ಅತಿಯಾಗಿ ತಿಂದರೆ ಡ್ರೈ ಫ್ರುಟ್ಸ್ ಕೂಡ ಆರೋಗ್ಯವನ್ನು ಕೆಡಿಸುತ್ತದೆ

Update: 2017-12-26 10:25 GMT

ದೇಹತೂಕವನ್ನು ಇಳಿಸಿಕೊಳ್ಳಲು ನೀವು ಕಟ್ಟುನಿಟ್ಟಾದ ಪಥ್ಯವನ್ನು ಅನುಸರಿಸುತ್ತಿದ್ದರೆ ಮಧ್ಯೆ ಏನಾದರೂ ತಿನ್ನಬೇಕೆನಿಸಿದಾಗ ನಾರು, ಪಿಷ್ಟ ಮತ್ತು ಪ್ರೋಟಿನ್‌ಗಳಿಂದ ಸಮೃದ್ಧವಾಗಿರುವ ಸೀಮಿತ ಪ್ರಮಾಣದಲ್ಲಿ ಡ್ರೈಫ್ರುಟ್ಸ್ ಅಥವಾ ಒಣಹಣ್ಣುಗಳು ಪರಿಪೂರ್ಣ ಪರ್ಯಾಯವಾಗಿವೆ. ಆದರೆ ಕೆಲವರು ಸಿಕ್ಕಿಸಿಕ್ಕಿದಾಗೆಲ್ಲ ಡ್ರೈಫ್ರುಟ್ಸ್ ತಿನ್ನುತ್ತಿರುತ್ತಾರೆ. ಡ್ರೈ ಫ್ರುಟ್ಸ್ ಸೇವನೆ ಆರೋಗ್ಯಕ್ಕೇನೋ ಒಳ್ಳೆಯದೇ, ಆದರೆ ಅತಿಯಾಗಿ ತಿಂದರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಇಂತಹ ಕೆಲವು ದುಷ್ಪರಿಣಾಮಗಳ ಮಾಹಿತಿ ಇಲ್ಲಿದೆ...

ಹೈಪರ್‌ಕಲಮಿಯಾ ಅಥವಾ ರಕ್ತದಲ್ಲಿ ಅಧಿಕ ಪೊಟ್ಯಾಷಿಯಂ

ಡ್ರೈಫ್ರುಟ್ಸ್‌ನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದೆ. ಮಿತಿಮೀರಿ ಡ್ರೈಫ್ರುಟ್ಸ್ ತಿನ್ನುವುದರಿಂದ ರಕ್ತದ್ರವಗಳಲ್ಲಿ ಪೊಟ್ಯಾಷಿಯಂ ಮಟ್ಟವು ಅಗತ್ಯಕ್ಕಿಂತ ಹೆಚ್ಚಾಗುತ್ತದೆ. ಇದು ಮಧುಮೇಹ, ಮೂತ್ರಪಿಂಡಗಳ ಕಾರ್ಯ ನಿರ್ವಹಣೆಗೆ ವ್ಯತ್ಯಯದಿಂದ ರಕ್ತದಲ್ಲಿ ತ್ಯಾಜ್ಯಗಳ ಸಂಗ್ರಹ, ಹೃದಯ ಬಡಿತದಲ್ಲಿ ತೀವ್ರ ವ್ಯತ್ಯಾಸ ಮತ್ತು ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆ ಗಳಿಗೆ ಕಾರಣವಾಗಬಹುದು.

ಜೀರ್ಣ ಸಮಸ್ಯೆಗಳು

ಡ್ರೈಫ್ರುಟ್ಸ್‌ನಲ್ಲಿರುವ ಅಧಿಕ ನಾರು ಶರೀರದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಹೆಚ್ಚಿನ ವಾಯು ಉತ್ಪತ್ತಿ, ಮಲಬದ್ಧತೆ ಮತ್ತು ಕೆಲವೊಮ್ಮೆ ಅತಿಸಾರ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ದೇಹತೂಕದಲ್ಲಿ ಏರಿಕೆ

ಡ್ರೈಫ್ರುಟ್ಸ್ ರಸಭರಿತ ಹಣ್ಣುಗಳಿಗಿಂತ ಅಧಿಕ ಕ್ಯಾಲೊರಿಗಳನ್ನೊಳಗೊಂಡಿರುತ್ತವೆ. ಅತಿಯಾಗಿ ಡ್ರೈಫ್ರುಟ್ಸ್ ಸೇವನೆಗಿಂತ ಒಂದು ಕ್ಯಾಂಡಿ ತಿನ್ನುವುದು ಹೆಚ್ಚು ಆರೋಗ್ಯಕರ ಎನ್ನುತ್ತಾರೆ ಡಯಟಿಷಿಯನ್‌ಗಳು. ಅತಿಯಾದ ಕ್ಯಾಲೊರಿಗಳು ದೇಹದ ತೂಕವನ್ನು ್ಚೆಹೆಚ್ಚಿಸುವ ಜೊತೆಗೆ ಆಂತರಿಕ ಅನಾರೋಗ್ಯಕ್ಕೂ ಕಾರಣವಾಗುತ್ತವೆ.

