ಯುದ್ಧ ಸಮಯದ ಲೈಂಗಿಕ ಗುಲಾಮಗಿರಿ: ಜಪಾನ್ ಜೊತೆ ಒಪ್ಪಂದ ನವೀಕರಿಸಲು ದ.ಕೊರಿಯಾ ನಿರ್ಧಾರ
ಸಿಯೋಲ್, ಡಿ.28: ಕೊರಿಯನ್ ಮಹಿಳೆಯರನ್ನು ಯುದ್ಧಸಮಯದ ಲೈಂಗಿಕ ಗುಲಾಮಗಿರಿಗೆ ತಳ್ಳಿದ ದಶಕಗಳಷ್ಟು ಹಳೆಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ 2015ರಲ್ಲಿ ಜಪಾನ್ ಜೊತೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಗಂಭೀರ ಸ್ವರೂಪದ ತಪ್ಪುಗಳಿರುವುದಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಗುರುವಾರ ತಿಳಿಸಿದ್ದಾರೆ.
ಎರಡೂ ದೇಶಗಳು ಈ ಒಪ್ಪಂದವನ್ನು ಅಂತಿಮ ಮತ್ತು ಬದಲಾಯಿಸಲಾಗದ್ದು ಎಂದು ಘೋಷಿಸಿದ ಎರಡು ವರ್ಷಗಳ ನಂತರ ಮೂನ್ ಜೇ-ಇನ್ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವುದು ಮತ್ತು ಆ ಕ್ರಮಗಳು ಯಾವುದು ಎಂದು ಸ್ಪಷ್ಟಪಡಿಸದೆ ಇರುವುದು ಈ ಒಪ್ಪಂದದ ಮುಂದುವರಿಕೆ ಬಗ್ಗೆಯೇ ಸಂಶಯ ಹುಟ್ಟುಹಾಕಿದೆ. ದ.ಕೊರಿಯಾದ ಈ ಹಿಂದಿನ ಸಂಪ್ರದಾಯವಾದಿ ಸರಕಾರ ಈ ಒಪ್ಪಂದವನ್ನು ಮಾಡುವ ವೇಳೆ ಸಂತ್ರಸ್ತರ ಜೊತೆ ಸರಿಯಾಗಿ ಚರ್ಚಿಸುವಲ್ಲಿ ವಿಫಲವಾಗಿದೆ ಎಂದು ಸರಕಾರ ನಿಯೋಜಿತ ಸಮಿತಿಯು ನೀಡಿರುವ ವರದಿಯ ಆಧಾರದಲ್ಲಿ ಮೂನ್ ಈ ಹೇಳಿಕೆಯನ್ನು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾ ಸರಕಾರ ಲೈಂಗಿಕ ಗುಲಾಮಗಿರಿ ಎಂಬ ಶಬ್ದವನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ಸಿಯೋಲ್‌ನಲ್ಲಿರುವ ರಾಯಭಾರ ಕಚೇರಿಯ ಮುಂದೆ ಸ್ಥಾಪಿಸಲಾಗಿರುವ ಲೈಂಗಿಕ ಗುಲಾಮರನ್ನು ಪ್ರತಿನಿಧಿಸುವ ಕಂಚಿನ ಪ್ರತಿಮೆಯನ್ನು ತೆಗೆಯಲು ನಿರ್ದಿಷ್ಟ ಯೋಜನೆಯನ್ನು ರೂಪಿಸಬೇಕು ಎಂಬ ಜಪಾನ್‌ನ ಬೇಡಿಕೆಗಳು ಸೇರಿದಂತೆ ಒಪ್ಪಂದದಲ್ಲಿ ತಿಳಿಸಲಾಗಿರುವ ಹಲವು ವಿಷಯಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಸಮಿತಿ ತಿಳಿಸಿದೆ.
ಈ ಒಪ್ಪಂದವು ಎರಡು ದೇಶಗಳು ಪರಸ್ಪರ ನೀಡಿರುವ ಅಧಿಕೃತ ಭರವಸೆ ಮತ್ತು ಅದನ್ನು ಎರಡೂ ದೇಶಗಳ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿದಿದ್ದರೂ ನಾನು ಈ ದೇಶದ ಅಧ್ಯಕ್ಷನಾಗಿ ಮತ್ತು ಕೊರಿಯನ್ ಜನರ ಪರವಾಗಿ ಮತ್ತೊಮ್ಮೆ ದೃಡವಾಗಿ ಹೇಳುವುದೇನೆಂದರೆ ಈ ಒಪ್ಪಂದವು ಲೈಂಗಿಕ ಗುಲಾಮಗಿರಿಗೆ ತಳ್ಳಲ್ಪಟ್ಟ ಮಹಿಳೆಯರ ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಎಂದು ಮೂನ್ ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ಜಪಾನ್ ಬದುಕಿರುವ ಲೈಂಗಿಕ ಗುಲಾಮಗಿರಿ ಸಂತ್ರಸ್ತರಿಗೆ ನಗದು ಪರಿಹಾರ ನೀಡುವುದಾಗಿ ಒಪ್ಪಿಕೊಂಡಿದ್ದರೆ ದಕ್ಷಿಣ ಕೊರಿಯಾ ರಾಯಭಾರ ಕಚೇರಿಯ ಮುಂದೆ ಇರುವ ಪ್ರತಿಮೆಯನ್ನು ತೆಗೆಯುವ ಮೂಲಕ ಜಪಾನ್ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿತ್ತು.