ನಿಮ್ಮ ಮಗು ಹಾಸಿಗೆ ಒದ್ದೆ ಮಾಡುತ್ತಿದೆಯೇ....? ಇಲ್ಲಿದೆ ಪರಿಹಾರ

Update: 2017-12-29 10:39 GMT

ಹೆತ್ತವರು ತಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಕಾಳಜಿ ವಹಿಸುತ್ತಿರುತ್ತಾರೆ. ಮಕ್ಕಳು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದಾಗೆಲ್ಲ ಅವರಿಗಿಂತ ಹೆತ್ತವರೇ ಹೆಚ್ಚು ಒದ್ದಾಡುತ್ತಾರೆ. ಮಕ್ಕಳ ಸಾಮಾನ್ಯ ಸಮಸ್ಯೆಗಳಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯೂ ಒಂದಾಗಿದೆ. ಮಕ್ಕಳು ನಿದ್ರೆಯಲ್ಲಿರುವಾಗಲೇ ತಮಗೆ ಅರಿವಿಲ್ಲದಂತೆ ಮೂತ್ರವನ್ನು ವಿಸರ್ಜಿಸುತ್ತಾರೆ. ಇದು ಶಿಶುಗಳಲ್ಲಿ ಮತ್ತು ಪುಟ್ಟಮಕ್ಕಳಲ್ಲಿ ಸಾಮಾನ್ಯವಾಗಿದೆ. ಮಕ್ಕಳು ಏಳು ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ ಏಳು ವರ್ಷ ಪ್ರಾಯದ ನಂತರವೂ ಈ ಸಮಸ್ಯೆ ಉಳಿದುಕೊಂಡಿದ್ದರೆ ಅದನ್ನು ತಕ್ಷಣವೇ ಪರಿಹರಿಸು ವುದು ಅಗತ್ಯವಾಗುತ್ತದೆ.

ಮಕ್ಕಳು ಮನೆಯಲ್ಲಿದ್ದಾಗ ನಿದ್ರೆಯಲ್ಲಿ ಹಾಸಿಗೆ ಒದ್ದೆ ಮಾಡಿದರೆ ಬೆಡ್‌ಶೀಟ್, ಚಾದರ್ ಇತ್ಯಾದಿಗಳನ್ನು ಒಗೆದು ಸ್ವಚ್ಛಗೊಳಿಸಲು ಹೆತ್ತವರು ಬೇಸರಿಸಿಕೊಳ್ಳುವುದಿಲ್ಲ. ಆದರೆ ಮನೆಯಿಂದ ಹೊರಗೆ ಪ್ರವಾಸಕ್ಕೆ ಅಥವಾ ನೆಂಟರಿಷ್ಟರ ಮನೆಗಳಿಗೆ ಹೋದಾಗ ಹೀಗಾದರೆ ಮಗು ಮತ್ತು ಹೆತ್ತವರು ಮುಜುಗರಕ್ಕೊಳಗಾಗುತ್ತಾರೆ. ಆದರೆ ಕೆಲವು ಸರಳ ಮನೆಮದ್ದುಗಳಿಂದ ಮಕ್ಕಳು ಹಾಸಿಗೆ ಒದ್ದೆ ಮಾಡುವುದನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

ಹಾಸಿಗೆ ಒದ್ದೆ ಮಾಡಿಕೊಳ್ಳಲು ಅತ್ಯಂತ ಸಾಮಾನ್ಯ ಕಾರಣವೆಂದರೆ ಮಕ್ಕಳಲ್ಲಿಯ ಸಣ್ಣ ಮೂತ್ರಕೋಶವಾಗಿದೆ. ನಿದ್ರೆಯಲ್ಲಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುವ ಸ್ಲೀಪ್ ಅಪ್ನಿಯಾ, ಮೂತ್ರನಾಳದಲ್ಲಿ ಸೋಂಕು, ಮಧುಮೇಹ, ಮೂತ್ರಕೋಶದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಳಂಬ, ಅತಿಯಾದ ಮೂತ್ರ ಉತ್ಪತ್ತಿ ಮತ್ತು ಹಾರ್ಮೋನ್ ಅಸಮತೋಲನ ಇತರ ಕಾರಣಗಳಾಗಿವೆ.

