ಯಾರಿಗೂ ಈ ಬದುಕು ಬೇಡ - ಬೆಜವಾಡ ವಿಲ್ಸನ್

Update: 2017-12-29 07:22 GMT

ಬೆಜವಾಡ ವಿಲ್ಸನ್ ಕೈಯಾರೆ ಮಲ ಶುಚಿಗೊಳಿಸುವುದನ್ನು ನಿರ್ಮೂಲನಗೊಳಿಸಲು ಮೂರು ದಶಕಗಳಿಂದ ‘ಸಫಾಯಿ ಕರ್ಮಚಾರಿ ಆಂದೋಲನ’ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಇತ್ತೀಚೆಗೆ ‘ಹಿಂದೂ’ ಪತ್ರಿಕೆಗಾಗಿ ಖ್ಯಾತ ಸಾಹಿತಿ ಪೆರುಮಾಳ್ ಮುರುಗನ್ ಅವರನ್ನು ಸಂದರ್ಶಿಸಿದರು. ಆ ಸುದೀರ್ಘ ಸಂದರ್ಶನವನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಅನಂತಕುಮಾರ್ ಹೆಗಡೆಯಂತಹವರು ಗರ್ವದಿಂದ ತಮ್ಮ ಜಾತಿಯನ್ನು ಹೇಳಿಕೊಳ್ಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ತಮ್ಮ ಜಾತಿಯನ್ನು ಹೇಳಿಕೊಳ್ಳಲು ಸಂಕೋಚ ಪಟ್ಟುಕೊಳ್ಳಬೇಕಾದ ಜನ ಕೂಡ ನಮ್ಮ ನಡುವೆ ಇದ್ದಾರೆ. ಅವರ ನೋವುಗಳಿಗೆ ಸ್ಪಂದಿಸುವ ಸಂವೇದನೆಯನ್ನೇ ಕಳೆದುಕೊಂಡಿದ್ದೇವೆ. ಅಂತಹವರ ಘನತೆಗಾಗಿ ಹೋರಾಡುತ್ತಿರುವ ಬೆಜವಾಡ ವಿಲ್ಸನ್ ಅಂತಹವರೇ ಇಂದು ನಮಗಿರುವ ಭರವಸೆ. ಇವರ ಬದುಕನ್ನು ನೋಡಿಯೂ, ಜಾತಿಯನ್ನು ಮೀರಿಕೊಂಡು ಬದುಕಬೇಕಾದ ಆವಶ್ಯಕತೆಯನ್ನು ಅರ್ಥಮಾಡಿಕೊಳ್ಳಲಾಗದಷ್ಟು ಸಂವೇದನೆಯನ್ನು ನಾವು ಕಳೆದುಕೊಂಡಿಲ್ಲ ಅನ್ನುವ ಆಶಾಭಾವನೆಯಿಂದ ಇದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

-ಟಿ. ಎಸ್. ವೇಣುಗೋಪಾಲ್, ಶೈಲಜ

ಕೈಯಾರೆ ಮಲ ಶುಚಿಗೊಳಿಸುತ್ತಿರುವಾಗ ಇಬ್ಬರು ತೋಟಿಗಳು ಸತ್ತರು. ಹೋದವಾರ ಮೂವರು ಸತ್ತಿದ್ದರು. ಸಾಯುತ್ತಲೇ ಇದ್ದಾರೆ. ಇಂತಹ ಘಟನೆಗಳು ಎಲ್ಲೆಡೆ ನಡೆಯುತ್ತಲೇ ಇವೆ. ಈ ಬಗ್ಗೆ ಸಾಫಾಯಿ ಕರ್ಮಚಾರಿ ಆಂದೋಲನವು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಮೊಕದ್ದಮೆ ಹೂಡಿತ್ತು. ಯಾವ ವ್ಯಕ್ತಿಯೂ ಕೈಯಾರೆ ಮಲಶುಚಿ ಮಾಡಬಾರದು. ಅದಕ್ಕೆ ಯಂತ್ರಗಳನ್ನು ಬಳಸಬೇಕು ಎಂದು ತೀರ್ಪು ಹೇಳುತ್ತದೆ.. ಮನುಷ್ಯರನ್ನು ಬಳಸಿಕೊಳ್ಳಲೇಬೇಕಾದಾಗ ಅವರ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತದೆ. ಆದರೆ ಸರಕಾರಗಳು ಈವರೆಗೂ ಅಂತಹ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಅದಕ್ಕೆ, ಆವಶ್ಯಕವಾದ ಂತ್ರಜ್ಞಾನವನ್ನೂ ಬಳಸುತ್ತಿಲ್ಲ.

