದ 20 ಸುತ್ತು ಗುಂಡು ಹಾರಿಸಿದೆವು ಎಂದರು.

ಉತ್ತರ ಕೊರಿಯದ ಕಡೆಯಿಂದ ಎರಡು ಬಾರಿ ಗುಂಡು ಹಾರಾಟದ ಸದ್ದು ಕೇಳಿತು ಎಂದು ವಕ್ತಾರರು ತಿಳಿಸಿದರು.

 ಒಂದು ತಿಂಗಳ ಹಿಂದೆ ಉತ್ತರ ಕೊರಿಯದ ಸೈನಿಕನೊಬ್ಬ ಪನ್‌ಮುಂಜಮ್ ಪ್ರದೇಶದಲ್ಲಿ ತನ್ನದೇ ದೇಶದ ಸೈನಿಕರು ಹಾರಿಸಿದ ಗುಂಡಿನ ಮಳೆಯ ನಡುವೆಯೇ ಓಡುತ್ತಾ ದಕ್ಷಿಣ ಕೊರಿಯದ ಕಡೆಗೆ ಪಲಾಯನಗೈದಿದ್ದನು.

 ಗಡಿವರೆಗೆ ತನ್ನ ವಾಹನದಲ್ಲಿ ವೇಗವಾಗಿ ಬಂದ ಆತ ಬಳಿಕ ಓಡುತ್ತಾ ದಕ್ಷಿಣ ಕೊರಿಯದ ಭೂಭಾಗವನ್ನು ಪ್ರವೇಶಿಸಿದನು. ಈ ಅತ್ಯಂತ ಸಾಹಸಿಕ ಕೃತ್ಯದಲ್ಲಿ 4 ಗುಂಡುಗಳು ಆತನ ದೇಹ ಪ್ರವೇಶಿಸಿದ್ದವು. ಈಗ ಆತ ದಕ್ಷಿಣ ಕೊರಿಯದ ಆಸ್ಪತ್ರೆಯೊಂದರಲ್ಲಿ ಚೇತರಿಸುತ್ತಿದ್ದಾನೆ.

ಇದರೊಂದಿಗೆ ಈ ವರ್ಷ ಉತ್ತರ ಕೊರಿಯದಿಂದ ದಕ್ಷಿಣ ಕೊರಿಯಕ್ಕೆ ಪರಾರಿಯಾದ ಜನರ ಸಂಖ್ಯೆ 15ಕ್ಕೆ ಏರಿದೆ. ಇದು 2016ರಲ್ಲಿ ನಡೆದ ಪಲಾಯನ ಘಟನೆಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ.

ಇಬ್ಬರು ನಾಗರಿಕರೂ ದ. ಕೊರಿಯಕ್ಕೆ

ಉತ್ತರ ಕೊರಿಯದ ಇಬ್ಬರು ನಾಗರಿಕರೂ ಈ ವಾರ ದಕ್ಷಿಣ ಕೊರಿಯಕ್ಕೆ ಪಲಾಯನಗೈದಿದ್ದಾರೆ. ಅವರನ್ನು ಆಗ್ನೇಯ ಕರಾವಳಿಯಲ್ಲಿ ಪ್ರವಾಹದೊಂದಿಗೆ ಹೋಗುತ್ತಿದ್ದ ಇಂಜಿನ್‌ರಹಿತ ದೋಣಿಯೊಂದರಿಂದ ರಕ್ಷಿಸಲಾಗಿದೆ ಎಂದು ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅವರನ್ನು ದಕ್ಷಿಣ ಕೊರಿಯದ ನಿಗಾ ವಿಮಾನವೊಂದು ಗಮನಿಸಿತು ಹಾಗೂ ಸಮೀಪದಲ್ಲಿದ್ದ ನೌಕಾ ಪಡೆ ಹಡಗಿನ ಮೂಲಕ ರಕ್ಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News