ತುರ್ತು ಮೂತ್ರವಿಸರ್ಜನೆಯ ತುಡಿತ ಹಾಸಿಗೆಯನ್ನು ಒದ್ದೆಮಾಡಿಕೊಳ್ಳುವವರಲ್ಲಿ ಸಾಮಾನ್ಯ ಲಕ್ಷಣವಾಗಿದೆ. ಮಲಬದ್ಧತೆ, ಹೆಚ್ಚಿನ ಬಾಯಾರಿಕೆ, ಮೂತ್ರ ವಿಸರ್ಜನೆ ವೇಳೆ ನೋವು ಮತ್ತು ಗುಪ್ತಾಂಗದ ಜಾಗದಲ್ಲಿ ದದ್ದುಗಳು ಇವು ಇತರ ಲಕ್ಷಣಗಳಾಗಿವೆ.

ಮಕ್ಕಳ ಈ ಸಮಸ್ಯೆಯನ್ನು ಬಗೆಹರಿಸಲು ಅನುಸರಿಸಬಹುದಾದ ಕೆಲವು ಸರಳ ಮನೆಮದ್ದುಗಳು ಇಲ್ಲಿವೆ.

ಅಕ್ರೋಟು ಮತ್ತು ಒಣದ್ರಾಕ್ಷಿ

ಅಕ್ರೋಟು ಮತ್ತು ಒಣದ್ರಾಕ್ಷಿ ಆರೋಗ್ಯಕರವಾಗಿದ್ದು, ನಿಮ್ಮ ಮಗು ಇವನ್ನು ತಿನ್ನಲು ಬಯಸಿದರೆ ಹಿಂದೆಮುಂದೆ ಯೋಚಿಸದೆ ನೀಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಮಗು ಇವನ್ನು ತಿನ್ನುವಂತೆ ನೋಡಿಕೊಳ್ಳಿ. ಇವೆರಡನ್ನೂ ಒಟ್ಟಿಗೆ ತಿನ್ನಬೇಕು, ಬೇರೆ ಬೇರೆ ಸಮಯದಲ್ಲಲ್ಲ ಎನ್ನುವುದು ಗಮನದಲ್ಲಿರಲಿ. ಸ್ಪಷ್ಟ ಪರಿಣಾಮ ಕಂಡುಬರುವವರೆಗೆ ಮಗುವಿಗೆ ಇವುಗಳನ್ನು ತಿನ್ನಲು ನೀಡಿ.

ಜೇನು

ಜೇನನ್ನು ಇಷ್ಟ ಪಡದ ಮಕ್ಕಳೇ ಇಲ್ಲ ಎಂದು ಧಾರಳವಾಗಿ ಹೇಳಬಹುದು. ಹೀಗಾಗಿ ಮಕ್ಕಳು ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸಲು ಇದು ಅತ್ಯಂತ ಸುಲಭ ಮದ್ದಾಗಿದೆ. ನೈಸರ್ಗಿಕ ಸಿಹಿಕಾರಕವಾಗಿರುವುದರಿಂದ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಮತ್ತು ಪ್ರತಿದಿನ ಸೇವಿಸಬಹುದಾಗಿದೆ. ರಾತ್ರಿಯಿಡೀ ಮೂತ್ರಕೋಶ ತುಂಬಿದ್ದರೂ ಮೂತ್ರವನ್ನು ತಡೆಯುವ ಕೆಲಸವನ್ನು ಜೇನು ಮಾಡುತ್ತದೆ. ದಿನವೂ ಒಂದು ಚಮಚ ಜೇನು ತಿನ್ನಿಸಿದರೆ ಸಾಕು.

