ಎನ್‌ಎಂಸಿ ಮಸೂದೆಗೆ ಐಎಂಎ ವಿರೋಧ: ಮಂಗಳವಾರ 12 ಗಂಟೆ ಒಪಿಡಿ ಸೇವೆ ಸ್ಥಗಿತ

Update: 2018-01-01 14:52 GMT

ಹೊಸದಿಲ್ಲಿ, ಜ.1: ಕೇಂದ್ರ ಸರಕಾರದ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಂಗಳವಾರ ದೈನಂದಿನ ಸೇವೆಗಳನ್ನು 12 ಗಂಟೆ ಸ್ಥಗಿತಗೊಳಿಸುವ ಮೂಲಕ ಕಪ್ಪು ದಿನಾಚರಣೆಗೆ ನಿರ್ಧರಿಸಿದ್ದು, ಇದರಿಂದ ಹೊರರೋಗಿಗಳ ವಿಭಾಗದಲ್ಲಿ ವೈದ್ಯಕೀಯ ಸೇವೆಗೆ ತೊಡಕಾಗುವ ಸಾಧ್ಯತೆಯಿದೆ.

ಆದರೆ ತುರ್ತುಚಿಕಿತ್ಸೆ ಹಾಗೂ ಗಂಭೀರ ಚಿಕಿತ್ಸಾ ಸೇವೆ ಎಂದಿನಂತೆಯೇ ನಡೆಯಲಿದೆ ಎಂದು ಐಎಂಎ ತಿಳಿಸಿದೆ.

  ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ) ಸ್ಥಾನದಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್(ಎನ್‌ಎಂಸಿ) ಸ್ಥಾಪಿಸುವ ಪ್ರಸ್ತಾವನೆಯುಳ್ಳ ಮಸೂದೆಯನ್ನು ಸರಕಾರ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದೆ. ಅಲ್ಲದೆ ಹೋಮಿಯೋಪಥಿ, ಆಯುರ್ವೇದ ಮುಂತಾದ ವೈದ್ಯಕೀಯ ವೃತ್ತಿ ನಡೆಸುವವರು ‘ಬ್ರಿಡ್ಜ್ ಕೋರ್ಸ್’ ಪೂರೈಸಿದರೆ ಅವರು ಕೂಡಾ ಅಲೋಪಥಿ ವೈದ್ಯಕೀಯ ವೃತ್ತಿ ನಡೆಸಬಹುದು ಎಂಬ ಅಂಶವನ್ನೂ ಈ ಮಸೂದೆ ಒಳಗೊಂಡಿದ್ದು ಇದಕ್ಕೆ ಐಎಂಎ ತೀವ್ರ ವಿರೋಧ ಸೂಚಿಸಿದೆ. ಮಂಗಳವಾರ ಈ ಮಸೂದೆಯ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.

     ವೈದ್ಯಕೀಯ ವೃತ್ತಿನಿರತರನ್ನು ಅಧಿಕಾರ ವರ್ಗದವರಿಗೆ ಹಾಗೂ ವೈದ್ಯಕೀಯ ಕ್ಷೇತ್ರ ಹೊರತಾದ ಆಡಳಿತಾಧಿಕಾರಿಗಳಿಗೆ ಸಂಪೂರ್ಣ ಉತ್ತರದಾಯಿಗಳನ್ನಾಗಿಸಿದ್ದು, ಇದರಿಂದ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತದೆ. ಆದ್ದರಿಂದ ಎನ್‌ಎಂಸಿ ಮಸೂದೆ ವಿರೋಧಿಸಿ ಮಂಗಳವಾರ ಕಪ್ಪು ದಿನಾಚರಣೆಗೆ ನಿರ್ಧರಿಸಲಾಗಿದೆ ಎಂದು ಐಎಂಎ ತಿಳಿಸಿದೆ.

 ಈಗ ಇರುವ ರೀತಿಯಲ್ಲಿ ಎನ್‌ಎಂಸಿ ಮಸೂದೆ ಸ್ವೀಕಾರಾರ್ಹವಲ್ಲ. ಈ ಮಸೂದೆ ಬಡಜನರ ವಿರೋಧಿ, ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಲಕ್ಷಣಗಳನ್ನು ಹೊಂದಿದ್ದು ಇದನ್ನು ವಿರೋಧಿಸಿ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6ರವರೆಗೆ ದೈನಂದಿನ ಸೇವೆಗಳನ್ನು ನಡೆಸುವುದಿಲ್ಲ ಎಂದು ಐಎಂಎ ನೂತನ ಅಧ್ಯಕ್ಷ ಡಾ ರವಿ ವಾಂಖೇಡ್ಕರ್ ತಿಳಿಸಿದ್ದಾರೆ. ಬಂದ್‌ಗೆ ಬೆಂಬಲ ಸೂಚಿಸಿರುವ ದಿಲ್ಲಿ ವೈದ್ಯಕೀಯ ಸಂಘಟನೆ, ಮಂಗಳವಾರ ದಿಲ್ಲಿಯಲ್ಲಿ ಎಲ್ಲಾ ಖಾಸಗಿ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ಹೊರರೋಗಿ ವಿಭಾಗದ ಸೇವೆಯನ್ನು ಮುಚ್ಚುವಂತೆ ಕರೆ ನೀಡಿದೆ.

   ಐಎಂಎ ಸದಸ್ಯರು ಕೇಂದ್ರದ ಆರೋಗ್ಯ ಸಚಿವ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಸೂದೆಯನ್ನು ಮರು ರೂಪಿಸುವಂತೆ ಹಾಗೂ ಕೆಲವೊಂದು ನಿಬಂಧನೆಗಳನ್ನು ಕೈಬಿಡುವಂತೆ ಕೋರಿ ಪ್ರಧಾನಿ ಹಾಗೂ ಆರೋಗ್ಯ ಸಚಿವರಿಗೆ ಈಗಾಗಲೇ ಪತ್ರ ಬರೆದಿರುವುದಾಗಿ ಐಎಂಎ ಪೂರ್ವಾಧ್ಯಕ್ಷ ಡಾ ಕೆ.ಕೆ.ಅಗರ್‌ವಾಲ್ ತಿಳಿಸಿದ್ದಾರೆ. ಆಯುಷ್ ಪದವೀಧರರು ‘ಬ್ರಿಡ್ಜ್ ಕೋರ್ಸ್’ ಪೂರೈಸಿದ ಬಳಿಕ ಅಲೋಪಥಿ ವೈದ್ಯಕೀಯ ವೃತ್ತಿ ನಿರ್ವಹಿಸಲು ಅವಕಾಶ ನೀಡುವುದು ‘ಕಪಟ ಪಾಂಡಿತ್ಯಕ್ಕೆ’ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಗರ್‌ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News