ಹೊಸ ವರ್ಷಕ್ಕೊಂದು ‘ನಿರ್ಧಾರ’

Update: 2018-01-02 06:04 GMT

ಜಗದೋದ್ಧಾರಕರೆಲ್ಲ ಎದ್ದು ತಿರುಗಾಡಲಾರಂಭಿಸಿ ಈಗಾಗಲೇ ಆರು ತಿಂಗಳು ಕಳೆದಿವೆ. ಎದ್ದಿರುವ ಕೆಸರುರಾಡಿಯೇ ಈ ಬಾರಿಯ ಚುನಾವಣೆಯ ಭರಾಟೆಗೆ ಮಾನದಂಡ ಆಗುವುದಿದ್ದರೆ, ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕೊಳಚೆ ಚುನಾವಣೆಯೊಂದಕ್ಕೆ ನಾವು ಸಿದ್ಧರಾಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿಬಿಡಬಹುದು.

ರಾಜಕೀಯ ಬೃಹನ್ನಾಟಕದ ಎಲ್ಲ ಮಹೋನ್ನತ ನಟರಿಗೂ ತುರ್ತಾಗಿ ಭರತ ನಾಟ್ಯ ಶಾಸ್ತ್ರದ ಕ್ರ್ಯಾಶ್ ಕೋರ್ಸ್ ಆಗಬೇಕಿದೆ. ಎಲ್ಲಿಗೆ ತಲುಪುತ್ತಿದ್ದೇವೆ ನಾವು? ಕರ್ನಾಟಕದ ಚುನಾವಣೆಗಳ ಚರಿತ್ರೆಯನ್ನೇ ತೆಗೆದುಕೊಂಡರೂ, ಅತ್ಯಂತ ತುರುಸಿನ ಸ್ಪರ್ಧೆಗಳಲ್ಲೂ, ತೀರಾ ಔಚಿತ್ಯ ಮರೆತು ವ್ಯವಹರಿಸಿದ್ದು ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಈಗ ರಾಜಕೀಯ ಕೆಸರೆರೆಚಾಟಗಳು ಸಾರಾಯಿ ಅಂಗಡಿ ಎದುರಿನ ಚರಂಡಿಯಿಂದ ಕೇಳಿಬಂದಂತೆ ಭಾಸವಾಗುತ್ತಿವೆ. ಸಮಾಜ ಸಹಜ ಔಚಿತ್ಯಗಳನ್ನು ಕಲಿಸುವುದಕ್ಕಾದರೂ ಇವರಿಗೆ ಕ್ರ್ಯಾಶ್ ಕೋರ್ಸ್ ಅಗತ್ಯವಿದೆ.

ಐದು ವರ್ಷಗಳನ್ನು ಪೂರೈಸಿರುವ ಆಡಳಿತ ಪಕ್ಷದ ಸ್ಥಿತಿ ನೋಡಿ. ತಾನು ಮಾಡಿರುವ ಕೆಲಸಗಳ ಮೇಲೆ ಪೂರ್ಣ ಧೈರ್ಯ ಇಟ್ಟು ಅದೊಂದರ ಆಧಾರದಲ್ಲೇ ಮತ ಕೇಳುವ ಪರಿಸ್ಥಿತಿಯಲ್ಲಿ ಅವರಿಲ್ಲ. ಯಾಕೆಂದರೆ ಅವರಿಗೆ ಆತಂಕದ ಕಾಯಿಲೆ. ಎದುರಾಳಿಗಳು ಎಲ್ಲಿಂದ ದಾಳಿ ಮಾಡಬಹುದೆಂದು ಊಹಿಸುವುದರಲ್ಲೇ ಅವರ ಶಕ್ತಿ ವ್ಯಯ ಆಗುತ್ತಿರುವಂತಿದೆ. ಮುಖ್ಯಮಂತ್ರಿಗಳ ಸಾಧನಾ ಸಮಾವೇಶಗಳ ಶಕ್ತಿಯೆಲ್ಲ ಎದುರಾಳಿಗಳಿಗೆ ಬೈಯುವುದರಲ್ಲೇ ವ್ಯಯ ಆಗುತ್ತಿದೆ ಅಥವಾ ಮಾಧ್ಯಮಗಳು ಹಾಗೆಂದು ಬಿಂಬಿಸುತ್ತಿವೆ.

