ಉತ್ತರ ಪ್ರದೇಶ: ಗರ್ಭಿಣಿಯರ ಆತಂಕ

Update: 2017-12-25 06:12 GMT

ಏನೋ ಗಂಭೀರವಾದ ಒಂದು ಘಟನೆ ನಡೆದಾಗಲಷ್ಟೇ ಈ ಸಮಸ್ಯೆ ಬಗ್ಗೆ ಸರಕಾರ ಗಮನ ಹರಿಸುತ್ತದೆ: ಕಳೆದ ಆಗಸ್ಟ್‌ನಲ್ಲಿ ಗೋರಖ್‌ಪುರದ ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ 30 ಮಕ್ಕಳು ಆಮ್ಲಜನಕ ಪೂರೈಕೆಯಲ್ಲಾದ ವ್ಯತ್ಯಯದಿಂದ ಮೃಪಟ್ಟಾಗ ಸರಕಾರ ಕಣ್ತೆರೆಯಿತು.

ಸುಮನ್‌ದೇವಿ, ಮಂಚದಿಂದ ಮೇಲೇಳಲು ಪ್ರಯತ್ನಿಸಿದಳು. ಆದರೆ ಕುಸಿದು ಬಿದ್ದಳು. ಅವಳ ಸೊಸೆಯಂದಿರು ಕೆಲಸದಲ್ಲಿ ಮುಳುಗಿದ್ದರು; ಮಕ್ಕಳು ಆಟವಾಡುತ್ತಿದ್ದರು. 38ರ ಹರೆಯದ ಆಕೆ 8 ಮಕ್ಕಳ ತಾಯಿ ಮತ್ತು ಓರ್ವ ಅಜ್ಜಿ. ಸುಮನ್ ದೇವಿ ಹನ್ನೊಂದನೆಯ ಬಾರಿಗೆ ಗರ್ಭಿಣಿಯಾಗಿದ್ದಾಳೆ.

ಆಕೆ ವಾಸಿಸುತ್ತಿರುವ ಉತ್ತರ ಪ್ರದೇಶದ ಬಹರೈಕ್ ಜಿಲ್ಲೆಯ ಸಲಾರ್‌ಪುರ್ ಹಳ್ಳಿಯಲ್ಲಿ ಉಷಾದೇವಿ ಓರ್ವ ಆಶಾಕಾರ್ಯಕರ್ತೆ. ಒಬ್ಬಳು ಆಶಾಕಾರ್ಯಕರ್ತೆಯಾಗಿ ಗರ್ಭಿಣಿಯರ ಆರೋಗ್ಯ ಉಸ್ತುವಾರಿ, ಅವರಿಗೆ ಉಚಿತ ಔಷಧಿಗಳನ್ನು ನೀಡುವುದು, ಅತ್ಯಂತ ಸಮೀಪದ ಆಸ್ಪತ್ರೆಯಲ್ಲಿ ಅವರು ನಾಲ್ಕು ಬಾರಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ನೋಡಿಕೊಳ್ಳುವುದು ಮತ್ತು ಉಚಿತ ಹೆರಿಗೆಗಾಗಿ ಅಲ್ಲಿಗೆ ಕರೆದುಕೊಂಡು ಹೋಗುವುದು ಇಷ್ಟೆಲ್ಲಾ ಅವಳ ಜವಾಬ್ದಾರಿಯಾಗಿದೆ.

ಆದರೆ ಉಷಾದೇವಿಗೆ ಸುಮನ್‌ದೇವಿ ಗರ್ಭಿಣಿ ಎಂದು ತಿಳಿದಿರಲಿಲ್ಲ. ಹಳ್ಳಿಯಲ್ಲಿ ಗರ್ಭಿಣಿಯರ ಹೆಸರುಗಳಿರುವ ನೋಂದಣಿ ಪುಸ್ತಕ ಎಲ್ಲೋ ಕಳೆದು ಹೋಗಿದೆ; ಆಕೆ ಗರ್ಭಿಣಿ ಎಂದು ತಿಳಿದಿದ್ದರೆ ತಾನು ಆಕೆಗೆ ರಕ್ತಹೀನತೆಗೆ ಉಚಿತ ಮಾತ್ರೆಗಳನ್ನು ನೀಡುತ್ತಿದ್ದೆ ಎನ್ನುತ್ತಾಳೆ ಅವಳು.

