‘ವಿಶೇಷ ಕ್ಯಾಲೆಂಡರ್’ ಮಹಿಮೆಯನ್ನು ಹೊಗಳಿ ನಗೆಪಾಟಲಿಗೀಡಾದ ಕಿರಣ್ ಬೇಡಿ!

Update: 2017-12-26 12:27 GMT

ಹೊಸದಿಲ್ಲಿ, ಡಿ.26: ಸಾಮಾಜಿಕ ಜಾಲತಾಣವಾದ ಟ್ವಿಟರ್, ಫೇಸ್ ಬುಕ್ ನಲ್ಲಿ ‘ಅಸಲಿ ಸುದ್ದಿ’ಗಿಂತ ‘ನಕಲಿ ಸುದ್ದಿ’ಗಳಿಗೇನೂ ಕೊರತೆಯಿಲ್ಲ. ಹಲವರು ಇಂತಹ ಸುದ್ದಿಗಳನ್ನು ಶೇರ್ ಮಾಡುತ್ತಾರೆ, ಇಲ್ಲವೇ ನಂಬುತ್ತಾರೆ. ಇಂತಹ ಸುದ್ದಿಗಳನ್ನು ನಂಬುವವರಲ್ಲಿ ವಿದ್ಯಾವಂತರು, ರಾಜಕಾರಣಿಗಳು ಸಹ ಹೊರತಲ್ಲ.

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಫೇಕ್ ನ್ಯೂಸ್ ಗಳನ್ನು ಶೇರ್ ಮಾಡಿ ಹಾಗು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆಯೂ ಸುದ್ದಿಯಾಗಿದ್ದರು. ಈ ಬಾರಿಯೂ ಅವರು ಇಂತಹ ಮತ್ತೊಂದು ವಿಷಯವನ್ನು ಶೇರ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ಈ ಬಗ್ಗೆ altnews.in ವರದಿ ಮಾಡಿದೆ. ಡಿಸೆಂಬರ್ 25ರಂದು ಶೀಬಾ ಜಾಲಿ ಎಂಬವರು ಕ್ರಿಸ್ಮಸ್ ಶುಭ ಹಾರೈಸಿ ಟ್ವೀಟ್ ಮಾಡಿದ್ದ 'ವಿಶೇಷ ಕ್ಯಾಲೆಂಡರ್' ಒಂದರ ಫೋಟೊವನ್ನು ಕಿರಣ್ ಬೇಡಿ ಶೇರ್ ಮಾಡಿದ್ದರು. ಈ ಕ್ಯಾಲೆಂಡರ್ ಪ್ರಕಾರ 2018ರಲ್ಲಿ ಬರುವ ಎಲ್ಲಾ ರವಿವಾರಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭವಂತೆ. ಏಕೆಂದರೆ ಜನವರಿಯಲ್ಲಿ 1ನೆ ತಾರೀಕಿಗೆ, ಫೆಬ್ರವರಿಯಲ್ಲಿ 2ನೆ ತಾರೀಕಿಗೆ, ಮಾರ್ಚ್ ನಲ್ಲಿ 3ನೆ ತಾರೀಕಿಗೆ, ಎಪ್ರಿಲ್ ನಲ್ಲಿ 4ನೆ ತಾರೀಕಿಗೆ …. ಹೀಗೆ ತಿಂಗಳುಗಳ ಕ್ರಮಸಂಖ್ಯೆಯ ಪ್ರಕಾರ ರವಿವಾರ ಬರಲಿದೆಯಂತೆ.

ಕಿರಣ್ ಬೇಡಿಯವರು ಈ ‘ವಿಶೇಷ ಕ್ಯಾಲೆಂಡರ್’ನ ಅಸಲಿಯತ್ತೇನು, ಈ ವಿಶೇಷತೆ ನಿಜವೇ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ “ವಾವ್.. ಇದು ಅತ್ಯಂತ ಕುತೂಹಲಕಾರಿಯಾಗಿದೆ. ಇದು ನನಗೆ ತುಂಬಾ ವಿಶೇಷ ಎನಿಸಿತು” ಎಂದು ಬರೆದು ಈ ವಿಶೇಷ ಕ್ಯಾಲೆಂಡರ್ ನ ಟ್ವೀಟನ್ನು ರಿಟ್ವೀಟ್ ಮಾಡಿದ್ದಾರೆ.

ಆದರೆ ಆಶ್ಚರ್ಯಕಾರಿ ವಿಚಾರವೇನೆಂದರೆ ಈ ಕ್ಯಾಲೆಂಡರ್ ನ ವಿಶೇಷತೆ 2018ರ ಜನವರಿ ತಿಂಗಳಲ್ಲೇ ‘ಹುಸಿಯಾಗುತ್ತದೆ’. ಏಕೆಂದರೆ 2018ರ ಜನವರಿ 1 ಸೋಮವಾರವಾಗಿದೆ!. ಈ ವಿಚಾರ ಅರಿವಿಗೆ ಬರುತ್ತಲೇ ಕಿರಣ್ ಬೇಡಿ ಟ್ವೀಟನ್ನು ಅಳಿಸಿ ಹಾಕಿದ್ದಾರೆ.