ಕೈಯಾರೆ ಮಲ ಶುಚಿಮಾಡುವುದನ್ನು 1993ರಲ್ಲಿ ಅಧಿಕೃತವಾಗಿ ರದ್ದುಗೊಳಿಸಲಾಯಿತು. 2014ರಲ್ಲಿ ಸತ್ತವರ ಕುಟುಂಬದವರಿಗೆ 10 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಹೀಗೆ ಸತ್ತವರ 1,470 ಪ್ರಕರಣಗಳನ್ನು ನಾವು ದಾಖಲಿಸಿದ್ದೇವೆ. ಆದರೆ ಹಲವು ಪ್ರಕರಣಗಳಲ್ಲಿ ಆವಶ್ಯಕ ದಾಖಲೆಗಳು ಲಭ್ಯವಿಲ್ಲದೆ, ಹಲವು ಕುಟುಂಬಗಳಿಗೆ ಪರಿಹಾ ಕೊಡಿಸುವುದಕ್ಕೆ ಸಾಧ್ಯವಾಗಿಲ್ಲ.

 ಅವರು ಸತ್ತ ಮೇಲೆ ಅವರ ಕುಟುಂಬಕ್ಕೆ 10 ರೂ. ಲಕ್ಷ ಪರಿಹಾರ ಕೊಡಿಸಲು ಹೋರಾಡುತ್ತಿರುವ ನಮ್ಮ ಕ್ರಮ ಸರಿಯಿಲ್ಲ ಎಂದು ನಮಗನ್ನಿಸತೊಡಗಿತು. ಜನ ಸಾಯುವುದನ್ನು ತಪ್ಪಿಸುವುದು ಸರಿಯಾದ ಕ್ರಮ ಎಂದೆನ್ನಿಸಿತು. ನಮ್ಮನ್ನು ಕೊಲ್ಲುವುದನ್ನು ನಿಲ್ಲಿಸಿ ಎಂದು ಘೋಷಣೆ ಕೂಗತೊಡಗಿದೆವು. ಅಂತಿಮವಾಗಿ ನಾವು ಈ ಕೆಲಸವನ್ನೇ ಮಾಡಬಾರದು ಎಂದು ಹೋರಾಡಲಾರಂಭಿಸಿದ್ದೇವೆ. ನಮ್ಮ ತಂದೆ ತಾಯಿಗಳಿಗೆ ನಾನು ಆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ನನ್ನನ್ನು ಶಾಲೆಗೆ ಕಲಿಸಿದರು. ನನ್ನ ಜಾತಿಯನ್ನು ಹೇಳಿಕೊಳ್ಳುವುದಕ್ಕೆ ನನಗೆ ನಾಚಿಕೆಯಾಗುತ್ತಿತ್ತು. ಆಟವಾಡುವಾಗ ನನ್ನನ್ನವರು ತೋಟಿ ಎನ್ನುತ್ತಿದ್ದರು. ಯಾಕೆ ಹಾಗೆ ಕರೆಯುತ್ತಾರೆ ಎಂದು ಅಮ್ಮನನ್ನು ಕೇಳಿದಾಗೆಲ್ಲಾ, ‘‘ನಮ್ಮ ಮನೆ ಬಳಿ ತೊಟ್ಟಿಯಿದೆಯಲ್ಲಾ ಅದಕ್ಕೆ ಹಾಗೆನ್ನುತ್ತಾರೆ’’ ಎನ್ನುತ್ತಿದ್ದರು. ನಮ್ಮ ಅಪ್ಪ 1976ರಲ್ಲಿ ನಿವೃತ್ತರಾಗಿದ್ದರು. ಅಣ್ಣ ಟ್ಯಾಕ್ಸಿ ಡ್ರೈವರ್ ಅಂತ ಸುಳ್ಳು ಹೇಳಿದ್ದ. ಅವನು ಮದುವೆ ಆಗಿದ್ದೂ ಸುಳ್ಳು ಹೇಳಿಯೇ. ಅವನ ಬಳಿ ಹೊಲಸುನಾತ ಬರುತ್ತಿದೆ ಅಂತ ನಮ್ಮತ್ತಿಗೆ ಒಮ್ಮೆ ಹೇಳಿದ್ದಳು. ಮಲ ಹೊತ್ತಿದ್ದ ಟ್ರಾಕ್ಟರ್ ಓಡಿಸಿದ್ದರಿಂದ ಆ ವಾಸನೆ ಬರುತ್ತಿರಬಹುದೆಂದು ಸಮಜಾಯಿಷಿ ನೀಡಿದ್ದ.

