ಗುಂಡೇಟು ತಿಂದರೂ ಸೈನಿಕರಿಗೆ ಸೂಚನೆಗಳನ್ನು ನೀಡುತ್ತಿರುವ ಮೇಜರ್ ಪ್ರಫುಲ್ಲಾರ ವೈರಲ್ ವಿಡಿಯೋ ಹಿಂದಿನ ಸತ್ಯವೇನು?

Update: 2017-12-27 10:23 GMT

ಹೊಸದಿಲ್ಲಿ, ಡಿ,27: “ಗುಂಡೇಟು ತಿಂದು ಕುಸಿದು ಬಿದ್ದಿದ್ದರೂ ಮೇಜರ್ ಪ್ರಫುಲ್ಲಾ ತಮ್ಮ ಯುನಿಟ್ ಗೆ ಸೂಚನೆಗಳನ್ನು ನೀಡುತ್ತಿರುವುದು” ಎನ್ನುವ ತಲೆಬರಹದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

"ಶನಿವಾರ ಜಮ್ಮು ಕಾಶ್ಮೀರದ ಕೇರಿ ಸೆಕ್ಟರ್ ನಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಮೇಜರ್ ಪ್ರಫುಲ್ಲಾ ಅಂಬಾದಾಸ್ ಮೊಹಾರ್ಕರ್ ಹುತಾತ್ಮರಾಗಿದ್ದಾರೆ. ಗುಂಡೇಟು ತಿಂದು ಕುಸಿದು ಬಿದ್ದಿದ್ದರೂ ತಮ್ಮ ಕೊನೆಯ ಉಸಿರಿರುವವರೆಗೂ ಅವರು ತಮ್ಮ ಯುನಿಟ್ ಗೆ ಸೂಚನೆಗಳನ್ನು ನೀಡುತ್ತಿದ್ದರು" ಎಂದು ಬರೆಯಲಾಗಿದೆ.

ಆದರೆ ಈ ವಿಡಿಯೋ ಹಿಂದಿನ ವಾಸ್ತವಾಂಶವನ್ನು altnews.in ವರದಿ ಮಾಡಿದೆ. ಕೇರಿ ಸೆಕ್ಟರ್ ನಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಮೇಜರ್ ಮೊಹಾರ್ಕರ್, ಸೈನಿಕರಾದ ಪರ್ಗತ್ ಸಿಂಗ್, ಲ್ಯಾನ್ಸ್ ನಾಯ್ಕ್ ಗುರ್ಮೈಲ್ ಸಿಂಗ್ ಹಾಗು ಲ್ಯಾನ್ಸ್ ನಾಯ್ಕ್ ಕುಲದೀಪ್ ಸಿಂಗ್ ಹುತಾತ್ಮರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ವಿಡಿಯೋವನ್ನು ಜನರಲ್ ವಿ.ಕೆ. ಸಿಂಗ್ ಅವರ ವೆರಿಫೈಡ್ ಫೇಸ್ ಬುಕ್ ಪೇಜ್ ನಲ್ಲಿ ಯಾವುದೇ ಅಧಿಕಾರಿಯ ಹೆಸರನ್ನು ಉಲ್ಲೇಖಿಸದೆ ಪೋಸ್ಟ್ ಮಾಡಲಾಗಿದ್ದು, “ಯುವ ಅಧಿಕಾರಿಗಳು ಭಾರತೀಯ ಸೇನೆಯ ಶಕ್ತಿ” ಎಂದು ಬರೆಯಲಾಗಿದೆ. ಆದರೆ ಈ ವಿಡಿಯೋದಲ್ಲಿರುವವರು ಮೇಜರ್ ಪ್ರಫುಲ್ಲಾ ಎಂದು ಭಾವಿಸಿ ಹಲವರು ಇದನ್ನು ಶೇರ್ ಮಾಡಿದ್ದಾರೆ. ಆಪ್ ಶಾಸಕಿ ಆಲ್ಕಾ ಲಂಬಾ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದರು.

ಫೇಸ್ ಬುಕ್, ವಾಟ್ಸ್ ಆ್ಯಪ್, ಟ್ವಿಟರ್ ಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವವರು ಮೇಜರ್ ಪ್ರಫುಲ್ಲಾ ಅವರೇ ಎಂದು ಗಮನಿಸುವುದಾದರೆ ಖಂಡಿತಾ ಅಲ್ಲ. ಏಕೆಂದರೆ 7 ವರ್ಷಗಳ ಹಿಂದೆಯೇ ಈ ವಿಡಿಯೋ ಯೂಟ್ಯೂಬ್ ನಲ್ಲಿದೆ. 2017ರ ಜನವರಿಯಲ್ಲಿ ಸಿಆರ್ ಪಿಎಫ್ ತನ್ನ ವೆರಿಫೈಡ್ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿರುವವರು ಅಸಿಸ್ಟಂಟ್ ಕಮಾಂಡೆಂಟ್ ಸತ್ವಂತ್ ಸಿಂಗ್ ಎಂದಿತ್ತು ಎಂದು altnews.in ವರದಿ ಮಾಡಿದೆ.

ಸಾಮಾಜಿಕ ಜಾಲತಾಣವು ಮಾಹಿತಿಗಳನ್ನು, ಸುದ್ದಿಗಳನ್ನು ಹಂಚಲು ಅತ್ಯುತ್ತಮ ವೇದಿಕೆಯಾಗಿದ್ದರೂ ಇಂದು ನಕಲಿ ಸುದ್ದಿಗಳೇ ಇದರಲ್ಲಿ ಮೇಳೈಸುತ್ತಿವೆ. ಸುದ್ದಿಯ ಸತ್ಯಾಸತ್ಯತೆ, ಹಿನ್ನೆಲೆಯನ್ನು ಅರಿಯದೆ ಹಲವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ, ನಂಬುತ್ತಿದ್ದಾರೆ. ಜಗತ್ತು ಎಷ್ಟೇ ಮುಂದುವರಿದರೂ, ಸಾಮಾಜಿಕ ಜಾಲತಾಣ ಆಧುನಿಕ ಜಗತ್ತಿನ ಪ್ರಮುಖ ಭಾಗವಾಗಿದ್ದರೂ ಸುದ್ದಿಗಳನ್ನು, ಮಾಹಿತಿಗಳನ್ನು ಹಂಚುವಾಗ ಎಚ್ಚರ ವಹಿಸಬೇಕಾದ ಕರ್ತವ್ಯ ಎಲ್ಲರದ್ದು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News