ಹೀಗೊಂದು ಸೌಹಾರ್ದ ಸಂಭ್ರಮ

Update: 2017-12-30 03:57 GMT

ಒಂದು ಕಾಲದಲ್ಲಿ ಕರ್ನಾಟಕದ ನೆಲ ಹತ್ತು ಹಲವು ಆಂದೋಲನಗಳಿಗೆ ಮಡಿಲಾಗಿತ್ತು. ನಂಜುಂಡ ಸ್ವಾಮಿ ಮತ್ತು ರೈತ ಸಂಘದ ನೆನಪುಗಳು ಈ ನಾಡಿನ್ನು ಇನ್ನೂ ಬೆಚ್ಚಗಿಟ್ಟಿವೆ. ಒಂದು ಕಾಲದಲ್ಲಿ ರೈತರೆಲ್ಲ ಒಂದೆಡೆ ಜಮಾಯಿಸಿದರೆಂದರೆ ಸರಕಾರ ನಡುಗುತ್ತಿತ್ತು. ದುರದೃಷ್ಟವಶಾತ್ ಇಂದು ಆ ರೈತರ ಧ್ವನಿ ಯಾರಿಗೂ ಕೇಳದಷ್ಟು ಕ್ಷೀಣವಾಗಿದೆ. ಹಿಂದಿನ ಸಂಘಟನಾ ಶಕ್ತಿ ಇಂದಿನ ರೈತರಲ್ಲಿ ಉಳಿದಿಲ್ಲ. ಬೆರಳೆಣಿಕೆಯ ರೈತ ಮುಖಂಡರ ಹಸಿರು ಶಾಲಿಗಷ್ಟೇ ಈ ಆಂದೋಲನ ಸೀಮಿತವಾಗಿದೆ. ಕಾವೇರಿ, ಮಹಾದಾಯಿ ಹೆಸರಲ್ಲಿ ಆಗಾಗ ಜ್ವಲಿಸಿ ಇಲ್ಲವಾಗುವ ರೈತ ಆಂದೋಲನಕ್ಕೆ ಇಡೀ ಕರ್ನಾಟಕದ ಧ್ವನಿಯಾಗುವ ಶಕ್ತಿ ಇಲ್ಲವಾಗಿದೆ.

ದಲಿತ ಸಂಘರ್ಷ ಸಮಿತಿಯೂ ಒಂದು ಕಾಲದಲ್ಲಿ ನಾಡಿನ ಶೋಷಿತರ ಆಶಾಕಿರಣವಾಗಿ ಮೂಡಿಬಂದಿತ್ತು. ದಲಿತರ ಹಕ್ಕುಗಳಿಗೆ ಮಿಡಿಯುವ ಪ್ರಾಮಾಣಿಕ ಮನಸ್ಸುಗಳು ಈ ಸಮಿತಿಯಲ್ಲಿದ್ದುದರಿಂದ ಇದೂ ಒಂದು ಹಂತದಲ್ಲಿ ದೊಡ್ಡ ಶಕ್ತಿಯಾಗಬಹುದಾದ ಸಾಧ್ಯತೆಯನ್ನು ತೋರಿಸಿತ್ತು. ಆದರೆ ಮುಂದೆ ನಾಯಕರ ಪ್ರತಿಷ್ಠೆಗಳಿಗೆ ಈ ಸಮಿತಿ ಬಲಿಯಾಗಿ ಇಂದು ಕಾರ್ಯಕರ್ತರ ಸಂಖ್ಯೆಗಿಂತಲೂ ಛಿದ್ರವಾಗಿರುವ ದಲಿತ ಸಂಘರ್ಷ ಸಮಿತಿಗಳ ಸಂಖ್ಯೆ ಹೆಚ್ಚಿವೆ. ಎಲ್ಲ ಕಾರ್ಯಕರ್ತರೂ ತಮ್ಮದೇ ಆದ ಒಂದು ದಸಂಸವನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ. ದಲಿತರ ಹಕ್ಕುಗಳನ್ನು