ಒಮ್ಮೆ ಪರಿಚಿತನೊಬ್ಬನ ಜೊತೆ ಅವರು ಕೆಲಸ ಮಾಡುವ ಜಾಗಕ್ಕೆ ಹೋದೆ. ಅವನು ಕಕ್ಕಸ್ಸು ತೆಗೆಯುವುದಕ್ಕೆ ಟ್ಯಾಂಕಿನಲ್ಲಿ ಒಂದು ಬಕೆಟ್ ಹಾಕಿದ. ಅದು ಟ್ಯಾಂಕಿನಲ್ಲಿ ಬಿದ್ದುಹೋಯಿತು. ಅದನ್ನು ತೆಗೆಯುವುದಕ್ಕೆ ಟ್ಯಾಂಕಿಗೆ ಕೈಹಾಕಿದ. ಬಕೆಟ್ ಸಿಗಲಿಲ್ಲ. ಅವನೇ ಟ್ಯಾಂಕಿನೊಳಗಿಳಿದ. ನಾನು ನೋಡುತ್ತಲೇ ಇದ್ದೆ. ಮಣ್ಣಿನಲ್ಲಿ ಆಟವಾಡುವ ಮಕ್ಕಳಂತೆ ಕಕ್ಕಸ್ಸಿನಲ್ಲಿ ಬಕೆಟ್ ಹುಡುಕುತ್ತಿದ್ದ. ‘‘ಇದೆಂತಹ ಕೆಲಸ? ಏನು ಮಾಡುತ್ತಿದ್ದೀಯ? ಮೇಲೆ ಬಾ’’ ಎಂದೆ. ಅವನು ಒಪ್ಪಲಿಲ್ಲ. ನಾನು ಸುತ್ತ ಇದ್ದವರ ಕೈಹಿಡಿದುಕೊಂಡು ಇಂತಹ ಕೆಲಸ ಮಾಡಬೇಡಿ ಅಂತ ಬೇಡಿಕೊಂಡೆ. ನನಗೆ ಆಗ ಹದಿನೆಂಟೋ ಹತ್ತೊಂಬತ್ತೋ ವರ್ಷ. ಅವರು ತಮ್ಮ ಕೈಗಳು ಕೊಳಕಾಗಿವೆ, ಮುಟ್ಟಬೇಡ ಅಂತ ನನ್ನನ್ನು ದೂರ ತಳ್ಳಿದರು. ನಾನು ತಬ್ಬಿಬ್ಬಾಗಿದ್ದೆ. ‘‘ನೀವೂ ಮನುಷ್ಯರು, ನೀವು ಹೀಗೆ ಮಾಡಬಾರದು’’ ಎಂದೆ. ನಾನು ನೆಲದ ಮೇಲೆ ಬಿದ್ದು ಹೊರಳಾಡಿ, ಜೋರಾಗಿ ಅತ್ತೆ.