ಪ್ರಮುಖ ಪ್ರತಿಪಕ್ಷ ಬಿಜೆಪಿ ಕೂಡ ಬದಲಾವಣೆಗಾಗಿ ರಾಜ್ಯಾದ್ಯಂತ ಸಮಾವೇಶಗಳನ್ನು ಏರ್ಪಡಿಸುತ್ತಿದೆ. ಅದಕ್ಕೆ ಈ ಸಮಾವೇಶ ಸರಕಾರದ ಸಾಧನೆಗಳನ್ನು ವಿಶ್ಲೇಷಿಸುವ ಬದಲು ಸರಕಾರದಲ್ಲಿರುವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಬೈಯುವುದರಲ್ಲೇ ಅಂತ್ಯ ಕಾಣುತ್ತಿವೆ. ಇಲ್ಲಿ ಉದ್ವಿಗ್ನತೆಯ ಕಾಯಿಲೆ. ಎದುರಾಳಿಗಳು ಮೇಲುಗೈಯಲ್ಲಿದ್ದಾರೆಂಬ ಆತಂಕ ಒಂದೆಡೆಯಾದರೆ ಇನ್ನೊಂದೆಡೆ ತಮ್ಮದೇ ಪಕ್ಷದ ಕೇಂದ್ರದಲ್ಲಿರುವ ಸೂಪರ್ ಸ್ಪೆಷಲಿಸ್ಟ್ ಗಳ ತಲೆಯಲ್ಲಿ ಏನು ಓಡಾಡುತ್ತಿದೆ ಎಂಬುದರ ಲವಲೇಷವೂ ಇವರಿಗೆ ತಿಳಿಯುತ್ತಿಲ್ಲ. ಹಾಗಾಗಿ ಲೂಸ್ ಕ್ಯಾನನ್ ಆರ್ಭಟ!

ಇನ್ನೊಂದು ಶಕ್ತಿ ಎಂದುಕೊಂಡಿರುವ ಜನತಾದಳದ್ದು ಪಕ್ಕಾ ವ್ಯಾಪಾರಿ ನಡೆಯಂತೆ ಕಾಣಿಸುತ್ತಿದೆ. ತನ್ನ ಬಲ-ದೌರ್ಬಲ್ಯ ಚೆನ್ನಾಗಿ ತಿಳಿದಿರುವ ಹಿರಿಯ ತಲೆಮಾರಿನ ರಾಜಕಾರಣಿ ದೇವೇಗೌಡರು ಬರಬಹುದಾದ ಯಾವುದೇ ಸನ್ನಿವೇಶಕ್ಕೂ ಒಗ್ಗುವಂತಹ ಬಹಳ ಫ್ಲೆಕ್ಸಿಬಲ್ ಬಲೆಯೊಂದನ್ನು ನೇಯ್ದು ಕುಳಿತಿದ್ದಾರೆ. ನಡೆದಿರುವುದು ಬೆಕ್ಕುಗಳ ಬೆಣ್ಣೆಜಗಳ ಎಂದೂ, ಅಗತ್ಯ ಬಿದ್ದರೆ ತಮ್ಮದೇ ತಕ್ಕಡಿ ಬಳಕೆ ಆಗಲಿದೆ ಎಂದೂ ಅವರಿಗೆ ಚೆನ್ನಾಗಿ ಗೊತ್ತಿದೆ.

