ಉತ್ತರ ಪ್ರದೇಶದ ಅಂಗನವಾಡಿಗಳಲ್ಲಿ ಬಡ ಮಕ್ಕಳಿಗೆ ಆಧಾರ್ ನೆಪದಿಂದ ಆಹಾರವಿಲ್ಲ!

Update: 2017-12-26 18:48 GMT

ಭಾಗ-1

ವೆಂಬರ್ ತಿಂಗಳ ಒಂದು ಮಧ್ಯಾಹ್ನ, ಅಲಿಮುನ್ನಿಸಾ ಚಿಂದಿ ಬಟ್ಟೆಗಳನ್ನು ಸೇರಿಸಿ ಒಂದು ಹೊದಿಕೆ ಹೊಲಿಯುತ್ತಿದ್ದರು. ಉತ್ತರ ಪ್ರದೇಶದ ಬಲರಾಮ್‌ಪುರದ ಹೊರವಲಯದಲ್ಲಿರುವ ಅವರ ಮಣ್ಣಿನ ಗೋಡೆಯ ಗುಡಿಸಲಲ್ಲಿ ಅವರ ನಾಲ್ಕು ಮಕ್ಕಳಲ್ಲಿ ಅತ್ಯಂತ ಕಿರಿಯನಾದ ಎಂಟರ ಹರೆಯದ ಅರ್ಬಾಝ್ ಅವರ ಪಕ್ಕದಲ್ಲೇ ಮಲಗಿ ನಿದ್ದೆಹೋಗಿದ್ದ. ಹೊರಗಡೆ ಅವನದೇ ಹರೆಯದ ಮಕ್ಕಳು ಮುಟ್ಟಾಟ ಆಡುತ್ತಿದ್ದವು.

ಅರ್ಬಾಝ್ ಒಬ್ಬ ದುರ್ಬಲ ಬಾಲಕ. ಅವ ಬೆಳೆಯುವುದೇ ಇಲ್ಲ, ‘‘ಬಡ್ತಾಹೀ ನಹೀಂ’’ ಎಂದು ಅಲಿಮುನ್ನಿಸಾ ದೂರಿದರು. 1975ರಿಂದ ಭಾರತ ಸರಕಾರ ಇಂಟಿಗ್ರೇಟಿಡ್ ಚೈಲ್ಡ್ ಡೆವಲಪ್‌ಮೆಂಟ್ ಸ್ಕೀಮ್(ಐಸಿಡಿಎಸ್) ಎಂಬ ಒಂದು ಯೋಜನೆಯನ್ನು ಜಾರಿಗೆ ತಂದಿದೆಯಾದರೂ, ಯಾವನೇ ಸರಕಾರಿ ನೌಕರ ಅರ್ಬಾಝ್‌ನ ಎತ್ತರ ಹಾಗೂ ತೂಕವನ್ನು ಇದುವರೆಗೆ ಅಳತೆಮಾಡುವ ಗೋಜಿಗೆ ಹೋಗಿಲ್ಲ. ಈ ಯೋಜನೆಯು ಅಂಗನವಾಡಿಗಳ ಮೂಲಕ ಎಲ್ಲ ಮಕ್ಕಳ ಪೌಷ್ಟಿಕಾಹಾರ ಹಾಗೂ ಆರೋಗ್ಯ ಸಂಬಂಧಿ ವಿವರಗಳನ್ನು ದಾಖಲಿಸಿ ಇಡುವ ಗುರಿ ಹೊಂದಿದೆ. ಮಕ್ಕಳ ವಯೋಮಾನಕ್ಕೆ ಸಮನಾದ ತೂಕ ಇಲ್ಲದಿರುವುದನ್ನು ಕಡಿಮೆ ತೂಕವನ್ನು ‘ಸ್ಟಂಟಿಂಗ್’ ಇರುವುದನ್ನು ಸೂಚಿಸುತ್ತದೆ. ಕಡಿಮೆ ತೂಕವು ಮಗುವಿನಲ್ಲಿ ‘ವೇಸ್ಟಿಂಗ್’ ಇರುವುದನ್ನು ಸೂಚಿಸುತ್ತದೆ. ವೈದ್ಯಕೀಯವಾಗಿ, ಸ್ಟಂಟಿಂಗ್ ಮತ್ತು ವೇಸ್ಟಿಂಗ್ ಎರಡಕ್ಕೂ ಒಂದು ಕಾರಣ: ಪೌಷ್ಟಿಕಾಹಾರದ ಕೊರತೆ. ಭಾರತದಲ್ಲಿ ಸ್ಟಂಟಿಂಗ್‌ನ ರಾಷ್ಟ್ರೀಯ ಸರಾಸರಿ ಶೇ. 38ಕ್ಕಿಂತ ಕಡಿಮೆ ಇದೆ, ಆದರೆ ಯುಪಿಯಲ್ಲಿ ಆರರ ಹರೆಯದ ವರೆಗಿನ ಮಕ್ಕಳಲ್ಲಿ ಶೇ. 46 ಮಕ್ಕಳು ‘ಸ್ಟಂಟೆಡ್’ ಆಗಿದ್ದಾರೆ. ರಾಜ್ಯದ ಟೆರ್ರ ಪ್ರದೇಶದಲ್ಲಿರುವ ಬಹ್ರೈಕ್, ಬಲರಾಮ್‌ಪುರ್ ಮತ್ತು ಶ್ರಾವಸ್ತಿ ಜಿಲ್ಲೆಗಳಲ್ಲಿ ವಾಸಿಸುವ ಮಕ್ಕಳಲ್ಲಿ ಶೇ. 60 ಮಕ್ಕಳು ‘ಸ್ಟಂಟೆಡ್’ ಆಗಿವೆ. ಇದು ಮಕ್ಕಳ ಸಾವಿನ ಸಂಭಾವ್ಯತೆಯ ಅಪಾಯವನ್ನು ಹೆಚ್ಚಿಸುವ ವಿದ್ಯಮಾನವಾಗಿದೆ.