ಎತ್ತಿ ಹಿಡಿಯುವ ಯಾವ ಶಕ್ತಿಯೂ ದಸಂಸಗಳಲ್ಲಿ ಉಳಿದಿಲ್ಲ. ಬದಲಿಗೆ ಅವುಗಳನ್ನು ನಾಡಿನ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ನಿಯಂತ್ರಿಸುತ್ತಿದ್ದಾರೆ. ರೈತ ಸಂಘ, ದಲಿತ ಹೋರಾಟಗಳೆಲ್ಲ ಮಕಾಡೆ ಮಲಗಿದ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡದ್ದು ಆರೆಸ್ಸೆಸ್‌ನಂತಹ ಸಂಘಟನೆಗಳು. ರೈತ ಹೋರಾಟದ ವೈಫಲ್ಯ, ದಲಿತ ಸಂಘರ್ಷ ಸಮಿತಿಯ ನಾಯಕರ ಸಮಯ ಸಾಧಕತನ ಇತ್ಯಾದಿಗಳಿಂದಾಗಿ ಶೂದ್ರ, ದಲಿತ ಸಮುದಾಯದ ಯುವ ತಲೆಮಾರು ಗುಂಪಿನಿಂದ ಚದುರಿ ಹೋಗತೊಡಗಿತು. ರೈತರು ಮತ್ತು ದಲಿತರ ಮೇಲೆ ಅನ್ಯಾಯ, ದೌರ್ಜನ್ಯ ಹೆಚ್ಚತೊಡಗಿದಾಗ, ಯುವಕರನ್ನು ಸಂಘಟಿಸಿ ಅದಕ್ಕೆ ಪ್ರತಿರೋಧವನ್ನು ತೋರಿಸುವ ನಾಯಕರು ಕನಾರ್ಟಕದಲ್ಲಿ ಇಲ್ಲವಾದರು. ಇಂತಹ ಸಂದರ್ಭದಲ್ಲಿ ಈ ಯುವಕರನ್ನು ತಮ್ಮ ದೊಡ್ಡಿಗೆ ಸೆಳೆದುಕೊಂಡ ಸಂಘಪರಿವಾರ, ಅವರನ್ನು ತಪ್ಪು ದಾರಿಯಲ್ಲಿ ತೊಡಗಿಸಿಕೊಂಡಿತು. ತಮ್ಮ ಮೇಲಾಗುತ್ತಿರುವ ಶೋಷಣೆಗಳಿಗೆ ತಪ್ಪು ವ್ಯಕ್ತಿಗಳನ್ನು ಸ ಂಘಪರಿವಾರ ಹೊಣೆ ಮಾಡಿತು. ಶೋಷಿತರ ನಿಜವಾದ ಇತಿಹಾಸವನ್ನು ಮರೆ ಮಾಚಿ, ಬ್ರಾಹ್ಮಣ್ಯ ಇತಿಹಾಸವನ್ನೇ ನಿಜವಾದ ಇತಿಹಾಸವೆಂದು ಅವರ ತಲೆಯೊಳಗೆ ತುಂಬತೊಡಗಿತು.

