×
Ad

ಸರಕಾರ ರಚಿಸಿದರೆ ಬೆಂಬಲ: ನಿತಿನ್ ಪಟೇಲ್‌ಗೆ ಕಾಂಗ್ರೆಸ್ ಶಾಸಕರ ಆಹ್ವಾನ

Update: 2017-12-30 23:07 IST

ಅಹ್ಮದಾಬಾದ್, ಡಿ.30: ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ರಚಿಸುವಂತೆ ಕಾಂಗ್ರೆಸ್ ಶಾಸಕರು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್‌ಗೆ ಆಹ್ವಾನ ನೀಡಿದ್ದಾರೆ. ನಿತಿನ್ ಪಟೇಲ್ ಅಗತ್ಯವಿರುವಷ್ಟು ಶಾಸಕರ ಜೊತೆ ಬಿಜೆಪಿಯಿಂದ ಹೊರಬಂದರೆ ಅವರು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ಶಾಸಕ ವೀರ್ಜಿ ಥುಮ್ಮರ್ ತಿಳಿಸಿದ್ದಾರೆ.

 ನಿತಿನ್‌ಭಾಯ್ ಪಟೇಲ್ ಬಳಿಯಿದ್ದ ಮಹತ್ವದ ಖಾತೆಗಳನ್ನು ಅವರು ಕಿತ್ತುಕೊಂಡಿದ್ದಾರೆ. 10ರಿಂದ 15ರಷ್ಟು ಶಾಸಕರ ಜೊತೆ ಬಿಜೆಪಿಯಿಂದ ಹೊರಬನ್ನಿ ಎಂದು ನಿತಿನ್‌ಭಾಯ್‌ರನ್ನು ಕೋರುತ್ತಿದ್ದೇನೆ. ಆಗ ಕಾಂಗ್ರೆಸ್ ಅವರಿಗೆ ಬಾಹ್ಯ ಬೆಂಬಲ ನೀಡುತ್ತದೆ . ಬಿಜೆಪಿಯು ನಿತಿನ್‌ರನ್ನು ದುರ್ಬಳಕೆ ಮಾಡಿಕೊಂಡಿದೆ. ನಾವು ಒಟ್ಟು ಸೇರಿ ಗುಜರಾತ್ ಅಭಿವೃದ್ಧಿಗೆ ಹಾಗೂ ರೈತರ ಹಿತಚಿಂತನೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಥುಮ್ಮರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಆದರೆ ಥುಮ್ಮರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಇದು ಅವರ ವೈಯಕ್ತಿಕ ಅಭಿಪ್ರಾಯ. ಗುಜರಾತ್ ಸರಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಿಜೆಪಿಯ ಆಂತರಿಕ ವಿಷಯ ಎಂದು ತಿಳಿಸಿದೆ.

ಹಿರಿಯ ಮುಖಂಡರ ಅಗತ್ಯವಿಲ್ಲ ಎಂದಾದಾಗ ಅವರನ್ನು ಮೂಲೆಗುಂಪು ಮಾಡುವುದು ಬಿಜೆಪಿಯ ಕಾರ್ಯನೀತಿಯ ಭಾಗವಾಗಿದೆ. ಕೇಶುಭಾಯ್ ಪಟೇಲ್, ಆನಂದಿಬೆನ್ ಪಟೇಲ್ ಮುಂತಾದವರಿಗೆ ಈ ಅನುಭವವಾಗಿದೆ. ಈಗ ನಿತಿನ್ ಪಟೇಲ್ ಸರದಿ ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಷ್ ದೋಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News