ಪಿಚ್ಚಮ್ಮ ಅಂತ ಮುದುಕಿಯೊಬ್ಬರು ಹತ್ತಿರ ಬಂದು, ‘‘ಯಾಕೆ ಹೀಗೆ ಮಾಡುತ್ತಿದ್ದೀಯ, ಏಳು’’ ಅಂತಂದರು. ‘‘ಅವರು ಈ ಕೆಲಸವನ್ನು ಮುಂದೆಂದೂ ಮಾಡುವುದಿಲ್ಲವೆಂದು ಭರವಸೆಯಿತ್ತರೆ ಮಾತ್ರ ಏಳುತ್ತೇನೆ’’ ಎಂದೆ. ‘‘ಪಾಪ ಮಗು ಅಳುತ್ತಿದೆ. ನಾವು ತಪ್ಪುಮಾಡುತ್ತಿದ್ದೇವೆಂದು ಆ ಮಗು ಹೇಳುತ್ತಿದೆ. ಈ ಮಗು ಹೇಳುತ್ತಿರುವುದು ನಿಜವಲ್ಲವೇ? ಹೊರಗೆ ಬನ್ನಿ’’ ಅಂದರು ಅವರು. ‘‘ನನ್ನ ಕೈಗಳನ್ನು ನೋಡು, ನನ್ನ ಬದುಕನ್ನು ನೋಡು’’ ಅಂದರು. ಅವರ ಕಣ್ಣಲ್ಲಿ ನೀರುತುಂಬಿತ್ತು. ನಾನು ಅವರನ್ನು ಹಿಡಿದುಕೊಂಡು ಅಳತೊಡಗಿದೆ. ‘‘ಅಳಬೇಡ, ನೀನು ಮಾಡುತ್ತಿರುವುದು ಸರಿ. ಇದನ್ನು ಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ. ಹೊಟ್ಟೆಪಾಡಿಗೆ ಇದನ್ನೆಲ್ಲಾ ಮಾಡುತ್ತಾರೆ. ಆದರೆ ವಾಡಿದ ಮೇಲೆ ಸರಿಯಾಗಿ ಊಟ ಮಾಡಲೂ ಆಗುವುದಿಲ್ಲ. ಎಲೆಅಡಿಕೆ ಹಾಕಿಕೊಂಡು ಕೂರುತ್ತೇವೆೆ, ಎಂತಹ ಬದುಕು ನಮ್ಮದು?’’

ನನಗೆ ಇಂತಹ ಅನುಭವಗಳೇ ಇರಲಿಲ್ಲ. ಏನು ಮಾಡಬಹುದೆಂದು ರಾತ್ರಿ ಇಡೀ ಚಿಂತಿಸುತ್ತಿದ್ದೆ. ಎಲ್ಲರೊಡನೆ ಮಾತನಾಡುವುದೆಂದು ನಿರ್ಧರಿಸಿದೆ.

