ಧೋನಿ ದೈಹಿಕ ಕ್ಷಮತೆಗೆ ರವಿ ಶಾಸ್ತ್ರಿ ಶ್ಲಾಘನೆ

Update: 2017-12-25 18:33 GMT

ಹೊಸದಿಲ್ಲಿ, ಡಿ.25: ಮಾಜಿ ನಾಯಕ ಎಂ.ಎಸ್. ಧೋನಿ ತನಗಿಂತ 10 ವರ್ಷ ಕಿರಿಯ ಆಟಗಾರಗಿಂತಲೂ ಹೆಚ್ಚು ಕ್ಷಮತೆ ಹಾಗೂ ಚುರುಕಾಗಿದ್ದಾರೆ ಎಂದು ಭಾರತದ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

 36ರ ಹರೆಯದ ಧೋನಿಯ ಬ್ಯಾಟಿಂಗ್‌ನ ಬಗ್ಗೆ ಇತ್ತೀಚೆಗೆ ಟೀಕೆ ಕೇಳಿಬಂದಿತ್ತು. ಶ್ರೀಲಂಕಾ ವಿರುದ್ಧ ರವಿವಾರ ಕೊನೆಗೊಂಡ ಸೀಮಿತ ಓವರ್ ಕ್ರಿಕೆಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಧೋನಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

 ‘‘ನಾನು ಕಳೆದ 30-40 ವರ್ಷಗಳಿಂದ ಕ್ರೀಡೆಯನ್ನು ನೋಡುತ್ತಿರುವೆ. ವಿರಾಟ್ ಕಳೆದ ಒಂದು ವರ್ಷದಿಂದ ಭಾರತ ತಂಡದ ನಾಯಕನಾಗಿದ್ದಾರೆ. ಧೋನಿ ಫಿಟ್‌ನೆಸ್ ವಿಷಯದಲ್ಲಿ 26 ವರ್ಷದ ಆಟಗಾರರಿಗಿಂತ ಉತ್ತಮವಾಗಿದ್ದಾರೆ’’ ಎಂದು ಶಾಸ್ತ್ರಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ವಿಕೆಟ್‌ಕೀಪಿಂಗ್‌ನಲ್ಲಿ ಧೋನಿಯನ್ನು ಮೀರಿಸುವವರು ಯಾರೂ ಇಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಇತ್ತೀಚೆಗೆ ಹೇಳಿದ್ದರು. ‘‘ಧೋನಿ ಈಗಲೂ ಟೀಮ್ ಇಂಡಿಯಾದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಶ್ರೇಷ್ಠ ಆಟಗಾರನಾಗಿದ್ದಾರೆ. ಅವರಲ್ಲಿ ನಾವು ನೋಡುತ್ತಿರುವ ಕೆಲವೊಂದು ಅಂಶ ಎಲ್ಲಿಯೂ ಕಾಣ ಸಿಗುತ್ತಿಲ್ಲ. ಅವರು ಇದೀಗ ಟೆಸ್ಟ್ ಕ್ರಿಕೆಟ್ ಆಡುತ್ತಿಲ್ಲ. ಹಾಗಾಗಿ 2019ರ ವಿಶ್ವಕಪ್ ತನಕ ಸಾಧ್ಯವಾದಷ್ಟು ಕ್ರಿಕೆಟ್ ಆಡಬೇಕು’’ ಎಂದು ಶಾಸ್ತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News