ಕೋರೆಗಾಂವ್ ವಿಜಯ ದಿವಸ ಸಂಘಪರಿವಾರಕ್ಕೇಕೆ ಅಪಥ್ಯ?

Update: 2018-01-02 04:20 GMT

ದಲಿತರ ವಿಜಯೋತ್ಸವ ದಿನವಾಗಿರುವ ಭೀಮಾ ಕೋರೆಗಾಂವ್ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯ ಸಮೀಪ ದಲಿತರ ಕಡೆಗೆ ಸಂಘಪರಿವಾರ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಇದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಕೋರೆಗಾಂವ್ ಕದನದ ವಿಜಯ ದಿನವನ್ನು ಪ್ರತೀ ವರ್ಷ ದಲಿತರು ತಮ್ಮ ಆತ್ಮಾಭಿಮಾನದ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುತ್ತಾರೆ. ಆದರೆ ಪ್ರತೀ ಬಾರಿಯೂ ಒಂದಲ್ಲ ಒಂದು ನೆಪ ಹಿಡಿದು ಸಂಘಪರಿವಾರ ಕಾರ್ಯಕರ್ತರು ಈ ಸಮಾವೇಶವನ್ನು ಕೆಡಿಸುವ ಹುನ್ನಾರ ನಡೆಸುತ್ತಲೇ ಬರುತ್ತಿದ್ದಾರೆ.

ಈ ಬಾರಿ, ಪುಣೆಯ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿರುವ ದಲಿತರ ಮೇಲೆ ಕಲ್ಲುತೂರಾಟ ನಡೆಸಿದ್ದು, ದಲಿತರನ್ನು ಆಕ್ರೋಶಕ್ಕೀಡು ಮಾಡಿದೆ. ಈಗಾಗಲೇ ದೇಶದಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮುಂದುವರಿದ ಭಾಗ ಇದಾಗಿದೆ. ಕೋರೆಗಾಂವ್ ವಿಜಯ ದಿನಾಚರಣೆ ಮನುವಾದಿ ಮನಸ್ಥಿತಿಗಳಿಗೆ ನುಂಗಲಾರದ ತುತ್ತಾಗಿದೆ ಎನ್ನುವುದನ್ನು ಇದು ಸಾಬೀತು ಪಡಿಸಿದೆ. ಇದು ಮನುವಾದಿಗಳ ವಿರುದ್ಧದ ವಿಜಯವಾಗಿರುವುದೇ ಅವರ ಸಂಕಟಗಳಿಗೆ ಕಾರಣ. ಇಂತಹ ಆಚರಣೆಗಳು ಇತಿಹಾಸದ ವಾಸ್ತವಗಳನ್ನು ತೆರೆದಿಡುವುದು ಮತ್ತು ದಲಿತರನ್ನು ಜಾಗೃತರನ್ನಾಗಿಸುತ್ತಿರುವುದು ಅವರಿಗೆ ಆತಂಕದ ವಿಷಯವಾಗಿದೆ. ಆದುದರಿಂದಲೇ ಈ ವಿಜಯೋತ್ಸವದ ವಿರುದ್ಧ ಪ್ರತೀ ವರ್ಷ ಕಾಲುಕೆರೆದು ಜಗಳಕ್ಕಿಳಿಯುತ್ತಾ ಬರುತ್ತಿದ್ದಾರೆ. ಈ ಬಾರಿಯೂ ಅದು ಮುಂದುವರಿದಿದೆ.

