ಕೋಮುವಾದಿಗಳನ್ನು ಹಿತೈಷಿಗಳೆಂದು ನಂಬಬೇಡಿ

Update: 2018-01-01 18:33 GMT

ಮಾನ್ಯರೇ,

ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರಕಾರ ಕಾನೂನು ಮಾಡಲು ಹೊರಟಿರುವುದು ಮೇಲ್ನೋಟಕ್ಕೆ ಮಹಿಳೆಯರ ವಿಜಯದಂತೆ ಕಾಣುತ್ತದೆೆಯಾದರೂ ಇದರಲ್ಲೇನೋ ಹುಳುಕಿದೆ ಎಂಬ ಕೆಲ ಮುಸ್ಲಿಂ ಮುಖಂಡರ ಸಂಶಯ ಕೂಡಾ ಸಕಾಲಿಕವಾಗಿಯೇ ಇದೆ. ಹಿಂದುತ್ವವಾದಿಗಳು ತಾವೆಂದು ಸಾರಿಕೊಳ್ಳುವ ಕೋಮುವಾದಿಗಳಿಗೆ ಹಿಂದೂ ಮಹಿಳೆಯರ ಬಗ್ಗೆನೇ ಸಾಸಿವೆಯಷ್ಟು ಗೌರವವಿಲ್ಲ ಎಂಬುದಕ್ಕೆ ನೂರಾರು ಸಾಕ್ಷಿಗಳಿವೆ. ಹಾಗಿರುವಾಗ ಅವರು ಪ್ರತಿಕ್ಷಣ ದ್ವೇಷಿಸುವ ಮುಸ್ಲಿಂ ಸಮುದಾಯದಲ್ಲಿ ಕುಟುಂಬಗಳು ಅನ್ಯೋನ್ಯವಾಗಿ ಒಗ್ಗಟ್ಟಿನಿಂದ ಇರಲಿ ಎಂದು ಬಯಸುವರೇ?
ಮುಸ್ಲಿಮರಲ್ಲಿ ವಿವಾಹ ಶಾಶ್ವತ, ಜನ್ಮ ಜನ್ಮಗಳ ಬಂಧ ಎಂಬ ಸೋಗಲಾಡಿತನ ಇಲ್ಲ. ಅದೊಂದು ಒಪ್ಪಂದ. ಅದು ಅಸಹನೀಯ ಎನಿಸಿದಾಗ ಮುರಿದುಕೊಳ್ಳುವ ಹಕ್ಕು ದಂಪತಿಯಲ್ಲಿ ಇಬ್ಬರಿಗೂ ಕೊಡಲಾಗಿದೆ. ಹೆಣ್ಣು ಶಿಕ್ಷಣ, ಸ್ವಾವಲಂಬನೆಗಳಿಂದ ವಂಚಿತಳಾಗಿರುವುದೇ ಹೆಚ್ಚು. ಹಾಗಾಗಿ ಅವಳಾಗಿಯೇ ವಿಚ್ಛೇದನ ಬಯಸುವ ಪ್ರಕರಣಗಳು ಎಲ್ಲಾ ಸಮುದಾಯಗಳಲ್ಲೂ ಕಡಿಮೆಯೇ.
 ಈ ಕೋಮುವಾದಿಗಳು ಹಿಂದೂ ಸ್ತ್ರೀಯರು ವೈವಾಹಿಕ ಬದುಕಿನಲ್ಲಿ ಪತಿಯಿಂದ ಅತ್ಯಾಚಾರಕ್ಕೊಳಗಾದಾಗ ಚಕಾರ ಎತ್ತದಂತೆ ಏಕೆ ನಿರ್ಬಂಧಿಸ ಹೊರಟಿದ್ದಾರೆ? ವೈವಾಹಿಕ ಅತ್ಯಾಚಾರದ ವಿರುದ್ಧ ಕಾನೂನು ರೂಪಿಸಿದರೆ ಅದು ಹೆಣ್ಣಿನ ಕೈಗೆ ಅಸ್ತ್ರ ಕೊಟ್ಟಂತೆ ಆಗುತ್ತದೆ ಎನ್ನುವುದಾದರೆ ತಲಾಖ್ ವಿರೋಧಿ ಕಾನೂನು ಕೂಡಾ ಮುಸ್ಲಿಂ ಮಹಿಳೆಯರಿಂದ ದುರ್ಬಳಕೆ ಆಗಬಹುದಲ್ಲವೇ? ವೈವಾಹಿಕ ಅತ್ಯಾಚಾರ ತ್ರಿವಳಿ ತಲಾಖ್‌ಗಿಂತ ಹಲವು ಪಟ್ಟು ಘೋರವಾದುದು.
 ಕೋಮುವಾದಿ ಪರಿವಾರದ ಹಂತಕರು ಎಷ್ಟೋ ಮುಸ್ಲಿಮರನ್ನು ನಿಷ್ಕಾರುಣವಾಗಿ ಕೊಲ್ಲುತ್ತಾ ಬರುತ್ತಿದ್ದಾರೆ. ಅವರ ತಾಯಿ, ಸೋದರಿ, ಪತ್ನಿಯನ್ನು ಕಂಡು ಸಂತೈಸುವಷ್ಟು ಮನುಷ್ಯತ್ವವೂ ಹಿಂದುತ್ವವಾದಿ ರಾಜಕಾರಣಿಗಳಿಗಿಲ್ಲ. ಅವರಿಗೆ ಮುಸ್ಲಿಂ ಪುರುಷರನ್ನು ಗೋಳಾಡಿಸಲು, ಜೈಲಿಗೆ ತುರುಕಲು ಏನೋ ಒಂದು ಕಾರಣ ಬೇಕು. ಗೋ ಸಾಗಣೆಯ ನೆಪದಲ್ಲಿ ಅವರನ್ನು ಹೊಡೆದು ಬಡಿದು ಜೈಲಿಗೆ ತಳ್ಳಲಾಗುತ್ತಿದೆ. ಆಧಾರರಹಿತವಾಗಿ ಭಯೋತ್ಪಾದನೆಗೆ ಗಂಟುಹಾಕಿ ಬಂಧಿಸಲಾಗುತ್ತಿದೆ. ತ್ರಿವಳಿ ತಲಾಖ್ ನಿಷೇಧ ಅವರನ್ನು ಹೊಡೆದು ಬಡಿದು ಜೈಲಿಗೆ ತಳ್ಳಲು ಇನ್ನೊಂದು ನೆಪವಾಗಲಿದೆ. ಹೀಗಾಗಿ ಮುಸ್ಲಿಂ ಮಹಿಳೆಯರು ಕೋಮುವಾದಿಗಳನ್ನು ಹಿತೈಷಿಗಳೆಂದು ನಂಬಿ ಮತ ಹಾಕಿದರೆ ತಲಾಖ್‌ಗೆ ಬದಲು ‘ವಿಧವೆ ಭಾಗ್ಯ’ವನ್ನು ಆಹ್ವಾನಿಸಿದಂತಾಗುತ್ತದಷ್ಟೆ!

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News