ಬೆಲ್ಲ

ಕೆಲವೊಮ್ಮೆ ಶರೀರದ ಉಷ್ಣತೆ ಕಡಿಮೆಯಾಗುವುದರಿಂದಲೂ ಮಕ್ಕಳು ನಿದ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಎರಡು ತಿಂಗಳ ಕಾಲ ನಿಯಮಿತವಾಗಿ ಬೆಲ್ಲವನ್ನು ಸೇವಿಸುವುದರಿಂದ ಅದು ಶರೀರದ ಉಷ್ಣತೆಯನ್ನು ಸಾಕಷ್ಟು ಹೆಚ್ಚಿಸುತ್ತದೆ ಮತ್ತು ಹಾಸಿಗೆ ಒದ್ದೆ ಮಾಡುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ನೆರವಾಗುತ್ತದೆ. ಬೆಲ್ಲವನ್ನು ಮಕ್ಕಳಿಗೆ ಹಾಗೆಯೇ ತಿನ್ನಿಸಬಹುದು ಅಥವಾ ಹಾಲಿನಲ್ಲಿ ಬೆರೆಸಿ ನೀಡಬಹುದು. ಆದರೆ ಅತಿಯಾದ ಬೆಲ್ಲದ ಸೇವನೆ ಮಕ್ಕಳಲ್ಲಿ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವುದರಿಂದ ಸೀಮಿತ ಪ್ರಮಾಣದಲ್ಲಿ ನೀಡಬೇಕು ಎನ್ನುವುದು ಗಮನದಲ್ಲಿರಲಿ.

ನೆಲ್ಲಿಕಾಯಿ

ಇದು ಹಾಸಿಗೆ ಒದ್ದೆ ಮಾಡುವ ಸಮಸ್ಯೆಗೆ ಅತ್ಯುತ್ತಮ ಮೂಲಿಕೆ ಅಥವಾ ಆಯುರ್ವೇದ ಮದ್ದಾಗಿದೆ. ನೆಲ್ಲಿಕಾಯಿಯ ಒಗರು ರುಚಿಯನ್ನು ಹೆಚ್ಚಿನ ಮಕ್ಕಳು ಇಷ್ಟಪಡದಿರಬಹುದು, ಆದರೆ ಅದನ್ನು ಅವರು ತಿನ್ನುವಂತೆ ಮಾಡಲು ಮಾರ್ಗಗಳೂ ಇವೆ. ನೆಲ್ಲಿಕಾಯಿಯಲ್ಲಿನ ಬೀಜವನ್ನು ತೆಗೆದು ತಿರುಳನ್ನು ಚೆನ್ನಾಗಿ ಜಜ್ಜಿ. ಒಂದು ಚಮಚ ಜೇನು ಮತ್ತು ಚಿಟಿಕೆ ಅರಿಷಿಣವನ್ನು ಸೇರಿಸಿ ಮಕ್ಕಳಿಗೆ ತಿನ್ನಿಸಿ. ನೆಲ್ಲಿಯ ತಿರುಳಿಗೆ ಒಂದು ಚಿಟಿಕೆ ಪೆಪ್ಪರ್ ಪುಡಿಯನ್ನೂ ಸೇರಿಸಿಯೂ ತಿನ್ನಿಸಬಹುದು.

ಕ್ರಾನ್‌ಬೆರಿ ಅಥವಾ ಕವಳಿ ಹಣ್ಣಿನ ರಸ

ಮಗು ಹಾಸಿಗೆಯನ್ನು ಒದ್ದೆ ಮಾಡುತ್ತಿದ್ದರೆ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಕ್ರಾನ್‌ಬೆರಿ ಅಥವಾ ಕವಳಿ ಹಣ್ಣಿನ ರಸವನ್ನು ಕುಡಿಯಲು ನಿಡಿ. ರಸಕ್ಕೆ ಬಳಸುವ ಹಣ್ಣುಗಳು ತಾಜಾ ಆಗಿರಬೇಕು, ಪ್ಯಾಕೇಜ್ಡ್ ಆಗಿರಬಾರದು ಎನ್ನುವುದು ಗಮನದಲ್ಲಿರಲಿ. ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಗೆ ಮೂತ್ರನಾಳದಲ್ಲಿಯ ಸೋಂಕು ಕಾರಣವಾಗಿದ್ದರೆ ದಿನಕ್ಕೆ ಮೂರು ಬಾರಿ ಅರ್ಧ ಗ್ಲಾಸ್ ರಸವನ್ನು ಕುಡಿಸಿ.