ಕೋರೆಗಾಂವ್ ವಿಜಯೋತ್ಸವ ಈ ದೇಶದ ಕೆಲವು ವಾಸ್ತವಗಳನ್ನು ಜಗತ್ತಿನ ಮುಂದೆ ತೆರೆದಿಡುತ್ತದೆ. ಭಾರತದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳನ್ನು ಇತಿಹಾಸ ತಜ್ಞರು ವೈಭವೀಕರಿಸುವ ಸಂದರ್ಭದಲ್ಲಿ ಕೋರೆಗಾಂವ್ ವಿಜಯ ಅವರನ್ನು ಅನ್ನದಲ್ಲಿ ಸಿಕ್ಕಿಕೊಂಡ ಕಲ್ಲಿನಂತೆ ಕಾಡುತ್ತಿದೆ. 1818ರಲ್ಲಿ ಕೋರೆಗಾಂವ್ ಯುದ್ಧ ನಡೆಯಿತು. ಈ ಯುದ್ಧ ನಡೆದಿರುವುದು ಚಿತ್ಪಾವಣಾ ಬ್ರಾಹ್ಮಣ ಪೇಶ್ವೆ ಎರಡನೇ ಬಾಜಿರಾಯನ ಸೇನೆಗೆ ಮತ್ತು ಬ್ರಿಟಿಷರ ಸೇನೆಗೆ. ಆದರೆ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ದಲಿತ ಮಹಾರರು ಬ್ರಿಟಿಷರ ಪರವಾಗಿ ನಿಂತರು. ಅಷ್ಟೇ ಅಲ್ಲ, ಬರೇ 500 ಮಂದಿ ದಲಿತರು ಬಾಜಿರಾಯನ 25 ಸಾವಿರಕ್ಕೂ ಅಧಿಕವಿದ್ದ ಸೇನೆಯನ್ನು ಸೋಲಿಸಿದರು.

ಇತಿಹಾಸದಲ್ಲಿ ಜಾತೀಯತೆಯ ವಿರುದ್ಧ ದಲಿತರ ಆಕ್ರೋಶ ಮತ್ತು ಅದರ ವಿರುದ್ಧ ಜಯವನ್ನು ಇದು ಎತ್ತಿ ಹಿಡಿಯುತ್ತದೆ. ಆದುರಿಂದಲೇ, ಈ ವಿಜಯ ಆಚರಣೆ ಸಂಘಪರಿವಾರಕ್ಕೆ ಅಪಥ್ಯವಾಗಿದೆ. ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲೇ ದಲಿತರು ಇಲ್ಲಿ ಗುಲಾಮರಾಗಿದ್ದರು. ಅವರು ಕೆರೆಯ ನೀರನ್ನು ಮುಟ್ಟುವಂತಿರಲಿಲ್ಲ. ಎಲ್ಲರೂ ಸಾಗುವ ಮುಖ್ಯ ದಾರಿಯಲ್ಲಿ ನಡೆಯುವಂತಿರಲಿಲ್ಲ. ಶಿಕ್ಷಣ ಪಡೆಯುವುದಂತೂ ಕನಸಿನ ಮಾತಾಗಿತ್ತು. ಹೀಗೆ ಜಾತೀಯತೆಯ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ದಲಿತರ ಪಾಲಿಗೆ ಒಂದಿಷ್ಟು ನೆಮ್ಮದಿಯ ಬದುಕು ದೊರಕಿದ್ದು ಬ್ರಿಟಿಷರ ಆಳ್ವಿಕೆಯ ಬಳಿಕ ಎಂದರೆ ಅದರಲ್ಲಿ ತಪ್ಪೇನೂ ಇಲ್ಲ. ಪೇಶ್ವೆಯ ಕಾಲದಲ್ಲಿ ಅಂದರೆ ಎರಡನೇ ಬಾಜಿರಾಯನ ಕಾಲದಲ್ಲಿ ಜಾತೀಯತೆ ಉತ್ತುಂಗ ಸ್ಥಿತಿಗೆ ತಲುಪಿತು. ಈತನ ಸೇನೆಯಲ್ಲಿದ್ದ ದಲಿತರು ಬಂಡೆದ್ದು ಬ್ರಿಟಿಷರ ಜೊತೆಗೆ ನಿಂತರು. ಮಾತ್ರವಲ್ಲ ಬಾಜಿರಾಯನನ್ನು ಸೋಲಿಸಿ ತಮ್ಮ ಆತ್ಮಾಭಿಮಾನವನ್ನು ಉಳಿಸಿಕೊಂಡರು. ಬ್ರಿಟಿಷರಿಂದ ಮೆಚ್ಚುಗೆಯನ್ನು ಪಡೆದರು. ಅಂದಿನ ದಲಿತರ ಹೀನ ಸ್ಥಿತಿಗೆ ಹೋಲಿಸಿದರೆ, ಈ ವಿಜಯ ಅವರಿಗೆ ಒಂದಿಷ್ಟು ಘನತೆಯನ್ನು ತಂದುಕೊಟ್ಟಿತು.