ಮೂರರಿಂದ ಆರರ ನಡುವಣ ವಯೋಮಾನದ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ‘ಟೇಕ್-ಹೋಂ ರೇಶನ್’ ಎಂದು ಕರೆಯಲಾಗುವ ಪುಡಿ ಮಾಡಿದ ಮಿಶ್ರಣವನ್ನು ನೀಡುವ ಐಸಿಡಿಎಸ್ ಯೋಜನೆಯು ಯುಪಿಯಲ್ಲಿ ತೀರ ಅಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.

ಬಲರಾಮ್‌ಪುರ ಆಗಲಿ ಅಥವಾ ಅದರ ನೆರೆಯ ಜಿಲ್ಲೆಯಾಗಿರುವ ಬಹ್ರೈಕ್ ಆಗಲಿ, 2017-18ರ ವರ್ಷಕ್ಕೆ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಐಸಿಡಿಎಸ್ ಅಡಿಯಲ್ಲಿ ಯಾವುದೇ ಆರ್ಥಿಕ ನೆರವನ್ನು ಪಡೆದಿಲ್ಲ; ಯಾವುದೇ ಮೊತ್ತದ ಹಣ ಪಡೆದಿಲ್ಲ. ಬಹ್ರೈಕ್ ಜಿಲ್ಲೆಯಲ್ಲಿ ಯಾವುದೇ ಅಂಗನವಾಡಿ ಒಂದೇ ಒಂದು ದಿನ ಕೂಡ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಿಲ್ಲ. ಇಂತಹ ಕೊರತೆಗಳು ಹೊಸತೇನೂ ಅಲ್ಲ. ಕಳೆದ ಮೂರು ವರ್ಷಗಳಲ್ಲಿ, ಬಹ್ರೈಕ್ ಜಿಲ್ಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಸಿಕ್ಕಿದ್ದು ಸುಮಾರು ಮೂರು ತಿಂಗಳುಗಳಲ್ಲಿ ಮಾತ್ರ . ಈ ವರ್ಷ ಟೇಕ್-ಹೋಮ್ ಪಡಿತರ ಕೂಡ ಒಂದು ತಿಂಗಳ ಅವಧಿಗೆ ಪೂರೈಕೆಯಾಗಿರಲಿಲ್ಲ .‘‘ಸರಕಾರ ಟೇಕ್-ಹೋಮ್ ಪಡಿತರವನ್ನು ಕಳುಹಿಸಿಲ್ಲವೆಂದು ನಾವು ಹೇಳಿದಾಗ ಹಳ್ಳಿಯ ಜನ ನಾವು ಸುಳ್ಳು ಹೇಳುತ್ತಿದ್ದೇವೆಂದು ತಿಳಿಯುತ್ತಾರೆ’’ ಎನ್ನುತ್ತಾರೆ ಬಹ್ರೈಕ್‌ನ ಓರ್ವ ಅಂಗನವಾಡಿ ಕಾರ್ಯಕರ್ತೆ ಕುಮಾರಿ ರಮಾವತಿ ಭಾರತಿ. ಒಂದು ವೇಳೆ ಪೋಷಕರು ಈ ಪಡಿತರವನ್ನು ಮನೆಗೆ ಕೊಂಡು ಹೋದರೂ, ಅದರ ಕಳಪೆ ಗುಣಮಟ್ಟದಿಂದಾಗಿ ಮಕ್ಕಳು ಅದನ್ನು ತಿನ್ನುವುದಿಲ್ಲ.

