ನೇಪಾಳದ ಮೇಲೆ ಪ್ರಭಾವ ಕಳೆದುಕೊಳ್ಳುತ್ತಿರುವ ಭಾರತ

Update: 2017-12-23 14:44 GMT

ಕಠ್ಮಂಡು (ನೇಪಾಳ), ಡಿ. 23: ನೆರೆಯ ದೇಶ ನೇಪಾಳದ ಮೇಲೆ ಭಾರತ ನಿಧಾನವಾಗಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆಯೇ? ಇತ್ತೀಚೆಗೆ ಅಲ್ಲಿ ನಡೆದ ಚುನಾವಣೆಯ ಬಳಿಕವಂತೂ ಇದು ಸ್ಪಷ್ಟವಾಗಿದೆ.

ಚುನಾವಣೆಯಲ್ಲಿ ಸ್ಪಷ್ಟ ಭಾರತ ವಿರೋಧಿ ಧೋರಣೆಗಳನ್ನು ಹೊಂದಿರುವ ಎಡ ಪಕ್ಷಗಳು ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿವೆ. ಇದು ಭಾರತದ ಅಸ್ಥಿರ ನಿಲುವು, ತತ್ಕಾಲದ ನೀತಿ ನಿರೂಪಣೆ, ವಿವಿಧ ಅಧಿಕಾರ ಕೇಂದ್ರಗಳು, ಪರಸ್ಪರ ವಿರೋಧಾಭಾಸದ ಸಂದೇಶಗಳು ಮತ್ತು ಇಚ್ಛಾಶಕ್ತಿಯ ಕೊರತೆಗೆ ದಕ್ಕಿದ ಪ್ರತಿಫಲವಾಗಿದೆ.

 2015ರ ಕೊನೆಯಲ್ಲಿ, ನೇಪಾಳ ನೂತನ ಸಂವಿಧಾನವನ್ನು ಜಾರಿಗೊಳಿಸಿದ ಬಳಿಕ ದೇಶದ ದಕ್ಷಿಣದ ಬಯಲುಸೀಮೆಯ ಮದೇಸಿ ಜನರು ತಮಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಬೇಕೆಂದು ಒತ್ತಾಯಿಸಿ ಪ್ರತಿಭಟನೆಗಿಳಿದರು. ನೂತನ ಸಂವಿಧಾನವು ಅತ್ಯಂತ ಅಸಮಾನತೆಯ ರಾಜಕೀಯ ವ್ಯವಸ್ಥೆಯೊಂದನ್ನು ನಿರ್ಮಿಸುವುದಾಗಿ ಅವರು ಭಾವಿಸಿದ್ದರು. ಭಾರತದ ರಾಜತಾಂತ್ರಿಕರೊಬ್ಬರು ಆಗ ಮದೇಸಿ ಪ್ರತಿನಿಧಿಯೊಬ್ಬರಿಗೆ ಹೀಗೆ ಹೇಳಿದ್ದರು: ‘‘ನೀವು ಯಾಕೆ ನಿಮ್ಮದೇ ಸಂವಿಧಾನವನ್ನು ಜಾರಿಗೊಳಿಸಬಾರದು? ಕಠ್ಮಂಡು ಪಾಠ ಕಲಿಯುವಂತೆ ಮಾಡುವ ಏಕೈಕ ವಿಧಾನ ಅದು. ನಾವು ನಿಮ್ಮೊಂದಿಗಿದ್ದೇವೆ’’.

ಅದಾದ ಒಂದೂವರೆ ವರ್ಷದ ಬಳಿಕ, ಅಂದರೆ 2017ರ ಮಧ್ಯ ಭಾಗದಲ್ಲಿ ನೇಪಾಳದಲ್ಲಿ ಸ್ಥಳೀಯ ಚುನಾವಣೆ ನಡೆಯಲು ಸಿದ್ಧತೆ ನಡೆಯುತ್ತಿತ್ತು. ಸಂವಿಧಾನ ಸುಧಾರಣೆಗೆ ಕಾಯುತ್ತಿದ್ದ ಮದೇಸಿ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಳ್ಳಲು ಬಯಸಲಿಲ್ಲ. ಹಾಗೆ ಮಾಡುವುದೆಂದರೆ ನೂತನ ಸಂವಿಧಾನವನ್ನು ಅನುಮೋದಿಸಿದಂತೆ ಆಗುತ್ತಿತ್ತು. ಆಗ ಪ್ರಮುಖ ಭಾರತೀಯ ರಾಜತಾಂತ್ರಿಕರೊಬ್ಬರು ಅದೇ ಮದೇಸಿ ಪ್ರತಿನಿಧಿಗೆ ಹೀಗೆ ಹೇಳಿದರು: ‘‘ಮದೇಸಿಗಳು ಈಗ ನಮಗೆ ಹೊರೆಯಾಗಿದ್ದಾರೆ. ನೀವು ಕಠ್ಮಂಡುವಿನ ಮುಖ್ಯ ವಾಹಿನಿಗೆ ಶರಣಾಗಬೇಕು. ಅದು ‘ದ್ವಿತೀಯ ದರ್ಜೆಯ ನಾಗರಿಕ’ರಾದರೂ ಸರಿಯೆ. ಭಾರತದ ಏಕೈಕ ಹಿತಾಸಕ್ತಿಯೆಂದರೆ, ಚೀನಾದತ್ತ ಹೋಗದಂತೆ ಅದನ್ನು ಖುಷಿಯಾಗಿಡುವುದು’’.

