ವಿಶ್ವಸಂಸ್ಥೆ ಬಜೆಟ್‌ನಲ್ಲಿ ಭಾರೀ ಕಡಿತ: ಅಮೆರಿಕ ಪ್ರಸ್ತಾಪ

Update: 2017-12-26 17:05 GMT

ವಾಶಿಂಗ್ಟನ್, ಡಿ. 26: ವಿಶ್ವಸಂಸ್ಥೆಯ ಬಜೆಟ್‌ನಲ್ಲಿ ಗಣನೀಯ ಕಡಿತ ಮಾಡುವ ಪ್ರಸ್ತಾಪವನ್ನು ತಾನು ಹೊಂದಿರುವುದಾಗಿ ಅಮೆರಿಕ ಸರಕಾರ ಹೇಳಿದೆ.

ವಿಶ್ವಸಂಸ್ಥೆಯ 2018-19ರ ಬಜೆಟನ್ನು 285 ಮಿಲಿಯ ಡಾಲರ್ (ಸುಮಾರು 1,827 ಕೋಟಿ ರೂಪಾಯಿ)ನಷ್ಟು ಕಡಿಮೆ ಮಾಡಲಾಗುವುದು ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರ ಕಚೇರಿ ರವಿವಾರ ತಿಳಿಸಿದೆ.

ವಿಶ್ವಸಂಸ್ಥೆಯ ಆಡಳಿತ ಮತ್ತು ಬೆಂಬಲ ಕಾರ್ಯಗಳ ವೆಚ್ಚವನ್ನೂ ಕಡಿತಗೊಳಿಸಲಾಗುವುದು ಎಂದು ಅದು ಹೇಳಿದೆ.

ವಿಶ್ವಸಂಸ್ಥೆಯ ನೂತನ ಒಟ್ಟು ಬಜೆಟ್ ಎಷ್ಟಾಗಿರುತ್ತದೆ ಹಾಗೂ ಈ ಕಡಿತವು ಅಮೆರಿಕದ ದೇಣಿಗೆಯ ಮೇಲೆ ಬೀರುವ ಪರಿಣಾಮವೇನು ಎಂಬುದನ್ನು ಅದು ಹೇಳಿಲ್ಲ.

‘‘ವಿಶ್ವಸಂಸ್ಥೆಯ ಅದಕ್ಷತೆ ಮತ್ತು ಅತಿ ವ್ಯಯ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಅಮೆರಿಕದ ಜನರ ಔದಾರ್ಯದ ಪ್ರಯೋಜನವನ್ನು ಪಡೆದುಕೊಳ್ಳಲು ನಾವು ಬಿಡುವುದಿಲ್ಲ’’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ನುಡಿದರು.

ಬಜೆಟ್ ಕಡಿತ ಕುರಿತ ಮಾತುಕತೆಗಳ ಫಲಿತಾಂಶದಿಂದ ಸಮಾಧಾನವಾಗಿದೆ ಎಂದು ಹೇಳಿದ ನಿಕ್ಕಿ, ‘‘ನಮ್ಮ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ವಿಶ್ವಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ನಾವು ಯಾವಾಗಲೂ ಯೋಚಿಸುತ್ತೇವೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News