ಆದರೆ ಸುಮನ್‌ದೇವಿ ತನ್ನ ಎಲ್ಲ ಹೆರಿಗೆಗಳಲ್ಲೂ ಎಲ್ಲಿಯೂ ಎಂದೂ ಒಬ್ಬ ವೈದ್ಯರನ್ನು ಕಂಡಿಲ್ಲ: ಅವಳ ಮನೆಗೆ ಅತ್ಯಂತ ಸಮೀಪದಲ್ಲಿರುವ ಆಸ್ಪತ್ರೆ 35ಕಿ.ಮೀ. ದೂರದಲ್ಲಿದೆ. ಗರ್ಭಿಣಿಯರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಬಳಿಕ ಮರಳಿ ಮನೆಗೆ ಕರೆತರಲು ಯುಪಿ ಸರಕಾರ ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತದೆಂದು ಅವಳಿಗೆ ಗೊತ್ತಿಲ್ಲ. ಆ್ಯಂಬುಲೆನ್ಸ್ ಸಹಾಯವಾಣಿಗೆ ಕರೆಮಾಡಲು ಅವಳ ಬಳಿ ಮೊಬೈಲ್‌ಫೋನ್ ಕೂಡ ಇರಲಿಲ್ಲ. ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ (ಬಹರೈಕ್ ಮತ್ತು ಬಲರಾಮ್‌ಪುರ್ ಜಿಲ್ಲೆಗಳಲ್ಲಿ) ವೈದ್ಯಕೀಯ ಸೇವೆಗಳ ಕುರಿತಾದ ತಿಳುವಳಿಕೆಯ ಇಂತಹ ಕೊರತೆ ತೀರಾ ಸಾಮಾನ್ಯ. ಪರಿಣಾಮವಾಗಿ, ಹೆರಿಗೆಯ ಬಳಿಕ ಸಾಯುವ ಮಹಿಳೆಯರ ಮತ್ತು ಶಿಶುಮರಣಗಳ ಅನುಪಾತ ಆ ಜಿಲ್ಲೆಗಳಲ್ಲಿ ತುಂಬ ಹೆಚ್ಚು ಇದೆ. ಭಾರತದಲ್ಲಿ ಪ್ರತೀ ಒಂದು ಲಕ್ಷ ಮಕ್ಕಳ ಜನನದಲ್ಲಿ 167 ಮಹಿಳೆಯರು ಹೆರಿಗೆಯ ವೇಳೆ ಮೃತಪಡುತ್ತಾರೆ. ಯುಪಿಯ ದೇವಿ ಪಟಾನ್‌ಮಂಡಲ್‌ದಲ್ಲಿ ಒಂದು ಲಕ್ಷ ಶಿಶುಗಳ ಜನನಕ್ಕೆ ತಾಯಂದಿರ ಮರಣದ ದಾಮಾಶಯ 366 ಇದೆ. 2015-2016ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಜನಿಸುವ ಪ್ರತೀ 1000 ಶಿಶುಗಳಲ್ಲಿ 41 ಶಿಶುಗಳು ಜನಿಸಿದ ಒಂದು ವರ್ಷದೊಳಗಾಗಿ ಸಾಯುತ್ತವೆ. ಆದರೆ ಉತ್ತರ ಪ್ರದೇಶದಲ್ಲಿ ಜನಿಸಿದ ಒಂದು ವರ್ಷದೊಳಗಾಗಿ 64 ಶಿಶುಗಳು ಸಾಯುತ್ತವೆ. ಇದು ದೇಶದಲ್ಲೇ ಗರಿಷ್ಠ ಶಿಶು ಮರಣ ನಿಷ್ಪತ್ತಿ.

ಆದರೆ, ಏನೋ ಗಂಭೀರವಾದ ಒಂದು ಘಟನೆ ನಡೆದಾಗಲಷ್ಟೇ ಈ ಸಮಸ್ಯೆ ಬಗ್ಗೆ ಸರಕಾರ ಗಮನ ಹರಿಸುತ್ತದೆ: ಕಳೆದ ಆಗಸ್ಟ್‌ನಲ್ಲಿ ಗೋರಖ್‌ಪುರದ ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ 30 ಮಕ್ಕಳು ಆಮ್ಲಜನಕ ಪೂರೈಕೆಯಲ್ಲಾದ ವ್ಯತ್ಯಯದಿಂದ ಮೃಪಟ್ಟಾಗ ಸರಕಾರ ಕಣ್ತೆರೆಯಿತು.