ತೋಟಿಗಳೊಡನೆ ಮಾತನಾಡುತ್ತಾ, ಅವರ ಕಷ್ಟಸುಖ ವಿಚಾರಿಸಿದೆ. ದಿನ ಕಳೆದಂತೆ ಅವರು ನನ್ನನ್ನು ನಂಬತೊಡಗಿದರು. ಕೈಯಾರೆ ಮಲ ಶುಚಿಮಾಡುವುದು ಅಪಾಯಕಾರಿ ಎಂದು ಪ್ರಧಾನಿಗಳಿಗೆ ಪತ್ರ ಬರೆದೆ. ಕರ್ನಾಟಕ ಹಾಗೂ ಆಂಧ್ರ ಸುತ್ತಿದೆ. ನಮ್ಮ ಸಂಘಟನೆಗೆ ಹೆಸರೇ ಇರಲಿಲ್ಲ. ಹೆಸರಿಲ್ಲದೆಯೇ ಒಂದು ದಶಕ ಕೆಲಸಮಾಡಿದೆವು. 1992ರಲ್ಲಿ ನಮ್ಮ ಸಂಘಟನೆಗೆ ‘ಸಫಾಯಿ ಕರ್ಮಚಾರಿ ಆಂದೋಲನ’ ಅಂತ ಹೆಸರಿಟ್ಟೆವು. ಮೆರವಣಿಗೆ ನಡೆಸಿದೆವು. ನಮ್ಮಲ್ಲಿ 6,000 ಸ್ವಯಂಸೇವಕರಿದ್ದಾರೆ. ಅವರಲ್ಲಿ ಪೂರ್ಣಕಾಲಿಕ ಸ್ವಯಂಸೇವಕರು ಇನ್ನೂರು. ನನಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದ ಮೇಲೆ ಹೆಚ್ಚೆಚ್ಚು ಜನ ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಡಾಕ್ಟರುಗಳು, ಇಂಜಿನಿಯರುಗಳು, ವಿಜ್ಞಾನಿಗಳು ನಮ್ಮಾಂದಿೆ ಕೆಲಸಮಾಡಲು ಉತ್ಸಾಹಿತರಾಗಿದ್ದಾರೆ.

ನಮಗೆ ಯಾವುದೇ ಜಾತಿಧರ್ಮಗಳ ಕಟ್ಟುಪಾಡುಗಳಿಲ್ಲ. ನಿನ್ನೆ ಒಬ್ಬ ಮುಸಲ್ಮಾನ ತೀರಿಹೋದ. ನಾವು ಮಣ್ಣುಮಾಡಲು ಹೋಗಿದ್ದೆವು. ‘‘ಅವನು ಸಂಬಂಧವೆನ್ನುತ್ತೀರಲ್ಲಾ, ನೀವು ಮುಸ್ಲಿಮರೇ?’’ ಎಂದವರು ಕೇಳಿದರು. ‘‘ಈ ದೇಶದಲ್ಲಿ ಸೆಪ್ಟಿಕ್‌ಟ್ಯಾಂಕ್ ಶುದ್ಧೀಕರಿಸುತ್ತಾ ತೀರಿಹೋದವರೆಲ್ಲರೂ ನಮ್ಮ ಸಂಬಂಧಿಕರೇ’’ ಅಂದೆ.

ತಲೆಯ ಮೇಲೆ ಮಲಹೊರುವ ಪದ್ಧತಿ ಇಂದಿಗೂ ಜೀವಂತವಿದೆ. 1.6 ಲಕ್ಷ ಜನ ಇಂದಿಗೂ ಆ ಕೆಲಸ ಮಾಡುತ್ತಿದ್ದಾರೆ. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಗುಜರಾತ್, ರಾಜಸ್ಥಾನ ಕಾಶ್ಮೀರ ಹಾಗೂ ಉತ್ತರಾಂಚಲದಲ್ಲಿ ಅಂತಹ ಹಲವಾರು ಒಣಕಕ್ಕಸ್ಸುಗಳಿವೆ. ಸರಕಾರಗಳು ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ.

 ಫ್ಲಶ್ ವ್ಯವಸ್ಥೆ ಬಂದ ಮೇಲೆೆ ಪ್ರತೀಮನೆಯಲ್ಲಿ ಒಂದು ಸೆಪ್ಟಿಕ್ ಟ್ಯಾಂಕ್ ಇರುತ್ತದೆ. ಅದನ್ನು ಸ್ವಚ್ಛಗೊಳಿಸುವುದಕ್ಕೆ ಯಂತ್ರಗಳು ಇವೆ. ಐದು ಲಕ್ಷ ಜನರಿರುವಲ್ಲಿ ಕನಿಷ್ಠ 50 ಯಂತ್ರಗಳಿರಬೇಕು. ಆದರೆ ಹೆಚ್ಚಿನೆಡೆ ಒಂದೋ ಎರಡೋ ಯಂತ್ರಗಳಿವೆ. ಯಂತ್ರಗಳೇ ಇಲ್ಲದ ಮುನಿಸಿಪಾಲಿಟಿಗಳು ಶೇ. 80ಕ್ಕಿಂತ ಹೆಚ್ಚಿವೆ. ಅಲ್ಲೆಲ್ಲಾ ುನುಷ್ಯರೇ ಸ್ವಚ್ಛಗೊಳಿಸುತ್ತಾರೆ.

