ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ ಸೋಯಾಬೀನ್‌ ಸೇವನೆ

Update: 2017-12-28 10:40 GMT

ಸಸ್ಯಾಹಾರಿಗಳಿಗೆ ಅಗತ್ಯ ಪ್ರಮಾಣದಲ್ಲಿ ಪ್ರೋಟಿನ್ ದೊರೆಯುವುದಿಲ್ಲ ಮತ್ತು ಅವರನ್ನು ಪ್ರೋಟಿನ್ ಕೊರತೆ ಕಾಡುತ್ತಿರುತ್ತದೆ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಸಸ್ಯಾಹಾರದಲ್ಲಿ ಸಾಕಷ್ಟು ಪ್ರೋಟಿನ್ ಇಲ್ಲದಿರುವುದು ಇದಕ್ಕೆ ಕಾರಣ ಎಂಬ ದೂರುಗಳು ಇವೆ. ಆದರೆ ಸೋಯಾಬೀನ್ ತಿನ್ನುವುದರಿಂದ ಸಸ್ಯಾಹಾರಿಗಳ ಶರೀರಕ್ಕೂ ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್ ದೊರೆಯುತ್ತದೆ.

ಸೋಯಾಬೀನ್ ಸಸ್ಯಾಹಾರಿಗಳ ಪಾಲಿಗೆ ಉತ್ತಮ ಸ್ನೇಹಿತನಾಗಿದೆ. ಪರಿಪೂರ್ಣ ಆಹಾರವಾಗಿರುವ ಸೋಯಾಬೀನ್ ಅತ್ಯುತ್ತಮ ಗುಣಮಟ್ಟದ ಪ್ರೋಟಿನ್ ಅನ್ನು ಒಳಗೊಂಡಿದೆ. ಜೊತೆಗೆ ಸಾಕಷ್ಟು ಕೊಬ್ಬು ಮತ್ತು ನಾರು ಕೂಡ ಅದರಲ್ಲಿವೆ. ಆದರೆ ಕಾರ್ಬೋಹೈಡ್ರೇಟ್‌ಗಳು ಕಡಿಮೆ ಪ್ರಮಾಣದಲ್ಲಿದ್ದು, ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೆ ಅದು ಕ್ಯಾಲ್ಶಿಯಂ, ಕಬ್ಬಿಣ, ತಾಮ್ರ, ಮ್ಯಾಗ್ನೇಷಿಯಂ, ಮೊಲಿಬ್ಡಿನಂ, ಸೆಲೆನಿಯಂ, ಮ್ಯಾಂಗನೀಸ್, ರಂಜಕ ಮತ್ತು ಸತುವು ಇತ್ಯಾದಿ ಖನಿಜಗಳಿಂದ ಹಾಗೂ ಬಿ,ಸಿ,ಇ ಮತ್ತು ಕೆ ವಿಟಾಮಿನ್‌ಗಳಿಂದ ತುಂಬಿದೆ. ಉತ್ಕರ್ಷಣ ನಿರೋಧಕಗಳು ಮತ್ತು ಇತರ ಆರ್ಗಾನಿಕ್ ಸಂಯುಕ್ತಗಳೂ ಅದರಲ್ಲಿವೆ. ಇಡೀ ಸೋಯಾಬೀನ್ ಜೊತೆ ಸೋಯಾ ಮಿಲ್ಕ, ಸೋಯಾ ಹುಡಿ, ಟೋಫು, ಸೋಯಾಬೀನ್ ಎಣ್ಣೆ ಮತ್ತು ಸೋಯಾ ಸಾಸ್ ಇತ್ಯಾದಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆಯಾದರೂ ಅವುಗಳ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ.

ಸಸ್ಯಾಹಾರಿಗಳ ಪಾಲಿನ ‘ಮಾಂಸ’ ಎಂದೇ ಪರಿಗಣಿಸಲಾಗಿರುವ ಸೋಯಾಬೀನ್‌ನ ಕೆಲವು ಆರೋಗ್ಯ ಲಾಭಗಳ ಕುರಿತು ಮಾಹಿತಿಯಿಲ್ಲಿದೆ.....

ವಿಟಾಮಿನ್ ಬಿ12ರ ಅಗತ್ಯವನ್ನು ಪೂರೈಸುತ್ತದೆ

ತಮ್ಮ ಪ್ರೋಟಿನ್ ಸೇವನೆಯ ಪ್ರಮಾಣವನ್ನು ಹೆಚ್ಚಿಸಲು ಬಯಸುವ ಸಸ್ಯಾಹಾರಿಗಔ ಪಾಲಿಗೆ ಸೋಯಾಬೀನ್ ಹೇಳಿ ಮಾಡಿಸಿದ ಆಹಾರವಾಗಿದೆ. ಕೆಲವು ಕಟ್ಟಾ ಸಸ್ಯಾಹಾರಿಗಳು ಹಾಲು ಮತ್ತು ಚೀಸ್ ಸೇರಿದಂತೆ ಪ್ರಾಣಿಜನ್ಯ ಉತ್ಪನ್ನಗಳನ್ನೂ ಸೇವಿಸುವುದಿಲ್ಲ. ಇದು ಶರೀರದಲ್ಲಿ ವಿಟಾಮಿನ್ ಬಿ12ರ ಕೊರತೆಗೆ ಕಾರಣವಾಗಬ ಹುದು. ಇಂತಹವರು ಸೋಯಾ ಮಿಲ್ಕ್ ಸೇವಿಸುವುದರಿಂದ ಶರೀರಕ್ಕೆ ಅಗತ್ಯವಾಗಿರುವ ವಿಟಾಮಿನ್ ಬಿ12ನ್ನು ಪಡೆಯಬಹುದಾಗಿದೆ.