***
ಇದಿಷ್ಟು ವೃತ್ತಿ ರಾಜಕಾರಣಿಗಳ ಮಾತಾಯಿತು. ಪ್ರಜಾಪ್ರಭುತ್ವ ಎಂಬುದು ಪ್ರಜೆಗಳದ್ದಾದ ಮೇಲೆ ಪ್ರಜೆಗಳಾದ ನಾವೇನು ಮಾಡುತ್ತಿದ್ದೇವೆ?
ಈವತ್ತಿನ ಮತದಾರನಿಗೆ ತುರ್ತಾಗಿ ಅಗತ್ಯ ಇರುವುದು ಚರಿತ್ರೆಯ ಕ್ರಾಫ್‌ಕೋರ್ಸ್. ಗ್ರಾಮಗಳಲ್ಲಿ ವಾರ್ಡ್‌ಗಳ ಮಟ್ಟದಲ್ಲಿ ರಾಜಕೀಯ ನಾಯಕತ್ವ ಎಂಬುದು ಯಾವತ್ತಿಗೂ ಪರಿಶುದ್ಧ ಆಗಿರಲಿಲ್ಲ. ಆದರೆ ಅದು ಅನಿವಾರ್ಯಗಳನ್ನು ಸೃಷ್ಟಿಸಿ ಅದನ್ನು ಸೇವೆಯ ಮೂಲಕ ಪರಿಹರಿಸುವ, ಆ ಮೂಲಕ ಮತಗಳನ್ನು ಗೆಲ್ಲುವ ಕೌಶಲ ಆಗಿತ್ತು. ಜಮೀನ್ದಾರಿಕೆ, ಜಾತಿ, ಭಯ ಎಲ್ಲವೂ ಮತಗಳಿಕೆಯ ಹಾದಿಗಳಾಗಿದ್ದವು. ಆದರೆ ಇವ್ಯಾವುದೂ ಅಸಹ್ಯದ ಮಟ್ಟ ತಲುಪಿರಲಿಲ್ಲ. ಆದರೆ 90ರ ದಶಕ ಇದನ್ನು ಸಂಪೂರ್ಣ ಬದಲಾಯಿಸಿಬಿಟ್ಟಿತು. ಅನಿವಾರ್ಯಗಳು ಈಗಲೂ ಸೃಷ್ಟಿ ಆಗುತ್ತಿವೆ. ಆದರೆ ಅದನ್ನು ಪರಿಹರಿಸಲು ಸೇವೆಯ ಬದಲು ಕಾಸು ಬಳಕೆ ಆಗತೊಡಗಿದೆ. 20-30 ಲಕ್ಷ ರೂಪಾಯಿಗಳಲ್ಲಿ ಮುಗಿಯುತ್ತಿದ್ದ ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆ ಈಗೀಗ 5-6 ಕೋಟಿ ರೂಪಾಯಿಗಳನ್ನೂ ಮೀರಿಸುವಂತಿದೆಯಂತೆ! ಧರ್ಮ, ದೇಶಪ್ರೇಮದಂತಹ ಮತಗಳಿಕೆಯ ಹೊಸ ಸಿನಿಕ ಹಾದಿಗಳನ್ನು ರಚಿಸಲಾಗಿದೆ.

ಸೋಷಿಯಲ್ ಮೀಡಿಯಾದಂತಹ ಹೊಸ ಹತ್ಯಾರುಗಳು ಸತ್ಯಕ್ಕಿಂತ ಸುಳ್ಳನ್ನೇ ಹೆಚ್ಚು ಅವಲಂಬಿಸಿಕೊಂಡು, ರಾಡಿ ಕದಡುವ ಕೋಲುಗಳಾಗಿ ಬಳಕೆ ಆಗ ತೊಡಗಿವೆ. ಮಾಧ್ಯಮಗಳಂತೂ ತಮಗಿಷ್ಟ ಇರುವವರ ತೊಡೆಯೇರಿ ನೊಸಲು ನೆಕ್ಕಲಾರಂಭಿಸಿವೆ. ವಾಸ್ತವವನ್ನು ಅರಿಯಲು ಇರುವ ಎಲ್ಲ ಅವಕಾಶಗಳನ್ನು ಮತದಾರನ ಪಾಲಿಗೆ ಮುಚ್ಚಲಾಗಿದೆ. ಇಂತಹದೊಂದು ಸ್ಥಿತಿಯಲ್ಲಿ ಮತದಾರ ಏನು ನಿರ್ಧಾರ ಕೈಗೊಳ್ಳಬೇಕು?

ಸಾಗಿ ಬರುವ ಹಾದಿಯಲ್ಲೆಲ್ಲೊ ಗೊತ್ತಿದ್ದೂ ಗೊತ್ತಿದ್ದೂ ಕಳೆದುಕೊಂಡಿರುವ ಕೆಲವು ಮೂಲಭೂತ ವಾಸ್ತವಗಳನ್ನು ಮತದಾರರಾಗಿ ನಾವು ಮತ್ತೆ ನೆನಪಿಸಿಕೊಳ್ಳಬೇಕಾಗಿರುವ ಕ್ಷಣ ಇದು. ಮುಂದಿನ ದಿನಗಳು ಸಹ್ಯ ಆಗಿ ಉಳಿಯಬೇಕಿದ್ದರೆ ಇದು ಅನಿವಾರ್ಯ ಕೆಲಸ ಕೂಡ.