ಭಾರತೀಯ ರೈಲ್ವೆಯಲ್ಲಿ 1.74 ಲಕ್ಷ ಕೋಚುಗಳಲ್ಲಿ ಕಕ್ಕಸ್ಸುಗಳಿವೆ. ಹಳಿಗಳ ಮೇಲೆ ಬಿದ್ದಿರುವ ಕಕ್ಕಸ್ಸನ್ನು ಮನುಷ್ಯರೇ ಸ್ವಚ್ಛಮಾಡಬೇಕು.

ಸರಕಾರಗಳು ಯಂತ್ರಗಳನ್ನೇಕೆ ಬಳಸುತ್ತಿಲ್ಲ?

ಆ ಕೆಲಸ ಮಾಡುತ್ತಿರುವವರು ಪರಿಶಿಷ್ಟ ಜಾತಿ ಹಾಗೂ ಅಂಚಿಗೆ ಸರಿದುಹೋದ ಸಮುದಾಯದವರು. ಅವರ ಧ್ವನಿ ಯಾರಿಗೂ ಕೇಳಿಸುವುದಿಲ್ಲ. ಅವರಿಗೆ ರಾಜಕೀಯ ಪ್ರಭಾವವಿಲ್ಲ. ಯಂತ್ರಗಳನ್ನು ಬಳಸುವುದಕ್ಕೆ ಹಣಬೇಕು. ರಾಜಕಾರಣಿಗಳು ಏನಾದರೂ ಮಾಡಬೇಕಾದರೆ ಅವರಿಗೆ ಹಣ ಸಿಗಬೇಕು ಅಥವಾ ಓಟು ಸಿಗಬೇಕು. ಈ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಆ ಇಚ್ಛಾಶಕ್ತಿ ತೋರದೆ ಇರುವುದರಿಂದ ಇದನ್ನು ಸರಕಾರ ಮಾಡುತ್ತಿರುವ ಕೊಲೆ ಎಂದು ನಾವು ಭಾವಿಸುತ್ತೇವೆ.

 ಕಕ್ಕಸು ಸ್ವಚ್ಛಮಾಡುವುದು ದಲಿತರಿಗೇ ಮೀಸಲಾದ ಕೆಲಸ. ಹಾಗಾಗಿ ಆ ಕ್ಷೇತ್ರದಲ್ಲಿ ಬೆಳವಣಿಗೆ ಆಗಿಲ್ಲ. ಎಲ್ಲ ರಂಗಗಳಲ್ಲಿಯೂ ವ್ಯಾಪಕ ಸಂಶೋಧನೆಗಳಾಗಿವೆ. ಆದರೆ ಶೌಚಾಲಯಕ್ಕೆ ಸಂಬಂಧಿಸಿದಂತೆ ಸಂಶೋಧನೆಯೇ ಆಗಿಲ್ಲ. ಮಲ ಸ್ವಚ್ಛಮಾಡುವುದಕ್ಕೆ ತಂತ್ರಜ್ಞಾನ ಪತ್ತೆಹಚ್ಚಲಾಗಿಲ್ಲ. ಈ ತಾರತಮ್ಯಕ್ಕೆ ಜಾತಿಯೇ ಕಾರಣ. ನಾವು 130 ಕೋಟಿ ಜನ ಇದ್ದೇವೆ. ನಮ್ಮ ಕಕ್ಕಸನ್ನು ಸ್ವಚ್ಛಮಾಡುವುದಕ್ಕೇ ಒಂದು ಜಾತಿ ಇದೆ. ಅದ ಬಗ್ಗೆ ನಾವು ಯೋಚಿಸುವುದೂ ಇಲ್ಲ.

