ಜಾಧವ್ ಕುಟುಂಬದೊಂದಿಗೆ ಪಾಕ್ ನಡವಳಿಕೆ ಕುರಿತು ನಾಳೆ ಸಂಸತ್ತಿನಲ್ಲಿ ಸರಕಾರದ ಹೇಳಿಕೆ

Update: 2017-12-27 14:00 GMT

ಹೊಸದಿಲ್ಲಿ,ಡಿ.27: ಪಾಕಿಸ್ತಾನದಲ್ಲಿ ಕುಲಭೂಷಣ್ ಜಾಧವ್ ಅವರ ಕುಟುಂಬವನ್ನು ನಡೆಸಿಕೊಂಡ ರೀತಿಗೆ ಬುಧವಾರ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಆಕ್ರೋಶ ಮತ್ತು ಖಂಡನೆಗಳ ನಡುವೆಯೇ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಸರಕಾರವು ಈ ಬಗ್ಗೆ ಗುರುವಾರ ಸಂಸತ್ತಿನಲ್ಲಿ ಹೇಳಿಕೆಯನ್ನು ನೀಡಲಿದೆ ಎಂದು ತಿಳಿಸಿದರು.

ಪಾಕಿಸ್ತಾನದಲ್ಲಿ ಜಾಧವ್ ಅವರ ತಾಯಿ ಮತ್ತು ಪತ್ನಿಯನ್ನು ನಡೆಸಿಕೊಂಡ ರೀತಿಯನ್ನು ನಾವು ಖಂಡಿಸುತ್ತೇವೆ. ಜಾಧವ್ ಅವರನ್ನು ಭಾರತಕ್ಕೆ ವಾಪಸ್ ಕರೆತರಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಶಿವಸೇನೆ, ಟಿಎಂಸಿ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಪಾಕ್ ನಡವಳಿಕೆಯನ್ನು ಬಲವಾಗಿ ಪ್ರತಿಭಟಿಸಿದವು.

  ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾದ ಎಂಟು ತಿಂಗಳ ಬಳಿಕ ಸೋಮವಾರ ಜಾಧವ್ ತನ್ನ ತಾಯಿ ಮತ್ತು ಪತ್ನಿಯನ್ನು ಇಸ್ಲಾಮಾಬಾದ್‌ನ ವಿದೇಶಾಂಗ ಕಚೇರಿಯಲ್ಲಿ ಭೇಟಿಯಾಗಿದ್ದರು. ಅವರ ನಡುವೆ ಗಾಜಿನ ತೆರೆಯನ್ನು ಅಳವಡಿಸಲಾಗಿದ್ದು, ಪರಸ್ಪರ ಮಾತನಾಡಲು ಇಂಟರ್‌ಕಾಮ್ ಒದಗಿಸಲಾಗಿತ್ತು.

ತಮ್ಮ ಬಟ್ಟೆಗಳನ್ನು ಬದಲಿಸುವಂತೆ ಮತ್ತು ಬಳೆ,ಬಿಂದಿ ಹಾಗೂ ಮಂಗಳಸೂತ್ರಗಳನ್ನು ತೆಗೆಯುವಂತೆ ಜಾಧವ್ ತಾಯಿ ಮತ್ತು ಪತ್ನಿಯನ್ನು ಬಲವಂತಗೊಳಿಸಲಾಗಿತ್ತು ಎಂದು ಭಾರತವು ಆರೋಪಿಸಿದೆ. ತನ್ನ ಶೂಗಳನ್ನು ಕಳಚುವಂತೆ ಜಾಧವ್ ಪತ್ನಿ ಚೇತಾಂಕುಲ ಅವರನ್ನು ಬಲವಂತಗೊಳಿಸಿದ್ದು, ಅವನ್ನು ವಾಪಸ್ ಮಾಡಲಾಗಿಲ್ಲ. ಈ ಶೂಗಳಲ್ಲಿ ಲೋಹದ ವಸ್ತುವೊಂದಿತ್ತು ಎಂದು ಪಾಕ್ ಪ್ರತಿಪಾದಿಸಿದೆ.

ಜಾಧವ್ ತಾಯಿ ಮತ್ತು ಪತ್ನಿ ಪಟ್ಟ ಪಡಿಪಾಟಲು ಸಾಲದೆಂಬಂತೆ ಅವರನ್ನು ಕಾರಿಗಾಗಿ ಕಾದು ನಿಲ್ಲುವಂತೆ ಮಾಡಲಾಗಿತ್ತು ಮತ್ತು ಈ ಸಂದರ್ಭದಲ್ಲಿ ಪಾಕಿಸ್ತಾನಿ ಮಾಧ್ಯಮಗಳ ಪ್ರತಿನಿಧಿಗಳು ಕಿರುಕುಳ ನೀಡಿ ಅವಮಾನಕಾರಿ ಪ್ರಶ್ನೆಗಳನ್ನು ಕೇಳಿದ್ದರು. ‘ನಿಮ್ಮ ಪತಿದೇವರು ಸಾವಿರಾರು ನಿರಪರಾಧಿ ಪಾಕಿಸ್ತಾನಿಗಳ ರಕ್ತದಲ್ಲಿ ಹೋಳಿಯಾಡಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?’ ಮತ್ತು ‘ನಿಮ್ಮ ಕೊಲೆಗಡುಕ ಪುತ್ರನನ್ನು ಭೇಟಿಯಾದ ಬಳಿಕ ನಿಮ್ಮ ಭಾವನೆ ಏನು?’ ಇತ್ಯಾದಿ ಪ್ರಶ್ನೆಗಳನ್ನು ಸುದ್ದಿಗಾರರು ಜಾಧವ್ ಕುಟುಂಬಕ್ಕೆ ಕೇಳಿದ್ದರು ಎನ್ನಲಾಗಿದೆ.

ಲೋಕಸಭೆಯಲ್ಲಿ ಶಿವಸೇನೆಯ ಸದಸ್ಯರಿಂದ ‘ಪಾಕಿಸ್ತಾನ ಮುರ್ದಾಬಾದ್’ ಘೋಷಣೆಗಳ ನಡುವೆಯೇ ಆ ಪಕ್ಷದ ಅರವಿಂದ ಸಾವಂತ್ ಅವರು, ಈ ಘಟನೆಯ ಬಗ್ಗೆ ಭಾರತವು ಮೌನವಾಗಿರಬಾರದು ಎಂದು ಹೇಳಿದರು.

ಮಹಿಳೆಗೆ ಮಂಗಳಸೂತ್ರವನ್ನು ತೆಗೆಯುವಂತೆ ಸೂಚಿಸಿದ್ದು ಈ ದೇಶಕ್ಕೆ ಮಾಡಿರುವ ಅವಮಾನವಾಗಿದೆ ಎಂದು ತಂಬಿದುರೈ(ಎಐಎಡಿಎಂಕೆ) ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News