ಸೋಂಪು ಅಥವಾ ಬಡೆಸೊಪ್ಪು

ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಟೀ ಚಮಚ ಸೋಂಪನ್ನು ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಸೇರಿಸಿ ಮಗುವಿಗೆ ಕುಡಿಸಿ, ಬಳಿಕ ಒಂದು ಚಮಚ ಜೇನನ್ನು ತಿನ್ನಿಸಿ. ಇದು ಸಮಸ್ಯೆಯ ಪರಿಹಾರಕ್ಕೆ ನೆರವಾಗುತ್ತದೆ.

ಬಾಳೇಹಣ್ಣು

ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕೆಂಬ ಉದ್ದೇಶದಿಂದ ಹೆಚ್ಚಿನವರು ಊಟವಾದ ಬಳಿಕ ಬಾಳೆಹಣ್ಣು ತಿನ್ನುತ್ತಾರೆ. ಅದು ನಿದ್ರೆಯಲ್ಲಿ ಮೂತ್ರ ವಿಸರ್ಜನೆಯ ಸಮಸ್ಯೆಯನ್ನೂ ನಿವಾರಿಸುತ್ತದೆ. ನಿಮ್ಮ ಮಗುವಿಗೆ ಪ್ರತಿ ದಿನ ಚೆನ್ನಾಗಿ ಕಳಿತ 2-3 ಬಾಳೆಹಣ್ಣುಗಳನ್ನು ತಿನ್ನಿಸಿ. ಅದು ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆಂಬ ತುಡಿತವನ್ನೂ ನಿಯಂತ್ರಿಸುತ್ತದೆ.

ಮೂತ್ರಕೋಶದ ವ್ಯಾಯಾಮ

ಮಕ್ಕಳಿಗೆ ಮೂತ್ರಕೋಶದ ವ್ಯಾಯಾಮಗಳನ್ನು ಮಾಡಿಸುವುದರಿಂದ ಮೂತ್ರವನ್ನು ನಿಯಂತ್ರಿಸಲು ಮತ್ತು ಕೋಶದ ವಿಸ್ತರಣೆಗೆ ನೆರವಾಗುತ್ತದೆ. ಮೂತ್ರವು ಒತ್ತಿ ಬಂದಾಗ ಅದನ್ನು 10-12 ನಿಮಿಷ ತಡೆಹಿಡಿಯುವುದು ಇಂತಹ ಒಂದು ವ್ಯಾಯಾಮವಾಗಿದೆ. ಕೋಶವನ್ನು ಹಿಗ್ಗಿಸಲು ಹೆಚ್ಚೆಚ್ಚು ನೀರನ್ನು ಕುಡಿಯುವುದು ಇನ್ನೊಂದು ಮಾರ್ಗವಾಗಿದೆ.

ಮಸಾಜ್

ಶ್ರೋಣಿ ಸ್ನಾಯುಗಳ ಅನೈಚ್ಛಿಕ ಬಾಗುವಿಕೆಯ ಪರಿಣಾಮ ಮಕ್ಕಳು ಹಾಸಿಗೆಯನ್ನು ಒದ್ದೆ ಮಾಡುತ್ತಾರೆ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ಆಲಿವ್ ಎಣ್ಣೆಯಿಂದ ಮಗುವಿನ ಕೆಳಹೊಟ್ಟೆಗೆ ಕೆಲನಿಮಿಷಗಳ ಕಾಲ ಮಸಾಜ್ ಮಾಡಿ. ಆಲಿವ್ ಎಣ್ಣೆಯು ಮೂತ್ರನಾಳದ ಸ್ನಾಯುಗಳನ್ನು ಬಲಗೊಳಿಸುತ್ತದೆ ಮತ್ತು ಮೂತ್ರಕೋಶದ ಮೇಲೆ ನಿಯಂತ್ರಣವನ್ನು ಉತ್ತಮಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News