ಹೊಸ ದಾಖಲೆಯೊಂದಿಗೆ ಚಿನ್ನ ಗೆದ್ದ ಸ್ವಪ್ನಿಲ್

Update: 2017-12-25 18:28 GMT

ತಿರುವನಂತಪುರ, ಡಿ.25: ಉದಯೋನ್ಮುಖ ಶೂಟರ್ ಸ್ವಪ್ನಿಲ್ ಕಸಾಲೆ(22ವರ್ಷ) 61ನೇ ಆವೃತ್ತಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 50 ಮೀ. ರೈಫಲ್ ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದಾರೆ.

 ಕ್ರಿಸ್‌ಮಸ್ ದಿನದಂದು ನಡೆದ ಪಂದ್ಯದಲ್ಲಿ ಮಾಜಿ ಏಷ್ಯನ್ ಜೂನಿಯರ್ ಚಾಂಪಿಯನ್ ಸ್ವಪ್ನಿಲ್ ಪ್ರಮುಖ ಶೂಟರ್‌ಗಳಾದ ಚೈನಾ ಸಿಂಗ್, ಸತ್ಯೇಂದ್ರ ಸಿಂಗ್, ಅಖಿಲ್ ಶೆರೊನ್ ಹಾಗೂ ಸಂಜೀವ್ ರಾಜ್‌ಪೂತ್‌ರನ್ನು ಸೋಲಿಸಿ ಚಿನ್ನ ಜಯಿಸಿದರು. 2015ರಲ್ಲಿ ಇದೇ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನ ಜಯಿಸಿದ್ದ ಸ್ವಪ್ನಿಲ್ ಕಳೆದ ವರ್ಷ ಪುಣೆಯಲ್ಲಿ ನಡೆದ ಟೂರ್ನಿಯಲ್ಲಿ ಸೋತಿದ್ದರು. ಫೈನಲ್ಸ್ ನಲ್ಲಿ 457.0 ಅಂಕ ಗಳಿಸಿದ ಸ್ವಪ್ನಿಲ್ ಚಿನ್ನ ಜಯಿಸಿದರು. ಈ ಮೂಲಕ 2013ರಲ್ಲಿ ಸಂಜೀವ್ ನಿರ್ಮಿಸಿದ್ದ ಹಳೆಯ ದಾಖಲೆಯನ್ನು(456.1) ಅಳಿಸಿಹಾಕಿದರು. ಆರ್ಮಿಯ ಶೂಟರ್ ಸತ್ಯೇಂದ್ರ(452.8) ಹಾಗೂ ಚೈನಾ(439.6)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಅರ್ಹತಾ ಸುತ್ತಿನಲ್ಲಿ 1163 ಅಂಕ ಗಳಿಸಿದ ಕೊಲ್ಲಾಪುರದ ಸ್ವಪ್ನಿಲ್ 4ನೇ ಸ್ಥಾನ ಪಡೆದು ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News