ಮಕ್ಕಳು ಮತ್ತು ಸಾವುಗಳು

ಭಾರತದ ಆರೋಗ್ಯ ಸೇವಾ ವ್ಯವಸ್ಥೆಯ ಒಂದು ದೊಡ್ಡ ದೌರ್ಬಲ್ಯವೆಂದರೆ, ಅದು ಹಲವು ರೀತಿಯ ವೈದ್ಯಕೀಯ ಸೇವೆಯನ್ನೊದಗಿಸಲು ಒಂದೇ ವ್ಯಕ್ತಿಯನ್ನು, ನೌಕರನನ್ನು ಅವಲಂಬಿಸಿರುವುದು. ಉದಾಹರಣೆಗೆ, ಓರ್ವ ಆಶಾಕಾರ್ಯಕರ್ತೆಯಾಗಿರುವ ಉಷಾದೇವಿ ಗರ್ಭಿಣಿಯ ನೋಂದಣಿ, ಅವರ ತೆರಿಗೆ ಪೂರ್ವ ಉಸ್ತುವಾರಿ, ನವಜಾತ ಶಿಶುಗಳ ಆರೋಗ್ಯದ ಮೇಲೆ ನಿಗಾಯಿಡುವುದು, ಗ್ರಾಮದ ಪುರುಷರಿಗೆ ಕಾಂಡೋಮ್‌ಗಳನ್ನು ಮತ್ತು ಮಹಿಳೆಯರಿಗೆ ಗರ್ಭನಿರೋಧಕ ಗುಳಿಗೆಗಳನ್ನು ಪೂರೈಸುವುದು ಇತ್ಯಾದಿ ಹತ್ತು ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ವಿದೇಶಗಳಲ್ಲಿ ನಿರ್ದಿಷ್ಟ ಸೇವೆಗಳನ್ನು ಪೂರೈಸಲು ತರಬೇತಿ ಪಡೆದ ನೌಕರರಿರುತ್ತಾರೆ. ಆದರೆ ಭಾರತದಲ್ಲಿ ನಾವು, ಆಶಾಕಾರ್ಯಕರ್ತೆಯರು ಎಲ್ಲ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುತ್ತೇವೆ.

 ಆಶಾಕಾರ್ಯಕರ್ತೆಯರ ಜವಾಬ್ದಾರಿಗಳು ಹಲವಾದರೂ ಅವರಿಗೆ ಸಿಗುವ ವೇತನ ತೀರ ಕಡಿಮೆ. ಕೆಲವು ರಾಜ್ಯಗಳು ಅವರಿಗೆ ನಿರ್ದಿಷ್ಟ ಮೊತ್ತದ ನಾಮ್‌ಕೆ ವಾಸ್ತೆ ವೇತನಗಳನ್ನು ನೀಡುತ್ತವಾದರೂ, ಅನೇಕ ರಾಜ್ಯಗಳು ಅವರು ನೀಡುವ ಸೇವೆ ಮತ್ತು ಆರೈಕೆ ಮಾಡುವ ಗರ್ಭಿಣಿಯರ ಸಂಖ್ಯೆಗಳನ್ನಾಧರಿಸಿ ಗೌರವಧನ ನೀಡುತ್ತವೆೆ. ಯುಪಿ ಇಂತಹ ಒಂದು ರಾಜ್ಯ. ಉದಾಹರಣೆಗೆ, ಅಲ್ಲಿ ಓರ್ವ ಆಶಾಕಾರ್ಯಕರ್ತೆಯು ಗರ್ಭಿಣಿಯೊಬ್ಬಳು ಅವಳು ತೆಗೆದುಕೊಳ್ಳಬೇಕಾದ ಎಲ್ಲ ಔಷಧಿಗಳನ್ನು ತೆಗೆದುಕೊಳ್ಳುವಂತೆ, ಪ್ರಸವಪೂರ್ವದಲ್ಲಿ ಆಕೆ ನಾಲ್ಕು ಬಾರಿ ತಪಾಸಣೆ ಮಾಡಿಕೊಳ್ಳುವಂತೆ ಮತ್ತು ಹೆರಿಗೆಗೆ ಒಂದು ಆಸ್ಪತ್ರೆಗೆ ಬರುವಂತೆ ನೋಡಿಕೊಂಡಲ್ಲಿ ಆಕೆ 600ರೂ. ಪ್ರತಿಫಲ ಪಡೆಯುತ್ತಾಳೆ. ಮಹಿಳೆಯೊಬ್ಬಳನ್ನು ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಪ್ಪಿಸಿದರೆ ರೂ.300, ಮತ್ತು ಪುರುಷನೊಬ್ಬನನ್ನು ಒಪ್ಪಿಸಿದರೆ ಆಕೆೆ ರೂ.400 ಪ್ರೋತ್ಸಾಹ ಧನ ಪಡೆಯುತ್ತಾಳೆ. ಉಷಾದೇವಿ ತಿಂಗಳೊಂದರ ಸರಾಸರಿ 500 ರೂ. ಗಳಿಸುತ್ತಾರೆ. ಕೆಲವು ತಿಂಗಳುಗಳಲ್ಲಿ ಅವಳ ಸಂಪಾದನೆ ಶೂನ್ಯ.