ಸಂಸ್ಕರಿತ ಡ್ರೈಫ್ರುಟ್ಸ್

 ಒಣದ್ರಾಕ್ಷಿ, ಡ್ರೈ ಎಪ್ರಿಕೋಟ್‌ನಂತಹ ಡ್ರೈಫ್ರುಟ್ಸ್ ಮತ್ತು ಬಾದಾಮಿಗಳನ್ನು ಕೂಡ ಅವು ನೋಡಲು ಆಕರ್ಷಕವಾಗಿರುವಂತೆ ಸಂಸ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಇಂತಹ ಸಂಸ್ಕರಣೆಯಲ್ಲಿ ಸಲ್ಫೈಟ್ ಅನ್ನು ಒಳಗೊಂಡ ಪ್ರಿಜರ್ವೇಟಿವ್‌ಗಳನ್ನು ಬಳಸಲಾಗುತ್ತದೆ. ಆದರೆ ಸಲ್ಫೈಟ್ ಕೆರಳಿಸುವಿಕೆಯ ಗುಣವನ್ನು ಹೊಂದಿದ್ದು ಅಸ್ತಮಾ, ಚರ್ಮದ ಮೇಲೆ ದದ್ದುಗಳು ಮತ್ತು ಹೊಟ್ಟೆ ಕಿವಿಚುವಿಕೆಯಂತಹ ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನುಂಟು ಮಾಡುತ್ತದೆ. ಅಲ್ಲದೆ ಡ್ರೈಫ್ರುಟ್ಸ್ ಹೆಚ್ಚು ಸಿಹಿಯಾಗಿರುವಂತೆ ವಿವಿಧ ಸಿಹಿಕಾರಕಗಳ ಲೇಪನವನ್ನೂ ಹೊಂದಿರಬಹುದು. ಇವು ರಕ್ತದಲ್ಲಿ ದಿಢೀರ ಗ್ಲುಕೋಸ್ ಮಟ್ಟದ ಏರಿಕೆಗೆ ಕಾರಣವಾಗಿ ಜ್ಞಾಪಕ ಶಕ್ತಿಯ ನಷ್ಟ, ಮೂತ್ರಪಿಂಡಗಳಿಗೆ ಹಾನಿ ಅಥವಾ ಹೃದಯಸ್ತಂಭನ ದಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ ಸುದೀರ್ಘ ಕಾಲ ಸಿಹಿಲೇಪಿತ ಡ್ರೈಫ್ರುಟ್ಸ್ ಸೇವನೆ ವ್ಯಕ್ತಿಯಲ್ಲಿ ದಂತಕ್ಷಯಕ್ಕೆ ಕಾರಣವಾಗಿ ದಂತಕುಳಿಗಳು ಆಗಬಹುದು.

ಚರ್ಮ ಸಂಬಂಧಿ ಸಮಸ್ಯೆಗಳು

ಪ್ರೋಟಿನ್ ಮತ್ತು ಕೊಬ್ಬಿನಂಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಡ್ರೈಫ್ರುಟ್ಸ್ ಚರ್ಮದಲ್ಲಿಯ, ವಿಶೇಷವಾಗಿ ಮುಖದ ಮೇಲಿನ ತೈಲಗ್ರಂಥಿಗಳನ್ನು ಕ್ರಿಯಾಶೀಲ ಗೊಳಿಸುತ್ತವೆ ಮತ್ತು ಇದರಿಂದಾಗಿ ಮುಖದಲ್ಲಿ ಮೊಡವೆಗಳು ಏಳುವ ಸಾಧ್ಯತೆಗಳು ಹೆಚ್ಚು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಶರೀರದ ಉಷ್ಣತೆ ಏರಿಕೆ

ಡ್ರೈಫ್ರುಟ್ಸ್‌ನಲ್ಲಿ ಅಧಿಕ ಕ್ಯಾಲೊರಿಗಳಿರುವುದರಿಂದ ಅವು ಜೀರ್ಣಗೊಂಡಾಗ ಹೆಚ್ಚಿನ ಪ್ರಮಾಣದಲ್ಲಿ ಉಷ್ಣತೆಯನ್ನು ಉತ್ಪಾದಿಸುತ್ತವೆ. ಇದು ಶರೀರದಲ್ಲಿ ಚಯಾಪಚಯ ಕಿಣ್ವಗಳ ಕಾರ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News