ದಲಿತರು, ಶೂದ್ರರು ಒಂದಾಗಿ ಯಾವ ಶಕ್ತಿಯ ವಿರುದ್ಧ ಹೋರಾಡಬೇಕಾಗಿತ್ತೋ, ಆ ಶಕ್ತಿಯೇ ದಲಿತ, ಶೂದ್ರರನ್ನು ನಿಯಂತ್ರಿಸ ತೊಡಗಿತು. ಯಾವ ಸಂವಿಧಾನ ಶೂದ್ರರಿಗೆ, ದಲಿತರಿಗೆ ಶಿಕ್ಷಣ, ಆರೋಗ್ಯ, ಧಾರ್ಮಿಕ, ಆಹಾರದ ಹಕ್ಕುಗಳನ್ನು ನೀಡಿತೋ ಅದೇ ಸಂವಿಧಾನದ ವಿರುದ್ಧ ಹಿಂದುತ್ವದ ಹೆಸರಿನಲ್ಲಿ ಇವರನ್ನು ಎತ್ತಿ ಕಟ್ಟತೊಡಗಿತು. ಕೋಮುಗಲಭೆಗಳನ್ನು ಸೃಷ್ಟಿಸಿ, ಅದಕ್ಕೆ ಶೂದ್ರ ದಲಿತ ಹುಡುಗರನ್ನು ಬಲಿಪಶು ಮಾಡಿತು. ಒಂದೆಡೆ ಸಾವಿರಾರು ಸಂಖ್ಯೆಯಲ್ಲಿ ದಲಿತ, ಶೂದ್ರ ಹುಡುಗರು ತಮ್ಮ ಹಕ್ಕುಗಳಿಗೆ ಸಂಬಂಧಿಸದ ವಿಷಯಕ್ಕಾಗಿ ಜೈಲು ಸೇರತೊಡಗಿದರು. ಮುಸ್ಲಿಮರು, ಕ್ರೈಸ್ತರ ನಡುವೆ ಇವರನ್ನು ಛೂಬಿಟ್ಟು ಮನುವಾದಿ ಶಕ್ತಿಗಳು ನಾಡಿನಾದ್ಯಂತ ವಿಜೃಂಭಿಸತೊಡಗಿದವು. ಇವೆಲ್ಲವನ್ನು ಪ್ರತಿರೋಧಿಸುವಂತಹ ಒಂದು ಶಕ್ತಿಯೇ ಇಲ್ಲ ಎನ್ನುವಾಗ 90ರ ದಶಕದಲ್ಲಿ ಹುಟ್ಟಿಕೊಂಡದ್ದು ಕೋಮುಸೌಹಾರ್ದ ವೇದಿಕೆ.

ಮಾನವೀಯ ವೌಲ್ಯಗಳ ಮೇಲೆ, ತನ್ನ ನಾಡು ನುಡಿಯ ಮೇಲೆ ಪ್ರೀತಿಯಿರುವ ಜನರು ನಾಡಿನಾದ್ಯಂತ ಕೋಮುವಾದಿ ಶಕ್ತಿಗಳ ವಿರುದ್ಧ ಒಂದಾಗತೊಡಗಿದರು. ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕಲು ಸರಕಾರವೇ ವಿಫಲವಾದಾಗ, ಕೋಮುಸೌಹಾರ್ದ ವೇದಿಕೆ ತಮ್ಮ ಶಾಂತಿ, ಅಹಿಂಸೆಯ ಪದಗಳ ಮೂಲಕ ಉತ್ತರಿಸತೊಡಗಿತು. ಸುದೀರ್ಘ ಕಾಲದ ವೌನದ ಬಳಿಕ ಕರ್ನಾಟಕದಲ್ಲಿ ಹುಟ್ಟಿದ ಜನಪರ ಆಂದೋಲನವಾಗಿದೆ ಕೋಮು ಸೌಹಾರ್ದ ವೇದಿಕೆ. ಇದೀಗ ಆ ವೇದಿಕೆ ತನ್ನ 15ರ ಸಂಭ್ರಮದಲ್ಲಿದೆ. ಇದು ನಿಜಕ್ಕೂ ನಾಡು, ನುಡಿಯ ಮೇಲೆ ಕಾಳಜಿಯುಳ್ಳ, ಸಮಾನತೆಯ ಬದುಕಿನ ಕುರಿತಂತೆ ಕನಸುಗಳನ್ನು ಹೊಂದಿರುವ ಎಲ್ಲ ಕನ್ನಡಿಗರ ಸಂಭ್ರಮವಾಗಿದೆ.

