ಪೀಟರ್ಸ್‌ಬರ್ಗ್ ಸೂಪರ್‌ಮಾರ್ಕೆಟ್ ಸ್ಫೋಟ ಉಗ್ರರ ಕೃತ್ಯ: ಪುಟಿನ್

Update: 2017-12-28 17:04 GMT

ಮಾಸ್ಕೊ, ಡಿ.28: ಬುಧವಾರದಂದು ರಷ್ಯಾದ ಪೀಟರ್ಸ್‌ಬರ್ಗ್ ಸೂಪರ್ ಮಾರ್ಕೆಟ್ ಬಳಿ ಸಂಭವಿಸಿದ ಬಾಂಬ್ ಸ್ಫೋಟವು ಭಯೋತ್ಪಾದಕರ ಕೃತ್ಯ ಎಂದು ತಿಳಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭದ್ರತಾ ಪಡೆಗಳ ಪ್ರಾಣಕ್ಕೆ ಅಪಾಯ ಒಡ್ಡುವ ಶಂಕಿತ ಉಗ್ರರನ್ನು ಕಂಡಲ್ಲಿ ಗುಂಡಿಕ್ಕಿ ಹತ್ಯೆ ಮಾಡಲು ಸೂಚನೆ ನೀಡಿದ್ದಾರೆ.

ಸಿರಿಯಾದಲ್ಲಿ ಸೇವೆ ಸಲ್ಲಿಸಿರುವ ರಷ್ಯಾದ ಯೋಧರಿಗೆ ಗುರುವಾರ ಕ್ರೆಮ್ಲಿನ್‌ನಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಪುಟಿನ್ ಈ ವಿಷಯ ತಿಳಿಸಿದರು. ಬುಧವಾರದಂದು ರಷ್ಯಾದ ಪೆರೆಕ್ರೆಸ್ಟೋಕ್ ಸೂಪರ್ ಮಾರ್ಕೆಟ್‌ಗಳ ಸರಣಿಯ ಶಾಖೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹದಿಮೂರು ಮಂದಿ ಗಾಯಗೊಂಡಿದ್ದರು.

ಈ ಸ್ಫೋಟವನ್ನು ಲೋಹಗಳಿಂದ ತುಂಬಲಾಗಿದ್ದ ಮನೆಯಲ್ಲೇ ತಯಾರಿಸಲಾದ ಸ್ಫೋಟಕವನ್ನು ಬಳಸಿ ನಡೆಸಲಾಗಿತ್ತು ಎಂದು ತಿಳಿಸಿರುವ ತನಿಖಾ ತಂಡದ ಅಧಿಕಾರಿಗಳು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಶಾಪಿಂಗ್‌ಗೆ ಬರುವ ಗ್ರಾಹಕರು ತಮ್ಮ ವಸ್ತುಗಳನ್ನು ಇಡುವ ಜಾಗದಲ್ಲಿ ಈ ಸ್ಫೋಟಕವನ್ನು ಅಡಗಿಸಿಡಲಾಗಿತ್ತು ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಈ ತಿಂಗಳ ಆರಂಭದಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನ ಕಝಂನ್ಸ್ಕಿ ಚರ್ಚ್ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಅಮೆರಿಕನ್ ಗುಪ್ತಚರ ಇಲಾಖೆಯ ಮಾಹಿತಿಯಾಧಾರದಲ್ಲಿ ಈ ದಾಳಿಯನ್ನು ತಪ್ಪಿಸಲಾಗಿತ್ತು ಎಂದು ಪುಟಿನ್ ತಿಳಿಸಿದ್ದಾರೆ. ಇಸ್ಲಾಮಿಕ್ ಉಗ್ರರ ಜೊತೆ ಸಿರಿಯಾದಲ್ಲಿ ಹೋರಾಡುತ್ತಿರುವ ಸಾವಿರಾರು ರಷ್ಯನ್ ಪ್ರಜೆಗಳನ್ನು ರಷ್ಯಾಕ್ಕೆ ಮರಳಲು ಬಿಡುತ್ತಿದ್ದರೆ ರಷ್ಯಾದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು ಎಂದು ಪುಟಿನ್ ಇದೇ ವೇಳೆ ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News