ಚುನಾವಣೆ ಎಂಬುದು ಸಂವಿಧಾನ ನಮಗೆ ಕೊಟ್ಟಿರುವ ಆಯುಧ. ಅದನ್ನು ಸಮರ್ಪಕವಾಗಿ ಬಳಸುವುದು ಹೇಗೆ? ಕೆಲವು ಸರಳ ಸೂತ್ರಗಳು:
 ಜಾತಿಧರ್ಮಗಳನ್ನು ಆಧರಿಸಿ ಮತ ಹಾಕಬೇಡಿ; ಹಾಗೆ ಕೇಳುವವರನ್ನು ಸಾರಾಸಗಟು ತಿರಸ್ಕರಿಸಿ.
ಬಾಯಿ ಶುದ್ಧಿ ಇರದವರು, ಭಯ ಹುಟ್ಟಿಸಿ ಮತ ಕೇಳುವವರನ್ನು ಮತದಾನದ ಕ್ಷಣದಲ್ಲಿ ಸಹಿಸಬೇಡಿ.
ಸೇವೆ-ದುಡ್ಡು ಇವೆರಡರ ನಡುವೆ ಆಯ್ಕೆ ಬಂದರೆ ಸೇವೆಗೆ ಆದ್ಯತೆ ಕೊಡಿ; ದುಡ್ಡನ್ನು ತಿರಸ್ಕರಿಸಿ.

* ವ್ಯಕ್ತಿ-ಪಕ್ಷಗಳ ನಡುವೆ ಆಯ್ಕೆ ಬಂದರೆ, ವ್ಯಕ್ತಿಗೆ ಆದ್ಯತೆ ಕೊಡಿ.
ಮುದುಕರು-ಎಳೆಯರ ನಡುವೆ ಆಯ್ಕೆ ಬಂದರೆ, ಎಳೆಯರಿಗೆ ಆದ್ಯತೆ ಕೊಡಿ.

* ನಿಮ್ಮ ಕ್ಷೇತ್ರದಲ್ಲೇ ಗೆದ್ದು ಮತ್ತೊಮ್ಮೆ ಆಯ್ಕೆ ಬಯಸಿದವರಿದ್ದರೆ, ಅವರ ಕಳೆದ 5 ವರ್ಷಗಳ ಸೇವೆಯನ್ನು ಮಾತ್ರ ಪರಿಗಣಿಸಿ. ಅವರು ಎಸೆದ ದುಡ್ಡನ್ನಲ್ಲ.

* ನಿಮ್ಮ ಮನೆಗೆ ಬಂದು ಓಟು ಕೇಳಿದವರಿಗೆ ಸಂವಿಧಾನ ಅಂದ್ರೆ ಏನು? ಅದನ್ನೊಮ್ಮೆ ಓದಿದ್ದೀರಾ? ಕೇಳಿ. ಓದಿದ್ದೇನೆ ಅಂದವರಿಗೆ ಮಾತ್ರ ಮತ ಕೊಡಿ; ಓದಿರುವುದನ್ನು ಖಚಿತಪಡಿಸಲು ಹೇಳಿ!

* ಎಲ್ಲಿಂದಲೋ ಬಂದವರಿಗೆ ನಿಮ್ಮೂರಿನ ಬಗ್ಗೆ ಗೊತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

* ಹಿಂಸೆ, ಕ್ರಿಮಿನಲ್ ಹಿನ್ನೆಲೆ, ಭಯೋತ್ಪಾದನೆಯ ಹಿನ್ನೆಲೆ ಇರುವವರನ್ನು ತಿರಸ್ಕರಿಸಿ.

* ದುಡ್ಡು, ಮದ್ಯ, ಉಡುಗೊರೆಗಳ ಸಹಿತ ಬಂದವರಿಗೆ ಖಂಡಿತಾ ಇಲ್ಲ ಎನ್ನಿ.

***
ಇಷ್ಟಾಗಿ ಉಮೇದ್ವಾರರೆಲ್ಲರೂ ಕಳಪೆ ಅನ್ನಿಸಿದರೆ NOTA ಒತ್ತಿ; NOTA ಗೆಲ್ಲಲಿ.
ಹೊಸ ವರ್ಷದ ಆರಂಭಕ್ಕೆ ನಮ್ಮ ಮುಂದಿನ 5 ವರ್ಷಗಳ ಬದುಕನ್ನು ಸಹ್ಯವಾಗಿ ಇರಿಸಿಕೊಳ್ಳಲು ಮಾಡಲೇಬೇಕಾದ ನಿರ್ಣಯ ಇದು.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News