ಬಾಬಾ ಬುಡಾನ್‌ಗಿರಿಯನ್ನು ಇನ್ನೊಂದು ಅಯೋಧ್ಯೆಯನ್ನಾಗಿ ಮಾಡಲು ಹೊರಟ ಸಂದರ್ಭದಲ್ಲಿ ಕೋಮುಸೌಹಾರ್ದ ವೇದಿಕೆ ನಾಡಿನ ತಳಮಟ್ಟದಿಂದ ಸಂಘಟಿತಗೊಂಡು ಈ ಸಂಚನ್ನು ವಿಫಲಗೊಳಿಸುತ್ತಾ ಬಂತು ಎಂಬುವುದರಲ್ಲಿ ಎರಡು ಮಾತೇ ಇಲ್ಲ. ಕೋಮು ಸೌಹಾರ್ದ ವೇದಿಕೆ ಇಲ್ಲದೇ ಇದ್ದಿದ್ದರೆ ಇಷ್ಟರಲ್ಲೇ ಸಂಘಪರಿವಾರ ಆ ಸ್ಥಳವನ್ನು ನಾಶ ಮಾಡಿ, ತನ್ನ ರಾಜಕೀಯ ಉದ್ದೇಶವನ್ನು ಸಾಧಿಸಿ ಬಿಡುತ್ತಿತ್ತೇನೋ. ಬಾಬಾ ಬುಡಾನ್ ಗಿರಿಯನ್ನೇ ಗುರಿಯಾಗಿಟ್ಟುಕೊಂಡು ಸಂಘಪರಿವಾರ ಯಾಕೆ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಾ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಬಾಬಾ ಬುಡಾನ್ ಗಿರಿ ಕನ್ನಡತನದ ಅಡಿಗಲ್ಲಾಗಿರುವ ಸೌಹಾರ್ದದ ಸಂಕೇತವಾಗಿದೆ. ನಾಥಪಂಥ ಮತ್ತು ಸೂಫಿ ಪಂಥಗಳ ಸಂಗಮ ಸ್ಥಳ ಅದಾಗಿದೆ. ಹಿಂದೂ ಮತ್ತು ಮುಸ್ಲಿಮರನ್ನು ಜೊತೆಗೂಡಿಸುವ ಶಕ್ತಿ ಈ ಸ್ಥಳಕ್ಕಿದೆ.

ಹಿಂದೂ ಮುಸ್ಲಿಮರು ಸೌಹಾರ್ದವಾಗಿದ್ದರೆ ಸಂಘಪರಿವಾರ ಶಕ್ತಿಗಳಿಗೆ ತಮ್ಮ ಅಜೆಂಡಾ ಸಾಧಿಸಲು ಕಷ್ಟ. ಈ ಹಿನ್ನೆಲೆಯಲ್ಲಿಯೇ, ಬಾಬಾಬುಡಾನ್‌ಗಿರಿಯಲ್ಲಿರುವ ಸೌಹಾರ್ದ ಸಂಬಂಧಗಳನ್ನು ಒಡೆಯುವ ಮೂಲಕ ಕರ್ನಾಟಕದಲ್ಲಿ ತಮ್ಮ ಪಾರಮ್ಯವನ್ನು ಮೆರೆಯುವ ಪ್ರಯತ್ನವನ್ನು ನಡೆಸುತ್ತಾ ಬಂದಿದೆ. ವಿಪರ್ಯಾಸವೆಂದರೆ ತನ್ನ ಈ ಪ್ರಯತ್ನಕ್ಕೆ ಸಂಘಪರಿವಾರ ಶಕ್ತಿಗಳು ಶೂದ್ರ ಯುವಕರನ್ನೇ ಬಳಸಿಕೊಂಡು ಬಂದಿರುವುದು. ಇದರ ವಿರುದ್ಧ ಒಂದಾಗಿ ಬೃಹತ್ ಆಂದೋಲನ ನಡೆಸಿ ಬಾಬಾಬುಡಾನ್ ಗಿರಿಯ ವೌಲ್ಯಗಳನ್ನು ಉಳಿಸಿದ ಹೆಗ್ಗಳಿಕೆ ಸೌಹಾರ್ದ ವೇದಿಕೆಗೆ ಸಲ್ಲಬೇಕು. ಗೌರಿ ಲಂಕೇಶರನ್ನು ಹೋರಾಟಗಾರ್ತಿಯಾಗಿ ರೂಪಿಸಿರುವುದರ ಹಿಂದೆಯೂ ಈ ಸೌಹಾರ್ದ ವೇದಿಕೆಯ ಪಾಲು ದೊಡ್ಡದಿದೆ. ಬಾಬಾಬುಡಾನ್ ಗಿರಿಗಾಗಿ ಈ ವೇದಿಕೆಯ ನೂರಾರು ಕಾರ್ಯಕರ್ತರು ಜೈಲನ್ನೂ ಸೇರಿದ್ದಾರೆ. ಈ ವೇದಿಕೆಯ ಹೋರಾಟ ಉಳಿದ ಹಲವು ಹೋರಾಟಗಳಿಗೆ ಸ್ಫೂರ್ತಿಯಾಯಿತು ಎನ್ನುವುದನ್ನು ನಾವು ಮರೆಯಲಾಗದು. ಕೋಮುಸೌಹಾರ್ದ ವೇದಿಕೆಯ ಆಂದೋಲನದ ಬೆನ್ನಿಗೇ ಬೇರೆ ಬೇರೆ ಸಂಘಟನೆಗಳ ನಾಯಕರು ಮತ್ತೆ ಉತ್ಸಾಹವನ್ನು ಪಡೆದುಕೊಂಡರು. ಬರೇ ಕೋಮುವಾದಿ ಶಕ್ತಿಗಳ ವಿರುದ್ಧ ಮಾತ್ರವಲ್ಲ, ಪ್ರಭುತ್ವದ ಸರ್ವಾಧಿಕಾರದ ವಿರುದ್ಧ, ಬಡವರ ಭೂಮಿಯ ಹಕ್ಕಿನ ಪರ, ನಕಲಿ ಗೋರಕ್ಷಕರ ವಿರುದ್ಧ, ದಲಿತ ದೌರ್ಜನ್ಯದ ವಿರುದ್ಧ ಹಲವು ಬೃಹತ್ ಸಮಾವೇಶಗಳು ನಡೆದವು. ಕೊಡಗಿನಲ್ಲಿ ಆದಿವಾಸಿಗಳ ಪರವಾಗಿ ನಡೆದ ಆಂದೋಲನದ ಹಿಂದೆಯೂ ಕೋಮುಸೌಹಾರ್ದ ವೇದಿಕೆಯ ಆಂದೋಲನದ ಕಿಡಿಯಿದೆ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ.

 ಈ ಎಲ್ಲ ಕಾರಣಗಳಿಂದ ಕೋಮು ಸೌಹಾರ್ದ ವೇದಿಕೆಯ 15ರ ಸಂಭ್ರಮ ನಾಡಿನ ಸಂಭ್ರಮವೇ ಆಗಿದೆ. ವೇದಿಕೆ ಹರಡಿದ ಆಂದೋಲನ ರಾಜ್ಯಾದ್ಯಂತ ಇನ್ನಷ್ಟು ವಿಸ್ತಾರಗೊಳ್ಳಬೇಕು. ಅದರ ಹೋರಾಟ, ಕಾರ್ಯವೈಖರಿ ಬರೇ ದತ್ತಪೀಠ, ಸಂಘಪರಿವಾರ ಇವುಗಳಿಗೆ ಸೀಮಿತವಾಗಿ ಉಳಿಯದೇ ಇತರ ಸಾಮಾಜಿಕ ಕ್ಷೇತ್ರಗಳನ್ನೂ ಗುರಿಯಾಗಿಸಿಕೊಳ್ಳಬೇಕು. ಹಾಗೆಯೇ ತಳಸ್ತರದ ಜನರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತನ್ನೊಂದಿಗೆ ಕೊಂಡೊಯ್ಯುವ ದಾರಿಯನ್ನು ಅದು ಹುಡುಕಬೇಕು. ಜೊತೆಗೆ ಆಂದೋಲನದ ಕೊಂಡಿಯಿಂದ ಕಳಚಿಕೊಂಡು ಸಂಘಪರಿವಾರದ ಪಾಲಾಗಿರುವ ಶೂದ್ರ, ದಲಿತ ಹುಡುಗರನ್ನು ಮತ್ತೆ ತಮ್ಮವರನ್ನಾಗಿಸಿಕೊಳ್ಳಲು ಬೇಕಾದ ಜಾಗೃತಿಯನ್ನು ಹರಡಬೇಕು. ದೇಶಾದ್ಯಂತ ಸಂಘಪರಿವಾರ ಹಚ್ಚುತ್ತಿರುವ ದ್ವೇಷದ ಬೆಂಕಿಯನ್ನು ಆರಿಸುವ ಜೀವಜಲ ಈ ಮೂಲಕ ಕರ್ನಾಟಕದಿಂದ ಹೊಮ್ಮುವಂತಾಗಲಿ. ಕನ್ನಡದ ಸೌಹಾರ್ದ ವೌಲ್ಯಗಳು ಇಡೀ ದೇಶಕ್ಕೆ ಬೆಳಕಿನ ದಾರಿಯನ್ನು ತೆರೆದುಕೊಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News