 ಉತ್ತರ ಪ್ರದೇಶದಲ್ಲಿ ಗರ್ಭಿಣಿಯರನ್ನು ಮತ್ತು ನವಜಾತ ಶಿಶುಗಳನ್ನು ಸಾಗಿಸಲು 75 ಜಿಲ್ಲೆಗಳಲ್ಲಿ 2,270 ಆ್ಯಂಬುಲೆನ್ಸ್‌ಗಳಿವೆ. ಈ ಸೇವೆ ಪಡೆಯ ಬಯಸುವ ಮಹಿಳೆಯರು ದೂರವಾಣಿ ಸಂಖ್ಯೆ 102ಕ್ಕೆ ಕರೆ ಮಾಡಬೇಕು. ಹಾಗೆಯೇ, ಇತರ ತುರ್ತು ವೈದ್ಯಕೀಯ ಸೇವೆ ಒದಗಿಸಲು 1,488 ಆ್ಯಂಬುಲೆನ್ಸ್‌ಗಳಿವೆ. ಈ ಸೇವೆ ಪಡೆಯಲು ಸಹಾಯವಾಣಿ ಸಂಖ್ಯೆ 108ಕ್ಕೆ ಕರೆಮಾಡಬೇಕು. ಆದರೆ, ಒಮ್ಮೆಮ್ಮೆ ಅತಿಯಾದ ಕರೆಗಳು ಇರುವುದರಿಂದ ಅಥವಾ ಕರೆಮಾಡಲು ನೆಟ್‌ವರ್ಕ್ ಸಿಗದಿರುವುದರಿಂದ ಗರ್ಭಿಣಿಯರಿಗೆ ಆ್ಯಂಬುಲೆನ್ಸ್ ಲಭ್ಯವಾಗುವುದಿಲ್ಲ, ಎನ್ನುತ್ತಾರೆ ಆ್ಯಂಬುಲೆನ್ಸ್ ಸೇವಾ ಮುಖ್ಯಸ್ಥ ಡಾ. ಪಿ ಕೆ ಶ್ರೀವಾಸ್ತವ್.

ಒಂದು ವೇಳೆ ಆ್ಯಂಬುಲೆನ್ಸ್ ಸೇವೆ ದೊರೆತರೂ, ಆಸ್ಪತ್ರೆಯಲ್ಲಿ ಇರುವ ಭ್ರಷ್ಟಾಚಾರ ಮತ್ತಿತರ ಸಮಸ್ಯೆಗಳಿಂದಾಗಿ ಹಲವು ಮಹಿಳೆಯರು ತಮ್ಮ ಮನೆಯಲ್ಲೇ ಹೆರಿಗೆ ಾಡಿಸಿಕೊಳ್ಳಲು ಆದ್ಯತೆ ನೀಡುತ್ತಾರೆ.

ಸಿಗಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯ ಸಿಗುವ ಗ್ಯಾರಂಟಿ ಇಲ್ಲವಾದ್ದರಿಂದ, ಸುಮನ್‌ದೇವಿ ತನ್ನ ಹನ್ನೊಂದನೆಯ ಹೆರಿಗೆಯಲ್ಲಿ ಬದುಕಿ ಉಳಿಯುತ್ತಾಳೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

Writer - ಪ್ರಿಯಾಂಕ ವೋರಾ

contributor

Editor - ಪ್ರಿಯಾಂಕ ವೋರಾ

contributor

Similar News

ಜಗದಗಲ
ಜಗ ದಗಲ