ಹೊರಗಿಡಲು ಒಂದು ಸಲಕರಣೆ ಈ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಆಜ್ಞೆಯೊಂದನ್ನು 2017ರ ಮೇ ತಿಂಗಳಲ್ಲಿ ಹೊರಡಿಸಿದ ಸರಕಾರ, ಆಧಾರ್ ಕಾರ್ಡ್ ಇರುವ ಮಕ್ಕಳಿಗೆ ಮಾತ್ರ ಜಿಲ್ಲಾ ಅಧೀಕಾರಿಗಳು ಈ ಪಡಿತರವನ್ನು ಹಂಚಬೇಕೆಂದು ಹೇಳಿತು. ಒಂದು ವೇಳೆ ಮಗುವಿಗೆ ಆಧಾರ್ ಇಲ್ಲ ದಿದ್ದಲ್ಲಿ ಅದರ ಪೋಷಕರ ಆಧಾರ್ ನಂಬರನ್ನು ದಾಖಲಿಸಿಕೊಳ್ಳಬಹುದು. ಅಪ್ಪ ಅಮ್ಮ ಇಬ್ಬರಿಗೂ ಆಧಾರ್ ಇಲ್ಲದಿದ್ದಲ್ಲಿ ಅವರಲ್ಲೊಬ್ಬರ ಮತ ಚೀಟಿ ಸಂಖ್ಯೆಯನ್ನು ದಾಖಲಿಸಬಹುದು. ಆದರೆ ವಾಸ್ತವಿಕವಾಗಿ ಅಧಿಕಾರಿಗಳು ಆಧಾರ್ ಸಂಖ್ಯೆ ಬೇಕೆಂದು ಹೇಳುತ್ತಾರೆ. ಕೆಲವರು ಮಗುವಿನ ಹೆಸರಿನಲ್ಲಿ ಆಧಾರ್ ಕಾರ್ಡ್ ಪಡೆಯುವಂತೆ ಪ್ರೇರೇಪಿಸುತ್ತಾರೆ.

ಆದರೆ ಆರೋಗ್ಯ ತಜ್ಞರ ಪ್ರಕಾರ ಟೇಕ್‌ಹೋಮ್ ಪಡಿತರಕ್ಕೂ ಆಧಾರ್ ಚೀಟಿಗೂ ಲಿಂಕ್ ಮಾಡುವುದು, ವಿಶೇಷವಾಗಿ ಅಷ್ಟೊಂದು ಹೆಚ್ಚಿನ ಮಟ್ಟದ ಕುಂಠಿತ ಬೆಳವಣಿಗೆ ಇರುವ ಒಂದು ರಾಜ್ಯದಲ್ಲಿ, ಸರಿಯಾದ ಕ್ರಮವಲ್ಲ. ‘‘ಮನೆಗಳಿಗೆ ಈ ಪಡಿತರವನ್ನು ಹಂಚುವ ಅಂಗನವಾಡಿ ಕಾರ್ಯಕರ್ತೆಯರ ಬಳಿ ಹಳ್ಳಿಯಲ್ಲಿರುವ ಎಲ್ಲ ಮಕ್ಕಳ ದಾಖಲೆ ಇರುವಾಗ, ಅವರಿಗೆ ಮಕ್ಕಳ ಪ್ರತಿಯೊಬ್ಬ ಪೋಷಕರ ಮುಖ ಪರಿಚಯವಿರುವಾಗ ಗುರುತುಚೀಟಿ (ಆಧಾರ್) ಯಾಕೆ ಬೇಕು?’’ ಎಂದು ಪ್ರಶ್ನಿಸುತ್ತಾರೆ. ಓರ್ವ ಆಹಾರದ ಹಕ್ಕು ಕಾರ್ಯಕರ್ತೆ ಡಾ. ವಂದನಾ ಪ್ರಸಾದ್. ‘‘ಆಧಾರ್ ಸಂಖ್ಯೆ ಬೇಕೇ ಬೇಕೆಂಬ ಒತ್ತಾಯದಿಂದಾಗಿ ಎಷ್ಟೊಂದು ಮಕ್ಕಳು ಆ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ ಮತ್ತು ಈ ಒತ್ತ್ತಾಯ ಎಷ್ಟೊಂದು ಗೊಂದಲ ಉಂಟುಮಾಡುತ್ತಿದೆ ಎಂಬ ಬಗ್ಗೆ ಯಾರೂ ಯೋಚಿಸುವುದಿಲ್ಲ’’ ಎನ್ನುತ್ತಾರೆ ಡಾ. ವಂದನಾಪ್ರಸಾದ್.