    ಶಿವಾಜಿಯು ಮರಾಠ ಸಾಮ್ರಾಜ್ಯವನ್ನು ಕಟ್ಟಿದ್ದು ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರ ನೆರವಿನಿಂದ. ಶಿವಾಜಿಯ ಸೇನೆಯಲ್ಲಿ 60 ಸಾವಿರಕ್ಕೂ ಅಧಿಕ ಮುಸ್ಲಿಮ್ ಸೈನಿಕರಿದ್ದರು. 11 ಮಂದಿ ಪ್ರಮುಖ ದಂಡನಾಯಕರು ಮುಸ್ಲಿಮರೇ ಆಗಿದ್ದರು. ಇದೇ ಸಂದರ್ಭದಲ್ಲಿ ಮಹಾರ್ ದಲಿತರ ಪಾತ್ರವೂ ಬಹುದೊಡ್ಡದಿತ್ತು. ಶಿವಾಜಿಯು ತನ್ನ ಅಂಗರಕ್ಷಕರಾಗಿ ದಲಿತರು ಮತ್ತು ಮುಸ್ಲಿಮರನ್ನೇ ಆಯ್ಕೆ ಮಾಡಿಕೊಂಡಿದ್ದ. ಅಫ್ಝಲ್ ಖಾನ್ ಮುಖಾಮುಖಿಯ ಸಂದರ್ಭದಲ್ಲಿ ಶಿವಾಜಿಯ ಪ್ರಾಣವನ್ನು ರಕ್ಷಿಸಿದ್ದು ದಲಿತ ಮತ್ತು ಮುಸ್ಲಿಮ್ ಅಂಗರಕ್ಷಕರು. ಶಿವಾಜಿಯನ್ನು ಹಿಂದಿನಿಂದ ಇರಿಯಲು ಬಂದ ಅಫ್ಝಲ್ ಖಾನ್‌ನ ಅಂಗರಕ್ಷಕ ಕುಲಕರ್ಣಿಯನ್ನು ಕೊಂದುದು ಶಿವಾ ಎನ್ನುವ ದಲಿತ ಯೋಧ. ಸ್ವತಃ ಶೂದ್ರನಾಗಿದ್ದ ಶಿವಾಜಿ ತನ್ನ ಸಾಮ್ರಾಜ್ಯದಲ್ಲಿ ಗರಿಷ್ಠಪ್ರಮಾಣದಲ್ಲಿ ಜಾತ್ಯತೀತತೆಯನ್ನು ಪಾಲಿಸುತ್ತಿದ್ದ. ಈ ಕಾರಣದಿಂದಲೇ ದಲಿತರು, ಮುಸ್ಲಿಮರು, ಬುಡಕಟ್ಟು ಜನರು ಅವನಿಗೆ ಅತಿಯಾಗಿ ನಿಷ್ಠೆಯನ್ನು ತೋರಿಸುತ್ತಿದ್ದರು. ಪ್ರಾಣವನ್ನು ಒತ್ತೆಯಿಟ್ಟು ಶಿವಾಜಿಯನ್ನು ರಕ್ಷಿಸಿದ್ದರು. ಇಂತಹದೊಂದು ಜಾತ್ಯತೀತ ನಿಲುವಿನಿಂದಲೇ ಶಿವಾಜಿಗೆ ಮೊಗಲರ ವಿರುದ್ಧ ಮರಾಠ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು. ಆದರೆ ಬಳಿಕ ಎಲ್ಲವೂ ತಿರುವು ಮುರುವಾಯಿತು.

