ಸರಿಯಾದ ಗ್ಲುಕೊಮೀಟರ್ ಆಯ್ಕೆ ಹೇಗೆ...?

Update: 2017-12-22 09:55 GMT

ಭಾರತದಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ಜನರು ಮಧುಮೇಹ ರೋಗದಿಂದಾಗಿ ಸಾವನ್ನಪ್ಪುತ್ತಾರೆ. ನಿಜಕ್ಕೂ ಇದು ಗಂಭೀರ ಸ್ಥಿತಿಯಾಗಿದೆ. ಆದರೂ ಮಧುಮೇಹವಿದೆ ಎಂದಾಕ್ಷಣ ಗಾಬರಿಯಾಗಬೇಕಿಲ್ಲ. ಸೂಕ್ತ ಔಷಧಿ ಸೇವನೆಯೊಂದಿಗೆ ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ಇತರರಂತೆ ಸಾಮಾನ್ಯ ಜೀವನವನ್ನು ನಡೆಸಬಹುದು. ಕಾಲಕಾಲಕ್ಕೆ ರಕ್ತದಲ್ಲಿ ಸಕ್ಕರೆಯ ಮಟ್ಟದ ಮೇಲೆ ನಿಗಾ ಇರಿಸುವುದರಿಂದ ನಿಮಗೆ ಮತ್ತು ನಿಮಗೆ ಚಿಕಿತ್ಸೆಯನ್ನು ನೀಡುವ ವೈದ್ಯರಿಗೂ ನೆರವಾಗುತ್ತದೆ. ಹಿಂದೆಲ್ಲ ರಕ್ತದಲ್ಲಿ ಸಕ್ಕರೆ ಮಟ್ಟದ ತಪಾಸಣೆಗಾಗಿ ಪರೀಕ್ಷಾ ಕೇಂದ್ರಗಳಿಗೇ ಹೋಗಬೇಕಾಗಿತ್ತು. ಆದರೆ ಈಗ ಗ್ಲುಕೊಮೀಟರ್ ನೆರವಿನಿಂದ ಮಧುಮೇಹಿಗಳು ತಮ್ಮ ಸಕ್ಕರೆಯ ಮಟ್ಟವನ್ನು ಮನೆಯಲ್ಲಿಯೇ ಪರೀಕ್ಷಿಸಬಹುದಾಗಿದೆ. ಪುಟ್ಟ ಗಣಕೀಕೃತ ಸಾಧನವಾಗಿರುವ ಗ್ಲುಕೊಮೀಟರ್ ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ತೋರಿಸುತ್ತದೆ.

 ಇಂದು ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳ ಗ್ಲುಕೊಮೀಟರ್‌ಗಳು ಲಭ್ಯವಿವೆಯಾದರೂ ಸರಿಯಾದ ಸಾಧನಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಕೆಲವು ಮುಖ್ಯವಾದ ಅಂಶಗಳು ಗಮನದಲ್ಲಿರಬೇಕು.

ನೀವು ಖರೀದಿಸುವ ಗ್ಲುಕೊಮೀಟರ್ ಮತ್ತು ಸ್ಟ್ರಿಪ್‌ಗಳು ನಿರ್ವಹಿಸಲು ಅನುಕೂಲಕರವಾಗಿರಬೇಕು ಮತ್ತು ಎಲ್ಲ ವಯೋಮಾನದವರ ರಕ್ತಪರೀಕ್ಷೆಗೆ ಬಳಕೆ ಯಾಗುವಂತಿರಬೇಕು.

ಗ್ಲುಕೊಮೀಟರ್ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಖರವಾಗಿ ತೋರಿಸಲು ಸಮರ್ಥವಾಗಿರಬೇಕು. ತಪ್ಪು ಲೆಕ್ಕ ತೋರಿಸಿದರೂ ಅದು ಸೂಚಿತ ಮಿತಿಯಲ್ಲಿರಬೇಕು. ಸುಮಾರು ಶೇ.20ರಷ್ಟು ವ್ಯತ್ಯಾಸವಿದ್ದರೂ ತೊಂದರೆಯಿಲ್ಲ.

ರೋಗಿಗೆ ಪರೀಕ್ಷೆಗಾಗಿ ರಕ್ತವನ್ನು ಶಿಫಾರಸು ಮಾಡಲಾದ ಶರೀರದ ಭಾಗದಿಂದ ಪಡೆಯಲು ಸಾಧ್ಯವಾಗದಿದ್ದರೆ, ಇತರ ಭಾಗಗಳಿಂದ ರಕ್ತವನ್ನು ಪಡೆಯಲು ಸಾಧ್ಯವಾಗುವಂತೆ ಗ್ಲುಕೊಮೀಟರ್ ವಿನ್ಯಾಸಗೊಂಡಿರಬೇಕು.

ಸ್ಯಾಂಪ್ಲಿಂಗ್‌ಗಾಗಿ ಕಡಿಮೆ ಪ್ರಮಾಣದ ರಕ್ತವನ್ನು ತೆಗೆಯುವ ಮೀಟರ್‌ಗಿಂತ ಹೆಚ್ಚಿನ ರಕ್ತವನ್ನು ತೆಗೆಯುವ ಮೀಟರ್ ಹೆಚ್ಚು ನೋವನ್ನುಂಟು ಮಾಡುತ್ತದೆ ಎನ್ನುವುದು ಗಮನದಲ್ಲಿರಲಿ.

ನೀವು ಖರೀದಿ ಮಾಡುವ ಗ್ಲುಕೊಮೀಟರ್ ಬೇರೆ ಬೇರೆ ತಾಪಮಾನಗಳಲ್ಲಿ ಕೆಲಸ ಮಾಡುವಂತಿರಬೇಕು. ಇದರಿಂದ ಪ್ರವಾಸದ ಸಂದರ್ಭಗಳಲ್ಲಿ ರಕ್ತ ತಪಾಸಣೆಗೆ ತೊಂದರೆಯಾಗುವುದಿಲ್ಲ.

ಹೊಂದಿಸಬಹುದಾದ ಫಾಂಟ್ ಗಾತ್ರ ಮತ್ತು ಬ್ಯಾಕ್‌ಲೈಟ್ ಹಾಗೂ ಇಲ್ಯುಮಿನೇಟೆಡ್ ಟೆಸ್ಟ್ ಸ್ಟ್ರಿಪ್ ಇದ್ದರೆ ಸೂಕ್ತವಾದ ಬೆಳಕು ಇಲ್ಲದ ಕಡೆಗಳಲ್ಲೂ ಗ್ಲುಕೊಮೀಟರ್‌ನ್ನು ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News