ಆರೋಗ್ಯ ವ್ಯವಸ್ಥೆಗೆ ಕಾಣಿಸದ ಮುಖ

ಸರಕಾರ ಪಡಿತರವನ್ನು ಆಧಾರ್‌ಗೆ ಜೋಡಿಸುವ ಮೊದಲೇ, ಅರ್ಬಾಝ್‌ಗೆ ಟೆೇಕ್‌ಹೋಮ್ ಪಡಿತರ ಪಡೆಯುವ ಅವಕಾಶ ಉಜ್ವಲವಾಗಿ ಏನೂ ಇರಲಿಲ್ಲ. ಯಾಕೆಂದರೆ ಅಂಗನವಾಡಿಯೊಂದಲ್ಲಿ ಅವನ ಹೆಸರು ದಾಖಲಾಗಿಯೇ ಇಲ್ಲ.

ಅಲಿಮುನ್ನಿಸಾ ಅವರ ಎಲ್ಲ ಮಕ್ಕಳನ್ನೂ ಹೆತ್ತದ್ದು ಮನೆಯಲ್ಲೇ ಅರ್ಬಾಝ್ ಹುಟ್ಟಿದಾಗ ತೀರ ಚಿಕ್ಕದು ಅನಿಸಿದ್ದರಿಂದ ಅವರು ಆ ಮಗುವನ್ನು ಆಸ್ಪತ್ರೆಗೆ ಕೊಂಡು ಹೋದರು. ಆಗ ನಿಜವಾಗಿ ಆಸ್ಪತ್ರೆಯ ಸಿಬ್ಬಂದಿಯವರು ಅರ್ಬಾಝ್‌ನನ್ನು ಸ್ಥಳೀಯ ಅಂಗನವಾಡಿಗೆ ಕರೆದೊಯ್ಯುವಂತೆ ಹೇಳಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.

ಬಲರಾಮ್‌ಪುರದ ಬಂಜಾರಣ್ ಪೂರ್ವ ಎಂಬ ಕೊಳೆಗೇರಿಯಂತಹ ಒಂದು ಪ್ರದೇಶದಲ್ಲಿ ವಾಸಿಸುವ ಅಲಿಮುನ್ನಿಸಾ ತನ್ನ ಯಾವುದೇ ಮಗುವನ್ನು ಯಾವುದೇ ಅಂಗನವಾಡಿಗೆ ಕಳುಹಿಸಿಯೂ ಇಲ್ಲ. ಯಾವ ಅಂಗನವಾಡಿ ಕಾರ್ಯಕರ್ತೆಯೂ ಆಕೆಯನ್ನು ಸಂಪರ್ಕಿಸಿದ್ದೂ ಇಲ್ಲ. ಅಲಿಮುನ್ನಿಸಾ ಮತ್ತು ಅವರ ಗಂಡ-ಇಬ್ಬರೂ ದಿನಕೂಲಿ ಕಾರ್ಮಿಕರು ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಿಗುವ ಕೆಲಸವನ್ನೇ ಅವಲಂಬಿಸಿರುವವರು. ಆದರೆ ಈ ಯೋಜನೆಯಲ್ಲಿ ಕೆಲಸ ಅನಿಶ್ಚಿತ. ನವೆಂಬರ್ ತಿಂಗಳಲ್ಲಿ ಆರು ಮಂದಿ ಸದಸ್ಯರ ಅವರ ಕುಟುಂಬದ ಹೊಟ್ಟೆಹೊರೆಯಲು ಅವರಿಬ್ಬರಿಗೂ ವೇತನ ಬರುವ ನೌಕರಿ ಇರಲಿಲ್ಲ. ಆಕೆ ಹಲವು ಬಾರಿ ಆಧಾರ್ ಚೀಟಿಗೆ ಅರ್ಜಿ ಸಲ್ಲಿಸಿದ್ದಾರಾದರೂ ಆಕೆಯ ವಿನಂತಿ ತಿರಸ್ಕೃತವಾಗುತ್ತಲೇ ಇದೆ. ಅವರಿಗೆ ಕಾರ್ಡ್ ಸಿಗದಿರಲು ಕಣ್ತ್ತಪ್ಪಿನಿಂದ ಆಗಿರುವ ತಪ್ಪು ಕಾರಣವಿರಬಹುದೆಂದು ಪಡಿತರ ಪೂರೈಕೆ ಅಧಿಕಾರಿ ಬಿ.ಕೆ.ಮಿಶ್ರಾ ಹೇಳುತ್ತಾರೆ.

ಕೃಪೆ: scroll.in

Writer - ಪ್ರಿಯಾಂಕಾ ವೋರಾ

contributor

Editor - ಪ್ರಿಯಾಂಕಾ ವೋರಾ

contributor

Similar News

ಜಗದಗಲ
ಜಗ ದಗಲ