ಶಿವಾಜಿಗೆ ಆತನ ಆತ್ಮೀಯರೇ ದ್ರೋಹವೆಸಗಿದರು. ಮಹಾರಾಜನಾಗಿ ಶಿವಾಜಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ವೈದಿಕರು ಅದಕ್ಕೆ ಅಡ್ಡಿಯಾದರು. ಎರಡೆರಡು ಬಾರಿ ಆತ ಪಟ್ಟಾಭಿಷೇಕವನ್ನು ಮಾಡಿಸಿಕೊಳ್ಳಬೇಕಾಯಿತು. ಶೂದ್ರ ಎಂಬ ಕಾರಣಕ್ಕಾಗಿ ಶಿವಾಜಿ ಮೇಲ್ವರ್ಣೀಯರಿಂದ ಅವಮಾನವನ್ನು ಎದುರಿಸಿದ. ಮರಾಠ ಸಾಮ್ರಾಜ್ಯವನ್ನು ಕಟ್ಟಲು ಇಡೀ ಬದುಕನ್ನು ಒತ್ತೆಯಿಟ್ಟ ಶಿವಾಜಿ, ಅದನ್ನು ರಾಜನಾಗಿ ಅನುಭವಿಸಿದ್ದು ಬರೇ ಆರು ವರ್ಷ ಮಾತ್ರ. ಆನಂತರ ನಡೆದುದು ಇತಿಹಾಸ. ಶಿವಾಜಿಯ ಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದ ಚಿತ್ಪಾವಣಾ ಬ್ರಾಹ್ಮಣರು ಸಾಮ್ರಾಜ್ಯವನ್ನು ಕೈವಶ ಮಾಡಿಕೊಂಡರು. ಪೇಶ್ವೆಯ ಆಡಳಿತ ಕಾಲದಲ್ಲಿ ಮತ್ತೆ ಜಾತೀಯತೆ ತಲೆಯೆತ್ತಿತು. ಮೇಲುಕೀಳು ಪ್ರಾಧಾನ್ಯ ಪಡೆಯಿತು. ದಲಿತರ ಸ್ಥಿತಿ ಚಿಂತಾಜನಕವಾಯಿತು.

ಎಷ್ಟೆಂದರೆ ಸೇನೆಯಲ್ಲಿರುವ ದಲಿತರು ಪದೇ ಪದೇ ಅವಮಾನ ಎದುರಿಸಿದರು. ಇದು ಎರಡನೇ ಬಾಜಿರಾಯನ ಕಾಲದಲ್ಲಿ ಇನ್ನಷ್ಟು ಶೋಚನೀಯ ಸ್ಥಿತಿ ತಲುಪಿತು. ಬ್ರಿಟಿಷರು ಬಾಜಿರಾಯನ ವಿರುದ್ಧ ದಂಡೆತ್ತಿ ಬಂದಾಗ, ದಲಿತರು ಬಾಜಿರಾಯನ ವಿರುದ್ಧ ಸಿಡಿದರು. 500 ಮಂದಿ ಮಹಾರ್ ಯೋಧರು ಬಾಜಿರಾಯನ 25 ಸಾವಿರ ಸಂಖ್ಯೆಯ ಸೇನೆಯನ್ನು ಸೋಲಿಸಿ, ಬ್ರಿಟಿಷರನ್ನು ದಂಗುಪಡಿಸಿದರು. ಇದಾದ ಬಳಿಕ ಮಹಾರರಿಗಾಗಿಯೇ ಪ್ರತ್ಯೇಕ ವಿಭಾಗವೊಂದು ಬ್ರಿಟಿಷರ ಸೇನೆಯಲ್ಲಿ ತೆರೆಯಲಾಯಿತು. ಅದೇ ಮಹಾರ್ ಸಮುದಾಯದಿಂದ ಮುಂದೆ ಬಿ. ಆರ್. ಅಂಬೇಡ್ಕರ್ ಅವರು ಹುಟ್ಟಿದರು. ಎರಡನೇ ಬಾಜಿರಾಯ ಚಿತ್ಪಾವಣಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದಾತ. ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಇದೇ ಸಮುದಾಯದಿಂದ ಬಂದ.

