ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಡಿವಿಲಿಯರ್ಸ್ 10,000 ರನ್

Update: 2017-12-26 18:01 GMT

ಪೋರ್ಟ್ ಎಲಿಜಬೆತ್, ಡಿ.26: ಸುಮಾರು ಎರಡು ವರ್ಷದ ಬಳಿಕ ದಕ್ಷಿಣ ಆಫ್ರಿಕದ ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗಿರುವ ಎಬಿ ಡಿವಿಲಿಯರ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಝಿಂಬಾಬ್ವೆ ವಿರುದ್ಧ ಮಂಗಳವಾರ ಇಲ್ಲಿ ಆರಂಭವಾದ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಡಿವಿಲಿಯರ್ಸ್ ಈ ಸಾಧನೆ ಮಾಡಿದರು. ಹಾಶಿಮ್ ಅಮ್ಲ ಹಾಗೂ ಕ್ರಿಸ್ ಎಂಪೊಫು ಔಟಾದ ಬಳಿಕ ಕ್ರೀಸ್‌ಗೆ ಇಳಿದ ಡಿವಿಲಿಯರ್ಸ್ ಇನಿಂಗ್ಸ್ ನ 25ನೇ ಓವರ್‌ನಲ್ಲಿ ಮೂರು ರನ್ ಗಳಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದರು.

 ಎಫ್‌ಡು ಪ್ಲೆಸಿಸ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ನಾಯಕನ್ನಾಗಿ ಮುನ್ನಡೆಸಿದ ಡಿವಿಲಿಯರ್ಸ್ ಹತ್ತು ಸಾವಿರ ರನ್ ಪೂರೈಸುವುದರೊಂದಿಗೆ ಮಾಜಿ ಸಹ ಆಟಗಾರರಾದ ಗ್ರೇಮ್ ಸ್ಮಿತ್, ಹಾಶಿಮ್ ಅಮ್ಲ, ಜಾಕಸ್ ಕಾಲಿಸ್, ಹ್ಯಾನ್ಶಿ ಕ್ರೊನಿಯೆ, ರಿಚರ್ಡ್ಸ್ ಹಾಗೂ ಕೆಪ್ಲೆರ್ ವೆಸ್ಲೆಲ್ಸ್ ಪಟ್ಟಿಗೆ ಸೇರ್ಪಡೆಯಾದರು.

 ಸತತ 2 ಬೌಂಡರಿ ಬಾರಿಸುವುದರೊಂದಿಗೆ ಡಿವಿಲಿಯರ್ಸ್ ದೀರ್ಘ ಸಮಯದ ಬಳಿಕ ಟೆಸ್ಟ್ ಇನಿಂಗ್ಸ್‌ನಲ್ಲಿ ಭರ್ಜರಿ ಆರಂಭ ಪಡೆದರು. ವಿಲಿಯರ್ಸ್ 2016ರ ಜನವರಿಯಲ್ಲಿ ಕೊನೆಯ ಬಾರಿ ಟೆಸ್ಟ್ ಆಡಿದ್ದರು.

 ದಕ್ಷಿಣ ಆಫ್ರಿಕದ ಪರ 106ನೇ ಟೆಸ್ಟ್ ಪಂದ್ಯ ಆಡಿರುವ ಡಿವಿಲಿಯರ್ಸ್ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದರು. ಪ್ಲೆಸಿಸ್‌ಗೆ ನಾಯಕತ್ವವನ್ನು ಹಸ್ತಾಂತರಿಸಿದ್ದರು.

ಇದೇ ಮೊದಲ ಬಾರಿ ಝಿಂಬಾಬ್ವೆ-ದಕ್ಷಿಣ ಆಫ್ರಿಕ ನಡುವೆ ಪಿಂಕ್ ಬಾಲ್‌ನಲ್ಲಿ ಹಗಲು-ರಾತ್ರಿ ಚತುರ್ದಿನ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪ್ರತಿದಿನ ಆರೂವರೆ ಗಂಟೆ ಕಾಲ ಪಂದ್ಯ ನಡೆಯಲಿದ್ದು, ಪ್ರತಿದಿನ 90ರ ಬದಲಿಗೆ 98 ಓವರ್ ಪಂದ್ಯಗಳು ನಡೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News