ಅಷ್ಟಕ್ಕೂ ಅದರಲ್ಲಿ ತಲೆಕೆಡಿಸಿಕೊಳ್ಳುವುದಕ್ಕೆ ಏನಿದೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ರೈತರು ಗದ್ದೆಯಲ್ಲಿ ಕೆಲಸಮಾಡುತ್ತಾರೆ. ಹೆಂಗಸರು ಮನೆ ಕೆಲಸಮಾಡುತ್ತಾರೆ. ಹಾಗೆ ತೋಟಿಗಳು ಕಕ್ಕಸನ್ನು ಸ್ವಚ್ಛಮಾಡುತ್ತಾರೆ. ಅದರಲ್ಲೇನಿದೆ? ಇದು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ನಮ್ಮ ಆಳದಲ್ಲಿ ಬೇರೂರಿರುವ ಜಾತೀಯತೆ, ಅತಿರೇಕದ ದೇಶಪ್ರೇಮ ಇದಕ್ಕಿಂತ ಭಿನ್ನವಾಗಿ ನೋಡಲು ನಮ್ಮನ್ನು ಬಿಡುತ್ತಿಲ್ಲ. ದೇಶಪ್ರೇಮ, ಭಾಷಾಪ್ರೇಮ ಇವೆಲ್ಲಾ ಎಷ್ಟೇ ಆದರೂ ರಾಷ್ಟ್ರೀಯ ಭಾವನೆಗಳು!

ಅಂಬೇಡ್ಕರ್ ರೂಪಿಸಿದ ಸಂವಿಧಾನ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಕುರಿತು ಮಾತನಾಡುತ್ತದೆ. ಸ್ವಾತಂತ್ರ್ಯ ಇನ್ನೂ ಪ್ರಾರಂಭವೇ ಆಗಿಲ್ಲ. ಸಮಾನತೆ ಹಾಗೂ ಭ್ರಾತೃತ್ವಕ್ಕೆ ಇನ್ನೂ ಬಲು ದೂರ ಸಾಗಬೇಕು. ನಮ್ಮ ಸಮಾನತೆಯ ಭಾವನೆಯೇ ತುಂಬಾ ಕಳಪೆಯಾದದ್ದು. ಕೆಲಸದವಳು ನಮ್ಮೆಂದಿಗೆ ಕುಳಿತು ಊಟಮಾಡುವುದಕ್ಕೆ ಸಾಧ್ಯವಾ?

ನಮ್ಮಲ್ಲಿ ಭ್ರಾತೃತ್ವವೆನ್ನುವುದು ಜಾತಿಯೊಳಗಷ್ಟೇ ಸಾಧ್ಯ. ಭಾರತದಲ್ಲಿ ಬ್ರಾಹ್ಮಣರಿದ್ದಾರೆ, ರೆಡ್ಡಿಗಳಿದ್ದಾರೆ, ದಲಿತರಿದ್ದಾರೆ. ಅವರವರೊಳಗಷ್ಟೇ ಭ್ರಾತೃತ್ವದ ಭಾವನೆ ಸಾಧ್ಯ. ಇನ್ನೊಂದು ಜಾತಿಯ ಜೊತೆಗೆ ಇದು ಸಾಧ್ಯವೇ ಇಲ್ಲ. ಪ್ರತಿಯೊಂದು ಹಳ್ಳಿಯಲ್ಲೂ ಒಂದೊಂದು ಜಾತಿಯವರು ಒಂದೊಂದು ಕಡೆ ವಾಸಿಸುತ್ತಾರೆ. ಎಲ್ಲರೂ ಒಟ್ಟಿಗೆ ಅಣ್ಣತಮ್ಮಂದಿರಂತೆ ಬದುಕುವುದಕ್ಕೆ ಸಾಧ್ಯವಾಗಿದ್ದರೆ ಮಲಶುಚಿಮಾಡುವ ಪದ್ಧತಿ ಅದರಷ್ಟಕ್ಕೆ ಮಾಯವಾಗಿಬಿಡುತ್ತಿತ್ತು.