ಕೋರೆಗಾಂವ್ ವಿಜಯ ಒಂದು ಕಟು ಸತ್ಯವನ್ನು ಹೇಳುತ್ತದೆ. ಶಿವಾಜಿ ತನ್ನ ಜಾತ್ಯತೀತ ನಿಲುವಿನ ಮೂಲಕ ಎಲ್ಲ ಧರ್ಮೀಯರನ್ನು, ಸಮುದಾಯವನ್ನು ಸಂಘಟಿಸಿ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ. ಆದರೆ ಪೇಶ್ವೆಗಳು ತಮ್ಮ ಜಾತೀಯತೆ, ಮೇಲುಕೀಳುಗಳ ಮೂಲಕ ಆ ಸಾಮ್ರಾಜ್ಯವನ್ನು ಸರ್ವನಾಶ ಮಾಡಿದರು. ಇದು ಇಂದಿನ ಭಾರತಕ್ಕೂ ಪಾಠವಾಗಬೇಕಾಗಿದೆ. ಈ ಕಾರಣದಿಂದ ಕೋರೆಗಾಂವ್ ವಿಜಯದ ದಿನವನ್ನು ಈ ದೇಶ ಹಿಂದೆದಿಗಿಂತ ಹೆಚ್ಚು ಮಹತ್ವ ಕೊಟ್ಟು ಆಚರಿಸಬೇಕಾಗಿದೆ. ಇಡೀ ದೇಶ ಜಾತಿ, ಮತ, ಭೇದಗಳನ್ನು ಮರೆತು ಒಂದಾಗಿ ಬ್ರಿಟಿಷರನ್ನು ಎದುರಿಸಿ ಸ್ವಾತಂತ್ರವನ್ನು ತನ್ನದಾಗಿಸಿಕೊಂಡಿತು.

ದುರದೃಷ್ಟವಶಾತ್ ಇಂದು ಮತ್ತೆ ಬಾಜಿರಾಯನ ವಂಶಸ್ಥರು ಸಂಘಪರಿವಾರ, ಆರೆಸ್ಸೆಸ್ ರೂಪದಲ್ಲಿ ಜಾಗೃತರಾಗಿದ್ದಾರೆ. ಇದು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತದೆಯೇ ಹೊರತು, ಒಳಿತಿನೆಡೆಗೆ ಮುನ್ನಡೆಸಲಾರದು. ಕೋರೆಗಾಂವ್ ವಿಜಯ ದಿನ ಇದನ್ನೇ ಇಂದು ದೇಶಕ್ಕೆ ಹೇಳುತ್ತಿದೆ. ಮತ್ತು ಮನುವಾದಿಗಳಿಗೆ ಈ ಸಂದೇಶ ಅಪಥ್ಯವಾಗಿದೆ. ಆ ಕಾರಣಕ್ಕಾಗಿಯೇ ಕೋರೆಗಾಂವ್ ವಿಜಯ ದಿವಸವನ್ನು ಆಚರಿಸಿದವರ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಇಂತಹ ದಾಳಿಗಳನ್ನು ಎಲ್ಲರೂ ಒಂದಾಗಿ ವಿರೋಧಿಸಬೇಕಾಗಿದೆ. ಈ ದೇಶ ಮತ್ತೆ ಮನುವಾದಿ, ಜಾತಿವಾದಿಗಳ ಕೈವಶವಾಗದಂತೆ ಶೂದ್ರರು, ದಲಿತರು, ಮುಸ್ಲಿಮರು, ಕ್ರೈಸ್ತರು, ಪ್ರಗತಿಪರು, ಸಕಲ ಭಾರತೀಯರು ಸಂಘಟಿತವಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News