ಮೆಟಾಬಾಲಿಸಂ ಅಥವಾ ಚಯಾಪಚಯವನ್ನು ಉತ್ತಮಗೊಳಿಸುತ್ತದೆ

ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಜೀವಕೋಶಗಳ ಮರುಬೆಳವಣಿಗೆಗೆ ಪ್ರೋಟಿನ್ ಮುಖ್ಯವಾಗಿದೆ. ಸಸ್ಯಾಹಾರ ಸೇವನೆಯಿಂದ ಸಾಕಷ್ಟು ಪ್ರಮಾಣದಲ್ಲಿ ಶರೀರಕ್ಕೆ ಪ್ರೋಟಿನ್ ದೊರೆಯುವುದು ಕಷ್ಟ. ಮಾಂಸಾಹಾರಿಗಳಿಗಾದರೆ ಮೊಟ್ಟೆ, ಚಿಕನ್, ಡೇರಿ ಉತ್ಪನ್ನಗಳು ಮತ್ತು ಮೀನಿನಿಂದ ಸಾಕಷ್ಟು ಪ್ರೋಟಿನ್ ದೊರೆಯುತ್ತದೆ. ಹೀಗಾಗಿ ಸಸ್ಯಾಹಾರಿಗಳಿಗೆ ಸೋಯಾಬೀನ್ ಅತ್ಯುತ್ತಮ ಪ್ರೋಟಿನ್ ಮೂಲವಾಗಬಲ್ಲುದು.

ಹೃದಯವನ್ನು ರಕ್ಷಿಸುತ್ತದೆ

 ಪ್ರಾಣಿಜನ್ಯ ಪ್ರೋಟಿನ್‌ಗೆ ಬದಲು ಸೋಯಾ ಪ್ರೋಟಿನ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿಕೊಳ್ಳಬಹುದಾಗಿದೆ. ಅಲ್ಲದೆ ಅದು ಹೃದಯಾಘಾತ ಅಥವಾ ಮಿದುಳಿನ ಆಘಾತಕ್ಕೆ ಕಾರಣವಾಗಬಲ್ಲ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೋಯಾಬೀನ್‌ನಲ್ಲಿರುವ ಲಿನೋಲಿಕ್ ಮತ್ತು ಲಿನೋಲೆನಿಕ್ ಆಮ್ಲಗಳು ಸ್ನಾಯುಗಳ ಕಾರ್ಯವನ್ನು ಕ್ರಮಬದ್ಧಗೊಳಿಸುವಲ್ಲಿ ಮತ್ತು ರಕ್ತದೊತ್ತಡವನ್ನು ಸಾಮಾನ್ಯ ಮಟ್ಟದಲ್ಲಿ ಕಾಯ್ದುಕೊಳ್ಳಲು ನೆರವಾಗುತ್ತವೆ.

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಸೋಯಾಬೀನ್ ಮಾಸಿಕ ಋತುಚಕ್ರ ನಿಂತಿರುವ ಮಹಿಳೆಯರಲ್ಲಿ ಮೂಳೆ ಮತ್ತು ಕ್ಯಾಲ್ಶಿಯಂ ಸಮತೋಲನದ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಇಂತಹ ಮಹಿಳೆಯರು ಸಸ್ಯಾಹಾರಿಗಳಾಗಿದ್ದರೂ ಸೋಯಾಬೀನ್ ಅವರಲ್ಲಿ ಆಸ್ಟಿಯೊಪೊರೊಸಿಸ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ತೂಕವನ್ನು ತಗ್ಗಿಸುತ್ತದೆ

ತನ್ನಲ್ಲಿರುವ ಕಡಿಮೆ ಕಾರ್ಬೋಹೈಡ್ರೇಟ್‌ಗಳಿಂದಾಗಿ ಸೋಯಾಬೀನ್ ಕಡಿಮೆ ಗೈಸೆಮಿಕ್ ಸೂಚಿಯನ್ನು ಹೊಂದಿದೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೊತೆಗೆ ದೇಹತೂಕವನ್ನು ಇಳಿಸಿಕೊಳ್ಳಲೂ ಅದು ಪೂರಕವಾಗಿದೆ. ಹೀಗಾಗಿ ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಗಿರಲಿ, ಮಧುಮೇಹಿಗಳ ಪಾಲಿಗೆ ಅದು ಸೂಕ್ತ ಆಹಾರವಾಗಿದೆ.

ಕ್ಯಾನ್ಸರ್‌ನ್ನು ತಡೆಯುತ್ತದೆ

ಸೋಯಾಬೀನ್‌ನಲ್ಲಿ ಆ್ಯಂಟಿ ಆಕ್ಸಿಡಂಟ್‌ಗಳು ಅಥವಾ ಉತ್ಕರ್ಷಣ ನಿರೋಧಕಗಳು ಅತ್ಯಧಿಕ ಪ್ರಮಾಣದಲ್ಲಿರುವುದರಿಂದ ಅದು ಸ್ತನ ಕ್ಯಾನ್ಸರ್ ಅಥವಾ ಪ್ರಾಸ್ಟೇಟ್ ಕ್ಯಾನ್ಸರ್‌ನಂತಹ ಅರ್ಬುದಗಳನ್ನು ತಡೆಯುವಲ್ಲಿ ನೆರವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ಬೆಳಕಿಗೆ ತಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News