ಈ ಎರಡು ವಿರೋಧಾಭಾಸದ ಸಂದೇಶಗಳಲ್ಲಿ ಭಾರತದ ವಿಫಲ ‘ನೇಪಾಳ ರಾಜನೀತಿ’ ಅಡಗಿದೆ.

ಹೊಸ ರಾಜಕಾರಣಿಗಳಿಗೆ ಭಾವನಾತ್ಮಕ ಬಂಧನವಿಲ್ಲ

ನೇಪಾಳದ ನೂತನ ಪೀಳಿಗೆಯ ರಾಜಕಾರಣಿಗಳು ಭಾರತದೊಂದಿಗಿನ ಸಂಬಂಧದ ಬಗ್ಗೆ ಭಾವನಾತ್ಮಕ ಒಲವನ್ನು ಹೊಂದಿಲ್ಲ.

ಹಿಂದೆ ನೇಪಾಳದ ರಾಜಕೀಯದ ಮೇಲೆ ಭಾರತ ಏಕಸ್ವಾಮ್ಯ ಹೊಂದಿತ್ತು. ಈಗ ನೇಪಾಳದ ಎಡ ಮೈತ್ರಿಕೂಟವನ್ನು ಚೀನಾ ಪ್ರಬಲವಾಗಿ ಬೆಂಬಲಿಸುತ್ತಿರುವುದರಿಂದ ಆ ಅನುಕೂಲವನ್ನು ಭಾರತ ಕಳೆದುಕೊಂಡಿದೆ.

ನೇಪಾಳದಲ್ಲಿ ಭಾರತದ ಸ್ಥಾನವನ್ನು ತುಂಬಲು ಚೀನಾ ತುದಿಗಾಲಲ್ಲಿ ನಿಂತಿದೆ.

ತಡ ನಿರ್ಧಾರ ಪರಿಣಾಮ ಬೀರಲಿಲ್ಲ

ನೇಪಾಳದ ನೂತನ ಸಂವಿಧಾನದ ವಿಷಯದಲ್ಲಿ ಭಾರತ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿಲ್ಲ. ಒಂದು ಹಂತದಲ್ಲಿ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವೊಂದನ್ನು ರಚಿಸಿ ಎಂಬುದಾಗಿ ಭಾರತ ನೇಪಾಳಕ್ಕೆ ಸಲಹೆ ನೀಡಿತು. ಸಲಹೆಯೇನೋ ಸರಿಯೆ. ಆದರೆ, ಅದನ್ನು ತುಂಬಾ ತಡವಾಗಿ ನೀಡಲಾಯಿತು.

ಸರ್ವರನ್ನು ಒಳಗೊಂಡ ಸಂವಿಧಾನ ಯಾಕೆ ಬೇಕು ಎಂಬುದನ್ನು ನೇಪಾಳಕ್ಕೆ ಮನವರಿಕೆ ಮಾಡಲು ಭಾರತ ನೇಪಾಳದ ರಾಜಕೀಯ ಪಕ್ಷಗಳ ಮೇಲೆ ಇರುವ ಪ್ರಭಾವವನ್ನೂ ಬಳಸಿಕೊಳ್ಳಲಿಲ್ಲ ಹಾಗೂ ಭಾರತೀಯ ರಾಜಕೀಯ ಅಭಿಪ್ರಾಯವನ್ನೂ ಸರಿಯಾಗಿ ರೂಪಿಸಲಿಲ್ಲ. ನೇಪಾಳದ ಪರ್ವತ ಪ್ರದೇಶಗಳ ರಾಜಕೀಯ ಮುಖಂಡರು ಸಂವಿಧಾನವನ್ನು ಅಂಗೀಕರಿಸಿಯೇ ಬಿಟ್ಟರು. ಭಾರತ ಹಿನ್ನಡೆ ಅನುಭವಿಸಿತು.

ಯಶಸ್ವಿಯಾಗದ ‘ದಿಗ್ಬಂಧನ’

ಸಂವಿಧಾನವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಕಠ್ಮಂಡು ಮೇಲೆ ಒತ್ತಡ ಹೇರಲು ಆ ದೇಶಕ್ಕೆ ಭಾರತದ ಮೂಲಕ ಹೋಗುವ ವಸ್ತುಗಳ ಸಾಗಾಟಕ್ಕೆ ನಿರ್ಬಂಧ ಹೇರಲಾಯಿತು. ಈ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡ ಅಂದಿನ ಪ್ರಧಾನಿ ಕೆ.ಪಿ. ಒಲಿ, ನೇಪಾಳಿಗರಲ್ಲಿ ಅತಿ ರಾಷ್ಟ್ರೀಯತೆಯನ್ನು ತುಂಬಿಸಿದರು.

ಭಾರತದ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಟೀಕೆಗಳು ಕೇಳಿಬಂದವು. ಈ ಹಿನೆಲೆಯಲ್ಲಿ, ತನ್ನ ಉದ್ದೇಶ ಸಂಪೂರ್ಣವಾಗಿ ಈಡೇರದಿದ್ದರೂ ಭಾರತ ವಸ್ತುಗಳ ಸಾಗಾಟದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತು. ಆಗ ಕಠ್ಮಂಡುವಿನ ರಾಜಕಾರಣಿಗಳು ವಿಜಯೋತ್ಸವ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News