ಗುಜರಾತ್ ಮುಖ್ಯ ಮಂತ್ರಿ ಪಟ್ಟ ಉಳಿಸಿಕೊಂಡ ರೂಪಾನಿ
ಗಾಂಧಿನಗರ್, ಡಿ.22: ಗುಜರಾತ್ ಚುನಾವಣೆಯ ಫಲಿತಾಂಶ ಹೊರಬಂದು ವಾರ ಕಳೆಯುತ್ತಾ ಬಂದರೂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಗೊಂದಲದಲ್ಲಿದ್ದ ಬಿಜೆಪಿ ಕೊನೆಯದಾಗಿ ಹಾಲಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರನ್ನೇ ಆ ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸಿದೆ. ನಿತೀನ್ ಪಟೇಲ್ ಅವರು ಉಪಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶುಕ್ರವಾರದಂದು ಪಕ್ಷದ ಶಾಸಕರ ಜೊತೆ ಸಮಾಲೋಚನೆ ನಡೆಸಿದ ನಂತರ ಪಕ್ಷದ ಅಧ್ಯಕ್ಷ ಅಮಿತ್ ಶಾ, ವಿಜಯ್ ರೂಪಾನಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದರು. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳನ್ನು ಗಳಿಸಲೂ ವಿಫಲವಾಗಿರುವ ಹಿನ್ನೆಲೆಯಲ್ಲಿ ಪಕ್ಷದೊಳಗೆ ರೂಪಾನಿ ವಿರುದ್ಧ ಅಸಮಾಧಾನ ಉಂಟಾಗಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಶುದ್ಧ ಚರಿತ್ರೆ ಹಾಗೂ ಸೌಮ್ಯ ಸ್ವಭಾವದ ರೂಪಾನಿಯನ್ನು ಎಲ್ಲಾ ಶಾಸಕರು ಅವಿರೋಧವಾಗಿ ಆರಿಸಿರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
99 ಶಾಸಕ ಬಲದ ಬಿಜೆಪಿಗೆ ಲೂನಾವಾಡದ ಸ್ವತಂತ್ರ ಶಾಸಕ ರತನ್‌ಸಿನ್ಹಾ ರಾಥೋಡ್ ಬೆಂಬಲ ಸೂಚಿಸುವ ಮೂಲಕ ಈ ಸಂಖ್ಯೆ ನೂರಕ್ಕೆ ತಲುಪಿದೆ. ಕಳೆದ ಚುನಾವಣೆಯಲ್ಲಿ 115 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 99 ಸ್ಥಾನ ಗಳಿಸಲಷ್ಟೇ ಶಕ್ತವಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್ 80 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ತೀವ್ರ ಪೈಪೋಟಿ ನೀಡಿತ್ತು.
ವಿಜಯ್ ರೂಪಾನಿಯನ್ನು ಮುಖ್ಯಮಂತ್ರಿಯಾಗಿ ಮರುಆಯ್ಕೆ ಮಾಡದಿದ್ದರೆ ಮಾಡದಿದ್ದರೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ಬಿಜೆಪಿ ಒಪ್ಪಿದಂತಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.