×
Ad

ಇನ್ನು ನಮ್ಮ ಪರ ಮತ ಚಲಾಯಿಸುವ ಸರದಿ ನಿಮ್ಮದು

Update: 2017-12-23 23:35 IST

ಹೊಸದಿಲ್ಲಿ, ಡಿ.23: ಜೆರುಸಲೇಂ ನಗರವನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿರುವ ಅಮೆರಿಕದ ನಿರ್ಧಾರದ ವಿರುದ್ಧ ಮತ ಚಲಾಯಿಸಿದ ಭಾರತ ಸರಕಾರವನ್ನು ಅಭಿನಂದಿಸಿದ ಸಂಸದರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ ಪ್ರತಿಕ್ರಿಯೆ ಗಮನಾರ್ಹವಾಗಿದೆ.

   ಜೆರುಸಲೇಂ ನಗರವನ್ನು ಇಸ್ರೇಲ್ ರಾಜಧಾನಿ ಎಂದು ಅಮೆರಿಕ ಘೋಷಿಸಿದ್ದ ವಿರುದ್ಧ ಮತ ಚಲಾಯಿಸಿದ್ದಕ್ಕೆ ಭಾರತ ಸರಕಾರಕ್ಕೆ ಅಭಿನಂದನೆಗಳು ಎಂದು ಸಂಸದ, ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್(ಎಐಯುಡಿಎಫ್) ಮುಖಂಡ ಎಂ.ಬದ್ರುದ್ದೀನ್ ಅಜ್ಮಲ್ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ಗೆ ಟ್ವಿಟರ್ ಸಂದೇಶ ಕಳುಹಿಸಿದರು. ಇದಕ್ಕೆ ಪ್ರತಿಯಾಗಿ ‘ಧನ್ಯವಾದ ಅಜ್ಮಲ್ ಸಾಹೇಬರೇ. ಈಗ ನಮ್ಮ ಪರ ಮತ ಚಲಾಯಿಸುವ ಸರದಿ ನಿಮ್ಮದು’ ಎಂದು ಸುಷ್ಮಾ ಟ್ವಿಟರ್‌ನಲ್ಲಿ ಮರುಸಂದೇಶ ಕಳುಹಿಸಿದ್ದಾರೆ.

 ಇದಕ್ಕೆ ಮರುಉತ್ತರ ನೀಡಿರುವ ಅಜ್ಮಲ್, “ಮೇಡಂ, ನಾವು ಯಾವಾಗಲೂ ಭಾರತಕ್ಕೇ ಮತ ಚಲಾಯಿಸುವವರು. ಯಾವತ್ತು ಬಿಜೆಪಿ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರನ್ನು ಬೇರ್ಪಡಿಸುವುದಿಲ್ಲವೋ ಆ ದಿನದಿಂದ ನಮ್ಮ ಸಮುದಾಯದ ಮತ ನಿಮಗೆ ಲಭಿಸುತ್ತದೆ” ಎಂದಿದ್ದಾರೆ.

 “ನಮ್ಮ ಸಹಕಾರ ಬಯಸಿದ್ದಕ್ಕೆ ಬಿಜೆಪಿಗೆ ಆಭಾರಿಯಾಗಿದ್ದೇನೆ. ಆದರೆ ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಹಾಲಿ ಪರಿಸ್ಥಿತಿ ಕೋಮುಕೇಂದ್ರೀಕೃತವಾಗಿದ್ದು, ಇಂತಹ ಸರಕಾರದ ಜೊತೆ ಗುರುತಿಸಿಕೊಳ್ಳಲು ನಮ್ಮ ಪಕ್ಷ ಬಯಸುವುದಿಲ್ಲ” ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News