ಈ ವೃತ್ತಿಯನ್ನು ದೈವೀಕರಿಸುವುದು ಘೋರ ಅಪರಾಧ. ‘‘ತೋಟಿಯ ಕೆಲಸ ಆಧ್ಯಾತ್ಮಿಕವಾದದ್ದು’’ ಎಂದು ನರೇಂದ್ರ ಮೋದಿಯವರೂ ಹೇಳಿದ್ದಾರೆ. ಅದು ಅಂತಹ ದೈವಿಕ ಅನುಭವವಾದರೆ ಅವರೇ ಯಾಕೆ ಮಾಡಬಾರದು? ಗಾಂಧಿ ಹೇಳಿದ್ದೂ ಇದನ್ನೇ. ‘‘ಮುಂದಿನ ಜನ್ಮದಲ್ಲಿ ತೋಟಿಯಾಗಿ ಹುಟ್ಟುತ್ತೇನೆ’’ ಎಂದರು. ಯಾರೂ ತೋಟಿಯಾಗಬಾರದೆಂಬುದು ನಮ್ಮ ಆಶಯ.

ಉತ್ತರಭಾರತದಲ್ಲಿ ಒಂದು ಲಕ್ಷ ತೋಟಿಗಳು ಆ ಕೆಲಸವನ್ನು ಬಿಡುವುದಾಗಿ ಘೋಷಿಸಿದರು. ಅದಕ್ಕೆ ಪರ್ಯಾಯವಾಗಿ ಬೇರೆ ಕೆಲಸ ಹಾಗೂ ಪರಿಹಾರ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದರು. ರಾಜಸ್ಥಾನದಲ್ಲಿಯೂ ಅವರು ತಮ್ಮ ವೃತ್ತಿಯನ್ನು ಬಿಟ್ಟರು. ಅವರು ನಿಜವಾಗಿ ಧೈರ್ಯವಂತರು. ಯಾರಿಗಾದರೂ ಪ್ರಶಸ್ತಿ ಕೊಡುವುದಾದರೆ ಅದು ಅವರಿಗೆ ಸಲ್ಲಬೇಕು. ಆ ವೃತ್ತಿಯನ್ನು ಬಿಟ್ಟು ಹೊರನಡೆದವರಿಗೆ ಅದು ಸಿಗಬೇಕು. ನಿಜಕ್ಕೂ ಅವರೇ ಅದಕ್ಕೆ ಅರ್ಹರು.

ನಮ್ಮಲ್ಲಿ ಭ್ರಾತೃತ್ವವೆನ್ನುವುದು ಜಾತಿಯೊಳಗಷ್ಟೇ ಸಾಧ್ಯ. ಭಾರತದಲ್ಲಿ ಬ್ರಾಹ್ಮಣರಿದ್ದಾರೆ, ರೆಡ್ಡಿಗಳಿದ್ದಾರೆ, ದಲಿತರಿದ್ದಾರೆ. ಅವರವರೊಳಗಷ್ಟೇ ಭ್ರಾತೃತ್ವದ ಭಾವನೆ ಸಾಧ್ಯ. ಇನ್ನೊಂದು ಜಾತಿಯ ಜೊತೆಗೆ ಇದು ಸಾಧ್ಯವೇ ಇಲ್ಲ. ಪ್ರತಿಯೊಂದು ಹಳ್ಳಿಯಲ್ಲೂ ಒಂದೊಂದು ಜಾತಿಯವರು ಒಂದೊಂದು ಕಡೆ ವಾಸಿಸುತ್ತಾರೆ. ಎಲ್ಲರೂ ಒಟ್ಟಿಗೆ ಅಣ್ಣತಮ್ಮಂದಿರಂತೆ ಬದುಕುವುದಕ್ಕೆ ಸಾಧ್ಯವಾಗಿದ್ದರೆ ಮಲಶುಚಿಮಾಡುವ ಪದ್ಧತಿ ಅದರಷ್ಟಕ್ಕೆ ಮಾಯವಾಗಿಬಿಡುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