ಕಿರಣ್ ಬೇಡಿಯವರು ಇಂತಹ ಫೇಕ್ ಸುದ್ದಿಗಳನ್ನು ಟ್ವೀಟ್ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಕೆಲ ತಿಂಗಳುಗಳ ಹಿಂದೆ ದೀಪಾವಳಿಯ ದಿನ ಕಿರಣ್ ಬೇಡಿ ವೃದ್ಧೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಕೇವಲ ಶೇರ್ ಮಾಡಿದ್ದರೆ ಅದರಲ್ಲೇನೂ ವಿಶೇಷತೆ ಇರಲಿಲ್ಲ. ವಿಡಿಯೋವನ್ನು ಶೇರ್ ಮಾಡಿದ್ದ ಬೇಡಿ, “97ರ ಇಳಿ ವಯಸ್ಸಿನಲ್ಲಿ ದೀಪಾವಳಿಯ ಉತ್ಸಾಹ. ಇವರು ಪ್ರಧಾನಿ ನರೇಂದ್ರ ಮೋದಿಯವರ ತಾಯಿ (ಹೀರಾಬೆನ್ ಮೋದಿ-1920) ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ” ಎಂದು ಬರೆದಿದ್ದರು.

ಗಾರ್ಬಾ ಹಾಡೊಂದಕ್ಕೆ ವೃದ್ಧ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಬೇಡಿಯವರ ಟ್ವೀಟ್ 6,000 ಬಾರಿ ರಿಟ್ವೀಟ್ ಆಗಿದ್ದು, 21 ಸಾವಿರ ಲೈಕ್ಸ್ ಸಿಕ್ಕಿತ್ತು. ವಾಟ್ಸ್ ಆ್ಯಪ್ ಗ್ರೂಪ್ ಒಂದರಿಂದ ಬೇಡಿ ಈ ವಿಡಿಯೋವನ್ನು ಆಯ್ದುಕೊಂಡಿದ್ದರು. ಈ ವಿಡಿಯೋದಲ್ಲಿರುವವರು ಪ್ರಧಾನಿ ಮೋದಿಯವರ ತಾಯಿಯಲ್ಲ ಎಂದು ಬೇಡಿಯವರಿಗೆ ನಂತರ ಅರಿವಾಗಿದ್ದು, ಟ್ವೀಟ್  ಮಾಡುವ ಮೂಲಕ ಅವರು ಸ್ಪಷ್ಟನೆ ನೀಡಿದ್ದರು. ಆದರೆ ಬೇಡಿಯವರ ವಿಡಿಯೋಗೆ ಸಿಕ್ಕ ಪ್ರತಿಕ್ರಿಯೆ ಸ್ಪಷ್ಟನೆಗೆ ಸಿಕ್ಕಿರಲಿಲ್ಲ. 100 ಮಂದಿ ಮಾತ್ರ ಇದನ್ನು ಶೇರ್ ಮಾಡಿದ್ದರು.

ಜನವರಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ದುಬೈಯ ಬುರ್ಜ್ ಖಲೀಫಾ ತ್ರಿವರ್ಣ ಧ್ವಜದ ಲೈಟಿಂಗ್ ನಿಂದ ಮಿಂಚಿತ್ತು. ಈ ಬಗ್ಗೆ ಕಿರಣ್ ಬೇಡಿ ಟ್ವೀಟೊಂದನ್ನು ಮಾಡಿದ್ದರು. ಬುರ್ಜ್ ಅಲ್ ಅರಬ್, ಬಿಗ್ ಬೆನ್, ಪಿಸಾದ ವಾಲುಗೋಪುರ, ಟ್ವಿನ್ ಟವರ್ಸ್, ಸ್ಟ್ಯಾಚೂ ಆಫ್ ಲಿಬರ್ಟಿ ಸೇರಿದಂತೆ ಜಗತ್ತಿನ ಕೆಲ ಪ್ರಸಿದ್ಧ ಕಟ್ಟಡಗಳು ಭಾರತದ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಕಂಗೊಳಿಸುವ ಫೋಟೊಗಳನ್ನು ಬೇಡಿ ಟ್ವೀಟ್ ಮಾಡಿದ್ದರು. ಆದರೆ ವಾಸ್ತವವೇನೆಂದರೆ ಈ ಫೋಟೊಗಳು ನಕಲಿಯಾಗಿದ್ದವು. ಫೋಟೊಶಾಪ್ ಎಡಿಟೆಡ್ ಫೋಟೊಗಳಾಗಿದ್ದವು.

2016ರ ದೀಪಾವಳಿಯ ಸಂದರ್ಭದಲ್ಲೂ ಬೇಡಿ ಇಂತಹ ‘ಟ್ವೀಟ್ ಎಡವಟ್ಟು’ ಮಾಡಿದ್ದರು. ದೀಪಾವಳಿ ಸಂದರ್ಭ ಭಾರತೀಯ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಪ್ರಧಾನಿ ಮೋದಿಯವರು ವಿನಂತಿಸಿದ್ದಾರೆ” ಎನ್ನುವ ಟ್ವೀಟ್ ಇದಾಗಿತ್ತು. ಕೆಲ ತಿಂಗಳುಗಳ ಮೊದಲೇ ಇಂತಹ ನಕಲಿ ಸುದ್ದಿಗಳನ್ನು ಶೇರ್ ಮಾಡದಂತೆ ಪ್ರಧಾನಿ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿತ್ತು. ಆದರೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಈ ಎಚ್ಚರಿಕೆಯನ್ನು ಗಮನಿಸಿರಲಿಲ್ಲವೇನೋ?!.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News